ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ

ಫ್ರಾನ್ಸ್ ಮತ್ತು ಭಾರತ ಸರ್ಕಾರಗಳ ನಡುವೆ ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಪೂರೈಕೆ ಸಮಯದ ಕುರಿತು ಮಾತುಕತೆಗಳು ನಡೆಯುತ್ತಿವೆ. 2024ರ ಆರಂಭದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಆಡಳಿತಕ್ಕೆ ಬರುವ ನೂತನ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.

Written by - Girish Linganna | Last Updated : Dec 26, 2023, 01:29 PM IST
  • ಟೈಫೂನ್ ವಿಮಾನವನ್ನು ಆಯ್ಕೆ ಮಾಡುವುದು ಭಾರತೀಯ ವಾಯುಪಡೆಯ ಸಾಗಾಣಿಕಾ ಸವಾಲಿಗೆ ಇನ್ನಷ್ಟು ಹೊಸ ಸಮಸ್ಯೆಗಳನ್ನು ತಂದೊಡ್ಡಬಹುದು.
  • ಅದರೊಡನೆ, ಅಮೆರಿಕಾದ ಎಫ್-18 ಮತ್ತು ಎಫ್-16 ವಿಮಾನಗಳ ಆಧಾರದಲ್ಲಿ ನಿರ್ಮಿಸಲಾಗಿರುವ ಎಫ್-21 ಯುದ್ಧ ವಿಮಾನಗಳನ್ನು ಈ ಮೊದಲು ಭಾರತೀಯ ವಾಯುಪಡೆ ತಿರಸ್ಕರಿಸಿತ್ತು.
  • ಇದಕ್ಕೆ 2010ರಲ್ಲಿ ನಡೆಸಿದ ಪರೀಕ್ಷಾ ಹಾರಾಟಗಳ ಸಂದರ್ಭದಲ್ಲಿ ಈ ವಿಮಾನದ ವಿವಿಧ ಸಾಮರ್ಥ್ಯಗಳ ಕೊರತೆಯನ್ನು ಭಾರತೀಯ ವಾಯುಪಡೆ ಕಾರಣವಾಗಿ ನೀಡಿತ್ತು.
ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಅತಿಥಿ: ಭಾರತದ ರಫೇಲ್, ನ್ಯೂಕ್ಲಿಯರ್ ಗುರಿ ಸಾಧನೆಗೆ ಫ್ರಾನ್ಸ್ ಸ್ನೇಹದ ಶಕ್ತಿ title=

ಸಾಂಕೇತಿಕತೆ ಎನ್ನುವುದು ಸಾಮಾನ್ಯವಾಗಿ ಎರಡು ರಾಷ್ಟ್ರಗಳ ನಡುವಿನ ಸಂವಹನಗಳಲ್ಲಿ ಮತ್ತು ಭದ್ರತಾ ಸಂಬಂಧಗಳಲ್ಲಿ ಅತ್ಯಂತ ಮಹತ್ವದ, ಆದರೆ ಕಡಿಮೆಯಾಗಿ ಪರಿಗಣಿಸಲಾದ ವಿಚಾರವಾಗಿದೆ. ಇದು ಐತಿಹಾಸಿಕವಾಗಿಯೂ ವಸ್ತುಗಳು ಮತ್ತು ಉತ್ಪನ್ನಗಳ ವ್ಯಾಪಾರದಲ್ಲಿ ತೊಡಗಿಕೊಂಡಿರುವ, ಈಗಲೂ ಉತ್ತಮ ವ್ಯಾಪಾರ ಸಂಬಂಧ ಹೊಂದಿರುವ ಭಾರತ ಮತ್ತು ಫ್ರಾನ್ಸ್‌ಗಳ ವಿಚಾರದಲ್ಲಂತೂ ಅಪ್ಪಟ ಸತ್ಯವಾಗಿದೆ. ಸಾಂಕೇತಿಕ ಸಂಬಂಧದ ವಿಚಾರದಲ್ಲಿ ಭಾರತ ಮತ್ತು ಫ್ರಾನ್ಸ್‌ಗಳೇನೂ ವಿಶೇಷವಾಗಿಲ್ಲ.

ಈ ನಿಟ್ಟಿನಲ್ಲಿ, ಫ್ರಾನ್ಸ್ ಅಧ್ಯಕ್ಷರಾದ ಇಮ್ಮಾನ್ಯುವೆಲ್ ಮಾಕ್ರೋನ್ ಅವರು ನವದೆಹಲಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ನ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ಅದರಲ್ಲೂ, ಬಹಳಷ್ಟು ಸಮಯದಿಂದ ಬಾಕಿಯಾಗಿದ್ದ, ಭಾರತೀಯ ವಾಯುಪಡೆ ತನ್ನ ಯುದ್ಧ ವಿಮಾನಗಳ ಸ್ಕ್ವಾಡ್ರನ್‌ಗಳನ್ನು ಬಲಪಡಿಸಲು 114 ಮಲ್ಟಿ ರೋಲ್ ಫೈಟರ್ ಏರ್‌ಕ್ರಾಫ್ಟ್ (ಎಂಆರ್‌ಎಫ್ಎ) ಖರೀದಿಸುವ ಯೋಜನೆಯನ್ನು ತ್ವರಿತಗೊಳಿಸಿರುವುದರಿಂದ, ಈ ಬೆಳವಣಿಗೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಫ್ರಾನ್ಸ್ ಜುಲೈ ತಿಂಗಳಲ್ಲಿ ತನ್ನ ವಾರ್ಷಿಕ ಬಾಸ್ಟಿಲ್ ಡೇ ಪೆರೇಡ್‌ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿತ್ತು. ಈಗ ಭಾರತವೂ ಇದಕ್ಕೆ ಗೌರವದ ರೀತಿಯಲ್ಲಿ ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಅವರನ್ನು ಜನವರಿ 26ರ ಪಥಸಂಚಲನಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಅದರೊಡನೆ, ಭಾರತ ತನ್ನ ಮಹತ್ವದ ಎಂಆರ್‌ಎಫ್ಎ ಒಪ್ಪಂದದ ಅಂಗವಾಗಿ ಇನ್ನೂ ಹೆಚ್ಚು ಡಸ್ಸಾಲ್ಟ್ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಈ ಕುರಿತು ಭಾರತೀಯ ವಾಯುಪಡೆಯ ಓರ್ವ ಮೂರು ಸ್ಟಾರ್ ಉನ್ನತ ಅಧಿಕಾರಿಯೊಬ್ಬರೂ ಹೇಳಿಕೆ ನೀಡಿದ್ದರು.

ಅವರು ಇಂತಹ ಕ್ರಮಗಳು ಎರಡು ರಾಷ್ಟ್ರಗಳ ನಡುವೆ ಸಂಭಾವ್ಯ ಖರೀದಿಗೆ ಸಂಬಂಧಿಸಿದಂತೆ ಮೌನವಾಗಿಯೇ ಸಂದೇಶ ರವಾನಿಸುವ ವಿಧಾನವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಂತಹ ವಿಚಾರಗಳನ್ನು ಕುರಿತು ಚರ್ಚಿಸಿದ್ದರ ಪರಿಣಾಮವಾಗಿ ಆಡಳಿತದಿಂದ ಪ್ರಶ್ನೆಗಳು ಮೂಡುವುದನ್ನು ತಪ್ಪಿಸಲು ಅವರು ತನ್ನ ಹೆಸರನ್ನು ಬಯಲು ಮಾಡದಿರಲು ನಿರ್ಧರಿಸಿದ್ದರು.

ಇದನ್ನೂ ಓದಿ- ಡಿಜಿಟಲ್ ಸಾಲ ಎಂಬ ಕರಾಳ ಜಾಲ: ಭಾರತವನ್ನು ಕಾಡುತ್ತಿರುವ ಆತಂಕಕಾರಿ ವಾಸ್ತವದ ಅನಾವರಣ

ಈ ವಿಚಾರವನ್ನು ಒಂದಷ್ಟು ಸಕ್ರಿಯ ಮತ್ತು ನಿವೃತ್ತ ಭಾರತೀಯ ವಾಯುಪಡೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಅವರು ಭಾರತೀಯ ವಾಯುಪಡೆ ತನ್ನ ಎಂಆರ್‌ಎಫ್ಎ ಕಾರ್ಯಕ್ರಮದ ಅಂಗವಾಗಿ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಸಾಧ್ಯತೆಗಳು ಹಲವು ಕಾರಣಗಳಿಗಾಗಿ ಬಲವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೊದಲನೆಯ ಕಾರಣವೆಂದರೆ, 2016ರಲ್ಲಿ ಭಾರತೀಯ ವಾಯುಪಡೆ 9 ಬಿಲಿಯನ್ ಡಾಲರ್ ಮೊತ್ತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. 1990ರ ದಶಕದ ಆರಂಭದಲ್ಲಿ ಭಾರತ ರಷ್ಯಾದಿಂದ ಸುಖೋಯಿ ಎಸ್-30ಎಂಕೆಐ (ಇಂಡಿಯಾ) ಬಹುಪಾತ್ರಗಳ ಯುದ್ಧ ವಿಮಾನಗಳನ್ನು ಆಮದು ಮಾಡಿಕೊಂಡಿತ್ತು. ಬಳಿಕ ಈ ವಿಮಾನಗಳನ್ನು ಪರವಾನಗಿ ಪಡೆದು ಭಾರತದಲ್ಲೇ ಉತ್ಪಾದಿಸಲಾಯಿತು. ಭಾರತೀಯ ವಾಯುಪಡೆ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿರುವುದು 23 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶೀ ಯುದ್ಧ ವಿಮಾನಗಳನ್ನು ಖರೀದಿಸಿರುವುದಾಗಿದೆ.

ಈ ಖರೀದಿಯ ಬಳಿಕ, 2023ರ ಆರಂಭದಲ್ಲಿ ಭಾರತೀಯ ನೌಕಾಪಡೆ 26 ರಫೇಲ್ ಎಂ (ಮರೀನ್) ಯುದ್ಧ ವಿಮಾನಗಳನ್ನು ಖರೀದಿಗೆ ಆಯ್ಕೆ ಮಾಡಿಕೊಂಡಿತು. ಇದರಲ್ಲಿ ನಾಲ್ಕು ವಿಮಾನಗಳು ಎರಡು ಆಸನಗಳ ತರಬೇತಿ ಆವೃತ್ತಿಯಾಗಿವೆ. ಇವುಗಳನ್ನು ಭಾರತೀಯ ನಿರ್ಮಾಣದ ನೂತನ ವಿಮಾನ ವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ನಲ್ಲಿ ಬಳಸಲಾಗುವುದು. ಇದು ಭಾರತೀಯ ಸೇನಾಪಡೆಗಳಲ್ಲಿ ಫ್ರೆಂಚ್ ನಿರ್ಮಾಣದ ಯುದ್ಧ ವಿಮಾನಗಳ ಒಟ್ಟು ಸಂಖ್ಯೆಯನ್ನು 62ಕ್ಕೆ ಹೆಚ್ಚಿಸಲಿದೆ. ಇವೆಲ್ಲವನ್ನೂ ಒಂದೇ ಉತ್ಪಾದಕ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಫ್ರಾನ್ಸ್ ಮತ್ತು ಭಾರತ ಸರ್ಕಾರಗಳ ನಡುವೆ ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಪೂರೈಕೆ ಸಮಯದ ಕುರಿತು ಮಾತುಕತೆಗಳು ನಡೆಯುತ್ತಿವೆ. 2024ರ ಆರಂಭದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಆಡಳಿತಕ್ಕೆ ಬರುವ ನೂತನ ಸರ್ಕಾರ ಈ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಗಳಿವೆ.

ಅದರೊಡನೆ, ಈಗಾಗಲೇ ತನ್ನ ಸಾಮರ್ಥ್ಯಗಳನ್ನು ಸಾಬೀತುಪಡಿಸಿರುವ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದರಿಂದ, ಯುದ್ಧ ವಿಮಾನಗಳ ಖರೀದಿಗೆ ಮುನ್ನ ಸುದೀರ್ಘವಾದ ಮೌಲ್ಯಮಾಪನ ಮತ್ತು ಪರೀಕ್ಷೆಗಳ ಸಮಯವನ್ನೂ ಭಾರತ ಉಳಿಸಬಹುದು. ಈ ವಿಮಾನಗಳ ಖರೀದಿಯ ಮೂಲಕ, ಅನುಮತಿ ನೀಡಿರುವ 42 ಸ್ಕ್ವಾಡ್ರನ್‌ಗಳ ಬದಲು ಕೇವಲ 29-30 ಸ್ಕ್ವಾಡ್ರನ್‌ಗಳನ್ನು ಹೊಂದಿರುವ ಭಾರತೀಯ ವಾಯುಪಡೆಯ ವಿಮಾನಗಳ ಸಂಖ್ಯೆ ಕ್ಷಿಪ್ರವಾಗಿ ಏರಿಕೆ ಕಾಣಲಿದೆ.

ಇದನ್ನೂ ಓದಿ- ನೌಕಾದಳದ ಬಲವರ್ಧನೆಗೆ ರಫೇಲ್ - ಎಂ ಯುದ್ಧ ವಿಮಾನಕ್ಕೆ ಬೆಲೆಯ ಪ್ರಸ್ತಾವನೆ ಪಡೆದ ಭಾರತ: ಸಾಗರ ರಕ್ಷಣೆಯಿನ್ನು ಖಚಿತ

ಅದಲ್ಲದೆ, ಉದ್ಯಮದ ತಜ್ಞರ ಪ್ರಕಾರ, ಹೆಚ್ಚಿನ ಸಂಖ್ಯೆಯಲ್ಲಿ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದರಿಂದ, ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ವೈವಿಧ್ಯತೆ ಕಡಿಮೆಯಾಗಿ, ಅವುಗಳು ಸರಳೀಕೃತವಾಗಬಹುದು. ಪ್ರಸ್ತುತ ಭಾರತೀಯ ವಾಯುಪಡೆಯ ಬಳಿ ಏಳು ವಿಭಿನ್ನ ರೀತಿಯ ಯುದ್ಧ ವಿಮಾನಗಳಿವೆ. ಈ ಎಲ್ಲ ವಿಭಿನ್ನ ವಿಮಾನಗಳ ನಿರ್ವಹಣೆ ಕೇವಲ ಸಾಗಾಣಿಕಾ ಸವಾಲು ಮಾತ್ರವಲ್ಲದೆ, ಹಣಕಾಸಿನ ವಿಚಾರದಲ್ಲೂ ವೆಚ್ಚದಾಯಕವಾಗಿದೆ.

ಇದಕ್ಕೆ ಪೂರಕವಾಗಿ, ರಫೇಲ್ ಯುದ್ಧ ವಿಮಾನಗಳು ಈಗಾಗಲೇ ಎಂಆರ್‌ಎಫ್ಎ ಖರೀದಿಗೆ ಪ್ರಬಲ ಆಕಾಂಕ್ಷಿಯಾಗಿದೆ. ಎಂಆರ್‌ಎಫ್ಎ ಯೋಜನೆಯಡಿ ಅಂತಾರಾಷ್ಟ್ರೀಯ ನಿರ್ಮಾಪಕರು, ಅಂದರೆ ಇಂಟರ್ನ್ಯಾಷನಲ್ ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫಾಕ್ಚರರ್ (ಒಇಎಂ) ಒದಗಿಸುವ ಏಳು ವಿಭಿನ್ನ ವಿಮಾನಗಳಿಂದ 18 ಆಯ್ದ ಯುದ್ಧ ವಿಮಾನಗಳನ್ನು ಹಾರಾಟ ಸನ್ನದ್ಧ ಸ್ಥಿತಿಯಲ್ಲಿ  ಖರೀದಿ ಮಾಡಲಾಗುತ್ತದೆ. ಈ ಒಇಎಂಗಳು ಭಾರತೀಯ ವಾಯುಪಡೆ ಎಪ್ರಿಲ್ 2018ರಲ್ಲಿ ಸಲ್ಲಿಸಿದ ಮಾಹಿತಿ ಮನವಿಗೆ (ರಿಕ್ವೆಸ್ಟ್ ಫಾರ್ ಇನ್ಫಾರ್ಮೇಶನ್ - ಆರ್‌ಎಫ್ಐ) ಉತ್ತರಿಸಿವೆ.

ಇನ್ನುಳಿದ 96 ಯುದ್ಧ ವಿಮಾನಗಳನ್ನು ಆಯ್ದ ಒಂದು ಒಇಎಂ ಜೊತೆಗಿನ ಸಹಯೋಗದೊಂದಿಗೆ ಒಂದು ಭಾರತೀಯ ಸಹಯೋಗಿ ಸಂಸ್ಥೆಯೊಡನೆ ಸ್ಥಳೀಯವಾಗಿ ನಿರ್ಮಿಸಲಾಗುತ್ತದೆ. ಈ ಭಾರತೀಯ ಸಂಸ್ಥೆ ಖಾಸಗಿ ಅಥವಾ ಸಾರ್ವಜನಿಕ ವಲಯದ ಸಂಸ್ಥೆಯಾಗಿರಬಹುದು. ಈ ಸಹಯೋಗ ವಿಶಾಲವಾದ, 25 ಬಿಲಿಯನ್ ಡಾಲರ್ ಮೌಲ್ಯದ ಎಂಆರ್‌ಎಫ್ಎ ಒಪ್ಪಂದದಲ್ಲಿ ಭಾರತದ ಸ್ಥಳೀಯ ಸಂಪನ್ಮೂಲಗಳು ಮತ್ತು ಕೌಶಲಗಳನ್ನು ಬಳಸಿಕೊಳ್ಳುವ ಗುರಿ ಹೊಂದಿದೆ.

ಉದ್ಯಮ ಮತ್ತು ಸರ್ಕಾರಿ ಮೂಲಗಳ ಪ್ರಕಾರ ಎಂಆರ್‌ಎಫ್ಎ ಗುತ್ತಿಗೆ ಶೀಘ್ರವಾಗಿ ಘೋಷಣೆಗೊಳ್ಳುವ ಸಾಧ್ಯತೆಗಳಿವೆ. ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿಗಳು ಪ್ರಸ್ತುತ ಉದ್ದೇಶಿಸಿರುವ 114 ಯುದ್ಧ ವಿಮಾನಗಳ ಖರೀದಿ ಯೋಜನೆ ಮುಂದಿನ ದಿನಗಳಲ್ಲಿ ವಿಸ್ತೃತಗೊಂಡು, ಭಾರತ 200 ವಿಮಾನಗಳನ್ನು ಖರೀದಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇವುಗಳು ಭಾರತದಲ್ಲೇ ಉತ್ಪಾದನೆಗೊಳ್ಳುವುದರಿಂದ, ಅವುಗಳ ಸಂಭಾವ್ಯ ರಫ್ತು ಸಾಧ್ಯತೆಗಳೂ ಸೇರಿ, ಭಾರತಕ್ಕೆ ಈ ವಿಮಾನಗಳ ತಲಾ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ- ಮೋದಿ ಆಡಳಿತದಲ್ಲಿ ಭಾರತ : ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ

ಡಸಾಲ್ಟ್ ಸಂಸ್ಥೆಯ ಜೊತೆಗೆ, ಆರು ಇತರ ಒರಿಜಿನಲ್ ಇಕ್ವಿಪ್ಮೆಂಟ್ ಮ್ಯಾನುಫಾಕ್ಚರರ್ (ಒಇಎಂ) ಸಂಸ್ಥೆಗಳು ಭಾರತೀಯ ವಾಯುಸೇನೆಯ ಮಾಹಿತಿಗಾಗಿ ಮನವಿಗೆ ಪ್ರತಿಕ್ರಿಯಿಸಿವೆ. ಇವುಗಳಲ್ಲಿ ಯೂರೋಫೈಟರ್ ಸಂಸ್ಥೆಯ ಟೈಫೂನ್, ಸ್ವೀಡನ್ನಿನ ಸಾಬ್ ಮತ್ತು ಗ್ರಿಪೆನ್-ಇ, ರಷ್ಯಾದ ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೋರೇಷನ್ ಮತ್ತು ಸುಖೋಯಿ ಕಾರ್ಪೋರೇಷನ್‌ಗಳ ಮಿಗ್-35 ಫಲ್ಕ್ರಮ್ - ಎಫ್, ಮತ್ತು ಸು-35 ಫ್ಲಾಂಕರ್ ಇ, ಹಾಗೂ ಅಮೆರಿಕನ್ ಕಂಪನಿಗಳಾದ ಬೋಯಿಂಗ್ ಮತ್ತು ಲಾಕ್‌ಹೀಡ್ ಮಾರ್ಟಿನ್‌ಗಳ ಎಫ್/ಎ-18, ಎಫ್-15ಇಎಕ್ಸ್ ಮತ್ತು ಮೇಲ್ದರ್ಜೆಗೇರಿಸಿದ ಎಫ್-21 ಸೇರಿವೆ.

ಆದರೆ ಉಕ್ರೇನ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಯುದ್ಧದ ಕಾರಣದಿಂದ, ಭಾರತೀಯ ವಾಯುಪಡೆ ರಷ್ಯಾದ ಎರಡು ವಿಮಾನ ಮಾದರಿಗಳನ್ನು ಪರಿಗಣಿಸದಿರಲು ನಿರ್ಧರಿಸಿದೆ ಎನ್ನಲಾಗಿದೆ. ಇದಕ್ಕೆ ಭಾರತೀಯ ವಾಯುಪಡೆಗೆ ತನ್ನ ಬಳಿ ಇರುವ ಬಹುತೇಕ 12 ಸ್ಕ್ವಾಡ್ರನ್‌ಗಳಷ್ಟು, ಅಂದರೆ 263 ಸು-30ಎಂಕೆಐ ಮತ್ತು 50 ಮೇಲ್ದರ್ಜೆಗೇರಿಸಿದ ಮಿಗ್-29ಎಂ ಫೈಟರ್ ಬಾಂಬರ್ ವಿಮಾನಗಳ ಬಿಡಿಭಾಗಗಳನ್ನು ರಷ್ಯಾದಿಂದ ತರಿಸುವುದು ಕಷ್ಟಕರವಾಗಿರುವುದು ಕಾರಣವಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಅಕ್ಟೋಬರ್ ತಿಂಗಳಲ್ಲಿ ನಡೆದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರು ಭಾರತೀಯ ವಾಯುಪಡೆ ತನ್ನ ಬಳಿ ಇರುವ 84 ಸು-30ಎಂಕೆಐ ಯುದ್ಧ ವಿಮಾನಗಳನ್ನು 60,000 ಕೋಟಿ ರೂಪಾಯಿ ವೆಚ್ಚದಲ್ಲಿ ಸೂಪರ್ ಸುಖೋಯಿ ಯುದ್ಧ ವಿಮಾನಗಳಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದೆ ಎಂದು ಮಾಹಿತಿ ನೀಡಿದ್ದರು. ಈ ಯೋಜನೆಯಲ್ಲಿ ಮೊದಲು ರಷ್ಯಾದ ನೇರ ಸಹಭಾಗಿತ್ವವನ್ನು ಎದುರು ನೋಡಲಾಗಿತ್ತು. ಆದರೆ ಆ ಸಾಧ್ಯತೆಗಳು ಈಗ ಅನಿಶ್ಚಿತವಾಗಿ ತೋರುತ್ತಿವೆ.

ಟೈಫೂನ್ ವಿಮಾನವನ್ನು ಆಯ್ಕೆ ಮಾಡುವುದು ಭಾರತೀಯ ವಾಯುಪಡೆಯ ಸಾಗಾಣಿಕಾ ಸವಾಲಿಗೆ ಇನ್ನಷ್ಟು ಹೊಸ ಸಮಸ್ಯೆಗಳನ್ನು ತಂದೊಡ್ಡಬಹುದು. ಅದರೊಡನೆ, ಅಮೆರಿಕಾದ ಎಫ್-18 ಮತ್ತು ಎಫ್-16 ವಿಮಾನಗಳ ಆಧಾರದಲ್ಲಿ ನಿರ್ಮಿಸಲಾಗಿರುವ ಎಫ್-21 ಯುದ್ಧ ವಿಮಾನಗಳನ್ನು ಈ ಮೊದಲು ಭಾರತೀಯ ವಾಯುಪಡೆ ತಿರಸ್ಕರಿಸಿತ್ತು. ಇದಕ್ಕೆ 2010ರಲ್ಲಿ ನಡೆಸಿದ ಪರೀಕ್ಷಾ ಹಾರಾಟಗಳ ಸಂದರ್ಭದಲ್ಲಿ ಈ ವಿಮಾನದ ವಿವಿಧ ಸಾಮರ್ಥ್ಯಗಳ ಕೊರತೆಯನ್ನು ಭಾರತೀಯ ವಾಯುಪಡೆ ಕಾರಣವಾಗಿ ನೀಡಿತ್ತು. ಈ ಪರೀಕ್ಷೆಗಳು 2007ರಲ್ಲಿ ಘೋಷಿಸಲಾಗಿದ್ದ ಮೀಡಿಯಂ ಮಲ್ಟಿರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಂಎಂಆರ್‌ಸಿಎ) ಒಪ್ಪಂದದ ಭಾಗವಾಗಿದ್ದವು. ಆದರೆ ಬಳಿಕ ಈ ಯೋಜನೆಯನ್ನು ಕೈಬಿಡಲಾಗಿತ್ತು.

ಇದನ್ನೂ ಓದಿ- ಕೆಂಪು ಸಮುದ್ರದ ಕ್ಷೋಭೆ: ಭೌಗೋಳಿಕ ರಾಜಕಾರಣದ ಪರಿಣಾಮವಾಗಿ ನಲುಗುತ್ತಿದೆ ಜಾಗತಿಕ ಪೂರೈಕೆ ಸರಪಳಿ

ಇನ್ನೊಂದೆಡೆ, ಸಾಬ್ ಸಂಸ್ಥೆಯ ಗ್ರಿಪೆನ್-ಇ ಒಂದು ಇಂಜಿನ್ನಿನ ಯುದ್ಧ ವಿಮಾನವಾಗಿದೆ. ಎಂಆರ್‌ಎಫ್ಎಯಲ್ಲಿ ಭಾರತೀಯ ವಾಯುಪಡೆ ಒಂಟಿ ಇಂಜಿನ್ ವಿಮಾನ ಅಥವಾ ಎರಡು ಇಂಜಿನ್‌ಗಳ ವಿಮಾನ ಎಂದು ನಿರ್ದಿಷ್ಟವಾಗಿ ಹೇಳದಿದ್ದರೂ, ಭಾರತೀಯ ವಾಯುಪಡೆ ಯಾವತ್ತೂ ಎರಡು ಇಂಜಿನ್‌ಗಳ ವಿಮಾನಗಳನ್ನು ಆದ್ಯತೆಯಾಗಿಸಿತ್ತು.

ಈ ಕಾರಣಗಳಿಂದ, ಮಿಕ್ಕೆಲ್ಲ ಆಯ್ಕೆಗಳಿಂದ ಹೆಚ್ಚಾಗಿ, ರಫೇಲ್ ಎಂಆರ್‌ಎಫ್ಎ ಸ್ಪರ್ಧೆಯಲ್ಲಿ ಗೆಲ್ಲುವ ನಿಚ್ಚಳ ಆಯ್ಕೆಯಂತೆ ಕಂಡುಬರುತ್ತಿದೆ. ಇದಕ್ಕೆ ತನ್ನ ಪ್ರತಿಸ್ಪರ್ಧಿಗಳ ಮೇಲೆ ಅದು ಹೊಂದಿರುವ ಕಾರ್ಯಾಚರಣಾ ಮೇಲುಗೈಗಳೂ ಕಾರಣವಾಗಿವೆ. ಇದನ್ನು ಭಾರತೀಯ ವಾಯುಪಡೆ ನಿರಂತರವಾಗಿ ಗಮನಿಸುತ್ತಾ ಬಂದಿದ್ದು, ಈಗೀಗ ಇತರರೂ ಗಮನಿಸತೊಡಗಿದ್ದಾರೆ.

ಈ ಹಿಂದೆ ರೂಪುಗೊಂಡು, ಬಳಿಕ ರದ್ದುಗೊಳಿಸಲಾಗಿರುವ ಎಂಎಂಆರ್‌ಸಿಎ ಗುತ್ತಿಗೆಯ ರೂಪುರೇಷೆಗಳೂ ಲಭ್ಯವಿದೆ. ಆ ಸ್ಪರ್ಧೆಯಲ್ಲಿ ರಫೇಲ್ ತನ್ನ ಪ್ರತಿಸ್ಪರ್ಧಿಗಳಾಗಿದ್ದ ಟೈಫೂನ್, ಎಫ್-16ಸಿ/ಡಿ, ಎಫ್/ಎ-18ಇ/ಎಫ್, ಮಿಗ್-35, ಹಾಗೂ ಜೆಎಎಸ್-39 ಯುದ್ಧ ವಿಮಾನಗಳನ್ನು ಮೀರಿಸಿತ್ತು.

ಉದ್ಯಮದ ತಜ್ಞರ ಪ್ರಕಾರ, ಈ ಹಿಂದಿನ ಒಪ್ಪಂದವನ್ನೇ ಎಂಆರ್‌ಎಫ್ಎ ಖರೀದಿಗೆ ಪೂರಕವಾಗುವಂತೆ, ಹೊಂದಿಕೊಳ್ಳುವಂತೆ ಮಾರ್ಪಡಿಸಬಹುದಾಗಿದೆ. ಈ ಹಿಂದಿನ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ, ಈ ಒಪ್ಪಂದದ ವಿನ್ಯಾಸ ಅಧಿಕೃತ ಗಡುವಿಗಿಂತಲೂ ಬಹಳಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುವ ಮಾತುಕತೆಗಳ ಪ್ರಕ್ರಿಯೆಗಳನ್ನು ಸಾಕಷ್ಟು ಕಡಿಮೆಗೊಳಿಸಬಹುದು.

ಎಂಎಂಆರ್‌ಸಿಎ ಒಪ್ಪಂದದಲ್ಲಿದ್ದ ಪ್ರಮುಖ ತೊಂದರೆ ಎಂದರೆ, ರಕ್ಷಣಾ ಸಚಿವಾಲಯ ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಲ್ಲಿ ಪರವಾನಗಿಯೊಡನೆ ನಿರ್ಮಿಸಲಾಗುವ 108 ರಫೇಲ್ ಯುದ್ಧ ವಿಮಾನಗಳ ಗುಣಮಟ್ಟ ನಿರ್ವಹಣಾ ಜವಾಬ್ದಾರಿಯನ್ನು ಡಸಾಲ್ಟ್ ಸಂಸ್ಥೆ ವಹಿಸಿಕೊಳ್ಳಬೇಕು ಎಂದಿದ್ದಾಗಿತ್ತು.

ಇದನ್ನೂ ಓದಿ- ಚೀನೀ ಡ್ರ್ಯಾಗನ್ ಕೆಂಗಣ್ಣಿಗೆ ಮಣಿಯದೆ ಫಿಲಿಪೈನ್ಸ್ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಬಂಧ ವೃದ್ಧಿಗೆ ಭಾರತದ ಹೆಜ್ಜೆ

ಈ ಅಸಮಂಜಸವಾದ ಬೇಡಿಕೆ ಎಂಎಂಆರ್‌ಸಿಎ ಒಪ್ಪಂದ ಜಾರಿಗೆ ಬರದಿರಲು ಪ್ರಮುಖ ಕಾರಣವಾಗಿತ್ತು. ಇದರ ಫಲಿತಾಂಶವಾಗಿ, ಹಲವು ವರ್ಷಗಳ ಬಳಿಕವೂ ರಕ್ಷಣಾ ಸಚಿವಾಲಯ ಕೇವಲ 36 ರಫೇಲ್ ಯುದ್ಧ ವಿಮಾನಗಳನ್ನು ಹಾರಾಟ ಸಿದ್ಧ ಪರಿಸ್ಥಿತಿಯಲ್ಲಿ ಖರೀದಿಸಿತು.

ಭಾರತೀಯ ರಾಜತಂತ್ರಜ್ಞರು, ರಕ್ಷಣಾ ತಜ್ಞರು, ಹಾಗೂ ವಿಶ್ಲೇಷಕರು ಅಮೆರಿಕಾದೊಡನೆ ವ್ಯವಹಾರ ನಡೆಸುವುದಕ್ಕಿಂತಲೂ ಫ್ರಾನ್ಸ್ ಜೊತೆ ವ್ಯವಹಾರ ಒಪ್ಪಂದ ಕೈಗೊಳ್ಳುವುದು ಹೆಚ್ಚು ಸುಲಭವಾದುದು ಎಂದು ಅಭಿಪ್ರಾಯ ಪಡುತ್ತಾರೆ. ಅದರಲ್ಲೂ ಫೈಟರ್ ಆಯುಧಗಳು ಮತ್ತು ಹಾರಾಟ ವ್ಯವಸ್ಥೆಗಳನ್ನು ನಿಯಂತ್ರಿಸುವ ಅತ್ಯಾಧುನಿಕ ಮಿಲಿಟರಿ ಜ್ಞಾನ ಮತ್ತು ಸೋರ್ಸ್ ಕೋಡ್‌ಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಫ್ರಾನ್ಸ್ ಹೆಚ್ಚು ಹೊಂದಿಕೊಳ್ಳುವ ಮತ್ತು ಪ್ರಾಯೋಗಿಕ ರಾಷ್ಟ್ರ ಎಂದು ಭಾವಿಸಲಾಗಿದೆ.

ಇನ್ನೊಂದೆಡೆ ಅಮೆರಿಕಾ ಈ ವಿಚಾರಗಳಲ್ಲಿ ಕಟ್ಟುನಿಟ್ಟಿನ ರಫ್ತು ನಿಯಮಗಳು ಮತ್ತು ಕಾನೂನುಗಳನ್ನು ಹೊಂದಿದೆ. ಅದರೊಡನೆ, ಅಮೆರಿಕಾ ಇಂತಹ ವ್ಯವಹಾರಗಳಲ್ಲಿ ರಾಜಕೀಯ ಮತ್ತು ರಾಜತಾಂತ್ರಿಕ ವಿಚಾರಗಳ ಮೇಲೂ ಅವಲಂಬಿತವಾಗಿರುತ್ತದೆ.

ಆದರೆ ಫ್ರಾನ್ಸ್ ಇಂತಹ ವಿಚಾರಗಳಲ್ಲಿ ಹೆಚ್ಚು ಸರಳತೆಯನ್ನು ಹೊಂದಿದೆ. ಫ್ರಾನ್ಸ್ ತೋರುವ ಹೊಂದಿಕೊಳ್ಳುವ ಗುಣಗಳು ಭಾರತದ ಕಾರ್ಯತಂತ್ರಗಳಿಗೆ ಹೆಚ್ಚು ಸೂಕ್ತವಾಗಿದೆ. ಫ್ರಾನ್ಸ್‌ನ ಆಯುಧ ಉಪಕರಣಗಳು ಕೊಂಚ ಹೆಚ್ಚು ವೆಚ್ಚದಾಯಕವೆನಿಸಿದರೂ, ಭಾರತಕ್ಕೆ ಅದು ಆರಾಮದಾಯಕವೂ ಹೌದು.

ಈ ಮೊದಲು, ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ಅವರನ್ನು ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಅವರು ಅಮೆರಿಕಾದ ಆಂತರಿಕ ವಿಚಾರಗಳ ಕಾರಣದಿಂದ ಆಹ್ವಾನವನ್ನು ಪುರಸ್ಕರಿಸಿಲ್ಲ. ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಅವರು ಜೋ ಬಿಡೆನ್ ಬದಲಿಗೆ ಬರುತ್ತಿದ್ದರೂ, ಅವರ ಆಗಮನ ದೀರ್ಘಕಾಲದಿಂದ ಎದುರು ನೋಡುತ್ತಿರುವ ಭಾರತೀಯ ವಾಯುಪಡೆಯ ಮೇಲ್ದರ್ಜೆಗೇರಿಸುವಿಕೆಗೆ ವೇಗ ನೀಡುವ ಸಾಧ್ಯತೆಗಳಿವೆ.

ಅದೇ ರೀತಿ, ಮಾಕ್ರೋನ್ ಅವರ ಆಗಮನ ಭಾರತಕ್ಕೆ ಬಾಹ್ಯಾಕಾಶ, ಆಧುನಿಕ ತಂತ್ರಜ್ಞಾನ, ಪರಿಸರ, ಮತ್ತು ಪರಮಾಣು ಸಂಬಂಧಿತ ವಿಚಾರಗಳಿಗೆ ಈ ತಂತ್ರಜ್ಞಾನಗಳನ್ನು ಹೊಂದಿರುವ ಪಾಶ್ಚಾತ್ಯ ದೇಶವಾದ ಫ್ರಾನ್ಸ್ ಜೊತೆ ಸಹಯೋಗ ಹೊಂದಲು ನೆರವಾಗುವ ಸಾಧ್ಯತೆಗಳಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News