ಅಯ್ಯಪ್ಪ ಸನ್ನಿಧಾನ ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಯಾವಾಗ? ಜನವರಿ 14 ಅಥವಾ 15... ಇಲ್ಲಿದೆ ನಿಖರ ಮಾಹಿತಿ
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಇನ್ನು ಈ ಶುಭಹಬ್ಬವನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ, ಪೊಂಗಲ್, ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.
ಇನ್ನು ಇದೇ ಹಬ್ಬದ ದಿನದಂದು ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ. ಆದರೆ ಈ ದಿನದಲ್ಲಿ ಕೊಂಚ ಗೊಂದಲವಿದ್ದು ಕೆಲವೊಮ್ಮ ಜನವರಿ 14ರಂದು ಜ್ಯೋತಿ ದರ್ಶನವಾದರೆ, ಇನ್ನೂ ಕೆಲವೊಮ್ಮೆ ಜನವರಿ 15ರಂದು ದರ್ಶನವಾಗುತ್ತದೆ. ಕಳೆದ ಬಾರಿ ಅಂದರೆ 2024ರ ಜನವರಿಯಲ್ಲಿ 15ರಂದು ಜ್ಯೋತಿ ದರ್ಶನವಾಗಿತ್ತು. ಹಾಗಾದ್ರೆ ಈ ಬಾರಿ 2025ರಲ್ಲಿ ಯಾವಾಗ ಜ್ಯೋತಿ ಕಾಣಿಸಲಿದೆ ಎಂಬುದನ್ನು ತಿಳಿಯೋಣ.
2024 ರ ಶಬರಿಮಲೆ ಮಕರ ವಿಳಕ್ಕು ಯಾತ್ರೆಯು ನವೆಂಬರ್ 15 ರಂದು ಪ್ರಾರಂಭವಾಗಿದ್ದು, ಮಂಡಲ ಋತುವು ನವೆಂಬರ್ 15 ರಿಂದ ನವೆಂಬರ್ 26 ರವರೆಗೆ ನಡೆದಿದೆ. ಮಂಡಲ ಪೂಜೆಯನ್ನು ಡಿಸೆಂಬರ್ 26ರಂದು ಕೈಗೊಳ್ಳಲಾಗಿತ್ತು.
ಇನ್ನು ಡಿಸೆಂಬರ್ 30 ರಿಂದ ಜನವರಿ 20, 2025ರ ವರೆಗೆ ಮಕರ ಜ್ಯೋತಿ ಯಾತ್ರೆ ಆರಂಭವಾಗಿದ್ದು, ಸಾಂಪ್ರದಾಯಿಕ ಮಕರ ವಿಳಕ್ಕು (ಜ್ಯೋತಿ) ದರ್ಶನ ಜನವರಿ 14, 2025ರಂದು ನಡೆಯಲಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಸಾಂಪ್ರದಾಯಿಕ ಮಲಯಾಳಂ ಕ್ಯಾಲೆಂಡರ್ ಪ್ರಕಾರ ಮಕರ ಮಾಸಂನ ಮೊದಲ ದಿನದಂದು ಮಕರವಿಳಕ್ಕು ಮತ್ತು ಮಕರ ಜ್ಯೋತಿ ಹಬ್ಬವನ್ನು ಆಚರಿಸುತ್ತದೆ. 2025 ರಲ್ಲಿ, ಮಕರವಿಳಕ್ಕುವನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಈ ದಿನದಂದು ಭಗವಾನ್ ಅಯ್ಯಪ್ಪ ಶಬರಿಮಲೆ ದೇವಾಲಯದ ಮುಖ್ಯ ವಿಗ್ರಹದೊಂದಿಗೆ ವಿಲೀನಗೊಂಡು, ಭಕ್ತಾದಿಗಳಿಗೆ ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾರೆ ಎಂಬ ನಂಬಿಕೆ ಇದೆ.
ಸಂಜೆಯ ದೀಪಾರಾಧನೆಯಾಗುತ್ತಿದ್ದಂತೆ, ಪೊನ್ನಂಬಲಮೇಡುವಿನಲ್ಲಿ ಮಕರವಿಳಕ್ಕು ದರ್ಶನವಾಗುತ್ತದೆ. ಅದಕ್ಕೂ ಮುನ್ನ ಪಂದಳಂ ಅರಮನೆಯಿಂದ ವಿಶೇಷವಾಗಿ ತರಲಾದ ತಿರುವಾಭರಣದಿಂದ ಅಯ್ಯಪ್ಪನನ್ನು ಅಲಂಕರಿಸಲಾಗುತ್ತದೆ. ಸಂಜೆ ಪೂಜೆಯ ಮೊದಲು, ಹದ್ದು ಸಾಮಾನ್ಯವಾಗಿ ದೇವಾಲಯದ ಮೇಲೆ ಹಾರುವುದನ್ನು ಕಾಣಬಹುದು ಇದಾದ ನಂತರ ಮಕರ ಜ್ಯೋತಿ ಎಂದು ಕರೆಯಲ್ಪಡುವ ಮಕರ ನಕ್ಷತ್ರವು ಆಕಾಶದಲ್ಲಿ ಗೋಚರಿಸುತ್ತದೆ. ಆಗ ದೂರದ ಪೊನ್ನಂಬಲಮೇಡು ಬೆಟ್ಟದಿಂದ ಮೂರು ಬಾರಿ ಮಕರವಿಳಕ್ಕು ಬೆಳಕು ಕಾಣಿಸುತ್ತದೆ.
ಮಕರವಿಳಕ್ಕು ದೀಪವು ಜನವರಿ 14ರ ಸಂಜೆ 6 PM ಮತ್ತು 7 PM IST ನಡುವೆ ಮೂರು ಬಾರಿ ಕಂಡುಬರುತ್ತದೆ. ಅದೇ ದಿನ ಭಕ್ತರು ಮಕರ ಜ್ಯೋತಿ ನಕ್ಷತ್ರದ ದರ್ಶನ ಪಡೆಯುತ್ತಾರೆ.