ಅಂದು ಒಂದೇ ಒಂದು ಅವಕಾಶಕ್ಕಾಗಿ ಅಂಗಲಾಚುತ್ತಿದ್ದ... ಇಂದು ಈತನೇ RCBಗೆ ಅದೃಷ್ಟ! ಈತ ತಂಡಕ್ಕೆ ಕಾಲಿಟ್ಟ ಮೇಲೆ ಸೋತೇ ಇಲ್ಲ Bengaluru
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ ಪ್ಲೇ ಆಫ್ ಪ್ರವೇಶಿಸಿದೆ. ಮುಂದಿನ ಹಂತದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿರುವ ಬೆಂಗಳೂರು, ಇಡೀ ಟೂರ್ನಿಯಲ್ಲಿ ಸಿನಿಮೀಯ ಪ್ರದರ್ಶನ ನೀಡಿತ್ತು.
ಪ್ಲೇ ಆಫ್ ಪ್ರವೇಶ ಸಾಧ್ಯವೇ ಇಲ್ಲ, ಬಹುತೇಕ ಟೂರ್ನಿಯಿಂದ ಹೊರಕ್ಕೆ ಎಂಬೆಲ್ಲಾ ಮಾತುಗಳು ಕೇಳಿಬಂದಿತ್ತು. ಆದರೆ ಇದ್ದ 1% ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕಂಬ್ಯಾಕ್ ಮಾಡಿದ ಆರ್ ಸಿಬಿ ಇಂದು ಪ್ಲೇಆಫ್ ಲಿಸ್ಟ್ ಪ್ರವೇಶಿಸಿದೆ.
ಆದರೆ ಈ ಎಲ್ಲದರ ಮಧ್ಯೆ, ಓರ್ವ ಆಟಗಾರ ತಂಡಕ್ಕೆ ಅದೃಷ್ಟದಂತೆ ಭಾಸವಾಗಿದ್ದಾರೆ. ಈತ ತಂಡಕ್ಕೆ ಎಂಟ್ರಿಕೊಟ್ಟ ಬಳಿಕ ಕಾಕತಾಳೀಯ ಎಂಬಂತೆ ಆರ್ ಸಿ ಬಿ ಸೋತೇ ಇಲ್ಲ. ಅಷ್ಟಕ್ಕೂ ಆ ಆಟಗಾರ ಯಾರೆಂದು ಯೋಚಿಸುತ್ತಿದ್ದೀರಾ? ಆತ ಬೇರಾರು ಅಲ್ಲ, ಸ್ವಪ್ನಿಲ್ ಸಿಂಗ್.
ಎಡಗೈ ಸ್ಪಿನ್ ಬೌಲರ್ ಸ್ವಪ್ನಿಲ್ ಸಿಂಗ್ ತಂಡಕ್ಕೆ ಅದೃಷ್ಟವಾಗಿದ್ದಾರೆ. ಇನ್ನು ಇವರು ಕ್ರಿಕೆಟ್ ಲೋಕಕ್ಕೆ ಬಂದ ಹಾದಿಯನ್ನು ನೆನೆಪಿಸಿಕೊಂಡಿದ್ದು, ಕಣ್ಣೀರು ಸುರಿಸಿದ್ದಾರೆ. “ಒಂದು ದಿನ ಕ್ರಿಕೆಟ್ ತ್ಯಜಿಸುವ ಮನಸ್ಸು ಮಾಡಿದೆ. ಕಳೆದ ಐಪಿಎಲ್ ಹರಾಜಿನ ಆರಂಭಿಕ ಸುತ್ತಿನಲ್ಲಿ ತನ್ನ ಹೆಸರು ಬಿಡ್ಡಿಂಗ್’ಗೆ ಬಂದಿರಲಿಲ್ಲ. ಆ ಕಾರಣದಿಂದ ಭಾರೀ ಬೇಸರಗೊಂಡಿದ್ದೆ” ಎಂದಿದ್ದಾರೆ.
ಎಡಗೈ ಸ್ಪಿನ್ ಬೌಲಿಂಗ್ ಜೊತೆಗೆ, ಸ್ವಪ್ನಿಲ್ ಸಿಂಗ್ ಬ್ಯಾಟಿಂಗ್’ನಲ್ಲೂ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. 18 ವರ್ಷಗಳ ಸುದೀರ್ಘ ದೇಶೀಯ ಕ್ರಿಕೆಟ್ ವೃತ್ತಿಜೀವನದಲ್ಲಿ, ಬರೋಡಾ ಮತ್ತು ಉತ್ತರಾಖಂಡ್ ತಂಡಗಳನ್ನು ಪ್ರತಿನಿಧಿಸಿದ್ದಾರೆ.
IPLನಲ್ಲಿ RCB ಗಿಂತ ಮೊದಲು, ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು. ಇನ್ನು RCB ಬೋಲ್ಡ್ ಡೈರೀಸ್ ಜೊತೆ ಮಾತನಾಡಿದ ಅವರು, “ಐಪಿಎಲ್ ಹರಾಜಿನ ದಿನ, ನಾನು ಪಂದ್ಯಕ್ಕಾಗಿ ಧರ್ಮಶಾಲಾಗೆ ಹೋಗುತ್ತಿದ್ದೆ. ಅಲ್ಲಿಗೆ ತಲುಪಿದಾಗ ಸಂಜೆ ಏಳು-ಎಂಟು ಗಂಟೆಯಾಗಿತ್ತು. ಅಲ್ಲಿಯವರೆಗೆ ಏನೂ ಆಗಲಿಲ್ಲ ಮತ್ತು ಹರಾಜಿನ ಕೊನೆಯ ಸುತ್ತು ನಡೆಯುತ್ತಿದೆ, ಆಗ ಎಲ್ಲವೂ ಮುಗಿಯಿತು ಎಂದು ನಾನು ಭಾವಿಸಿದೆ” ಎಂದಿದ್ದಾರೆ.
“ಪ್ರಸ್ತುತ (ದೇಶೀಯ) ಋತುವಿನಲ್ಲಿ ನಾನು ಆಡುತ್ತೇನೆ. ಅಗತ್ಯವಿದ್ದರೆ, ಮುಂದಿನ ಋತುವಿನ ನಂತರ ನನ್ನ ವೃತ್ತಿಜೀವನವನ್ನು ಕೊನೆಗೊಳಿಸುತ್ತೇನೆ. ಏಕೆಂದರೆ ನಾನು ನನ್ನ ಇಡೀ ಜೀವನವನ್ನು ಆಡಲು ಬಯಸುವುದಿಲ್ಲ. ಜೀವನದಲ್ಲಿ ಉತ್ತಮವಾಗಿ ಮಾಡಲು ಇತರ ವಿಷಯಗಳಿವೆ” ಎಂದಿದ್ದಾರೆ.
2006ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ 33 ವರ್ಷದ ಸ್ವಪ್ನಿಲ್’ಗೆ 20 ಲಕ್ಷ ರೂ. ನೀಡಿ ಆರ್ ಸಿ ಬಿ ಖರೀಸಿದಿದೆ. ಇನ್ನು RCBಗೆ ಆಯ್ಕೆಯಾಗಿರುವುದು ಇಡೀ ಕುಟುಂಬಕ್ಕೆ ಭಾವನಾತ್ಮಕ ಕ್ಷಣವಾಗಿದೆ ಎಂದು ಸ್ವಪ್ನಿಲ್ ಹೇಳಿದ್ದಾರೆ.
“ನನ್ನ ಕುಟುಂಬದವರು ಕರೆ ಮಾಡಿದ ತಕ್ಷಣ, ನನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ನಾನು ನಡೆದು ಬಂದ ಹಾದಿಯನ್ನು ಊಹಿಸಲೂ ಯಾರಿಂದಲೂ ಸಾಧ್ಯವಿಲ್ಲ” ಎಂದು ಕಣ್ಣೀರು ಸುರಿಸಿದ್ದಾರೆ.
RCB ಈ ಸೀಸನ್’ನಲ್ಲಿ ಪ್ಲೇಆಫ್ ತಲುಪಲು ಸ್ವಪ್ನಿಲ್ ಪ್ರಮುಖ ಪಾತ್ರ ವಹಿಸಿದ್ದಾರೆ. RCB ಪರ 6 ಪಂದ್ಯಗಳಲ್ಲಿ 6 ವಿಕೆಟ್ ಪಡೆದಿದ್ದಾರೆ.