INDvsAUS: ಚೇತೆಶ್ವರ್ ಪೂಜಾರ ಶಾನ್‌ದಾರ್ ಶತಕ, ಉತ್ತಮ ಮೊತ್ತದತ್ತ ಭಾರತ
ಈ ಶಾನ್‌ದಾರ್ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಶತಕ ಸಿಡಿಸಿ ಚೇತೇಶ್ವರ ಪೂಜಾರ ಮಿಂಚಿದ್ದಾರೆ.
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ ಅಸೀಸ್ ನಡುವಿನ ನಾಲ್ಕನೇ ಹಾಗೂ ಕಡೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿರುವ ಭಾರತಕ್ಕೆ ಚೇತೇಶ್ವರ ಪೂಜಾರನ ಶಾನ್‌ದಾರ್ ಶತಕ ಹಾಗೂ ಮಯಾಂಕ್ ಅಗರ್ವಾಲ್ (77) ಉತ್ತಮ ಮೊತ್ತದತ್ತ ದಾಪುಗಾಲಿಡಲು ಆಸರೆಯಾಗಿದೆ.
ಈ ಶಾನ್‌ದಾರ್ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 18ನೇ ಶತಕ ಸಿಡಿಸಿ ಚೇತೇಶ್ವರ ಪೂಜಾರ ಮಿಂಚಿದ್ದಾರೆ. 195 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ ಶತಕ ಬಾರಿಸಿದ ಪೂಜಾರ ತಂಡಕ್ಕೆ ಆಸೆಯಾಗಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಪೂಜಾರ ಅವರು ಒಟ್ಟು ಮೂರು ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಚೇತೇಶ್ವರ್ ಪೂಜಾರ ಜೊತೆಯಾದ ಮಯಾಂಕ್ ಅಗರ್ವಾಲ್ ಕೂಡ ಭರ್ಜರಿ ಆಟ ಪ್ರದರ್ಶಿಸಿದರು. 112 ಎಸೆತಗಳನ್ನು ಎದುರುಸಿದ ಮಯಾಂಕ್ 7 ಬೌಂಡರಿ ಮತ್ತು 2 ಸಿಕ್ಸ್ನೊಂದಿಗೆ 77 ರನ್ ಗಳಿಸಿ ನಿರ್ಗಮಿಸಿದರು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ(23) ಹಾಗೂ ಉಪ ನಾಯಕ ಅಜಿಂಕ್ಯ ರಹಾನೆ(18) ಬೇಗನೆ ಔಟ್ ಆಗಿದ್ದು ತಂಡಕ್ಕೆ ಕೊಂಚ ಹೊಡೆತ ಬಿದ್ದಂತಾಗಿದೆ. ಸದ್ಯ ಶತಕ ಬಾರಿಸಿರುವ ಪೂಜಾರ ಜೊತೆಯಾಗಿರುವ ಹನುಮ ವಿಹಾರಿ ಎಚ್ಚರಿಕೆಯ ಆಟಕ್ಕೆ ಮುಂದಾಗಿದ್ದಾರೆ.
ಓಪನಿಂಗ್ ಜೋಡಿಯಾಗಿ ಕರ್ನಾಟಕದ ಇಬ್ಬರು ಬ್ಯಾಟ್ಸ್‌ಮನ್‌ಗಳು:
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಸಿಡ್ನಿ ಟೆಸ್ಟ್ ಪಂದ್ಯ ಸಮಸ್ತ ಕರುನಾಡಿಗರ ಪಾಲಿಗೆ ಸ್ಮರಣೀಯವೆನಿಸಿದೆ. ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಕರ್ನಾಟಕದ ಇಬ್ಬರು ಬ್ಯಾಟ್ಸ್‌ಮನ್‌ಗಳು ಓಪನಿಂಗ್ ಜೋಡಿಯಾಗಿ ಕಣಕ್ಕಿಳಿದಿದ್ದಾರೆ. ಕರ್ನಾಟಕದ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ, ಕೇವಲ 9 ರನ್ ಗಳಿಸಿ ಪಂದ್ಯದ ದ್ವಿತೀಯ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದ ರಾಹುಲ್ ನಿರಾಸೆಯುಂಟುಮಾಡಿದರು.