ನವದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತವನ್ನು ನೆನಪಿಸಿಕೊಂಡಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಂದರೆ ಡಬ್ಲ್ಯುಇಎಫ್‌ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಭಾರತದೊಂದಿಗಿನ ಪಾಕಿಸ್ತಾನದ ಸಂಬಂಧಗಳು ಸರಿಹೋದರೆ ಅದು ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ, ದುರದೃಷ್ಟವಶಾತ್ ಉಭಯ ದೇಶಗಳ ನಡುವಿನ ಸಂಬಂಧ ಉತ್ತಮವಾಗಿ ಇಲ್ಲದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದೇ ಸಂದರ್ಭದಲ್ಲಿ ಶಾಂತಿ ಮತ್ತು ಸ್ಥಿರತೆ ಇಲ್ಲದೆ ಯಾವುದೇ ದೇಶ ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ ಇಮ್ರಾನ್ ಖಾನ್, ಕೇವಲ ಶಾಂತಿ ಸ್ಥಾಪನೆಗಾಗಿ ಪಾಕಿಸ್ತಾನ ಬೇರೆ ಯಾವುದೇ ದೇಶದ ಜೊತೆಗೆ ಪಾಲುದಾರಿಕೆ ಮಾಡಲು ಸಿದ್ಧವಿದೆ ಎಂದು ಹೇಳಿದರು. 


ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಷಣ ಮಾಡಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದ ಚಿತ್ರಣ ಹದಗೆಟ್ಟಿದೆ. ಹೀಗಾಗಿ 'ಯಾರೂ ಪಾಕಿಸ್ತಾನಕ್ಕೆ ಬರಲು ಇಷ್ಟಪಡುತ್ತಿಲ್ಲ' ಎಂಬುದನ್ನು ಒಪ್ಪಿಕೊಂಡರು. ಇದೇ ವೇಳೆ  ಪಾಕಿಸ್ತಾನದಲ್ಲಿ ಧಾರ್ಮಿಕ ಮೂಲಭೂತವಾದದ ಬಗ್ಗೆ ಮತ್ತು ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ಕುಖ್ಯಾತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.  ಶಾಂತಿ ಮತ್ತು ಸ್ಥಿರತೆ ಇಲ್ಲದೆ ಆರ್ಥಿಕ ಬೆಳವಣಿಗೆ ಸಾಧ್ಯವಿಲ್ಲ ಎಂದು ತಿಳಿಸಿದ ಇಮ್ರಾನ್ ಖಾನ್, ಹಿಂದೂ-ಬೌದ್ಧ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಉಲ್ಲೇಖಿಸಿದರು. ಈ ವೇಳೆ ಪಾಕಿಸ್ತಾನದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಪಾಕ್ ಪ್ರಧಾನಿ, ಪಾಕಿಸ್ತಾನವು ವಿಶ್ವದಲ್ಲೇ ಹೆಚ್ಚು ಕಡೆಗಣಿಸಲ್ಪಟ್ಟ ದೇಶಗಳಲ್ಲಿ ಒಂದಾಗಿದೆ. ಆದಾಗ್ಯೂ ಸರ್ಕಾರ ಕೈಗೊಂಡ ಕ್ರಮಗಳ ಪರಿಣಾಮವಾಗಿ ಪ್ರವಾಸೋದ್ಯಮವು ಒಂದು ವರ್ಷದಲ್ಲಿ ದ್ವಿಗುಣಗೊಂಡಿದೆ ಎಂದು ತಿಳಿಸಿದರು.


ವಿಶ್ವ ಆರ್ಥಿಕ ವೇದಿಕೆಯಲ್ಲಿ ಬುಧವಾರ (ಜನವರಿ 22) ರಂದು ಪಾಕಿಸ್ತಾನ ಯಾವುದೇ ಹೊಸ ಸಂಘರ್ಷದ ಭಾಗವಾಗುವುದಿಲ್ಲ ಎಂದು ಪುನರುಚ್ಚರಿಸಿದ ಇಮ್ರಾನ್ ಖಾನ್, ದೇಶವು ಶಾಂತಿಯಿಂದ ಲಾಭ ಪಡೆಯುತ್ತಿದೆ ಎಂಬುದನ್ನು ಒತ್ತಿ ಹೇಳಿದರು. ದಾವೋಸ್‌ನ ವಿಶ್ವ ಆರ್ಥಿಕ ಕಾಂಗ್ರೆಸ್ ಕೇಂದ್ರದಲ್ಲಿ ನಡೆದ 'ಪಾಕಿಸ್ತಾನ ಕಾರ್ಯತಂತ್ರ ಸಂವಾದ' ಎಂಬ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಖಾನ್ ಈ ವಿಷಯ ತಿಳಿಸಿದರು. ಜಿಯೋ ನ್ಯೂಸ್ ವರದಿಯ ಪ್ರಕಾರ, ಪಾಕಿಸ್ತಾನವು ಅಫ್ಘಾನ್ ಜಿಹಾದ್ ಮತ್ತು 9/11 ರ ನಂತರದ ಭಯೋತ್ಪಾದನೆ ವಿರುದ್ಧದ ಯುದ್ಧ ಇದು ಪಾಕಿಸ್ತಾನ ಮತ್ತು ಅದರ ನಾಗರಿಕರಿಗೆ ಹೆಚ್ಚಿನ ಹಾನಿ ಉಂಟುಮಾಡಿದೆ. ಈ ಎರಡರಿಂದಲೂ ದೇಶ ಪಾಠ ಕಲಿತಿದೆ ಎಂದು ಹೇಳಿದರು.


ಭಯೋತ್ಪಾದನೆ ನಿರ್ಮೂಲನೆ ತನ್ನ ಆದ್ಯತೆಯೆಂದು ಭರವಸೆ ನೀಡಿದ ಇಮ್ರಾನ್ ಖಾನ್, "ಭಯೋತ್ಪಾದಕರಿಂದ ಶಸ್ತ್ರಾಸ್ತ್ರಗಳನ್ನು ಪಡೆದುಕೊಂಡು ಪುನರ್ವಸತಿ ಕಲ್ಪಿಸಿದ ಮೊದಲ ಸರ್ಕಾರ ಇದಾಗಿದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ನಾವು ಬದ್ಧರಾಗಿದ್ದೇವೆ" ಎಂದು ಸ್ಪಷ್ಟಪಡಿಸಿದರು.


ಈ ಸಮಯದಲ್ಲಿ ಪ್ರಧಾನಿ ಖಾನ್ ಅಫ್ಘಾನಿಸ್ತಾನದಲ್ಲಿ ಶಾಂತಿಗಾಗಿ ಪಾಕಿಸ್ತಾನದ ಉಪಕ್ರಮವನ್ನು ಪ್ರಸ್ತಾಪಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನವನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ. "ಅಫ್ಘಾನ್ ಶಾಂತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಇಸ್ಲಾಮಾಬಾದ್ ಸಕ್ರಿಯವಾಗಿ ಭಾಗವಹಿಸುತ್ತಿದೆ" ಎಂದು ಅವರು ಹೇಳಿದರು.


ಅಫ್ಘಾನಿಸ್ತಾನದಲ್ಲಿ ಕದನ ವಿರಾಮಕ್ಕೆ ಅವಕಾಶವಿದೆ, ಇದು ಆರ್ಥಿಕ ಕಾರಿಡಾರ್ ಮೂಲಕ ಮಧ್ಯ ಏಷ್ಯಾದ ದೇಶಗಳನ್ನು ತಲುಪಲು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತದೆ ಎಂದು ಖಾನ್ ಹೇಳಿದ್ದಾರೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಯನ್ನು ಉಲ್ಲೇಖಿಸಿದ ಪ್ರಧಾನಿ, ತಮ್ಮ ಮೊದಲ ವರ್ಷವು ಸ್ಥಿರೀಕರಣ ಕ್ರಮಗಳ ಮೇಲೆ ಕೇಂದ್ರೀಕರಿಸಿದೆ, ಇದು ಚಾಲ್ತಿ ಖಾತೆ ಕೊರತೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಭರವಸೆ ನೀಡಿದರು.


ಹೂಡಿಕೆಯ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಕೈಗೊಂಡ ಕ್ರಮಗಳನ್ನು ಉಲ್ಲೇಖಿಸಿದ ಅವರು, ವ್ಯವಹಾರವನ್ನು ಸುಲಭಗೊಳಿಸಲು ವಿಶ್ವ ಬ್ಯಾಂಕ್ ಪಾಕಿಸ್ತಾನದ ಶ್ರೇಯಾಂಕವನ್ನು ಸುಧಾರಿಸಿದೆ ಎಂದರು. "ನಮ್ಮ ವಿದೇಶಿ ಹೂಡಿಕೆ ಒಂದು ವರ್ಷದಲ್ಲಿ 200 ಪ್ರತಿಶತದಷ್ಟು ಹೆಚ್ಚಾಗಿದೆ". ಕೃಷಿ, ಖನಿಜಗಳು ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಿಸಲು ಪಾಕಿಸ್ತಾನ ಆಶಿಸುತ್ತಿದೆ ಎಂದು ಇಮ್ರಾನ್ ಹೇಳಿದ್ದಾರೆ. 


ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಸ್ತುತ ಸ್ವಿಟ್ಜರ್ಲೆಂಡ್‌ಗೆ 3 ದಿನಗಳ ಭೇಟಿ ನೀಡಿರುವ  ಪಾಕ್ ಪ್ರಧಾನಿ, ಈ ಪ್ರವಾಸದಲ್ಲಿ ಕಾರ್ಪೊರೇಟ್, ವ್ಯವಹಾರ, ತಂತ್ರಜ್ಞಾನ ಮತ್ತು ಹಣಕಾಸು ಅಧಿಕಾರಿಗಳೊಂದಿಗೆ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಲಿದ್ದಾರೆ.