ಕರೋನಾ ಪ್ರಕರಣ, ಗಡಿ ಉದ್ವಿಗ್ನತೆ ಮಧ್ಯೆ ಭಾರತದಲ್ಲಿರುವ ತನ್ನ ನಾಗರೀಕರ ಬಗ್ಗೆ ಚೀನಾದ ಮಹತ್ವದ ಹೆಜ್ಜೆ
ಇಂಡೋ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಚೀನಾ ತನ್ನ ನಾಗರಿಕರನ್ನು ಭಾರತದಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ನವದೆಹಲಿಯ ಚೀನೀ ರಾಯಭಾರ ಕಚೇರಿ ಸೋಮವಾರ ನೀಡಿರುವ ನೋಟಿಸ್‌ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.
ನವದೆಹಲಿ: ಭಾರತ ಮತ್ತು ಚೀನಾ (China) ಗಡಿ ಉದ್ವಿಗ್ನತೆ ಮತ್ತು ದೇಶದಲ್ಲಿ COVID-19 ಕರೋನವೈರಸ್ (Coronavirus) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ತನ್ನ ನಾಗರೀಕರನ್ನು ಭಾರತದಿಂದ ಸ್ಥಳಾಂತರಿಸಲು ನಿರ್ಧರಿಸಿದೆ. ನವದೆಹಲಿಯ ಚೀನೀ ರಾಯಭಾರ ಕಚೇರಿ ಸೋಮವಾರ ನೀಡಿರುವ ನೋಟಿಸ್‌ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಚೀನೀ ರಾಯಭಾರ ಕಚೇರಿ ಭಾರತದಲ್ಲಿ ನೆಲೆಸಿರುವ ತನ್ನ ನಾಗರಿಕರಿಗೆ ಅಗತ್ಯವಾದ ನೋಟಿಸ್ ಮೂಲಕ ತಮ್ಮ ಮನೆಗಳಿಗೆ ಮರಳಲು ವಿಶೇಷ ವಿಮಾನಗಳು ಲಭ್ಯವಿರುತ್ತವೆ ಎಂದು ತಿಳಿಸಿದೆ.
ಚೀನಾದ ವಿದೇಶಾಂಗ ಸಚಿವಾಲಯವು ವಿಶೇಷವಾಗಿ ಚೀನಾಕ್ಕೆ ಹೋಗಲು ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ವಿವರವಾದ ಯೋಜನೆಯನ್ನು ರೂಪಿಸಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಚೀನಾದ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ಮೇ 25 ರಂದು ಮ್ಯಾಂಡರಿನ್‌ನಲ್ಲಿ ನೀಡಲಾದ ನೋಟಿಸ್‌ನಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಸಲಹೆಗಳಿವೆ. ದೂತಾವಾಸವು ಮೇ 27 ರವರೆಗೆ ಪ್ರಯಾಣಿಕರನ್ನು ನೋಂದಾಯಿಸುತ್ತದೆ ಎಂದು ಹೇಳಲಾಗಿದೆ.
ಮರಳಲು ಬಯಸುವವರು ತಾವು ಸ್ವದೇಶಕ್ಕೆ ಮರಳಲು ತಗಲುವ ವೆಚ್ಚ ಮತ್ತು 14 ದಿನಗಳ ಕ್ವಾರಂಟೈನ್ ಗೆ ತಾವೇ ಪಾವತಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಬರೆಯಲಾಗಿದೆ. ಜೊತೆಗೆ ಕರೋನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವವರಿಗೆ ವಿಮಾನ ಹತ್ತಲು ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ ಕರೋನಾ ರೋಗಿಯ ಬಳಿ ವಾಸಿಸುವ ಮತ್ತು ದೇಹದ ಉಷ್ಣತೆಯು 37.3 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿದ್ದರೆ, ಪ್ರಯಾಣಿಸಲು ಅನುಮತಿಸುವುದಿಲ್ಲ. ವೈದ್ಯಕೀಯ ಇತಿಹಾಸವನ್ನು ಮರೆಮಾಚದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಯಾರಾದರೂ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಲು ಪ್ರಯತ್ನಿಸಿದರೆ, ಆ ವ್ಯಕ್ತಿಯು ಅದರ ಜವಾಬ್ದಾರಿಯನ್ನು ಹೊಂದಿರುತ್ತಾನೆ ಎಂದು ಹೇಳಲಾಗಿದೆ.
ಭಾರತದ ವಿವಿಧ ಚೀನೀ ಕಂಪನಿಗಳಲ್ಲಿ ಕೆಲಸ ಮಾಡುವ ಚೀನೀ ನಾಗರಿಕರಿಗೆ ಭಾರತವನ್ನು ತೊರೆಯಲು ಮೂಲ ಕಂಪನಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರದ ಅಗತ್ಯವಿದೆ ಎಂದು ಇದರಲ್ಲಿ ಸ್ಪಷ್ಟಪಡಿಸಲಾಗಿದೆ.
ಇದರ ಜೊತೆಯಲ್ಲಿಯೇ ಭಾರತ-ಚೀನಾ ನಡುವಿನ ಗಡಿ ಉದ್ವೇಗ್ನತೆಗೂ, ಚೀನೀಯರನ್ನು ಭಾರತದಿಂದ ಸ್ಥಳಾಂತರಿಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚೀನಾದ ರಾಯಭಾರ ಕಚೇರಿಯು ಸೂಚಿಸಿದ್ದರೂ, ಭಾರತದ ಗಡಿಯಲ್ಲಿ ಇತ್ತೀಚಿನ ಉದ್ವಿಗ್ನತೆಯನ್ನು ತೆಗೆದುಕೊಂಡ ನಂತರವೇ ಈ ನೋಟೀಸ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂಬುದು ಗಮನಾರ್ಹ. ಇದಲ್ಲದೆ ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ಕೋವಿಡ್ -19 (Covid-19) ಪ್ರಕರಣಗಳಿಂದಾಗಿ ಚೀನಾ ಸರ್ಕಾರವು ತನ್ನ ನಾಗರಿಕರನ್ನು ಇಲ್ಲಿಂದ ಸ್ಥಳಾಂತರಿಸಲು ಬಯಸಿದೆ ಎಂದು ಹೇಳಲಾಗುತ್ತಿದೆ.