ವಾಷಿಂಗ್ಟನ್: ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾವೈರಸ್ COVID-19 ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಜಗತ್ತಿನಾದ್ಯಂತ 47 ಸಾವಿರಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಈ ವೈರಸ್ ಚೀನಾದಲ್ಲೇ ಹುಟ್ಟಿದ್ದರೂ ಅಲ್ಲಿ ಸೋಂಕು ಪೀಡಿತರ ಮತ್ತು ಸತ್ತವರ ಸಂಖ್ಯೆ ಕಡಿಮೆ.  ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ  ಅಧಿಕೃತವಾದ ಮತ್ತು ನಿಖರವಾದ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಚೀನಾವನ್ನು ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

Covid-19 ಸೋಂಕು ಹರಡುವಿಕೆ ಬಗ್ಗೆ ಅಂತಕಕ್ಕೊಳಗಾಗಿರುವ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿದಿನ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಬುಧವಾರದ ತಮ್ಮ ಸುದ್ದಿಗೋಷ್ಠಿಯಲ್ಲಿ ಚೀನಾ ವಿರುದ್ಧ ಕಿಡಿ ಕಾರಿದರು.  


ಕೊರೋನಾ ವೈರಸ್ ಚೀನಾದಿಂದಲೇ ಹರಡಿರುವ ಬಗ್ಗೆ ಅಮೆರಿಕಾದಲ್ಲಿ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇದನ್ನು "ಚೀನಾ ವೈರಸ್" ಎಂದು ಕರೆದಿದ್ದರು. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಈ ವೈರಸ್ ವಿಶ್ವಾದ್ಯಂತ ದುಷ್ಪರಿಣಾಮ ಬೀರುತ್ತಿದ್ದರೂ ಚೀನಾದಲ್ಲಿ ಮಾತ್ರ ಕಡಿಮೆ ಪರಿಣಾಮ ಬೀರಿರಲು ಹೇಗೆ ಸಾಧ್ಯ ಎಂಬ ಬಗ್ಗೆ ಅಮೆರಿಕದ ಜನ ಮತ್ತು ಜನಪ್ರತಿನಿಧಿಗಳು ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, ಚೀನಾ ಕೊರೋನಾ ಪೀಡಿತರ ಮತ್ತು ಸಾವನ್ನಪ್ಪಿದವರ ಬಗ್ಗೆ ಒದಗಿಸಿರುವ ಅಂಕಿ-ಅಂಶಗಳು ನಿಖರವಾಗಿವೆ ಎಂಬುದನ್ನು ನಂಬುವುದಾದರೂ ಹೇಗೆ ಎಂದು ಅನುಮಾನದ ಮಾತುಗಳನ್ನಾಡಿದ್ದಾರೆ. 


ಕರೋನಾವೈರಸ್ ಹಿನ್ನೆಲೆಯಲ್ಲಿ ಚೀನಾ ಬಗ್ಗೆ ಅನುಮಾನಗಳಿವೆ ಆದರೂ ಒಟ್ಟಾರೆಯಾಗಿ ಚೀನಾ ಮತ್ತು ಅಮೆರಿಕ ನಡುವಿನ ಸಂಬಂಧ ಉತ್ತಮವಾಗಿದೆ. ಅಲ್ಲದೆ, ವಯಕ್ತಿಕವಾಗಿ ತಮ್ಮ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಸಂಬಂಧವೂ ಚೆನ್ನಾಗಿದೆ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದರು. 


ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ ಅಮೆರಿಕ-ಚೀನಾ ನಡುವೆ ಬಿರುಕಿದೆ ಎಂಬುದಕ್ಕೆ ಇವು ಸಾಕ್ಷಿ:


* ಯುಎಸ್ ಮತ್ತು ಚೀನಾ ನಡುವಿನ ಇತ್ತೀಚಿನ ಟಾಕ್ ವಾರ್ ಮುಖ್ಯವಾಗಿದೆ. ಚೀನಾದಲ್ಲಿ ವೈರಸ್ ಹರಡಲು ಯುಎಸ್ ಮಿಲಿಟರಿ ಕಾರಣ ಎಂಬ ಮಾತುಗಳು ಕೇಳಿ ಬಂದಿತ್ತು. ಇದು ಅಮೆರಿಕ-ಚೀನಾ ನಡುವಿನ ಸಂಬಂಧವನ್ನು ಬಿಗಡಾಯಿಸಿದೆ.


* ಯುಎಸ್ ಗುಪ್ತಚರ ವರದಿಯನ್ನು ಉಲ್ಲೇಖಿಸಿ, ಅಮೆರಿಕದ ಪ್ರತಿಪಕ್ಷಗಳು ಚೀನಾ ಕರೋನವೈರಸ್ ಪೀಡಿತರ ಮತ್ತು ಸಾವುಗಳ ಬಗ್ಗೆ ನೀಡುತ್ತಿರುವ ಅಂಕಿ-ಅಂಶಗಳು ಜಾಗತಿಕ ಸಮುದಾಯವನ್ನು ದಾರಿ ತಪ್ಪಿಸುತ್ತಿವೆ ಎಂದು ಆರೋಪಿಸಿವೆ.


* ಗಮನಾರ್ಹವಾಗಿ, ಚೀನಾದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕಾಣಿಸಿಕೊಂಡ ಈ ವೈರಸ್ ನಿಂದಾಗಿ ಎಪ್ರಿಲ್ 1 ರವರೆಗೆ ಒಟ್ಟು 82,361 ಪ್ರಕರಣಗಳು ದೃಢಪಟ್ಟಿದ್ದು, 3,316 ಮಂದಿ ಸಾವನ್ನಪ್ಪಿದ್ದಾರೆ ಎಂದು ಚೀನಾದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಆದರೆ ಯುಎಸ್ ಇದುವರೆಗೆ 206,207 ಪ್ರಕರಣಗಳು ಮತ್ತು 4,542 ಸಾವುಗಳಿಗೆ ಸಾಕ್ಷಿಯಾಗಿದೆ.


* ಏತನ್ಮಧ್ಯೆ, ಕರೋನವೈರಸ್ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ 905,279 ಜನರಿಗೆ ಹರಡಿದೆ. ಬುಧವಾರ ರಾತ್ರಿ 11.45 ರವರೆಗೆ ಐಎಸ್ಟಿ ಒದಗಿಸಿರುವ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 45,371 ಕ್ಕೆ ಏರಿಕೆಯಾಗಿದೆ. ವಿಶ್ವಸಂಸ್ಥೆಯ ಮುಖ್ಯಸ್ಥರು ಈ ಬಿಕ್ಕಟ್ಟನ್ನು ಎರಡನೇ ಮಹಾಯುದ್ಧದ ನಂತರದ ಅತ್ಯಂತ ಕೆಟ್ಟ ಪರಿಸ್ಥಿತಿ ಎಂದು ಬಣ್ಣಿಸಿದ್ದಾರೆ.