Howdy Modi: ಹ್ಯೂಸ್ಟನ್‌ನಲ್ಲಿ `370ನೇ ವಿಧಿ ರದ್ದು` ಸಮರ್ಥಿಸಿಕೊಂಡ ಪ್ರಧಾನಿ ಮೋದಿ
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ, ಆರ್ಟಿಕಲ್ 370 ನ್ನು ಉಲ್ಲೇಖಿಸಿದರು.
ಟೆಕ್ಸಾಸ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿದ ಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಹ್ಯೂಸ್ಟನ್‌ನಲ್ಲಿ ಆಯೋಜಿಸಲಾಗಿದ್ದ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ನೆರೆದಿದ್ದ 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾಷಣದಲ್ಲಿ, ಆರ್ಟಿಕಲ್ 370 (Article 370) ಅನ್ನು ಉಲ್ಲೇಖಿಸುತ್ತಾ ಭಾರತವು ಅದಕ್ಕೆ ವಿದಾಯ ಹೇಳಿದೆ. ಕೆಲವು ದಿನಗಳ ಹಿಂದೆ ದೇಶವು ಅದಕ್ಕೆ ಫೇರ್‌ವೆಲ್ ನೀಡಿದೆ ಎಂದರು.
ಆರ್ಟಿಕಲ್ 370 ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರಿಗೆ ಅಭಿವೃದ್ಧಿ ಮತ್ತು ಸಮಾನ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿತ್ತು. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಹೆಚ್ಚಿಸಿದ ಶಕ್ತಿಗಳು ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದವು. ಭಾರತದ ಸಂವಿಧಾನವು ಉಳಿದ ಭಾರತೀಯರಿಗೆ ನೀಡಿರುವ ಹಕ್ಕುಗಳನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಜನರಿಗೂ ನೀಡಲು ಈಗ ಸಾಧ್ಯವಾಗುತ್ತಿದೆ. ಕಣಿವೆ ರಾಜ್ಯದ ಜನರ ಮೇಲೆ ಆಗುತ್ತಿದ್ದ ತಾರತಮ್ಯ ಇದೀಗ ಕೊನೆಯಾಗಲಿದೆ ಎಂದು ಹೇಳಿದರು.
"ಯಾವುದೇ ದೇಶದಲ್ಲಿ ಶೀಘ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಅದರ ನಾಗರಿಕರಿಗೆ ಕಲ್ಯಾಣ ಯೋಜನೆ ಅವಶ್ಯಕವಾಗಿದೆ. ನಿರ್ಗತಿಕ ನಾಗರಿಕರಿಗಾಗಿ ಕಲ್ಯಾಣ ಯೋಜನೆಯನ್ನುಒದಗಿಸುವುದರ ಜೊತೆಗೆ, ಹೊಸ ಭಾರತವನ್ನು ನಿರ್ಮಿಸಲು ಇದು ಕೆಲವು ಅವಕಾಶ ನೀಡಿದೆ" ಎಂದು ಪಿಎಂ ಮೋದಿ ತಿಳಿಸಿದರು.
ಪಿಎಂ ಮೋದಿ, "ಈ ಕಾರ್ಯಕ್ರಮದ ಹೆಸರು # ಹೌಡಿ ಮೋದಿ. ಆದರೆ ಮೋದಿ ಒಬ್ಬರೇನಲ್ಲ. ನಾನು 130 ಕೋಟಿ ಭಾರತೀಯರ ಆದೇಶದ ಮೇರೆಗೆ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿ. ಆದ್ದರಿಂದ ನೀವು # ಹೌಡಿ ಮೋದಿ ಎಂದು ಕೇಳಿದಾಗ, ಉತ್ತರವೆಂದರೆ ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ" ಎಂದು ಪ್ರಧಾನಿ ಮೋದಿ ಹೌಡಿ ಮೋದಿಯನ್ನು ಬಣ್ಣಿಸಿದರು.
"ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ. ನೂರಾರು ಭಾಷೆಗಳು, ನೂರಾರು ಉಪಭಾಷೆಗಳು ನಮ್ಮ ದೇಶದಲ್ಲಿ ಸಹಬಾಳ್ವೆಯ ಮನೋಭಾವದಿಂದ ಶತಮಾನಗಳಿಂದ ಮುಂದುವರಿಯುತ್ತಿವೆ ಮತ್ತು ಇನ್ನೂ ಕೋಟ್ಯಂತರ ಜನರ ಮಾತೃಭಾಷೆಯಾಗಿ ಉಳಿದಿವೆ" ಎಂದು ಪಿಎಂ ಮೋದಿ ಹೆಮ್ಮೆಯಿಂದ ನುಡಿದರು.