ಹೆಜ್ಬೊಲ್ಲಾ ಮತ್ತು ಹಮಾಸ್: ಮಧ್ಯ ಪೂರ್ವದ ಸಮರದಲ್ಲಿ ಎರಡೂ ಸಂಘಟನೆಗಳ ಪಾತ್ರಗಳ ಅನಾವರಣ

ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ  ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ.

Written by - Girish Linganna | Edited by - Krishna N K | Last Updated : Oct 11, 2023, 08:12 PM IST
  • ಹಮಾಸ್ ಸಂಘಟನೆ ಶನಿವಾರದಂದು ಇಸ್ರೇಲ್ ಮೇಲೆ ಅತ್ಯಂತ ಘೋರ ದಾಳಿ ನಡೆಸಿತು.
  • ಈ ಯುದ್ಧ ಎರಡು ಬಣಗಳ ನಡುವಿನ ಚಕಮಕಿಯನ್ನು ಅತ್ಯಂತ ತೀಕ್ಷ್ಣವಾಗಿಸಿದೆ.
  • ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ.
ಹೆಜ್ಬೊಲ್ಲಾ ಮತ್ತು ಹಮಾಸ್: ಮಧ್ಯ ಪೂರ್ವದ ಸಮರದಲ್ಲಿ ಎರಡೂ ಸಂಘಟನೆಗಳ ಪಾತ್ರಗಳ ಅನಾವರಣ title=

Hezbollah and Hamas : ಹಮಾಸ್ ಸಂಘಟನೆ ಶನಿವಾರದಂದು ಇಸ್ರೇಲ್ ಮೇಲೆ ಅತ್ಯಂತ ಘೋರ ದಾಳಿ ನಡೆಸಿ, 300ಕ್ಕೂ ಹೆಚ್ಚು ಸಾವು ಮತ್ತು ಗಾಜಾ ಪಟ್ಟಿಯಲ್ಲಿ 250ಕ್ಕೂ ಹೆಚ್ಚು ಸಾವುನೋವುಗಳಿಗೆ ಕಾರಣವಾಯಿತು. ಈ ಪ್ರದೇಶದಲ್ಲಿರುವ ಐತಿಹಾಸಿಕ ವೈರತ್ವ, ಪಂಥೀಯ ಉದ್ವಿಗ್ನತೆಗಳು, ಮತ್ತು ವಿದೇಶೀ ಮಧ್ಯಪ್ರವೇಶಗಳ ನಡುವೆ ಈ ಯುದ್ಧ ಎರಡು ಬಣಗಳ ನಡುವಿನ ಚಕಮಕಿಯನ್ನು ಅತ್ಯಂತ ತೀಕ್ಷ್ಣವಾಗಿಸಿದೆ.

ಇಲ್ಲಿ ಗಮನಿಸಬೇಕಾದ ಒಂದು ಮಹತ್ವದ ಅಂಶವೆಂದರೆ, ಶಿಯಾ ಪಂಥದ ಲೆಬಾನೀಸ್ ಮಿಲಿಟರಿ ಗುಂಪಾದ ಹೆಜ್ಬೊಲ್ಲಾ ಸಹ ಕದನದಲ್ಲಿ ಭಾಗಿಯಾಗಿದೆ. ಈ ಕುರಿತು ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿರುವ ಹೆಜ್ಬೊಲ್ಲಾ, ತಾನು ಗಡಿಯ ಬಳಿಯಿರುವ ಇಸ್ರೇಲ್ ಆಕ್ರಮಿತ, ಸಿರಿಯಾದಲ್ಲಿನ ಗೋಲನ್ ಹೈಟ್ಸ್ ಪ್ರದೇಶದ ಬಳಿ ಇರುವ  ಚೆಬಾ ಫಾರ್ಮ್ಸ್ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೇಳಿಕೆ ನೀಡಿದೆ.

ಇದನ್ನೂ ಓದಿ: Israel-Hamas War: ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್ ತಲುಪಿದ ಅಮೆರಿಕದ ವಿಮಾನ!

ಹೆಜ್ಬೊಲ್ಲಾ ಸಂಘಟನೆ ಅಪಾರ ಸಂಖ್ಯೆಯಲ್ಲಿ ರಾಕೆಟ್‌ಗಳು ಮತ್ತು ಶೆಲ್‌ಗಳನ್ನು ಬಳಸಿಕೊಂಡು ದಾಳಿ ನಡೆಸಿ, ಪ್ಯಾಲೆಸ್ತೀನ್ ಹೋರಾಟಕ್ಕೆ ತನ್ನ ಸಹಾನುಭೂತಿ ವ್ಯಕ್ತಪಡಿಸಿದೆ. ಆದರೆ, ಈ ಹೆಜ್ಬೊಲ್ಲಾ ಸಂಘಟನೆ ಏನು? ಇದರ ಉದ್ದೇಶವೇನು?

ಹೆಜ್ಬೊಲ್ಲಾ ಎಂಬ ಪದಕ್ಕೆ 'ದೇವರ ಪಕ್ಷ' ಎಂಬ ಅರ್ಥವಿದೆ. ಇದು ಲೆಬನಾನ್ ಮೂಲದ ಶಿಯಾ ಮುಸ್ಲಿಂ ಉಗ್ರಗಾಮಿ ಗುಂಪಾಗಿದೆ. ಹೆಜ್ಬೊಲ್ಲಾ ಸಂಘಟನೆ ಜಾಗತಿಕವಾಗಿ ಅತ್ಯಧಿಕ ಆಯುಧಗಳನ್ನು ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಅನ್‌ಗೈಡೆಡ್ ಆರ್ಟಿಲರಿ ರಾಕೆಟ್‌ಗಳು, ವಿವಿಧ ಮಾದರಿಯ ಕ್ಷಿಪಣಿಗಳು, ಬ್ಯಾಲಿಸ್ಟಿಕ್, ಆ್ಯಂಟಿ ಏರ್‌ಕ್ರಾಫ್ಟ್, ಆ್ಯಂಟಿ ಟ್ಯಾಂಕ್ ಹಾಗೂ ಆ್ಯಂಟಿ ಶಿಪ್ ಆಯುಧಗಳನ್ನು ಹೊಂದಿದೆ ಎಂದು ಥಿಂಕ್ ಟ್ಯಾಂಕ್ ಸಂಸ್ಥೆಯಾಗಿರುವ ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್ (ಸಿಎಸ್ಐಎಸ್) ಹೇಳಿದೆ.

ಲೆಬನಾನ್ 1943ರ ತನಕ ಫ್ರೆಂಚ್ ನಿಯಂತ್ರಣದಲ್ಲಿತ್ತು. ಅದಾದ ಬಳಿಕ, ಲೆಬನಾನ್ ಆಡಳಿತ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಹಂಚಿಹೋಗಿದೆ. ಲೆಬನಾನಿನ ಪ್ರಮುಖ ಹುದ್ದೆಗಳಾದ ಪ್ರಧಾನಿ ಮತ್ತು ಅಧ್ಯಕ್ಷ ಪದವಿಗಳನ್ನು ಕೆಲವು ನಿರ್ದಿಷ್ಟ ಧಾರ್ಮಿಕ ಗುಂಪುಗಳ ಪ್ರತಿನಿಧಿಗಳಿಗೆ ಮೀಸಲಿಡಲಾಗಿದೆ.\

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಪಾಕ್ ನಲ್ಲಿ ಹತ್ಯೆ

ಹೆಜ್ಬೊಲ್ಲಾ ಸಂಘಟನೆ 1975-1990ರ ನಡುವೆ ನಡೆದ ಲೆಬಾನೀಸ್ ಆಂತರಿಕ ಯುದ್ಧದ ಸಂದರ್ಭದಲ್ಲಿ ಚಾಲ್ತಿಗೆ ಬಂತು. ದೀರ್ಘಕಾಲದಿಂದ ಪ್ಯಾಲೆಸ್ತೀನಿನ ಶಸ್ತ್ರಸಜ್ಜಿತ ಸದಸ್ಯರು ಲೆಬನಾನ್ ನಲ್ಲಿ ಇರುವುದನ್ನು ವಿರೋಧಿಸಿ ಈ ಅಂತರ್ ಯುದ್ಧ ನಡೆಯಿತು ಎಂದು ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ (ಸಿಎಫ್ಆರ್) ಹೇಳಿಕೆ ನೀಡಿದೆ.

ವಿವಿಧ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳ ನಡುವಿನ ಚಕಮಕಿಗಳು, 1948ರಲ್ಲಿ ಯಹೂದಿ ಜನರ ತಾಯ್ನಾಡಾಗಿ ಇಸ್ರೇಲ್ ದೇಶದ ಸ್ಥಾಪನೆಯಾದ ಬಳಿಕ ಪ್ಯಾಲೆಸ್ತೀನ್ ನಿರಾಶ್ರಿತರು ದೊಡ್ಡ ಪ್ರಮಾಣದಲ್ಲಿ ಲೆಬನಾನ್‌ಗೆ ವಲಸೆ ಹೋಗಲಾರಂಭಿಸಿದರು. ಇದರ ಪರಿಣಾಮವಾಗಿ ಲೆಬನಾನಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಈ ಸನ್ನಿವೇಶದ ಕಾರಣದಿಂದ, ಇಸ್ರೇಲಿ ಪಡೆಗಳು 1978ರಲ್ಲಿ ಮತ್ತು ಇನ್ನೊಂದು ಬಾರಿ 1982ರಲ್ಲಿ ದಕ್ಷಿಣ ಲೆಬನಾನ್ ಪ್ರವೇಶಿಸಿ, ಪ್ಯಾಲೆಸ್ತೀನ್ ಗೆರಿಲ್ಲಾ ಹೋರಾಟಗಾರರನ್ನು ಹೊರ ಹಾಕಲು ಪ್ರಯತ್ನಿಸಿದವು.

ಈ ಎಲ್ಲ ಘಟನೆಗಳ ಫಲಿತಾಂಶ ಎನ್ನುವಂತೆ ಹೆಜ್ಬೊಲ್ಲಾ ಸಂಘಟನೆ ಆರಂಭಗೊಂಡಿತು. ಹೆಜ್ಬೊಲ್ಲಾ ಸಂಘಟನೆಯ ಸ್ಥಾಪನೆಗೆ 1979ರಲ್ಲಿ ಇರಾನ್‌ನಲ್ಲಿ ಸ್ಥಾಪನೆಗೊಂಡ ಧಾರ್ಮಿಕ ಸರ್ಕಾರವೂ ಸ್ಫೂರ್ತಿ ನೀಡಿತ್ತು. ಇರಾನ್ ಮತ್ತು ಅದರ ಇಸ್ಲಾಮಿಕ್ ರೆಸಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೆಜ್ಬೊಲ್ಲಾ ಸೇನಾಪಡೆಯನ್ನು ಆರಂಭಿಸಲು ಸಾಕಷ್ಟು ಹಣ ಮತ್ತು ಸೇನೆಗೆ ತರಬೇತಿಯನ್ನು ನೀಡಿತು ಎಂದು ಕೌನ್ಸಿಲ್ ಆಫ್ ಫಾರೀನ್ ರಿಲೇಶನ್ಸ್ (ಸಿಎಫ್ಆರ್) ವಿವರಿಸುತ್ತದೆ.

ಇದನ್ನೂ ಓದಿ: ತಂತ್ರಜ್ಞಾನದಲ್ಲಿ ಈ ದೇಶ ಅಗ್ರಸ್ಥಾನದಲ್ಲಿದೆ...ಆದರೆ ಇಲ್ಲಿ ಎಸ್ಕಲೇಟರ್ ಬಳಕೆ ನಿಷಿದ್ಧ..! ಯಾಕೆ ಗೊತ್ತಾ?

ಈ ಪರಿಸ್ಥಿತಿ ಪಶ್ಚಿಮ ಏಷ್ಯಾದ ಎರಡು ಪ್ರಮುಖ ಶಕ್ತಿಗಳಾದ ಸುನ್ನಿ ಮುಸ್ಲಿಂ ಬಾಹುಳ್ಯದ ಸೌದಿ ಅರೇಬಿಯಾ ಮತ್ತು ಶಿಯಾ ಮುಸ್ಲಿಂ ಬಹುಸಂಖ್ಯಾತ ಇರಾನ್ ನಡುವಿನ ವೈಶಮ್ಯದೆಡೆಗೆ ಬೆಳಕು ಚೆಲ್ಲುತ್ತದೆ. ಇರಾನ್ ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ನೂರಾರು ಮಿಲಿಯನ್ ಡಾಲರ್ ಹಣ ಒದಗಿಸುತ್ತದೆ ಮತ್ತು ಸಂಘಟನೆಯಲ್ಲಿ ಸಾವಿರಾರು ಯೋಧರಿದ್ದಾರೆ ಎಂದು ಅಮೆರಿಕಾ ಭಾವಿಸಿದೆ.

ಹೆಜ್ಬೊಲ್ಲಾ ಸಂಘಟನೆಯ ಉದ್ದೇಶಗಳೇನು?

ಹೆಜ್ಬೊಲ್ಲಾ ಸಂಘಟನೆ ಇಸ್ರೇಲ್ ವಿರುದ್ಧವಿದ್ದು, ಪಶ್ಚಿಮ ಏಷ್ಯಾದಲ್ಲಿ ಪಾಶ್ಚಾತ್ಯ ರಾಷ್ಟ್ರಗಳ ಭಾಗವಹಿಸುವಿಕೆಯನ್ನು ವಿರೋಧಿಸುತ್ತದೆ. ಅದರೊಡನೆ, ಸಿರಿಯಾದ ಆಂತರಿಕ ಯುದ್ಧದ ಸಂದರ್ಭದಲ್ಲಿ, ಇರಾನ್ ಮತ್ತು ರಷ್ಯಾಗಳೊಡನೆ ಹೆಜ್ಬೊಲ್ಲಾ ಸಂಘಟನೆಯೂ ಅಧ್ಯಕ್ಷ ಬಶಾರ್ ಅಲ್ ಅಸಾದ್ ನೇತೃತ್ವದ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.

2000ನೇ ದಶಕದ ಮಧ್ಯಭಾಗದಲ್ಲಿ ಲೆಬನಾನಿನಲ್ಲಿ ಹೆಜ್ಬೊಲ್ಲಾ ಉಪಸ್ಥಿತಿ ಹೆಚ್ಚಾಗತೊಡಗಿತು. ಈಗ ಹೆಜ್ಬೊಲ್ಲಾ ಸಂಘಟನೆ ಲೆಬನಾನ್ ಸಂಸತ್ತಿನ 128 ಸ್ಥಾನಗಳಲ್ಲಿ 13 ಸ್ಥಾನಗಳನ್ನು ಹೊಂದಿದೆ. ತನ್ನ ಮಿತ್ರಪಕ್ಷಗಳ ಜೊತೆಗೂಡಿರುವ ಹೆಜ್ಬೊಲ್ಲಾ ಈಗ ಲೆಬನಾನಿನ ಆಡಳಿತದ ಸರ್ಕಾರದ ಭಾಗವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಲೆಬನಾನ್ ಎದುರಿಸುತ್ತಿರುವ ನಿರುದ್ಯೋಗ, ಸರ್ಕಾರದ ಸಾಲ, ಹಾಗೂ ಬಡತನಗಳು ಮತ್ತು ಲೆಬನಾನಿನಲ್ಲಿ ಹೆಜ್ಬೊಲ್ಲಾ ಸಂಘಟನೆಯ ಕ್ರಮಗಳ ವಿರುದ್ಧ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ.

ಹೆಜ್ಬೊಲ್ಲಾದ ಮಿಲಿಟರಿ ಶಕ್ತಿ ಮತ್ತು ಸಾಮರ್ಥ್ಯ : ಹೆಜ್ಬೊಲ್ಲಾ ಸಂಘಟನೆ ಹಲವು ದಾಳಿಗಳನ್ನು ನಡೆಸಿದ್ದು, ಅದರಲ್ಲಿ 1983ರಲ್ಲಿ ಲೆಬನಾನಿನ ಬೀರಟ್ ಎಂಬಲ್ಲಿ ಅಮೆರಿಕಾ ಮತ್ತು ಫ್ರೆಂಚ್ ಪಡೆಗಳು ನೆಲೆಸಿದ್ದ ಬ್ಯಾರಕ್ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯೂ ಸೇರಿದೆ. ಈ ದಾಳಿಯಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ಸಾವಿಗೀಡಾದರು. ಹಲವು ಪಾಶ್ಚಾತ್ಯ ರಾಷ್ಟ್ರಗಳು ಹೆಜ್ಬೊಲ್ಲಾ ಸಂಘಟನೆಯನ್ನು ಉಗ್ರ ಸಂಘಟನೆ ಎಂದು ಪರಿಗಣಿಸಿವೆ. ಅದರೊಡನೆ, ಪಶ್ಚಿಮ ಏಷ್ಯಾದ ಆರು ರಾಷ್ಟ್ರಗಳಾದ ಬಹರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಮತ್ತು ಯುಎಇಗಳ ಗಲ್ಫ್ ಕೋಆಪರೇಶನ್ ಕೌನ್ಸಿಲ್ ಒಕ್ಕೂಟವೂ ಹೆಜ್ಬೊಲ್ಲಾವನ್ನು ಉಗ್ರ ಸಂಘಟನೆ ಎಂದಿದೆ.

ಇದನ್ನೂ ಓದಿ: "ಅವರು ಪ್ರಾರಂಭಿಸಿದ್ದಾರೆ, ನಾವು ಮುಗಿಸುತ್ತೇವೆ": ಹಮಾಸ್ಗೆ ಇಸ್ರೇಲ್ ಪ್ರಧಾನಿಯಿಂದ ಖಡಕ್ ಎಚ್ಚರಿಕೆ!

ಇಸ್ರೇಲ್ ಮತ್ತು ಹೆಜ್ಬೊಲ್ಲಾ ಮೊದಲ ಬಾರಿಗೆ 2006ರಲ್ಲಿ ಕದನ ನಡೆಸಿದವು. ಈ ಚಕಮಕಿ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆದಿತ್ತು. ಇದಾದ ಬಳಿಕವೂ ಅವುಗಳು ನಿರಂತರವಾಗಿ ಸೆಣಸುತ್ತಾ ಬಂದಿದ್ದವು. ಸಿಎಸ್ಐಎಸ್ ಪ್ರಕಾರ, "ಹೆಜ್ಬೊಲ್ಲಾ ಸಂಘಟನೆಯ ಆಯುಧಗಳಲ್ಲಿ ಪ್ರಮುಖವಾಗಿ ಸಣ್ಣದಾದ, ಕೈಯಲ್ಲಿ ಹಿಡಿಯುವ, ಅಷ್ಟೊಂದು ನಿಖರವಲ್ಲದ ಆರ್ಟಿಲರಿ ರಾಕೆಟ್‌ಗಳೂ ಸೇರಿವೆ. ಅವುಗಳಲ್ಲಿ ನಿಖರತೆಯ ಕೊರತೆಯಿದ್ದರೂ, ಹೆಜ್ಬೊಲ್ಲಾ ಬಳಿ ಆ ರಾಕೆಟ್‌ಗಳು ಅಪಾರ ಸಂಖ್ಯೆಯಲ್ಲಿ ಇರುವುದರಿಂದ ಅವುಗಳು ಹಾನಿಕಾರಕವಾಗಿವೆ". ಇಸ್ರೇಲ್ ಹೊಂದಿರುವ ಅಂದಾಜಿನ ಪ್ರಕಾರ, 2006ರ ಯುದ್ಧಕ್ಕೂ ಮುನ್ನವೇ ಹೆಜ್ಬೊಲ್ಲಾ ಬಳಿ 15,000ಕ್ಕೂ ಹೆಚ್ಚು ರಾಕೆಟ್‌ಗಳಿವೆ. "ಅಂದಿನಿಂದ ಹೆಜ್ಬೊಲ್ಲಾ ಬಳಿ ಇರುವ ರಾಕೆಟ್‌ಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಪ್ರಸ್ತುತ ಅದರ ಬಳಿ 1,30,000 ರಾಕೆಟ್‌ಗಳಿವೆ" ಎಂದು ಸಿಎಸ್ಐಎಸ್ ಅಂದಾಜಿಸಿದೆ.

ಈ ಕದನವನ್ನು ಇನ್ನಷ್ಟು ತೀಕ್ಷ್ಣಗೊಳಿಸಲಿದೆಯೇ ಹೆಜ್ಬೊಲ್ಲಾ? : ಮೊದಲನೆಯದಾಗಿ, ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲಿ ಸರ್ಕಾರ ಈ ಮೊದಲು ರಾಷ್ಟ್ರೀಯ ಭದ್ರತೆಯನ್ನು ಆದ್ಯತೆಯ ವಿಚಾರವನ್ನಾಗಿಸಿತ್ತು. ಆದರೆ ಈಗ ನೆತನ್ಯಾಹು ಸರ್ಕಾರ ಇಸ್ರೇಲ್‌ಗಿಂತ ಸಾಕಷ್ಟು ದುರ್ಬಲವಾದ, ದುರ್ಬಲ ಮಿಲಿಟರಿ ಮತ್ತು ಗುಪ್ತಚರ ಸಾಮರ್ಥ್ಯ ಹೊಂದಿದ ಶತ್ರುವಿನ ದಾಳಿಗೆ ಸಿದ್ಧವಾಗಿರಲಿಲ್ಲ ಎಂದು ಟೀಕೆಗಳನ್ನು ಎದುರಿಸುತ್ತಿದೆ. ಈಗ ಇಸ್ರೇಲ್ ಸರ್ಕಾರ ತನ್ನ ಪ್ರತಿಕ್ರಿಯೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ನಿರೀಕ್ಷೆಗಳಿವೆ.

ಇಸ್ರೇಲ್ ಈಗಾಗಲೇ ಪಾಶ್ಚಾತ್ಯ ಸರ್ಕಾರಗಳಿಂದ ಬೆಂಬಲ ವ್ಯಕ್ತವಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ ಭದ್ರತೆಗೆ ತಮ್ಮ ಬೆಂಬಲ ಬಲಿಷ್ಠ ಮತ್ತು ನಿರಂತರವಾಗಿದೆ ಎಂದಿದ್ದಾರೆ.

ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳ ಸರ್ಕಾರಗಳ ನಡುವೆ ಹೆಚ್ಚಿನ ಮಾತುಕತೆ ನಡೆಯುತ್ತಿದ್ದು, ಅದನ್ನು ವಿರೋಧಿಸುವ ಉದ್ದೇಶವನ್ನು ಹಮಾಸ್ ಹೊಂದಿದೆ. ಇದೊಂದು ಗಮನಾರ್ಹ ಬೆಳವಣಿಗೆಯಾಗಿದ್ದು, ಇವುಗಳಲ್ಲಿ ಬಹುತೇಕ ಸರ್ಕಾರಗಳು ಈ ಹಿಂದೆ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿರಲಿಲ್ಲ. ಹೆಜ್ಬೊಲ್ಲಾ ಮತ್ತು ಹಮಾಸ್ ಈ ಕುರಿತು ಸಮಾನ ಉದ್ದೇಶಗಳನ್ನು ಹೊಂದಿದ್ದರೂ, ಹಮಾಸ್‌ಗೆ ಹೋಲಿಸಿದರೆ ಹೆಜ್ಬೊಲ್ಲಾ ಮಿಲಿಟರಿ ಸಾಮರ್ಥ್ಯ ಬಹಳಷ್ಟು ಹೆಚ್ಚಾಗಿದೆ.

ಗಾಜಾದಲ್ಲಿನ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮಾಧ್ಯಮಗಳೊಡನೆ ಮಾತನಾಡುತ್ತಾ, "ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆ ಒಪ್ಪಂದಗಳಿಗೆ ಸಹಿ ಹಾಕಿದ್ದರೂ, ಅದರಿಂದ ಈ ವಿವಾದ ಕೊನೆಯಾಗುವುದಿಲ್ಲ" ಎಂದಿದ್ದಾನೆ. ವಿಶ್ಲೇಷಕರ ಪ್ರಕಾರ, ಈ ಹೇಳಿಕೆ ನೇರವಾಗಿ ಇಸ್ರೇಲ್ ಜೊತೆ ಹೆಚ್ಚು ಆತ್ಮೀಯ ಸಂಬಂಧಗಳನ್ನು ಸ್ಥಾಪಿಸುತ್ತಿರುವ ಸೌದಿ ಅರೇಬಿಯಾ ಮತ್ತು ಇಂತಹ ಸಂಬಂಧಗಳಿಗೆ ಉತ್ತೇಜನ ನೀಡುತ್ತಿರುವ ಅಮೆರಿಕಾಗಳನ್ನು ಉದ್ದೇಶಿಸಿದೆ. ಎಲ್ಲಿಯವರೆಗೆ ಪ್ಯಾಲೆಸ್ತೀನ್ ವಿಚಾರ ಪರಿಹಾರ ಕಾಣುವುದಿಲ್ಲವೋ, ಅಲ್ಲಿಯ ತನಕ ಈ ಸಂಪೂರ್ಣ ಪ್ರದೇಶದಲ್ಲಿ ಭದ್ರತೆ ಎನ್ನುವುದು ಒಂದು ಅನಿಶ್ಚಿತ ವಿಚಾರವಾಗಿರುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Israel-Hamas War: ಇಸ್ರೇಲ್‍ಗೆ ಅಮೆರಿಕ ಬೆಂಬಲ ನೀಡಲು ಕಾರಣವೇನು..?

ಇಸ್ರೇಲ್ ಆಕ್ರಮಿತ ವೆಸ್ಟ್ ಬ್ಯಾಂಕ್ ಪ್ರದೇಶದಲ್ಲಿ ಕಳೆದ ಕೆಲ ತಿಂಗಳುಗಳಿಂದ ಹೆಚ್ಚುತ್ತಿರುವ ಇಸ್ರೇಲಿ ಮಿಲಿಟರಿ ಕಾರ್ಯಾಚರಣೆಗಳು, ಪ್ಯಾಲೆಸ್ತೀನ್ ಬೀದಿಗಳಲ್ಲಿ ಚಕಮಕಿಗಳು ಮತ್ತು ಯಹೂದಿ ವಸಾಹತುಗಾರರು ಪ್ಯಾಲೆಸ್ತೀನಿನ ಹಳ್ಳಿಗಳನ್ನು ಗುರಿಯಾಗಿಸಿದ ಬಳಿಕ ಹಮಾಸ್ ಈ ರೀತಿಯ ದಾಳಿ ಕೈಗೊಂಡಿದೆ ಎಂದು ವರದಿಯೊಂದು ಹೇಳಿದೆ.

ವಾಷಿಂಗ್ಟನ್ನಿನ ಜಾನ್ಸ್ ಹಾಪ್ಕಿನ್ಸ್ ಸ್ಕೂಲ್ ಫಾರ್ ಅಡ್ವಾನ್ಸ್ಡ್ ಇಂಟರ್‌ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಮಧ್ಯ ಪೂರ್ವ ವಿಶ್ಲೇಷಕರಾದ ಲಾರಾ ಬ್ಲುಮೆನ್‌ಫೋಲ್ಡ್ ಅವರ ಪ್ರಕಾರ, "ಹಮಾಸ್ ಒಂದು ಒಪ್ಪಂದಕ್ಕೆ ಸಂಬಂಧಿಸಿದಂತೆ, ಇಸ್ರೇಲ್ ಮತ್ತು ಸೌದಿಗಳ ಮಧ್ಯೆ ಹೆಚ್ಚುತ್ತಿರುವ ಸಹಯೋಗವನ್ನು ಗಮನಿಸಿದೆ. ಒಂದು ವೇಳೆ ನಾವು ಈ ಮಾತುಕತೆಯ ಭಾಗವಾಗಿರದಿದ್ದರೆ, ನಾವು ಇಡಿಯ ಮಾತುಕತೆಯನ್ನು ಹಾಳುಗೆಡವುತ್ತೇವೆ ಎನ್ನುವುದು ಹಮಾಸ್ ಮನಸ್ಥಿತಿಯಾಗಿದೆ".

ಶನಿವಾರ ಇಸ್ರೇಲ್ ಮೇಲೆ ನಡೆದ ಭಾರೀ ದಾಳಿಯನ್ನು ಇರಾನ್ ಪ್ಯಾಲೆಸ್ತೀನಿನ ಆತ್ಮ ರಕ್ಷಣಾ ದಾಳಿ ಎಂದು ಕರೆದಿದೆ. ಇರಾನಿನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖೊಮೇನಿ ಅವರ ಸಲಹೆಗಾರ ಯಾಹ್ಯಾ ರಹೀಮ್ ಸಫವಿ ಅವರು ಪ್ಯಾಲೆಸ್ತೀನ್ ಮತ್ತು ಜೆರುಸಲೇಮ್ ಸ್ವತಂತ್ರಗೊಳ್ಳುವ ತನಕ ಇರಾನ್ ಪ್ಯಾಲೆಸ್ತೀನ್ ಹೋರಾಟಗಾರರನ್ನು ಬೆಂಬಲಿಸುತ್ತದೆ ಎಂದಿದ್ದಾರೆ.

ಹಮಾಸ್ ಮಿಲಿಟರಿ ಪಡೆಯ ನಾಯಕ ಮೊಹಮ್ಮದ್ ಡೀಫ್ ಈ ಕಾರ್ಯಾಚರಣೆ ತಾನು ಹೇಳಿರುವ 'ಆಪರೇಶನ್ ಅಲ್ ಅಕ್ಸಾ ಸ್ಟಾರ್ಮ್‌'ನ ಭಾಗವಾಗಿದೆ ಎಂದಿದ್ದಾನೆ. ಆತ ಪೂರ್ವ ಜೆರುಸಲೇಮ್ ಮತ್ತು ಉತ್ತರ ಇಸ್ರೇಲ್‌ನ ಪ್ಯಾಲೆಸ್ತೀನಿಯನ್ನರಿಗೆ ಈ ಯುದ್ಧದಲ್ಲಿ ಭಾಗಿಯಾಗುವಂತೆ ಕರೆ ನೀಡಿದ್ದಾನೆ.

ಲೇಖಕರು 
ಗಿರೀಶ್ ಲಿಂಗಣ್ಣ
( ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News