ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆಯ ಅವಧಿಯಲ್ಲಿ, ಏಷ್ಯಾದ ಸರಕು ಸಾಗಾಣಿಕೆ ಮತ್ತು ಪೂರೈಕೆ ಸರಪಳಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಿದೆ. ಹೌತಿ ಉಗ್ರಗಾಮಿ ಸಂಘಟನೆಯ ಉಗ್ರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಆಕ್ರಮಣ ನಡೆಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದು ಸೂಯೆಜ್ ಕಾಲುವೆಯ ಮೂಲಕ ಯುರೋಪ್‌ಗೆ ತೆರಳುವ ಬಹುಮುಖ್ಯ ಸಮುದ್ರ ಮಾರ್ಗಕ್ಕೆ ಅಡ್ಡಿ ಉಂಟುಮಾಡುತ್ತದೆ.
ಜಗತ್ತಿನ ಎರಡನೇ ಅತಿದೊಡ್ಡ ಕಂಟೇನರ್ ಸಾಗಾಣಿಕಾ ಸಂಸ್ಥೆಯಾದ ಎಪಿ ಮೊಲ್ಲರ್ - ಮಾಯೆರ್ಸ್ಕ್ ನೇತೃತ್ವದಲ್ಲಿ ಸಾಗಾಣಿಕಾ ಸಂಸ್ಥೆಗಳು ಕಳೆದ ವಾರಾಂತ್ಯದ ಬಳಿಕ ಈ ಸಾಗಾಣಿಕಾ ಮಾರ್ಗದಲ್ಲಿ ಹಡಗು ಸಂಚಾರವನ್ನು ಸ್ಥಗಿತಗೊಳಿಸಿವೆ. ಈ ಮಾರ್ಗ ಜಾಗತಿಕ ಹಡಗು ಸಂಚಾರದ 15% ಮತ್ತು ಜಗತ್ತಿನ 30% ಕಂಟೇನರ್ ಸಾಗಾಣಿಕೆಯನ್ನು ಹೊಂದಿದೆ.
ಹೌತಿ ಉಗ್ರರು 10 ಹಡಗುಗಳ ಮೇಲೆ ದಾಳಿ ನಡೆಸಿದ್ದು, ಹಮಾಸ್ ಜೊತೆಗಿನ ಕದನದ ಕಾರಣದಿಂದ, ಇಸ್ರೇಲ್ ಜೊತೆಗೆ ಸಂಬಂಧ ಹೊಂದಿರುವ ಹಡಗುಗಳನ್ನು ಗುರಿಯಾಗಿಸುತ್ತಿದ್ದೇವೆ ಎಂದಿದ್ದಾರೆ. ಹೌತಿ ಬಂಡುಕೋರರು ಇಸ್ರೇಲ್‌ನಿಂದ 1,000 ಮೈಲಿಗೂ (1,600 ಕಿಲೋಮೀಟರ್) ಹೆಚ್ಚು ದೂರದಲ್ಲಿದ್ದರು, ಇಸ್ರೇಲ್ ವಿರುದ್ಧ ಡ್ರೋನ್‌ಗಳು ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸುತ್ತಿದ್ದಾರೆ.
ಹೌತಿ ದಾಳಿಯ ಕಾರಣದಿಂದ, ಹಡಗುಗಳು ಈಗ ಅನಿವಾರ್ಯವಾಗಿ ದೂರದ ಬಳಸು ಮಾರ್ಗದಿಂದ ತೆರಳಬೇಕಾಗಿದ್ದು, ಕೇಪ್ ಆಫ್ ಗುಡ್ ಹೋಪ್ ಅನ್ನು ಬಳಸಿ ಮುಂದುವರಿಯುತ್ತಿವೆ. ಇದರಿಂದಾಗಿ ಏಷ್ಯಾ ಮತ್ತು ಯುರೋಪ್ ನಡುವಿನ ಅವುಗಳ ಪ್ರಯಾಣ ಎರಡು ವಾರಗಳಷ್ಟು, ಅಥವಾ 30-40% ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಹೊಡೆದ ಹಿಮ್ಮಡಿ ಸಮಸ್ಯೆ ಎದುರಿಸುತ್ತಿದ್ದೀರಾ ? ಹಾಗಾದ್ರೆ ಚಿಂತೆ ಬಿಟ್ಟು ಈ ಟಿಪ್ಸ್ ಫಾಲೋ ಮಾಡಿ
ಸಾಗಾಣಿಕೆಯಲ್ಲಿ ತಡವಾಗುವ ಕಾರಣದಿಂದ, ಚೀಸ್, ಬೆಣ್ಣೆ, ಸಾಲ್ಮನ್ ಮೀನಿನಂತಹ ಹಾಳಾಗಬಲ್ಲ ಆಹಾರ ವಸ್ತುಗಳು, ವೈನ್ ನಂತಹ ಪಾನೀಯಗಳ ನಿಗದಿತ ಸಂಗ್ರಹಣಾ ಅವಧಿಯ ಕಾರಣದಿಂದಾಗಿ ಅವುಗಳ ಬೆಲೆ ಸಾಕಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅದರೊಡನೆ, ಈ ಸಾಗಾಣಿಕಾ ಸವಾಲಿನ ಕಾರಣದಿಂದ, ಏಷ್ಯಾದಿಂದ ಯುರೋಪಿಗೆ ಇಲೆಕ್ಟ್ರಾನಿಕ್ಸ್ ಮತ್ತು ವಾಹನ ಬಿಡಿಭಾಗಗಳ ಸಾಗಾಟವೂ ಸವಾಲುಗಳನ್ನು ಎದುರಿಸುವ ಸಾಧ್ಯತೆಗಳಿವೆ.
ಸರಕು ಸಾಗಾಣಿಕಾ ವೇಳಾಪಟ್ಟಿಯಲ್ಲಿನ ಬದಲಾವಣೆಯ ಕಾರಣದಿಂದ, ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಕಂಡುಬರುವ ಸಾಧ್ಯತೆಗಳಿವೆ. ಇದರಿಂದಾಗಿ, ಏಷ್ಯಾದ ಹಲವು ಭಾಗಗಳು ಇತರ ಭಾಗಗಳಿಂದ ಹೆಚ್ಚು ಪ್ರಾಧಾನ್ಯತೆ ಪಡೆಯುವ ನಿರೀಕ್ಷೆಗಳಿವೆ.
ಇನ್ನು ಭಯೋತ್ಪಾದಕರ ದಾಳಿಗಳ ಕಾರಣದಿಂದ ಸೂಯೆಜ್ ಕಾಲುವೆಯಲ್ಲಿ ಹಡಗುಗಳ ದಡ್ಟಣೆ ಅಪಾರವಾಗಿ ಹೆಚ್ಚಿದೆ. ಅದರೊಡನೆ ಈ ಪ್ರದೇಶದಲ್ಲಿನ ಬರ ಪರಿಸ್ಥಿತಿಯ ಕಾರಣದಿಂದ ಕಾಲುವೆಯ ನೀರಿನ ಮಟ್ಟವೂ ಕುಸಿದಿದ್ದು, ಈ ಮಾರ್ಗದಲ್ಲಿ ಸಾಗಾಟ ನಡೆಸುವ ಹಡಗುಗಳ ಸಂಖ್ಯೆಯನ್ನು ಮಿತಿಗೊಳಿಸುವಂತೆ ಮಾಡಿದೆ.
ಸಾಗಾಣಿಕಾ ಸಂಸ್ಥೆಗಳು ಸರಕು ಸಾಗಾಣಿಕೆಯ ಮೇಲೆ ಉಂಟಾಗುವ ಪರಿಣಾಮದ ಕುರಿತು ಕಳವಳ ವ್ಯಕ್ತಪಡಿಸಿದ್ದು, ಇದು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿದ ಸರಕು ಸಾಗಾಣಿಕಾ ತೊಂದರೆಯ ತೀವ್ರತೆಗಿಂತ ಕೊಂಚ ಮಟ್ಟಿಗೆ ಕಡಿಮೆ ಇರಬಹುದು ಎಂದಿವೆ.
ಜಾಗತಿಕ ವ್ಯಾಪಾರ ಪರಿಹಾರ ಒದಗಿಸುವ ಫ್ಲೆಕ್ಸ್‌ಪೋರ್ಟ್ ಎಂಬ ಸಂಸ್ಥೆಯ ಪ್ರಕಾರ, ಸೂಯೆಜ್ ಕಾಲುವೆಯ ಮೂಲಕ ಸಾಗುವ 90% ಹಡಗುಗಳು ಒಂದೋ ನಿಲುಗಡೆಯಾಗುತ್ತಿವೆ, ಅಥವಾ ಬೇರೆ ಮಾರ್ಗವನ್ನು ಆಯ್ದುಕೊಳ್ಳುತ್ತಿವೆ. ಇದರ ಪರಿಣಾಮವಾಗಿ, ಜಾಗತಿಕ ಸಾಗಾಣಿಕಾ ಸಾಮರ್ಥ್ಯದಲ್ಲಿ 25% ಕುಂಠಿತ ಉಂಟಾಗುವ ಸಾಧ್ಯತೆಗಳಿವೆ. ಅದರೊಡನೆ, ವಸ್ತುಗಳ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿ ವಿಳಂಬಗಳೂ ತಲೆದೋರಬಹುದು.
ಇದನ್ನೂ ಓದಿ: ಪ್ರಭಾಸ್ ʼಸಲಾರ್ʼ ಅಬ್ಬರಕ್ಕೆ ʼಬುಕ್ ಮೈ ಶೋʼ ಸರ್ವರ್ ಕ್ರ್ಯಾಶ್..!
ಮಂಗಳವಾರದ ಮಾಹಿತಿಯ ಪ್ರಕಾರ, ಅಂದಾಜು 11 ಸಾಗಾಣಿಕಾ ಹಡಗುಗಳು ಸೂಯೆಜ್ ಕಾಲುವೆಯ ಮೂಲಕ ಹಾದು ಹೋಗಿದ್ದು, ಸಿಂಗಾಪುರ್, ಮಲೇಷಿಯಾ, ಹಾಗೂ ಯುಎಇಗಳಂತಹ ರಾಷ್ಟ್ರಗಳಿಗೆ ಆಹಾರ ಧಾನ್ಯಗಳಂತಹ ವಸ್ತುಗಳನ್ನು ಒಯ್ಯುತ್ತಿವೆ. ಪ್ರಸ್ತುತ ಈ ಹಡಗುಗಳು ಸುಡಾನ್ ಮತ್ತು ಸೌದಿ ಅರೇಬಿಯಾ ನಡುವೆ, ಕೆಂಪು ಸಮುದ್ರದಲ್ಲಿ ಲಂಗರು ಹಾಕಿವೆ. ಈ ಮಾಹಿತಿಯನ್ನು ಎಲ್ಎಸ್ಇಜಿಯ ಹಡಗುಗಳ ಟ್ರ್ಯಾಕಿಂಗ್ ಮಾಹಿತಿಯ ಆಧಾರದಲ್ಲಿ ಕಲೆಹಾಕಲಾಗಿದೆ.
ಕಚ್ಚಾ ತೈಲ ಬೆಲೆ ಎರಡು ವಾರಗಳಲ್ಲಿ ಅತ್ಯಧಿಕ ಪ್ರಮಾಣವನ್ನು ತಲುಪಿ, ಪ್ರತಿ ಬ್ಯಾರಲ್‌ಗೆ ಅಂದಾಜು 79 ಡಾಲರ್ ಆಗಿತ್ತು. ಹಡಗುಗಳ ಮೇಲೆ ಭಯೋತ್ಪಾದಕರ ದಾಳಿಯ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಏರಿಕೆ ಕಂಡಿದ್ದು, ತೈಲ ಆಮದಿನ ಮೇಲೆ ಅವಲಂಬಿತವಾಗಿದ್ದ ಹಲವಾರು ಏಷ್ಯನ್ ರಾಷ್ಟ್ರಗಳ ಮೇಲೆ ದುಷ್ಪರಿಣಾಮ ಬೀರಿದೆ.
ಸಿಂಗಾಪುರ ಮೂಲದ ಇಂಧನ ಸಲಹಾ ಸಂಸ್ಥೆ ವಂದಾ ಇನ್‌ಸೈಟ್ಸ್ ಸ್ಥಾಪಕರಾದ ವಂದನಾ ಹರಿ ಅವರ ಪ್ರಕಾರ, ತೈಲ ಪೂರೈಕೆ ವ್ಯವಸ್ಥೆ ಮತ್ತು ಇತರ ಅವಶ್ಯಕ, ಸೂಕ್ಷ್ಮ ವಲಯಗಳ ವಿಚಾರದಲ್ಲಿ ಅಡೆತಡೆ ಉಂಟಾದರೆ ಅದನ್ನು ಎದುರಿಸುವ ಸಾಮರ್ಥ್ಯ ಮಾರುಕಟ್ಟೆಗೆ ಇರುವುದಿಲ್ಲ.
ಅದರಲ್ಲೂ ಈಗ, ರಷ್ಯಾ ಪ್ರತಿದಿನ ತನ್ನ 7 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಮತ್ತು ಸಿದ್ಧ ವಸ್ತುಗಳನ್ನು ರಫ್ತು ಮಾಡುವುದರಿಂದ ಪರಿಸ್ಥಿತಿಯಲ್ಲಿ ಬದಲಾವಣೆ ಇದೆ. ಈ ಬದಲಾವಣೆ ಕಳೆದ ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲಿ ಜರುಗಿದೆ.
ಸೌದಿ ಅರೇಬಿಯಾದೊಡನೆ, ರಷ್ಯಾ ಸಹ ಉತ್ಪಾದನಾ ವೆಚ್ಚ ಮತ್ತು ಬೆಂಬಲ ಬೆಲೆಯನ್ನು ಕಡಿಮೆಗೊಳಿಸಲು ಉದ್ದೇಶಿಸಿದ್ದು, ಭಾನುವಾರ ರಫ್ತಿನಲ್ಲಿ ಬಹಳಷ್ಟು ಕಡಿತವನ್ನು ಘೋಷಿಸಿದೆ.
ಮಂಗಳವಾರ, ಅಮೆರಿಕಾ ಒಂದು ಅಂತಾರಾಷ್ಟ್ರೀಯ ನೌಕಾಪಡೆಯ ಸಹಯೋಗವನ್ನು ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದು, ಇದು ಕೆಂಪು ಸಮುದ್ರದಲ್ಲಿ ವ್ಯಾಪಾರವನ್ನು ಹೌತಿ ಉಗ್ರಗಾಮಿಗಳಿಂದ ರಕ್ಷಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿಕೆ ನೀಡಿದೆ. ಈ ಸಹಯೋಗದಲ್ಲಿ, ಕೆನಡಾ, ಫ್ರಾನ್ಸ್, ಇಟಲಿ, ಯುನೈಟೆಡ್ ಕಿಂಗ್‌ಡಮ್, ಬಹ್ರೇನ್, ಮತ್ತು ಸೀಶೆಲ್ಸ್ ಭಾಗಿಯಾಗಿವೆ.
ಈ ಪ್ರಯತ್ನ ಯಶಸ್ವಿಯಾಗುವ ಕುರಿತು ಧನಾತ್ಮಕ ಮತ್ತು ಋಣಾತ್ಮಕ ಎರಡೂ ರೀತಿಯ ಅಭಿಪ್ರಾಯಗಳು ಎದುರಾಗಿವೆ.
ತೈಲ ಸಂಪದ್ಭರಿತ ಮಧ್ಯ ಪೂರ್ವದ ರಾಷ್ಟ್ರಗಳು ತಮ್ಮ ಸಾಗಾಣಿಕೆಗೆ ಅಡ್ಡಿ ಉಂಟುಮಾಡುತ್ತಿರುವ ಈ ಬಿಕ್ಕಟ್ಟನ್ನು ಸರಿಪಡಿಸುವ ನಿಟ್ಟಿನಲ್ಲಿ ಬಹಳಷ್ಟು ನೆರವು ನೀಡಬಹುದು ಎಂದು ವಂದನಾ ಹರಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಪ್ರದೇಶದಲ್ಲಿನ ತೈಲ ಮತ್ತು ಅನಿಲ ಉತ್ಪಾದಕರಿಗೆ ಇದರ ಅವಶ್ಯಕತೆ ಹೆಚ್ಚಾಗಿದೆ. ಅದೇನೇ ಆದರೂ, ಈ ರಾಷ್ಟ್ರಗಳು ಇರಾನ್ ಮತ್ತು ಹೌತಿಗಳ ಮೇಲೆ ಪ್ರಭಾವ ಬೀರಿ, ಈ ಉದ್ವಿಗ್ನತೆಯನ್ನು ಸರಿಪಡಿಸುವ ಸಾಧ್ಯತೆಗಳಿವೆ ಎಂದು ವಂದನಾ ಅಭಿಪ್ರಾಯ ಪಟ್ಟಿದ್ದಾರೆ.
ಒಂದಷ್ಟು ತಜ್ಞರು ಈ ಪರಿಸ್ಥಿತಿ ಸರಿ ಹೋಗಬಹುದು ಎಂದು ಅಭಿಪ್ರಾಯ ಪಟ್ಟಿದ್ದು, ಅದು ಎಷ್ಟು ಶೀಘ್ರವಾಗಿ ಮತ್ತು ಎಷ್ಟು ಪ್ರಮಾಣದಲ್ಲಿ ಅಮೆರಿಕಾ ಪ್ರತಿಕ್ರಿಯಿಸಬಲ್ಲದು ಎನ್ನುವುದರ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.
ಸಿಂಗಾಪುರ ಮೂಲದ ಜೆಟಿಡಿ ಎನರ್ಜಿ ಸರ್ವಿಸಸ್ ನಿರ್ದೇಶಕರಾದ ಜಾನ್ ಡ್ರಿಸ್ಕಾಲ್ ಅವರು ಅಮೆರಿಕಾ ಕೆಂಪು ಸಮುದ್ರದಲ್ಲಿ ಹಡಗುಗಳ ಸಂಚಾರವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ದೃಢವಾದ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದಿದ್ದಾರೆ. ಅವರು ಅಮೆರಿಕಾ ಹಡಗುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿಮಾನ ವಾಹಕ ನೌಕೆಯನ್ನು ಅಲ್ಲಿಗೆ ಕಳುಹಿಸಬಹುದೇ ಎಂದೂ ಪ್ರಶ್ನಿಸಿದ್ದಾರೆ.
ಅಮೆರಿಕಾದಲ್ಲಿ ಇದು ಚುನಾವಣಾ ವರ್ಷವಾಗಿದ್ದು, ಅಧ್ಯಕ್ಷ ಜೋ ಬಿಡೆನ್ ಅವರ ವಿದೇಶಾಂಗ ನೀತಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಅದರಲ್ಲೂ ಮಧ್ಯ ಪೂರ್ವ ಪ್ರದೇಶದಲ್ಲಿ ಹೆಚ್ಚುತ್ತಿರುವ ಗಲಭೆಗಳು ಪ್ರಮುಖವಾಗಿವೆ ಎಂದು ಜಾನ್ ಹೇಳಿದ್ದಾರೆ.
ಈಗಾಗಲೇ ಸಾಗಾಣಿಕಾ ಸಂಸ್ಥೆಗಳು ಏಷ್ಯಾಗೆ ಮತ್ತು ಏಷ್ಯಾದಿಂದ ಹೊರಗೆ ತಮ್ಮ ಸಾಗಾಣಿಕಾ ವೆಚ್ಚವನ್ನು ಹೆಚ್ಚಿಸಲು ಆರಂಭಿಸಿವೆ ಎಂದು ಉದ್ಯಮದ ತಜ್ಞರು ಗಮನಿಸಿದ್ದಾರೆ.
ಮುಂಬೈಯ ಪ್ರಾದೇಶಿಕ ಉತ್ಪನ್ನಗಳ ಸ್ವತಂತ್ರ ತಜ್ಞರಾದ ಜಿ ಚಂದ್ರಶೇಖರ್ ಅವರು ಸಾಗಾಣಿಕಾ ವೆಚ್ಚ ಬಹುತೇಕ 10% ಹೆಚ್ಚಳ ಕಂಡಿವೆ ಎಂದಿದ್ದು, ವಿಮೆಯ ಪ್ರೀಮಿಯಮ್ ಮೊತ್ತವೂ ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಏಷ್ಯಾ ಮತ್ತು ಪಶ್ಚಿಮದ ನಡುವಿನ ಸಾಗಾಣಿಕೆ ಈಗ ಸಾಕಷ್ಟು ವಿಳಂಬ ಕಾಣುತ್ತಿದೆ ಎಂದು ಅವರು ಗಮನಿಸಿದ್ದಾರೆ.
ಮುಂದಿನ ಅನಿರ್ದಿಷ್ಟ ಅವಧಿಯಲ್ಲಿ ಸಾಗಾಣಿಕಾ ಸಂಸ್ಥೆಗಳು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಸಂಚರಿಸುವಾಗ ಬಹಳಷ್ಟು ಜಾಗರೂಕವಾಗಿರಬೇಕು ಎಂದು ಅವರು ಕರೆ ನೀಡಿದ್ದಾರೆ.
ಬಾಲ್ಟಿಕ್ ಡ್ರೈ ಇಂಡೆಕ್ಸ್ ಎನ್ನುವುದು ಸಾಗಾಣಿಕಾ ವೆಚ್ಚವನ್ನು ಅಳೆಯುವ ಮಹತ್ತರ ಮಾಪನವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಇದು ಎರಡು ವರ್ಷಗಳಲ್ಲೇ ಅತ್ಯಧಿಕ ಮಟ್ಟವನ್ನು ತಲುಪಿದೆ.
ಇನ್ನೂ ಹೆಚ್ಚಿನ ಕಾಳಜಿಯ ವಿಚಾರವೆಂದರೆ, ಈಗಷ್ಟೇ ಬೆಳವಣಿಗೆ ಕಾಣುತ್ತಿರುವ ಸಾಗಾಣಿಕಾ ಸರಪಳಿಯನ್ನು ಭೌಗೋಳಿಕ ರಾಜಕಾರಣದ ಉದ್ವಿಗ್ನತೆ ಹಾಳುಗೆಡವಬಲ್ಲದು ಎಂದು ಇಎಸ್ಎಸ್ಇಸಿ ಬಿಸಿನೆಸ್ ಸ್ಕೂಲ್ ಏಷ್ಯಾ ಪೆಸಿಫಿಕ್‌ನ ಉಪನ್ಯಾಸಕರು, ಚೀನಾ ಮತ್ತು ಆಗ್ನೇಯ ಏಷ್ಯಾ ವಿಚಾರಗಳ ತಜ್ಞರಾದ ಜಾಮಸ್ ಲಿಮ್ ಅಭಿಪ್ರಾಯ ಪಡುತ್ತಾರೆ.
2023 ವರ್ಷಾದ್ಯಂತ ಜಾಗತಿಕ ಪೂರೈಕೆ ಸಮಸ್ಯೆಗಳು ನಿವಾರಣೆಗೊಳ್ಳುತ್ತಾ ಬಂದಿದ್ದ ಪರಿಣಾಮವಾಗಿ, ಜಾಗತಿಕ ಹಣದುಬ್ಬರದ ಒತ್ತಡ ಕಡಿಮೆಯಾಗುತ್ತಾ ಬಂದಿತ್ತು. ಆದರೆ ಈಗ ಮರಳಿ ಪೂರೈಕೆ ಸರಪಳಿಯ ಮೇಲೆ ಅಡ್ಡ ಪರಿಣಾಮಗಳು ಉಂಟಾಗುವುದರಿಂದ ಪೂರೈಕೆ ಪ್ರಕ್ರಿಯೆಯ ಮೇಲೆ ಅಡ್ಡ ಪರಿಣಾಮಗಳು ಉಂಟಾಗಲಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
-ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.