ಮಧ್ಯ ಪೂರ್ವದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲಿದೆಯೇ ಹೆಜ್ಬೊಲ್ಲಾದ ಮಿಲಿಟರಿ ಸಾಮರ್ಥ್ಯ?
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಲೆಬನಾನಿನ ಹೆಜ್ಬೊಲ್ಲಾ ಸಂಘಟನೆ ತಾನು ಇಸ್ರೇಲ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಸಲು ಸನ್ನದ್ಧವಾಗಿರುವುದಾಗಿ ಎಚ್ಚರಿಕೆ ರವಾನಿಸಿದೆ. ಈಗಾಗಲೇ ಇಸ್ರೇಲ್ ಸೇನೆ ಮತ್ತು ಹೆಜ್ಬೊಲ್ಲಾ ನಡುವೆ ಗಡಿಯಲ್ಲಿ ಚಕಮಕಿಗಳು ನಡೆದ ಬಳಿಕ ಈ ಬೆಳವಣಿಗೆ ನಡೆದಿದೆ. ಎರಡೂ ಪಡೆಗಳು ಪರಸ್ಪರರ ಮೇಲೆ ಶೆಲ್ ಮತ್ತು ರಾಕೆಟ್ ದಾಳಿಗಳನ್ನು ನಡೆಸಿವೆ. ಅಕ್ಟೋಬರ್ 7ರಂದು, ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, ಬಹುತೇಕ 1,400 ಸಾವು ನೋವುಗಳು ಸಂಭವಿಸಿದ ಬಳಿಕ ಈ ಚಕಮಕಿ ತಲೆದೋರಿದೆ.
ಹೆಜ್ಬೊಲ್ಲಾ ಉಗ್ರರೊಡನೆ ಹೆಚ್ಚುತ್ತಿರುವ ಚಕಮಕಿಯ ಕಾರಣದಿಂದ, ಇಸ್ರೇಲಿ ಸೇನೆ ಲೆಬನಾನ್ ಬಳಿಯ ತನ್ನ ಉತ್ತರ ಗಡಿಯಿಂದ 28 ಪ್ರದೇಶಗಳನ್ನು ಖಾಲಿಯಾಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲಿ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಈಗಾಗಲೇ ಲೆಬನಾನ್ ಗಡಿಯಾದ್ಯಂತ ಹತ್ತಾರು ಸಾವಿರ ಯೋಧರನ್ನು ನಿಯೋಜನೆಗೊಳಿಸಿದೆ.
ಇಸ್ರೇಲ್ ಡಿಫೆನ್ಸ್ ಫೋರ್ಸಸ್ (ಐಡಿಎಫ್) ಹಾಗೂ ಹೆಜ್ಬೊಲ್ಲಾ ಸಂಘಟನೆಯ ಮಧ್ಯೆ ಗಡಿಯಾದ್ಯಂತ ಭಾನುವಾರ ತೀವ್ರವಾದ ಗುಂಡಿನ ಚಕಮಕಿ ನಡೆಯಿತು. ಈ ಸುತ್ತಿನ ಕಾಳಗದಲ್ಲಿ ಮೊದಲ ಇಸ್ರೇಲಿ ನಾಗರಿಕನ ಸಾವೂ ಸಂಭವಿಸಿದ್ದು, ನಲ್ವತ್ತರ ಆಸುಪಾಸಿನ ವ್ಯಕ್ತಿಯೋರ್ವ ಶ್ತುಲ ಎಂಬ ಗ್ರಾಮದ ಗಡಿಯ ಬಳಿ ಹೆಜ್ಬೊಲ್ಲಾ ಉಡಾಯಿಸಿದ ಆ್ಯಂಟಿ ಟ್ಯಾಂಕ್ ಕ್ಷಿಪಣಿಯಿಂದ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ಒಂದು ಸೇನಾ ನೆಲೆಯ ಮೇಲೆ ನಡೆದ ದಾಳಿಯಲ್ಲಿ ಇಸ್ರೇಲಿ ಯೋಧನೋರ್ವ ಸಾವಿಗೀಡಾಗಿದ್ದಾನೆ.
ಕಳೆದ ಸೋಮವಾರ, ಲೆಬನಾನ್‌ನಿಂದ ಗಡಿ ಉಲ್ಲಂಘಿಸಿ ಇಸ್ರೇಲ್ ಪ್ರವೇಶಿಸಿದ ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್ ಉಗ್ರರು ಮತ್ತು ಇಸ್ರೇಲ್ ಸೈನಿಕರ ನಡುವೆ ನಡೆದ ಕದನದಲ್ಲಿ ಮೂವರು ಇಸ್ರೇಲಿ ಯೋಧರು ಮೃತಪಟ್ಟಿದ್ದರು. ಅದೇ ದಿನದಂದು, ಮೋರ್ಟರ್ ದಾಳಿಗೆ ಪ್ರತಿಯಾಗಿ ಐಡಿಎಫ್ ಲೆಬನಾನ್ ಮೇಲೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಮೂವರು ಹೆಜ್ಬೊಲ್ಲಾ ಉಗ್ರರು ಸಾವಿಗೀಡಾಗಿದ್ದಾರೆ.
ಇಂತಹ ಹಿಂಸಾಚಾರಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಹಲವು ವೀಕ್ಷಕರು ತಮ್ಮ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದು, ಹೆಜ್ಬೊಲ್ಲಾ ಸಹ ಇಸ್ರೇಲ್ ವಿರುದ್ಧ ಯುದ್ಧ ಆರಂಭಿಸುವ ಸಾಧ್ಯತೆಗಳಿವೆ. ಇದಕ್ಕೆ ಹೆಜ್ಬೊಲ್ಲಾ ನಾಯಕರು ಮತ್ತು ಹಲವು ಇರಾನಿನ ನಾಯಕರೂ ಬೆಂಬಲ ನೀಡುತ್ತಿದ್ದಾರೆ. ಇಂತಹ ಒಂದು ಸಂಭಾವ್ಯತೆ ಹಮಾಸ್ ಮತ್ತು ಗಾಜಾದ ನಾಗರಿಕರ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಿದೆ. ಆದರೆ, ಹಾಗೇನಾದರೂ ಆದರೆ, ಲೆಬನಾನ್ ಮೇಲೆ ಅದರ ಪರಿಣಾಮ ಅತ್ಯಂತ ಗಂಭೀರವಾಗಲಿದ್ದು, ಇಸ್ರೇಲ್‌ಗೂ ಸಾಕಷ್ಟು ನಷ್ಟ ಉಂಟುಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ- Israel-Hamas War: 10 ದಿನಗಳಲ್ಲಿ ಹಮಾಸ್‌ನ 6 ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನುಕೊಂದ ಇಸ್ರೇಲ್!
2006ರಲ್ಲಿ ಹೆಜ್ಬೊಲ್ಲಾ ಉಗ್ರರು ಗಡಿಯ ಬಳಿ ಇಬ್ಬರು ಇಸ್ರೇಲಿ ಯೋಧರನ್ನು ವಶಪಡಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಬೃಹತ್ ಪ್ರಮಾಣದ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು. ಈ ಕದನ 34 ದಿನಗಳಿಗೂ ಹೆಚ್ಚು ಕಾಲ ಮುಂದುವರೆದು, 1,100ಕ್ಕೂ ಹೆಚ್ಚು ಲೆಬನಾನ್ ನಾಗರಿಕರು ಮತ್ತು 165 ಇಸ್ರೇಲಿಗಳು ಸಾವಿಗೀಡಾಗಿದ್ದರು. ಈ ಯುದ್ಧದ ಫಲಿತಾಂಶ ಅಥವಾ ಪರಿಣಾಮವೇನು ಎನ್ನುವುದು ಅಸ್ಪಷ್ಟವಾಗಿದ್ದರೂ, ಯುದ್ಧದ ಘೋರ ಪರಿಣಾಮವನ್ನು ಲೆಬನಾನಿನ ನಾಗರಿಕರು ಅನುಭವಿಸುವಂತಾಯಿತು. ಈ ಯುದ್ಧದಲ್ಲಿ ಬಹುತೇಕ 30,000 ಮನೆಗಳು ನಾಶಗೊಂಡು, 109 ಸೇತುವೆಗಳು ಹಾಗೂ 78 ವೈದ್ಯಕೀಯ ಕೇಂದ್ರಗಳು ನಾಶಗೊಂಡಿದ್ದವು ಎಂದು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ವರದಿ ಮಾಡಿದೆ.
ಹೆಜ್ಬೊಲ್ಲಾ ಕುರಿತು ಮಾಹಿತಿ ಹೊಂದಿರುವ, ಅಟ್ಲಾಂಟಿಕ್ ಕೌನ್ಸಿಲ್ ಎಂಬ ವಾಷಿಂಗ್ಟನ್ ಡಿಸಿಯ ಥಿಂಕ್ ಟ್ಯಾಂಕ್ ಸಂಸ್ಥೆಯ ನಿಕೋಲಾಸ್ ಬ್ಲಾನ್‌ಫೋರ್ಡ್ ಅವರ ಪ್ರಕಾರ, ಹೆಜ್ಬೊಲ್ಲಾ ಬಳಿ ಇಸ್ರೇಲನ್ನು ಗುರಿಯಾಗಿಸಲು 3,000-5,000 ಯೋಧರು, ಸಣ್ಣ ವ್ಯಾಪ್ತಿಯ ಕ್ಷಿಪಣಿಗಳಿವೆ. ಕಳೆದ 17 ವರ್ಷಗಳ ಅವಧಿಯಲ್ಲಿ, ಹೆಜ್ಬೊಲ್ಲಾ ತನ್ನ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಮಹತ್ತರ ಕ್ರಮಗಳನ್ನು ಕೈಗೊಂಡಿದೆ. ಬ್ಲಾನ್‌ಫೋರ್ಡ್ ಅವರ ಪ್ರಕಾರ, 1948ರಲ್ಲಿ ಇಸ್ರೇಲ್ ಸ್ಥಾಪನೆಯಾದ ಬಳಿಕ ಅದು ಇಲ್ಲಿಯತನಕ ಎದುರಿಸಿರದಷ್ಟು ಅಪಾಯವನ್ನು ತಂದೊಡ್ಡಲು ಪ್ರಸ್ತುತ ಹೆಜ್ಬೊಲ್ಲಾ ಸಮರ್ಥವಾಗಿದೆ.
ಬ್ಲಾಂಡ್‌ಫೋರ್ಡ್ ಅವರ ಲೆಕ್ಕಾಚಾರದ ಪ್ರಕಾರ, ಈಗ ಹೆಜ್ಬೊಲ್ಲಾದ ಪಡೆಗಳು ಸಾಕಷ್ಟು ವಿಸ್ತಾರಗೊಂಡಿದ್ದು, ಪೂರ್ಣಾವಧಿ ಮತ್ತು ಮೀಸಲು ಪಡೆಗಳನ್ನು ಸೇರಿಸಿ, ಹೆಜ್ಬೊಲ್ಲಾ ಬಳಿ 60,000 ಯೋಧರು ಇರಬಹುದು. ಅದರೊಡನೆ, ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ಒಳಗೆ ಬಹಳಷ್ಟು ಹಾನಿ ಮಾಡಬಲ್ಲ ದೀರ್ಘ ವ್ಯಾಪ್ತಿಯ ರಾಕೆಟ್‌ಗಳನ್ನೂ ಹೊಂದಿದೆ. ಹೆಜ್ಬೊಲ್ಲಾ ನಿರಂತರವಾಗಿ ತನ್ನ ಕ್ಷಿಪಣಿ ಸಂಗ್ರಹವನ್ನು ಹೆಚ್ಚಿಸುತ್ತಾ ಬಂದಿದ್ದು, 2006ರ ವೇಳೆ 14,000 ಕ್ಷಿಪಣಿಗಳನ್ನು ಹೊಂದಿದ್ದ ಹೆಜ್ಬೊಲ್ಲಾ, ಈಗ ಅಂದಾಜು 1,50,000 ಕ್ಷಿಪಣಿಗಳನ್ನು ಪಡೆದಿದೆ.
ಇವುಗಳಲ್ಲಿ ಬಹುತೇಕ ಕ್ಷಿಪಣಿಗಳು ಸಣ್ಣ ವ್ಯಾಪ್ತಿಯ ಕ್ಷಿಪಣಿಗಳಾಗಿವೆ. ಆದರೆ ಅವುಗಳೊಡನೆ ಹೆಜ್ಬೊಲ್ಲಾ ಇರಾನ್ ನಿರ್ಮಿತ, 300 ಕಿಲೋಮೀಟರ್ (186 ಮೈಲಿ) ವ್ಯಾಪ್ತಿಯ ಪ್ರಿಸಿಷನ್ ಗೈಡೆಡ್ ಕ್ಷಿಪಣಿಗಳನ್ನೂ ಹೊಂದಿದೆ. ಗಮನಾರ್ಹ ಅಂಶವೆಂದರೆ, ಹೆಜ್ಬೊಲ್ಲಾ ಅಸಾಧಾರಣ ತರಬೇತಿ ಪಡೆದಿರುವ, ವಿಶೇಷ ಪಡೆಯೊಂದನ್ನು ನಿರ್ವಹಿಸುತ್ತಿದ್ದು, ಕದನದ ಸಂದರ್ಭದಲ್ಲಿ ಅದನ್ನು ಇಸ್ರೇಲ್ ಒಳಗೆ ಕಳುಹಿಸಲು ಉದ್ದೇಶಿಸಿದೆ. ಇಸ್ರೇಲಿ ಭದ್ರತಾ ಅಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ಹೆಜ್ಬೊಲ್ಲಾ ಸಂಘಟನೆ ತಮ್ಮ ಸುರಕ್ಷತೆಗೆ ಅತಿದೊಡ್ಡ ಅಪಾಯ ಎಂದು ಪರಿಗಣಿಸಿದ್ದಾರೆ ಎಂದು ಬ್ಲಾನ್‌ಫೋರ್ಡ್ ಅಭಿಪ್ರಾಯ ಪಟ್ಟಿದ್ದಾರೆ.
ಮಿಡ್ಲ್ ಈಸ್ಟ್ ಇನ್ಸ್ಟಿಟ್ಯೂಟ್ ಸಂಸ್ಥೆಯ, ಕಾನ್‌ಫ್ಲಿಕ್ಟ್ ಆ್ಯಂಡ್ ರೆಸಲ್ಯೂಷನ್ ಪ್ರೋಗ್ರಾಮ್ ನಿರ್ದೇಶಕರಾದ ರಾಂಡಾ ಸ್ಲಿಮ್ ಅವರ ಪ್ರಕಾರ, ಸಿರಿಯಾದ ಚಕಮಕಿಯ ಸಂದರ್ಭದಲ್ಲಿ ಹೆಜ್ಬೊಲ್ಲಾ ಸಂಘಟನೆ ಸಕ್ರಿಯವಾಗಿ ಅಧ್ಯಕ್ಷ ಬಶಾರ್ ಅಲ್ ಅಸ್ಸಾದ್ ಅವರಿಗೆ ಬೆಂಬಲ ನೀಡಿತ್ತು. ಅದು ಹೆಜ್ಬೊಲ್ಲಾಗೆ ತನ್ನ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಿತ್ತು. ದೀರ್ಘಾವಧಿಯ ಹೋರಾಟದ ಕಾರಣದಿಂದ, ಹೆಜ್ಬೊಲ್ಲಾ ಸಂಘಟನೆಗೆ ಹೆಚ್ಚಿನ ಕೌಶಲಗಳನ್ನು ಸಂಪಾದಿಸಲು ಸಾಧ್ಯವಾಯಿತು. ಅದರಲ್ಲೂ ನಗರ ಕೇಂದ್ರಿತ ಯುದ್ಧ ಮತ್ತು ಗುಪ್ತಚರ ಚಟುವಟಿಕೆಗಳ ವಿಚಾರದಲ್ಲಿ ಹೆಜ್ಬೊಲ್ಲಾ ಹೆಚ್ಚಿನ ಅನುಭವ ಪಡೆಯಿತು. ಸಿರಿಯನ್ ಯುದ್ಧದ ಸಂದರ್ಭದಲ್ಲಿ, ಹೆಜ್ಬೊಲ್ಲಾದ ಗುಪ್ತಚರ ವ್ಯವಸ್ಥೆ ಸಾಕಷ್ಟು ಅಭಿವೃದ್ಧಿ ಸಾಧಿಸಲು ಸಾಧ್ಯವಾಯಿತು.
ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವೆ ಆಗಾಗ ಗಡಿ ಪ್ರದೇಶದಲ್ಲಿ ಚಕಮಕಿಗಳು ನಡೆಯುವುದು ಸಹಜವಾಗಿದ್ದರೂ, ಈ ಬಾರಿ ಮಾತ್ರ ಪರಿಸ್ಥಿತಿ ಗಂಭೀರವಾಗುವ ಅಪಾಯಗಳಿವೆ ಎಂದು ಸ್ಲಿಮ್ ಅಭಿಪ್ರಾಯ ಪಟ್ಟಿದ್ದಾರೆ. ಗಾಜಾದಲ್ಲಿನ ಪರಿಸ್ಥಿತಿಯ ಗಂಭೀರತೆಯ ಆಧಾರದಲ್ಲಿ, ಇರಾನ್ ಮತ್ತು ಹೆಜ್ಬೊಲ್ಲಾ ಇಸ್ರೇಲ್ ವಿರುದ್ಧ ಎರಡನೆಯ ಯುದ್ಧಭೂಮಿಯನ್ನು ಸಿದ್ಧಪಡಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಲಿಮ್. ಒಂದು ವೇಳೆ ಹಮಾಸ್ ಏನಾದರೂ ಸಂಪೂರ್ಣ ನಾಶವಾಗುವ ಅಪಾಯ ಎದುರಾದರೆ, ಅದರ ರಕ್ಷಣೆಗಾಗಿ ಹೆಜ್ಬೊಲ್ಲಾ ಹೆಚ್ಚು ಸಕ್ರಿಯವಾಗಿ ಭಾಗಿಯಾಗಬಹುದು.
ಇದನ್ನೂ ಓದಿ- ಇಸ್ರೇಲ್ ಶಕ್ತಿಯ ಹಿಂದಿದೆ ಸೇನಾಪಡೆಗಳ ವ್ಯಾಪ್ತಿ, ಗಾತ್ರ ಮತ್ತು ಕಡ್ಡಾಯ ಸೇನಾ ಸೇವೆ
ಇರಾನ್ ತನ್ನ ಪ್ರತಿರೋಧ ಪಡೆಗಾಗಿ ಹಲವು ಸಂಘಟನೆಗಳು, ರಾಷ್ಟ್ರಗಳನ್ನು ಸೇರಿಸಿಕೊಳ್ಳಲು ಮುಂದಾಗಿದ್ದು, ಆ ಮೂಲಕ ಹೆಚ್ಚು ಸಂಘಟಿತ, ಸಮನ್ವಯ ಹೊಂದಿರುವ ಸೇನೆಯನ್ನು ಹೊಂದಲು ಉದ್ದೇಶಿಸಿದೆ. ಹೆಜ್ಬೊಲ್ಲಾ ಸಹ ಈ ಸಾಧ್ಯತೆಯ ಕುರಿತು ಚರ್ಚಿಸಿದ್ದು, ಇದು ನ್ಯಾಟೋದ ಆರ್ಟಿಕಲ್ 5ನ್ನು ಹೋಲುತ್ತದೆ. ಅದರ ಪ್ರಕಾರ, ಒಕ್ಕೂಟದ ಒಬ್ಬ ಸದಸ್ಯನ ಮೇಲೆ ದಾಳಿಯಾದರೆ, ಅದನ್ನು ಎಲ್ಲರ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ. ಇರಾನ್ ಮತ್ತು ಅದರ ಸಹಯೋಗಿಗಳ ನಡುವೆ ಹೆಚ್ಚು ಸಂಘಟಿತ ಸೇನೆ ಹಾಗೂ ವಿವಿಧ ಪ್ರದೇಶಗಳಲ್ಲಿ ಯುದ್ಧ ನಡೆಸುವ ಹೆಜ್ಬೊಲ್ಲಾದ ಸಾಮರ್ಥ್ಯ ಇಸ್ರೇಲ್ ಜೊತೆಗಿನ ಸಮರವನ್ನು ಇನ್ನಷ್ಟು ದೀರ್ಘವಾಗಿಸಬಹುದು ಎಂದು ಸ್ಲಿಮ್ ಹೇಳುತ್ತಾರೆ.
ಆದರೆ, ಆಂತರಿಕ ಅಪಾಯಗಳ ಹೊರತಾಗಿಯೂ, ಇರಾನ್ ಹಾಗೂ ಹೆಜ್ಬೊಲ್ಲಾ ಸಂಘಟನೆಗಳು ಸಂಯಮ ತೋರುವ ಸಾಧ್ಯತೆಗಳು ಹೆಚ್ಚಿವೆ ಎಂದು ಬ್ಲಾನ್‌ಫೋರ್ಡ್ ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ, ಇಸ್ರೇಲ್ ಅಥವಾ ಅಮೆರಿಕಾ ತಕ್ಷಣಕ್ಕೆ ಇರಾನ್ ಮೇಲೆ ಆಕ್ರಮಣ ನಡೆಸದಂತೆ ಇರುವ ತಡೆ ಎಂದರೆ ಹೆಜ್ಬೊಲ್ಲಾ ಸಂಘಟನೆಯಾಗಿದೆ. ಒಂದು ವೇಳೆ ಲೆಬನಾನ್ ನಲ್ಲಿ ಒಂದು ಯುದ್ಧ ಸಂಭವಿಸಿದರೆ, ಆಗ ಹೆಜ್ಬೊಲ್ಲಾ ಭಾರೀ ಹೊಡೆತವನ್ನು ಅನುಭವಿಸುತ್ತದೆ. ಆಗ ಇರಾನ್ ಒಂದು ಹಂತದ ರಕ್ಷಣೆಯನ್ನು ಕಳೆದುಕೊಳ್ಳುವಂತಾಗುತ್ತದೆ. ಹಾಗೆಂದು, ಯುದ್ಧ ಸಾಧ್ಯತೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಯಿಸುತ್ತಾರೆ. ಒಂದು ವೇಳೆ ದಾಳಿಗೆ ಇದು ಸೂಕ್ತ ಸಮಯ ಎಂದು ಇರಾನ್ ಭಾವಿಸಿದರೆ, ಅದು ತನ್ನ ಕೈಗೊಂಬೆಗಳ ಮೂಲಕ ಇಸ್ರೇಲ್ ಮೇಲೆ ದಾಳಿ ನಡೆಸಬಲ್ಲದು.
ಅಮೆರಿಕಾಗೂ ಈ ಅಪಾಯಗಳ ಸ್ಪಷ್ಟ ಅರಿವಿದ್ದು, ಎರಡು ವಿಮಾನ ವಾಹಕ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್ ಪ್ರದೇಶಕ್ಕೆ ಕಳುಹಿಸಿದ್ದು, ಇರಾನ್ ಬೆಂಬಲಿತ ಗುಂಪುಗಳು ಇಸ್ರೇಲ್ ಮೇಲೆ ದಾಳಿ ನಡೆಸದಂತೆ ತಡೆಯುವ ಉದ್ದೇಶ ಹೊಂದಿದೆ. ಅಮೆರಿಕಾದ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಮಿಲಿಟರಿ ಸ್ಥಾನದ ಆಧಾರದಲ್ಲಿ, ಇಸ್ರೇಲ್ ಸಹ ತನ್ನದೇ ಯೋಜನೆಗಳನ್ನು ಹೊಂದಿ, ಹೆಜ್ಬೊಲ್ಲಾ ವಿರುದ್ಧ ಆರಂಭಿಕ ದಾಳಿ ನಡೆಸಲು ಉದ್ದೇಶಿಸಬಹುದು ಎಂದು ಬ್ಲಾನ್‌ಫೋರ್ಡ್ ಭಾವಿಸುತ್ತಾರೆ.
ಹೆಜ್ಬೊಲ್ಲಾ ಸಂಘಟನೆ ಇಸ್ರೇಲಿ ಸೇನೆಗೆ ಹೋಲಿಸಿದರೆ ಅತ್ಯಂತ ಸಣ್ಣದಾದರೂ, ಅದಕ್ಕೆ ಇಸ್ರೇಲ್‌ಗೆ ಭಾರೀ ಹಾನಿ ಎಸಗುವಷ್ಟು ಸಾಮರ್ಥ್ಯವಿದೆ ಎಂದು ಸ್ಲಿಮ್ ಭಾವಿಸುತ್ತಾರೆ. ಅವರು ಹೆಜ್ಬೊಲ್ಲಾಗೆ ಇಸ್ರೇಲ್ ಮೇಲೆ ಒಂದು ಆಕ್ರಮಣ ನಡೆಸುವ ಸಾಮರ್ಥ್ಯವಿದ್ದು, ಅದರಲ್ಲಿ ಬೆನ್ ಗುರಿಯನ್ ವಿಮಾನ ನಿಲ್ದಾಣ, ಅಥವಾ ಪ್ರಮುಖ ಪವರ್ ಗ್ರಿಡ್ ಸೇರಿದಂತೆ ಇಸ್ರೇಲಿನ ಮೂಲಭೂತ ಸೌಕರ್ಯಗಳನ್ನು ನಾಶ ಪಡಿಸಬಹುದು ಎನ್ನುತ್ತಾರೆ. ಹಾಗೇನಾದರೂ ಆದರೆ, ಹೆಚ್ಚಿನ ಮಿಲಿಟರಿ ಸಾಮರ್ಥ್ಯ ಹೊಂದಿರುವ ಇಸ್ರೇಲ್ ಬಹುತೇಕ ಲೆಬನಾನನ್ನು ಅವಶೇಷದಂತೆ ಮಾಡಿಬಿಡಬಹುದು.
ಸಿರಿಯಾದಲ್ಲಿ ನಡೆದ ಕದನದಲ್ಲಿ, ಹೆಜ್ಬೊಲ್ಲಾ ಸಂಘಟನೆ ಹಲವು ಅರಬ್ ಸರ್ಕಾರಗಳಿಂದ ಬೆಂಬಲ ಪಡೆದಿದ್ದ ಹಲವು ಸೇನಾಪಡೆಗಳನ್ನು ಎದುರಿಸಿತ್ತು. ಆದರೆ, ಶಕ್ತಿಶಾಲಿ ಇಸ್ರೇಲಿ ಸೇನಾಪಡೆಗೆ ಹೋಲಿಸಿದರೆ, ಅದು ಏನೇನೂ ಅಲ್ಲ ಎನ್ನಬಹುದು. ಹಾಗೇನಾದರೂ ದೊಡ್ಡ ಯುದ್ಧ ಸಂಭವಿಸಿದರೆ, ಇಸ್ರೇಲ್ 'ದಹಿಯಾ ಡಾಕ್ಟ್ರಿನ್' ಎಂದು ಕರೆಯುವ ಆಕ್ರಮಣವನ್ನು ಜಾರಿಗೆ ತರಬಹುದು. ದಹಿಯಾ ಎನ್ನುವುದು ದಕ್ಷಿಣ ಬೀರಟ್‌ನಲ್ಲಿರುವ ಒಂದು ಪ್ರದೇಶವಾಗಿದ್ದು, ಅದು ಹೆಜ್ಬೊಲ್ಲಾದ ಭದ್ರ ನೆಲೆಯಾಗಿದೆ. ಈ ಸಿದ್ಧಾಂತದ ಪ್ರಕಾರ, ಇಸ್ರೇಲ್ ಅತ್ಯಂತ ಪ್ರಬಲ ಸೇನೆಯನ್ನು ಬಳಸಿ, ನಾಗರಿಕ ಮತ್ತು ಸೇನಾ ನೆಲೆಗಳೆರಡರ ಮೇಲೂ ಆಕ್ರಮಣ ನಡೆಸಬಹುದು.
ಲೆಬಾನೀಸ್ ಅಮೆರಿಕನ್ ಯುನಿವರ್ಸಿಟಿಯ ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಉಪನ್ಯಾಸಕರಾಗಿರುವ ಇಮಾದ್ ಸಲಾಮೀ ಅವರು, ಹೆಜ್ಬೊಲ್ಲಾ ವಿರುದ್ಧ ನಡೆಸುವ ಯುದ್ಧ ಈಗಾಗಲೇ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಲೆಬನಾನಿನಲ್ಲಿ ನಾಗರಿಕ ದಂಗೆ ಉಂಟುಮಾಡುವ ಸಾಧ್ಯತೆಗಳಿವೆ ಎಂದಿದ್ದಾರೆ. ಬಹುತೇಕ ಶಿಯಾ ಲೆಬಾನೀಸ್ ನಾಗರಿಕರು ಕ್ರೈಸ್ತ ಮತ್ತು ಸುನ್ನಿ ಬಾಹುಳ್ಯವಿರುವ ಉತ್ತರದ ನಗರಗಳಿಗೆ ವಲಸೆ ಹೋಗುವುದರಿಂದ ಖಂಡಿತವಾಗಿಯೂ ಮತೀಯ ಉದ್ವಿಗ್ನತೆ ಹೆಚ್ಚಾಗಬಹುದು ಎಂದಿದ್ದಾರೆ. ಈ ದೃಷ್ಟಿಕೋನವನ್ನು ಇತರ ವೀಕ್ಷಕರೂ ವ್ಯಕ್ತಪಡಿಸಿದ್ದಾರೆ.
ಹೆಜ್ಬೊಲ್ಲಾ ಸಂಘಟನೆಯ ಟೀಕಾಕಾರರು ಹಾಗೂ ವಿರೋಧಿಗಳು ಈಗಾಗಲೇ ಹೆಚ್ಚಾಗಿರುವ ಉದ್ವಿಗ್ನತೆಗೆ ಹೆಜ್ಬೊಲ್ಲಾ ತುಪ್ಪ ಸುರಿಯುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸುವ ಸಾಧ್ಯತೆಗಳಿವೆ. "ಒಂದು ವೇಳೆ ಈ ಬಾರಿಯೂ ಏನಾದರೂ ಯುದ್ಧ ನಡೆದರೆ, ಅದು ಖಂಡಿತವಾಗಿಯೂ 2006ರ ಯುದ್ಧದ ರೀತಿ ಇರುವುದಿಲ್ಲ. ಸಮುದಾಯ ಸಮುದಾಯಗಳ ನಡುವೆ ಘರ್ಷಣೆ ಮತ್ತು ಆಂತರಿಕ ಯುದ್ಧವೂ ಇದರಿಂದ ತಲೆದೋರಲಿದೆ" ಎಂದು ಇಮಾದ್ ಸಲಾಮೀ ಹೇಳಿದ್ದಾರೆ.
ಲೇಖಕರು - ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.