₹3,337 ಕೋಟಿಯ ಒಡೆಯ ಎನಿಸಿಕೊಂಡಿರುವ ದೇಶದ ಶ್ರೀಮಂತ ರೈಲು ನಿಲ್ದಾಣ; ಆದಾಯದ ಮೂಲ ಯಾವುದು ಗೊತ್ತಾ?
ಭಾರತೀಯ ರೈಲ್ವೇ ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ. ಪ್ರತಿದಿನ 2 ಕೋಟಿಗೂ ಹೆಚ್ಚು ರೈಲ್ವೆ ಪ್ರಯಾಣಿಕರು ಭಾರತೀಯ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. 7,000ಕ್ಕೂ ಹೆಚ್ಚು ರೈಲು ನಿಲ್ದಾಣಗಳ ಮೂಲಕ ಹಾದುಹೋಗುವ ಭಾರತೀಯ ರೈಲ್ವೆಯು ಜನರನ್ನು ಅವರವರ ಸ್ಥಳಗಳಿಗೆ ಕರೆದೊಯ್ಯುತ್ತದೆ. ಭಾರತೀಯ ರೈಲ್ವೇ ನಿಲ್ದಾಣಗಳು ಕೇವಲ ರೈಲುಗಳನ್ನು ನಿಲ್ಲಿಸುವ ಸಾಧನವಲ್ಲ, ಆದರೆ ದೊಡ್ಡ ಆದಾಯದ ಮೂಲವಾಗಿವೆ. ಈ ರೈಲು ನಿಲ್ದಾಣಗಳಿಂದ ಭಾರತೀಯ ರೈಲ್ವೆ ಇಲಾಖೆಯು ಪ್ರತಿವರ್ಷ ದೊಡ್ಡ ಮೊತ್ತದ ಆದಾಯವನ್ನು ಗಳಿಸುತ್ತಿದೆ. ಜಾಹಿರಾತುಗಳು, ಅಂಗಡಿಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳು, ಕ್ಲಾಕ್ ರೂಮ್‌ಗಳು, ವೇಟಿಂಗ್ ಹಾಲ್‌ಗಳು... ಇವೆಲ್ಲವುಗಳಿಂದ ರೈಲ್ವೆ ಇಲಾಖೆ ಭಾರೀ ಆದಾಯ ಗಳಿಸುತ್ತದೆ. ಭಾರತೀಯ ರೈಲ್ವೆಯ ಗಳಿಕೆಯ ದಾಖಲೆಯ ಪೈಕಿ ಅಗ್ರಸ್ಥಾನದಲ್ಲಿರುವ ರೈಲ್ವೆ ನಿಲ್ದಾಣ ಯಾವುದು?
ನವದೆಹಲಿ ರೈಲು ನಿಲ್ದಾಣವು ದೇಶದಲ್ಲಿಯೇ ಅತಿ ಹೆಚ್ಚು ಆದಾಯ ಗಳಿಸುವ ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೊಸದಿಲ್ಲಿ ರೈಲು ನಿಲ್ದಾಣದಿಂದ ರೈಲ್ವೆ ಇಲಾಖೆಗೆ ವಾರ್ಷಿಕವಾಗಿ ಬರೋಬ್ಬರಿ 3,337 ಕೋಟಿ ರೂ. ಆದಾಯ ಬಂದಿದೆ.
ನಿಲ್ದಾಣಗಳಿಂದ ಬರುವ ಆದಾಯವು ರೈಲ್ವೆ ಇಲಾಖೆಯ ಪ್ರಮುಖ ಆದಾಯದ ಮೂಲವಾಗಿದೆ. ಗಳಿಕೆಯಲ್ಲಿ ಹೌರಾ ರೈಲು ನಿಲ್ದಾಣವು ಎರಡನೇ ಸ್ಥಾನದಲ್ಲಿದೆ. ಈ ನಿಲ್ದಾಣದ ವಾರ್ಷಿಕ ಆದಾಯ 1,692 ಕೋಟಿ ರೂ. ಇದೆ.
ಗಳಿಕೆಯಲ್ಲಿ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣವು ೩ನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದ ಈ ರೈಲು ನಿಲ್ದಾಣವು ಒಂದು ವರ್ಷದಲ್ಲಿ 1,299 ಕೋಟಿ ರೂ. ಆದಾಯ ಗಳಿಸುತ್ತಿದೆ. 500 ಕೋಟಿ ರೂ.ಗಿಂತ ಹೆಚ್ಚು ಆದಾಯವಿರುವ ರೈಲ್ವೆ ನಿಲ್ದಾಣಗಳನ್ನು ನಾನ್-ಸಬರ್ಬನ್ ಗ್ರೂಪ್-I (NSG-1) ವರ್ಗದ ಅಡಿಯಲ್ಲಿ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ 28 ರೈಲು ನಿಲ್ದಾಣಗಳ ಹೆಸರುಗಳನ್ನು ಸೇರಿಸಲಾಗಿದೆ.
ನವದೆಹಲಿ ರೈಲು ನಿಲ್ದಾಣವು ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಮುಂಬೈನ ಥಾಣೆ ರೈಲು ನಿಲ್ದಾಣವು ಪ್ರಯಾಣಿಕರ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. ಒಂದು ವರ್ಷದಲ್ಲಿ 93.06 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಮುಂಬೈನ ಕಲ್ಯಾಣ್ ರೈಲು ನಿಲ್ದಾಣವೂ ಎರಡನೇ ಸ್ಥಾನದಲ್ಲಿದ್ದು, ವರ್ಷದಲ್ಲಿ 83.79 ಕೋಟಿ ಜನರು ಪ್ರಯಾಣಿಸಿದ್ದಾರೆ. ನವದೆಹಲಿ ರೈಲು ನಿಲ್ದಾಣದಲ್ಲಿ ಒಂದು ವರ್ಷದಲ್ಲಿ 39.36 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.