ಮೋದಿ ಆಡಳಿತದಲ್ಲಿ ಭಾರತ : ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ

India under Modi regime : ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಾಸಿಸುವ ನವದೆಹಲಿಯ ಅಧಿಕೃತ ನಿವಾಸದ ರಸ್ತೆಯನ್ನು ಈ ಮೊದಲು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗಿತ್ತಿತ್ತು. ಆದರೆ 2016ರಲ್ಲಿ ಇದನ್ನು ಲೋಕ್ ಕಲ್ಯಾಣ್ ಮಾರ್ಗ ಎಂದು ಮರುನಾಮಕರಣ ಮಾಡಲಾಯಿತು. ಈ ಹೊಸ ಹೆಸರು ಮೋದಿಯವರ ಜನಪರವಾದ ಕಾರ್ಯವಿಧಾನ ಮತ್ತು ಭಾರತದ ವಸಾಹತುಶಾಹಿ ಇತಿಹಾಸವನ್ನು ತೊಡೆಯುವ ಪ್ರಯತ್ನವನ್ನು ಪ್ರತಿನಿಧಿಸುತ್ತದೆ.

Written by - Girish Linganna | Edited by - Krishna N K | Last Updated : Dec 22, 2023, 03:24 PM IST
ಮೋದಿ ಆಡಳಿತದಲ್ಲಿ ಭಾರತ : ಬದಲಾಗುತ್ತಿರುವ ರಾಷ್ಟ್ರದಲ್ಲಿ ನಾಯಕತ್ವ, ಪ್ರಗತಿಗಳೊಡನೆ ವಿವಾದಗಳ ಹುತ್ತ title=

PM Narendra modi regime : ಕಟ್ಟುನಿಟ್ಟಿನ ಭದ್ರತಾ ತಪಾಸಣೆಯನ್ನು ದಾಟಿದ ಬಳಿಕ ಸಿಗುವ, ನೂತನವಾಗಿ ಮರು ನವೀಕರಣ ನಡೆಸಿರುವ, 'ಸೆವೆನ್ ಎಲ್‌ಕೆಎಂ' (ಲೋಕ್ ಕಲ್ಯಾಣ್ ಮಾರ್ಗ್) ಎಂದು ಮೋದಿಯವರ ಸಿಬ್ಬಂದಿಗಳು ಕರೆಯುವ ಈ ನಿವಾಸದ ಸುತ್ತಲೂ ನವಿಲುಗಳು ಸಂಚರಿಸುತ್ತಿರುತ್ತವೆ. ಇದರ ಅಂಗಳದಲ್ಲಿ ಸುಂದರವಾದ ಹೂದೋಟದ ವಿನ್ಯಾಸವಿದೆ. ಈ ಆವರಣದೊಳಗೆ ಜಾಗತಿಕ ನಕ್ಷೆಗಳ ಚಿತ್ರಣಗಳನ್ನು ಹೊಂದಿರುವ ಸಮಾಲೋಚನಾ ಕೊಠಡಿಯಿದ್ದು, ಭಾರತೀಯ ಸಂವಿಧಾನದ ಪೀಠಿಕೆಗಳನ್ನು ಕೆತ್ತಿರುವ ಸಚಿವ ಸಂಪುಟ ಕೊಠಡಿಯಿದೆ.

ಈ ಪ್ರಶಾಂತ ನಿವಾಸಲ್ಲಿ ಉಳಿದುಕೊಂಡಿರುವ ಪ್ರಧಾನಿ ಮೋದಿಯವರು, ಅಲ್ಲಿಂದಲೇ ಭಾರತದ ಜಾಗತಿಕ ಪ್ರಭಾವ ಹೆಚ್ಚುವುದನ್ನು ಗಮನಿಸುತ್ತಾ ಬಂದಿದ್ದಾರೆ. ಆದರೆ, ದೇಶದೊಳಗಿನ ಅವರ ಹಲವು ಟೀಕಾಕಾರರು ಮೋದಿಯವರೇ ಭಾರತೀಯ ಸಂವಿಧಾನಕ್ಕೆ ಅಪಾಯ ಒಡ್ಡುವ ಸಾಧ್ಯತೆಗಳಿವೆ ಎಂದಿದ್ದಾರೆ.

ಇದನ್ನೂ ಓದಿ:ಟ್ರೇನ್‌ನಲ್ಲಿ ವೃದ್ಧ ದಂಪತಿಗಳು 22,000 ರೂ. ದಂಡ: ಆದರೆ ಮಗನಿಗೆ 40000 ರೂ. ಪರಿಹಾರ!

ಅಲ್ಲಿನ ವಿಶಾಲ ಹೊರಾಂಗಣದಲ್ಲಿ ಅತಿಥಿಗಳನ್ನು ಸ್ವಾಗತಿಸುವ ಮೋದಿಯವರು, ಭಾರತ ಅಪಾರ ಜಾಗತಿಕ ಗಮನ ಸೆಳೆದಿರುವ ಈ ವರ್ಷಾಂತ್ಯದ ವೇಳೆಗೆ ಜನರಿಗೆ ಭರವಸೆ ನೀಡುತ್ತಿದ್ದಾರೆ. ಭಾರತದ ಜನಸಂಖ್ಯೆ ಈ ವರ್ಷ ಚೀನಾದ ಜನಸಂಖ್ಯೆಯನ್ನು ಮೀರಿ ಬೆಳೆದಿದ್ದು, ಬೀಜಿಂಗ್ ಕುರಿತಂತೆ ಅನಿಶ್ಚಿತತೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಜಾಗತಿಕ ನಾಯಕರು, ಉದ್ಯಮ ಸಲಹೆಗಾರರು, ಹಾಗೂ ಆರ್ಥಿಕ ಸಂಸ್ಥೆಗಳು ಭಾರತವನ್ನು ಚೀನಾಗೆ ಸೂಕ್ತ ಪರ್ಯಾಯ ಆಯ್ಕೆ ಎನ್ನುತ್ತಿದ್ದಾರೆ.

ಭಾರತದಲ್ಲಿ ಅಪಾರ ಸಂಖ್ಯೆಯ ಜನರು ಮತ್ತು ಜಾಗತಿಕ ನಾಯಕರು ನರೇಂದ್ರ ಮೋದಿಯವರು ಇನ್ನೊಂದು ಐದು ವರ್ಷದ ಅವಧಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಭಾವಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ 73 ವರ್ಷದ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಗಳಿದ್ದು, ಅವರ ನೇತೃತ್ವದ ಭಾರತೀಯ ಜನತಾ ಪಾರ್ಟಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗಿದೆ. ಮೋದಿಯವರೂ ತಮ್ಮ ಗೆಲುವಿನ ಕುರಿತು ಅಪಾರ ಭರವಸೆ ಹೊಂದಿದ್ದು, ಅದಕ್ಕೆ ಸಾಮಾನ್ಯ ಭಾರತೀಯರ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿರುವುದು ನೆರವಾಗಲಿದೆ ಎಂದು ಭಾವಿಸಿದ್ದಾರೆ.

ಮೋದಿಯವರ ಪ್ರಕಾರ, ಕಳೆದ ಒಂದು ದಶಕದ ಅವಧಿಯಲ್ಲಿ, ಭಾರತೀಯರ ಆಸೆ ಆಕಾಂಕ್ಷೆಗಳು ಸಾಕಷ್ಟು ಬದಲಾವಣೆಗಳನ್ನು ಹೊಂದಿವೆ. ಕೆನೆಯ ಬಣ್ಣದ ಕುರ್ತಾ ಮತ್ತು ಜಾಕೆಟ್ ಧರಿಸಿ ತನ್ನನ್ನು ತಾನು ಉತ್ತಮವಾಗಿ ತೋರ್ಪಡಿಸುವ ಪ್ರಧಾನಿಯವರು ಭಾರತೀಯರ ಆಕಾಂಕ್ಷೆಗಳನ್ನೂ ಪ್ರತಿನಿಧಿಸುತ್ತಾರೆ.

ಭಾರತದ ನಾಗರಿಕರಿಗೆ ತಮ್ಮ ದೇಶ ಈಗ ಮಹತ್ವದ ಪ್ರಗತಿಯ ಹೊಸ್ತಿಲಲ್ಲಿದೆ ಎಂಬ ಅರಿವಿದೆ ಎಂದು ಮೋದಿ ಭಾವಿಸಿದ್ದಾರೆ. ಅವರು ಈ ಪ್ರಗತಿಯನ್ನು ಇನ್ನಷ್ಟು ವೇಗವಾಗಿಸಲು ಬಯಸುತ್ತಿದ್ದು, ತಮ್ಮನ್ನು ಈ ಹಂತದ ತನಕ ಕರೆತಂದ ಪಕ್ಷವೇ ಮುಂದಿನ ಯಶಸ್ಸನ್ನು ಸಾಧಿಸಲು ಸಮರ್ಥ ಎಂದು ನಂಬಿಕೆ ಇರಿಸಿದ್ದಾರೆ ಎಂದು ಮೋದಿ ಭಾವಿಸಿದ್ದಾರೆ.

ಇದನ್ನೂ ಓದಿ:Terror Attack: ಸೇನಾ ವಾಹನದ ಮೇಲೆ ಉಗ್ರರ ದಾಳಿ, ಐವರು ಯೋಧರು ಹುತಾತ್ಮ

ಇತ್ತೀಚೆಗೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಮೂರು ರಾಜ್ಯಗಳಲ್ಲಿ ಗೆಲುವು ಸಾಧಿಸಿದ ಬಳಿಕ, ಮೋದಿಯವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಪೂರ್ವಾಭ್ಯಾಸ ಎಂದೂ ಬಣ್ಣಿಸಲಾಗಿತ್ತು. ಆ ಮಹತ್ತರ ಚುನಾವಣೆಯಲ್ಲಿ, ಭಾರತದ 94 ಕೋಟಿ ಮತದಾರರು ಮತ ಚಲಾಯಿಸಿ, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೋದಿಯವರು ಏನಾದರೂ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದರೆ, ಇದು ಅವರಿಗೆ ಅಪಾರ ಜನಬೆಂಬಲವಿದೆ ಎನ್ನುವುದಕ್ಕೆ ಸಾಕ್ಷಿಯಾಗಲಿದೆ. ಮೋದಿಯವರ ಬೆಂಬಲಿಗರು ಅವರ ನಾಯಕತ್ವದಲ್ಲಿ ಭಾರತದ ಆರ್ಥಿಕತೆ ಅಭಿವೃದ್ಧಿ ಸಾಧಿಸಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿದೆ ಮತ್ತು ಕೋಟ್ಯಂತರ ಭಾರತೀಯರ ಜೀವನಮಟ್ಟ ಸುಧಾರಿಸಿದೆ ಎಂದಿದ್ದಾರೆ. ಅದರೊಡನೆ, ಸಾರ್ವಜನಿಕ ಭಾಷಣ, ನಡೆಯಲ್ಲೂ ಹಿಂದೂ ಧರ್ಮವನ್ನು ಮುಂದಿಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಮೋದಿಯವರ ನಾಯಕತ್ವಕ್ಕೆ ಪ್ರಮುಖ ವಿರೋಧ ರಾಹುಲ್ ಗಾಂಧಿ ಸೇರಿದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರಿಂದ ಎದುರಾಗುತ್ತದೆ. ವಿಪಕ್ಷಗಳು ಈಗಾಗಲೇ ಇಂಡಿ ಅಲಯನ್ಸ್ (I.N.D.I.A) ಎಂಬ ಒಕ್ಕೂಟವನ್ನು ರಚಿಸಿದ್ದು, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದಾಗಿ ಘೋಷಿಸಿದೆ. ಈ ಒಕ್ಕೂಟದ ಸದಸ್ಯರ ಪ್ರಕಾರ, ಸ್ವತಂತ್ರ ಭಾರತದ ಆರಂಭಿಕ ನಾಯಕರ ಪರಿಕಲ್ಪನೆಗಳಾದ ಜಾತ್ಯಾತೀತತೆ ಭಾರತದಲ್ಲಿ ಅಪಾಯವನ್ನು ಎದುರಿಸುತ್ತಿದೆ. ಟೀಕಾಕಾರರು ಮೋದಿಯವರ ಕಳೆದ ಹತ್ತು ವರ್ಷಗಳ ಆಡಳಿತ ಅವಧಿಯಲ್ಲಿ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲಾಗಿದೆ, ನಾಗರಿಕ ಸಮಾಜವನ್ನು ಹತೋಟಿಯಲ್ಲಿಟಡಲಾಗಿದೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಒಂದು ವೇಳೆ ನರೇಂದ್ರ ಮೋದಿ ಏನಾದರೂ ಮೂರನೇ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿದರೆ, ಅದರಲ್ಲೂ ಅವರ ಪಕ್ಷ ಸ್ಪಷ್ಟ ಬಹುಮತ ಸಾಧಿಸಿದರೆ, ಅವರು ಭಾರತದ ಜಾತ್ಯಾತೀತ ನೀತಿಗಳನ್ನು ಮರಳಿ ತರಲು ಸಾಧ್ಯವಾಗದ ಮಟ್ಟಿಗೆ ಬದಲಾಯಿಸಬಹುದು ಎಂದು ಟೀಕಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮೋದಿಯವರು ಭಾರತವನ್ನು ಹಿಂದೂ ಗಣರಾಜ್ಯ ಎಂದು ಘೋಷಿಸುವಂತೆ ಸಂವಿಧಾನದಲ್ಲಿ ಬದಲಾವಣೆಗಳನ್ನು ತರಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಜಾಪ್ರಭುತ್ವವನ್ನು ಹತ್ತಿಕ್ಕಲಾಗುತ್ತಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದರೂ, ಭಾರತ ಮತ್ತು ವಿದೇಶಗಳಲ್ಲಿರುವ ವೀಕ್ಷಕರಲ್ಲಿ ಕಾಳಜಿ ಮೂಡಿಸಿದೆ. ಕಾರ್ಯತಂತ್ರ ಮತ್ತು ಆರ್ಥಿಕ ಸಹಯೋಗಕ್ಕಾಗಿ ಜಗತ್ತಿನಾದ್ಯಂತ ನಾಯಕರು ಭಾರತದ ಮೇಲೆ ಅಪಾರವಾಗಿ ಅವಲಂಬಿಸಿರುವ ಸಮಯದಲ್ಲಿ ಇಂತಹ ಬೆಳವಣಿಗೆಗಳು ನಡೆಯುತ್ತಿವೆ.

ಇದನ್ನೂ ಓದಿ: ಕಾಡುತ್ತಿದೆ ಕರೋನಾ JN.1 ರೂಪಾಂತರ ಆತಂಕ ! ತಜ್ಞರ ಪ್ರಕಾರ ಯಾರು ಕಡ್ಡಾಯವಾಗಿ ಧರಿಸಲೇ ಬೇಕು ಮಾಸ್ಕ್ !

ಅಪರೂಪವಾಗಿ ಮಾಧ್ಯಮ ಸಂದರ್ಶನ ನೀಡಿರುವ ಮೋದಿಯವರು, ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು, ವಿದೇಶದಲ್ಲಿ ಹತ್ಯೆ ನಡೆಸಿರುವ ಕುರಿತು ಅಮೆರಿಕಾ ಮತ್ತು ಕೆನಡಾಗಳ ಆರೋಪಗಳು, ಸಂವಿಧಾನದ ಬದಲಾವಣೆ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಆದರೆ ಅವರು ಸರ್ಕಾರದ ಆರ್ಥಿಕ ಮತ್ತು ಪ್ರಜಾಪ್ರಭುತ್ವದ ವಿಚಾರಗಳಿಗೆ ಸಂಬಂಧಿಸಿದಂತೆ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಮೋದಿ ಮತ್ತು ಅವರ ಬೆಂಬಲಿಗರು ಭಾರತದಲ್ಲಿ ಪ್ರಜಾಪ್ರಭುತ್ವದ ಹಿಂಜರಿತ ಎಂದು ಆರೋಪಿಸುತ್ತಿರುವವರು ಸಕಲ ಸವಲತ್ತುಗಳನ್ನು ಹೊಂದಿರುವವರಾಗಿದ್ದು, ಅವರು ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಗಮನಿಸುತ್ತಲೆ ಇಲ್ಲ ಎಂದಿದ್ದಾರೆ. ಮೋದಿಯವರ ಬೆಂಬಲಿಗರು, ಮೋದಿ ಸರ್ಕಾರದ ನೀತಿಗಳು ದೀರ್ಘಾವಧಿಯಲ್ಲಿ ಭಾರತೀಯ ರಾಜಕಾರಣ ಮೂಲೆಗುಂಪು ಮಾಡಿದ್ದ ವರ್ಗಗಳನ್ನು ಅಭಿವೃದ್ಧಿ ಪಡಿಸಲು ಪೂರಕವಾಗಿವೆ ಎನ್ನುತ್ತಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟೀಕಾಕಾರರಿಗೆ ಭಾರತದ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು, ಕಳವಳಗಳನ್ನು ವ್ಯಕ್ತಪಡಿಸುವ ಎಲ್ಲ ಹಕ್ಕುಗಳೂ ಇವೆ ಎಂದಿದ್ದಾರೆ. ಆದರೆ, ಅವರು ಇಂತಹ ಆರೋಪಗಳನ್ನು ಕೇವಲ ಟೀಕೆಗೋಸ್ಕರವಷ್ಟೇ ಮಾಡಲಾಗುತ್ತಿದೆ ಎಂದಿದ್ದಾರೆ. ಇದರಲ್ಲಿರುವ ಮೂಲಭೂತ ಸಮಸ್ಯೆಯನ್ನು ಕುರಿತು ಮಾತನಾಡಿರುವ ಮೋದಿಯವರು, ಇಂತಹ ಆರೋಪಗಳು ಭಾರತದ ನಾಗರಿಕರ ಬುದ್ಧಿವಂತಿಕೆಯನ್ನು ಅವಮಾನಿಸುವುದು ಮಾತ್ರವಲ್ಲದೆ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದಂತಹ ಮೌಲ್ಯಗಳನ್ನೂ ಕಡೆಗಣಿಸುತ್ತವೆ ಎಂದಿದ್ದಾರೆ. 

ಪ್ರಧಾನಿ ಮೋದಿಯವರ ಪ್ರಕಾರ, ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರುವ ಕುರಿತ ಮಾತುಗಳು, ಆರೋಪಗಳು ಅನವಶ್ಯಕ ಮತ್ತು ಯಾವುದೇ ಮೌಲ್ಯ ಹೊಂದಿಲ್ಲ. ಅಲ್ಲದೆ, ಸರ್ಕಾರ ಸಂವಿಧಾನದಲ್ಲಿ ಯಾವುದೇ ಬದಲಾವಣೆಗಳನ್ನು ತರದೆ, ಕೇವಲ ಜನರನ್ನು ಭಾಗವಹಿಸುವಂತೆ ಮಾಡುವ ಮೂಲಕ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಇಂತಹ ಬದಲಾವಣೆಗಳಲ್ಲಿ ಸ್ವಚ್ಛ ಭಾರತ ಯೋಜನೆ, ಬಹುತೇಕ ನೂರು ಕೋಟಿ ಜನರಿಗೆ ಉತ್ತಮ ಸಂವಹನ ಸಾಧ್ಯವಾಗುವಂತೆ ಮಾಡಿದ ಡಿಜಿಟಲ್ ವ್ಯವಸ್ಥೆಗಳೂ ಸೇರಿವೆ.

ಆಗಸ್ಟ್ 2023ರಲ್ಲಿ, ಭಾರತ ತನ್ನ ಮಹತ್ವಾಕಾಂಕ್ಷಿ ಮಾನವರಹಿತ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಪ್ರದೇಶದಲ್ಲಿ ಇಳಿಯುವಂತೆ ಮಾಡಿತು. ಅದಾದ ಕೆಲ ಸಮಯದಲ್ಲೇ ಭಾರತ ಜಿ20 ಸಮಾವೇಶವನ್ನು ಆಯೋಜಿಸಿ, ಜಾಗತಿಕ ಆರ್ಥಿಕ ಶಕ್ತಿಗಳನ್ನು ತನ್ನೆಡೆಗೆ ಕರೆಸಿಕೊಂಡಿತು. ಈ ಸಮಾರಂಭದ ಮೂಲಕ ಭಾರತದ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಗೌರವವನ್ನು ಹೆಚ್ಚಿಸಲು ಉದ್ದೇಶಿಸಿತ್ತು. ಶೃಂಗಸಭೆಯ ಸಂದರ್ಭದಲ್ಲಿ, ನವದೆಹಲಿಯಾದ್ಯಂತ ಜಿ20 ಸಂಬಂಧಿತ ಭಿತ್ತಿಚಿತ್ರಗಳಲ್ಲಿ ಮೋದಿಯವರ ಚಿತ್ರಗಳನ್ನು ಅಳವಡಿಸಲಾಗಿತ್ತು.

ಇದನ್ನೂ ಓದಿ: ಖರ್ಗೆ, ರಾಹುಲ್, ನಿತೀಶ್, ಕೇಜ್ರಿವಾಲ್... I.N.D.I.A. ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?

ಭಾರತ ವಿವಿಧ ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನು ತಾನು ಜಗತ್ತಿಗೆ ತಿಳಿ ಹೇಳುವ, ಅಥವಾ 'ವಿಶ್ವಗುರು' ಎನ್ನುವ ಪರಿಕಲ್ಪನೆಯನ್ನು ಹೊಂದಿದ್ದು, ಇದರಲ್ಲಿ ಡಿಜಿಟಲ್ ಅಂತರವನ್ನು ತಗ್ಗಿಸುವ, ಹವಾಮಾನ ವೈಪರೀತ್ಯಗಳನ್ನು ಎದುರಿಸಬಲ್ಲ ಧಾನ್ಯಗಳನ್ನು ಬೆಳೆಯುವ ಪ್ರಯತ್ನಗಳು ಸೇರಿವೆ.

ಅದರೊಡನೆ, ಭಾರತ 'ವಾಯ್ಸ್ ಆಫ್ ದ ಗ್ಲೋಬಲ್ ಸೌತ್' ಎಂಬ ಸಮಾವೇಶವನ್ನೂ ಆಯೋಜಿಸಿ, ಆಫ್ರಿಕನ್ ಒಕ್ಕೂಟವನ್ನು ಜಿ20ಯ ಶಾಶ್ವತ ಸದಸ್ಯನಾಗಿ ನೇಮಿಸಬೇಕೆಂದು ಪರಿಣಾಮಕಾರಿಯಾಗಿ ಆಗ್ರಹಿಸಿತು. ಪ್ರಧಾನಿ ಮೋದಿಯವರು ಭಾರತದ ದೀರ್ಘಕಾಲೀನ ಅಲಿಪ್ತ ನೀತಿಯ ಅನುಸಾರವಾಗಿಯೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಡನೆ ಉತ್ತಮ ಸಂಬಂಧ ನಿರ್ವಹಿಸಿದರು. ಅದರೊಡನೆ, ಜೂನ್ ತಿಂಗಳಲ್ಲಿ ಅಮೆರಿಕಾ ಅಧ್ಯಕ್ಷರ ಆಹ್ವಾನದ ಮೇರೆಗೆ ಸ್ಟೇಟ್ ವಿಸಿಟ್ ನೀಡಿದ ಮೋದಿಯವರು ಅಧ್ಯಕ್ಷ ಜೋ ಬಿಡೆನ್ ಅವರೊಡನೆ ಉತ್ತಮ ಬಾಂಧವ್ಯ ಸಾಧಿಸಿ, ಜೆಟ್ ಇಂಜಿನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್ ಸೇರಿದಂತೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಿದರು.

ಮೋದಿಯವರು ಜಗತ್ತು ಪರಸ್ಪರ ಸಂಪರ್ಕಿತವಾಗಿರಬೇಕು ಮತ್ತು ಅವಲಂಬಿತವಾಗಿರಬೇಕು ಎಂದು ಬಯಸಿದ್ದು, ಭಾರತದ ಹೊಂದಿಕೊಳ್ಳುವ ಮತ್ತು ಸರಳವಾದ ವಿದೇಶಾಂಗ ನೀತಿಗಳೆಡೆಗೆ ಬೆಳಕು ಚೆಲ್ಲಿದ್ದಾರೆ. ಓರ್ವ ಅನಾಮಿಕ ಹಿರಿಯ ಸರ್ಕಾರಿ ಅಧಿಕಾರಿ ಒಬ್ಬರ ಪ್ರಕಾರ, ಇಂದಿನ ಬಹುಧ್ರುವೀಯ ಮತ್ತು ಬಹುಪಕ್ಷೀಯ ಜಗತ್ತಿನಲ್ಲಿ ಭಾರತದ ಸ್ಥಾನ ಅತ್ಯಂತ ಮಧುರವಾಗಿದೆ.

ಮೋದಿಯವರ ಪ್ರಕಾರ, ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತದ ಪ್ರಥಮ ಆದ್ಯತೆ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಾಗಿವೆ. ಈ ವಿಧಾನ ಭಾರತಕ್ಕೆ ವಿದೇಶಗಳೊಡನೆ ವ್ಯವಹರಿಸುವಾಗ ಪರಸ್ಪರರ ಹಿತಾಸಕ್ತಿಗಳನ್ನು ಅರ್ಥೈಸಿಕೊಂಡು, ಭೌಗೋಳಿಕ ರಾಜಕೀಯದ ಪರಿಸ್ಥಿತಿಗೆ ಅನುಗುಣವಾಗಿ ಮುನ್ನಡೆಯಲು ನೆರವಾಗುತ್ತದೆ.

ಭಾರತ ಅಮೆರಿಕಾದೊಡನೆ ಸಹಯೋಗ ಸ್ಥಾಪಿಸುವ ಸಾಧ್ಯತೆಗಳ ಕುರಿತು ಕುರಿತು ಪ್ರಶ್ನಿಸಿದಾಗ ಮೋದಿಯವರು ಇತ್ತೀಚೆಗೆ ಫೆಡರಲ್ ನ್ಯಾಯಾಂಗ ನಡೆಸಿರುವ ಆರೋಪಗಳ ಹೊರತಾಗಿಯೂ ಎರಡೂ ದೇಶಗಳ ನಡುವಿನ ಸಂಬಂಧ ಸುಧಾರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾದ ಫೆಡರಲ್ ನ್ಯಾಯಾಂಗ ಭಾರತ ಸರ್ಕಾರದ ಅಧಿಕಾರಿ ಒಬ್ಬರು ಅಮೆರಿಕಾದಲ್ಲಿ ಓರ್ವ ಪ್ರಮುಖ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ನಡೆಸಲು ಯೋಜನೆ ರೂಪಿಸಿದ್ದರು ಎಂದು ಆರೋಪಿಸಿತ್ತು. ಇದೆಲ್ಲದರ ಹೊರತಾಗಿಯೂ, ಭಾರತ ಮತ್ತು ಅಮೆರಿಕಾ ಸಂಬಂಧಗಳು ಧನಾತ್ಮಕವಾಗಿವೆ ಎಂದು ಮೋದಿ ಭಾವಿಸುತ್ತಾರೆ.

ಭಾರತ ಮತ್ತು ಅಮೆರಿಕಾಗಳ ನಡುವಿನ ಸಂಬಂಧವನ್ನು ಹೇಗಿದೆ ಎಂದು ತಾನು ನಿರ್ಧರಿಸಲು ಹೋಗುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ, ಭಾರತ ಮತ್ತು ಅಮೆರಿಕಾಗಳ ನಡುವಿನ ಪ್ರಸ್ತುತ ಸಂಬಂಧ ಹೆಚ್ಚಿನ ಸಂವಹನ, ಪರಸ್ಪರರ ನಡುವೆ ಉತ್ತಮ ಅರ್ಥೈಸಿಕೊಳ್ಳುವಿಕೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚಿನ ಉತ್ತಮ ಸ್ನೇಹದಿಂದ ರೂಪಿತವಾಗಿದೆ ಎಂದಿದ್ದಾರೆ.

ಅಮೆರಿಕಾ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆ ಈಗ ಕಡಿಮೆಯಾಗಿರುವ ಕುರಿತು ನೇರವಾಗಿ ಮಾತನಾಡುವುದನ್ನು ಮೋದಿ ಇಚ್ಛಿಸಿಲ್ಲ. ಈ ವಿಚಾರ ಅಮೆರಿಕಾದ ನಾಗರಿಕರು ಮತ್ತು ಸರ್ಕಾರಕ್ಕೆ ಸಂಬಂಧಿಸಿದ್ದು ಎಂದವರು ಹೇಳಿದ್ದಾರೆ.

ಇಸ್ರೇಲ್ - ಹಮಾಸ್ ಬಿಕ್ಕಟ್ಟಿನ ಕುರಿತು ಮಾತನಾಡುವಾಗಲೂ ಮೋದಿಯವರು ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರವನ್ನು ಟೀಕಿಸಿಲ್ಲ. ನೆತನ್ಯಾಹು ಸರ್ಕಾರದೊಡನೆ ಭಾರತ ತಂತ್ರಜ್ಞಾನ ಸಹಯೋಗ ಹೊಂದಿದ್ದು, ಬಿಜೆಪಿಯ ರೀತಿಯಲ್ಲಿ ಪ್ರಸ್ತುತ ಇಸ್ರೇಲ್ ಆಡಳಿತವೂ ಬಲಪಂಥೀಯ ರಾಷ್ಟ್ರೀಯವಾದಿಯಾಗಿದೆ. ಮೋದಿಯವರು ಭಾರತ ಗಾಜಾ ಪಟ್ಟಿಗೆ ಮಾನವೀಯ ನೆರವು ಕಳುಹಿಸಿದೆ ಎಂದಿದ್ದು, ದ್ವಿರಾಷ್ಟ್ರ ಸಿದ್ಧಾಂತವನ್ನು ಭಾರತ ಬೆಂಬಲಿಸುತ್ತದೆ ಎಂದಿದ್ದಾರೆ. ಗಮನಾರ್ಹ ವಿಚಾರವೆಂದರೆ, ಐತಿಹಾಸಿಕವಾಗಿ ಭಾರತ ಪ್ಯಾಲೆಸ್ತೀನಿಯನ್ ಉದ್ದೇಶದ ಬೆಂಬಲಿಗನಾಗಿದ್ದು, ಮೋದಿಯವರ ಅವಧಿಯಲ್ಲಿ ಭಾರತ ಇಸ್ರೇಲ್ ಜೊತೆಗೆ ಉತ್ತಮ ಬಾಂಧವ್ಯ ಸಾಧಿಸಿದೆ. ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡುವ ಮೂಲಕ, ಅಲ್ಲಿಗೆ ತೆರಳಿದ ಮೊದಲ ಭಾರತೀಯ ಪ್ರಧಾನಿ ಎನಿಸಿದರು.

ಆಗಸ್ಟ್ ತಿಂಗಳಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿಯವರು ಸ್ವಾತಂತ್ರ್ಯದ ನೂರನೇ ವರ್ಷಾಚರಣೆಯ ವೇಳೆಗೆ, ಅಂದರೆ 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಲಿದೆ ಎಂದು ಭರವಸೆ ನೀಡಿದರು. ಆದರೆ, ಈ ಸಾಧನೆ ನಡೆಸಬೇಕಾದರೆ ಭಾರತ ಈಗಿನ 6-7% ಪ್ರಗತಿಯ ದರಕ್ಕಿಂತಲೂ ಸಾಕಷ್ಟು ಹೆಚ್ಚಿನ ವೇಗ ಸಾಧಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಹಲವಾರು ಭಾರತೀಯರು ಈ ದೃಷ್ಟಿಕೋನದ ಕುರಿತು ಆಶಾಭಾವನೆ ಹೊಂದಿದ್ದರೆ, ಇತರರು ಈ ಹಿಂದಿನ ಸರ್ಕಾರಗಳ ರೀತಿಯಲ್ಲೇ ಈ ಭರವಸೆಗಳೂ ಪೂರ್ಣಗೊಳ್ಳದಿದ್ದರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಈ ವರ್ಷ ಅತಿ ಹೆಚ್ಚು ಸುದ್ದಿಯಲ್ಲಿದ್ದ ದೇಶದ ಟಾಪ್ 5 ರಾಜಕಾರಣಿಗಳು ಯಾರು ಗೊತ್ತೆ..? ಇಲ್ಲಿದೆ ವಿವರ

ಮೋದಿಯವರು ತಾನು ಅಧಿಕಾರಕ್ಕೆ ಬಂದ ಬಳಿಕ ಭಾರತದ ಪ್ರಗತಿಯನ್ನು ಪ್ರಸ್ತಾಪಿಸಿದ್ದು, ಜಗತ್ತಿನ ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದ, ವಿದೇಶಿ ಹೂಡಿಕೆಗಳ ಮೇಲೆ ಅಪಾರವಾಗಿ ಅವಲಂಬಿತವಾಗಿದ್ದ ಭಾರತದ ಆರ್ಥಿಕತೆ, ಇಂದು ಜಗತ್ತಿನ ಅಗ್ರ ಐದು ಆರ್ಥಿಕತೆಗಳ ಸಾಲಿಗೆ ಸೇರಿದೆ ಎಂದಿದ್ದಾರೆ. ಮೋದಿಯವರ ಆಡಳಿತದಲ್ಲಿ, ಅಪಾರ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಾಧಿತವಾಗಿದೆ. ಹತ್ತು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ, ಭಾರತದ ವಿಮಾನ ನಿಲ್ದಾಣಗಳ ಸಂಖ್ಯೆ 74ರಿಂದ 149ಕ್ಕೆ ತಲುಪಿದೆ. 248 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದ ಮೆಟ್ರೋ ಸೇವೆ ಈಗ 905 ಕಿಲೋಮೀಟರ್‌ಗಳಿಗೆ ವಿಸ್ತರಿಸಿದೆ. ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ, ವೈದ್ಯಕೀಯ ಕಾಲೇಜುಗಳ ಸಂಖ್ಯೆ 387ರಿಂದ 706ಕ್ಕೆ ಹೆಚ್ಚಳ ಕಂಡಿದೆ.

ಆ್ಯಪಲ್, ಅದರ ಪೂರೈಕೆದಾರ ಫಾಕ್ಸ್‌ಕಾನ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಸಂಸ್ಥೆಗಳು ಜಗತ್ತಿನ ಅತಿದೊಡ್ಡ ಉತ್ಪಾದನಾ ಪ್ರದೇಶವಾದ ಚೀನಾದಿಂದ ಹೊರತಾಗಿ ತಮ್ಮ ನೆಲೆಯನ್ನು ಹೊಂದುವ ಯೋಜನೆಯ ಭಾಗವಾಗಿ ಭಾರತದಲ್ಲೂ ತಮ್ಮ ಕಾರ್ಯಾಚರಣೆಯನ್ನು ಆರಂಭಿಸಿವೆ. ಚೀನಾದ ರೀತಿಯಲ್ಲೇ ಭಾರತದಲ್ಲೂ ಆರ್ಥಿಕ ಅಭಿವೃದ್ಧಿ ಸಾಧಿತವಾಗುವ ನಿರೀಕ್ಷೆಗಳಿವೆ. ಇದಕ್ಕೆ ಕ್ಷಿಪ್ರ ಪ್ರಗತಿ, ತಂತ್ರಜ್ಞಾನದ ಅಭಿವೃದ್ಧಿ, ಮತ್ತು ಉತ್ಪಾದನೆ ಮತ್ತು ನಿರ್ಮಾಣ ಸೇರಿದಂತೆ ವಿವಿಧ ವಲಯಗಳಲ್ಲಿ ಉದ್ಯೋಗ ಸೃಷ್ಟಿಗಳು ನೆರವಾಗಲಿವೆ.

ಪ್ರಧಾನಿ ಮೋದಿಯವರು ಭಾರತದ ಆಡಳಿತವನ್ನು ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯಕ್ಕೆ ಹೆಸರಾಗಿದ್ದು, ಆ ಮೂಲಕ ಅವರು ಆರ್ಥಿಕ ಸುಧಾರಣೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮತ್ತು ಕಲ್ಯಾಣ ಯೋಜನೆಗಳನ್ನು ಭಾರತದ ಅಪಾರ ಜನಸಂಖ್ಯೆಗೆ ತಲುಪಿಸಲು ಸಾಧ್ಯವಾಯಿತು. ಇದರಲ್ಲಿ ನೇರ ನಗದು ವರ್ಗಾವಣೆ, ಮತ್ತು ಕೋಟ್ಯಂತರ ಭಾರತೀಯರಿಗೆ ನೆರವಾಗುವ, ಅತ್ಯವಶ್ಯಕವಾದ, ಉಚಿತ ಪಡಿತರ ವಿತರಣೆಯಂತಹ ಯೋಜನೆಗಳೂ ಸೇರಿವೆ.

ಭಾರತದ ಪ್ರಬಲ ಆರ್ಥಿಕ ಅಭಿವೃದ್ಧಿ ಮತ್ತು ಮೂಲಭೂತ ವ್ಯವಸ್ಥೆಗಳ ಮೇಲೆ ಅಪಾರ ಹೂಡಿಕೆಯ ಹೊರತಾಗಿಯೂ, ಭಾರತ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಸ್ಯೆ ಚುನಾವಣೆಗಾಗಿ ದೇಶಾದ್ಯಂತ ಪ್ರಚಾರ ನಡೆಸಲು ಮುಂದಾಗಿರುವ ಬಿಜೆಪಿಗೆ ತೊಡಕಾಗಿ ಪರಿಣಮಿಸಿದೆ. ಪ್ರಸ್ತುತ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ಲಭ್ಯ ಮಾಹಿತಿಗಳು ಅಪೂರ್ಣವಾಗಿವೆ ಎನ್ನಲಾಗಿದ್ದು, ವ್ಯಾಪಕವಾಗಿ ಉಲ್ಲೇಖಿಸಲಾಗುತ್ತಿರುವ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮಾಹಿತಿಯ ಪ್ರಕಾರ, ಭಾರತದ ನಿರುದ್ಯೋಗ ದರ ಬಹುತೇಕ 9%ದ ಸನಿಹದಲ್ಲಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಈ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಟೀಕಿಸಿದ್ದು, ಅಸಮಾನತೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷದಲ್ಲೇ ಇರುವ ಕಳವಳಗಳನ್ನು ಎತ್ತಿ ತೋರಿಸಿದೆ.

ಆದರೆ, ಮೇಲ್ಕಂಡ ನಿರುದ್ಯೋಗ ಸಂಬಂಧಿತ ಮಾಹಿತಿಯ ಮೇಲೆ ಅವಲಂಬಿತವಾಗುವ ಬದಲು, ಪ್ರಧಾನಿ ನರೇಂದ್ರ ಮೋದಿಯವರು ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಯನ್ನು ಉಲ್ಲೇಖಿಸಿದ್ದಾರೆ. ಇದು ಭಾರತದಲ್ಲಿ ನಿರುದ್ಯೋಗ ದರ ನಿರಂತರವಾಗಿ ಇಳಿಯುತ್ತಿರುವುದನ್ನು ಸೂಚಿಸಿದೆ ಎಂದು ಮೋದಿ ಹೇಳಿದ್ದಾರೆ. ಉತ್ಪಾದಕತೆ ಮತ್ತು ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿಯನ್ನು ಗಮನಿಸಿದಾಗ, ಭಾರತದಂತಹ ಬೃಹತ್ತಾದ, ಯುವ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಉದ್ಯೋಗ ಸೃಷ್ಟಿ ವೇಗ ಪಡೆದುಕೊಳ್ಳುತ್ತಿದೆ ಎಂಬುದು ತಿಳಿದುಬರುತ್ತದೆ ಎಂದಿದ್ದಾರೆ.

ಭ್ರಷ್ಟಾಚಾರ, ಆಡಳಿತ ಅಡೆತಡೆಗಳು, ಹಾಗೂ ಯುವ ತಲೆಮಾರಿನಲ್ಲಿರುವ ಕೌಶಲ್ಯಗಳ ಕೊರತೆ ಭಾರತದಲ್ಲಿ ಉದ್ಯಮ ನಡೆಸಲು ಇರುವ ತೊಡಕುಗಳು ಎಂದು ದೇಶೀಯ ಮತ್ತು ವಿದೇಶೀ ಕಂಪನಿಗಳು ಅಭಿಪ್ರಾಯ ವ್ಯಕ್ತಪಡಿಸಿವೆ. ಈ ಸವಾಲುಗಳು, ಒಂದಷ್ಟು ಭಯಗಳು ತನ್ನ ಉತ್ಪಾದನಾ ವಲಯದ ಮೂಲಕ ಚೀನಾ ಸಾಧಿಸಿರುವ ಭಾರೀ ಯಶಸ್ಸನ್ನು ಭಾರತ ಸಾಧಿಸಲು ಅಡ್ಡಿಯಾಗಬಹುದು.

ಚೀನಾದೊಡನೆ ಭಾರತದ ಹೋಲಿಕೆಯ ಕುರಿತು ಪ್ರಶ್ನಿಸಿದಾಗ ಮೋದಿಯವರು ಭಾರತವನ್ನು ಇತರ ಪ್ರಜಾಪ್ರಭುತ್ವ ರಾಷ್ಟ್ರಗಳೊಡನೆ ಹೋಲಿಸುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೋದಿಯವರ ಪ್ರಕಾರ, ಒಂದು ವೇಳೆ ಭಾರತದಲ್ಲಿವೆ ಎಂದು ಆರೋಪಿಸಲಾಗಿರುವ ಸಮಸ್ಯೆಗಳು ಅಷ್ಟು ತೀವ್ರವಾಗಿದ್ದರೆ, ಭಾರತ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ರೂಪುಗೊಂಡಿರುತ್ತಿರಲಿಲ್ಲ. ಇಂತಹ ಕಳವಳಗಳು ಆರೋಪಿಸುವವರ ಗ್ರಹಿಕೆಗಳಿಂದ ರೂಪುಗೊಂಡಿದ್ದು, ಈ ಗ್ರಹಿಕೆಗಳು ಬದಲಾಗಬೇಕಾದರೆ ಅದಕ್ಕೆ ಸಮಯ ತಗಲುತ್ತದೆ ಎಂದು ಅವರು ಭಾವಿಸಿದ್ದಾರೆ.

ಭಾರತೀಯ ಮೂಲದ ಸಿಇಒಗಳು ಗೂಗಲ್ ಮತ್ತು ಮೈಕ್ರೋಸಾಫ್ಟ್‌ ನಂತಹ ಕಂಪನಿಗಳ ಚುಕ್ಕಾಣಿ ಹಿಡಿದಿರುವುದು ಭಾರತೀಯರಲ್ಲಿ ಕೌಶಲ್ಯದ ಕೊರತೆ ಇಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಮೋದಿ ಹೇಳುತ್ತಾರೆ. ಆದರೆ, ಕೆಲವು ತಜ್ಞರು ಭಾರತದಲ್ಲಿ ಸೀಮಿತ ಅವಕಾಶಗಳಿರುವ ಕಾರಣದಿಂದ ಕೌಶಲ್ಯ ಹೊಂದಿರುವ ಭಾರತೀಯರು ಅವಕಾಶಗಳನ್ನು ಹುಡುಕಿಕೊಂಡು ವಿದೇಶಗಳಿಗೆ ತೆರಳುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿರುವ ಈ ಕೋಟೆಯೊಳಗೆ ಈಗಲೂ ನಿಗೂಢ ನಿಧಿ ಇದೆಯಂತೆ..!

ಮೋದಿಯವರ ಪ್ರಕಾರ, ಈಗಾಗಲೇ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನು ಮರಳಿ ಬರುವಂತೆ ಒತ್ತಾಯಿಸುವ ಬದಲು, ಜನರು ಭಾರತದಲ್ಲಿ ಹೂಡಿಕೆ ಮಾಡುವಂತಹ, ಭಾರತಕ್ಕೆ ಕೊಡುಗೆ ನೀಡುವಂತಹ ವಾತಾವರಣವನ್ನು ದೇಶದೊಳಗೆ ನಿರ್ಮಿಸಬೇಕು.

ಮೋದಿಯವರ ಸರ್ಕಾರದ ಅಧಿಕಾರಿಗಳು ಈಗಾಗಲೇ ಕಾರ್ಮಿಕ ಕಾನೂನುಗಳ ಉದಾರೀಕರಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ಪ್ರಧಾನಿಯವರೊಡನೆ ಚರ್ಚಿಸಿದ್ದು, ಮೋದಿಯವರು ಮೂರನೇ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದರೆ ಈ ಕಾನೂನುಗಳು ಜಾರಿಗೆ ಬರುವ ಸಾಧ್ಯತೆಗಳಿವೆ.

ಭಾರತ ಸರ್ಕಾರ ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ಜನರು ಭಾರತಕ್ಕೆ ಆಗಮಿಸಿ, ಇಲ್ಲಿ ಸುಗಮವಾಗಿ ನೆಲೆಸುವಂತೆ ಮಾಡುವಂತಹ, ಅವರನ್ನು ಸ್ವಾಗತಿಸುವಂತಹ ವ್ಯವಸ್ಥೆಯನ್ನು ರೂಪಿಸಲು ಉದ್ದೇಶಿಸಿದೆ. ಸರ್ಕಾರ ಎಲ್ಲರನ್ನೂ ಒಳಗೊಂಡ, ಜಾಗತಿಕವಾಗಿ ಗುರುತಿಸಲ್ಪಡುವ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿದ್ದು, ಜನರು ಪ್ರಕ್ರಿಯೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ನೆರವಾಗಲಿದೆ.

ಪ್ರಧಾನಿ ಮೋದಿಯವರ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಪ್ರಬಲ ಎದುರಾಳಿಯಾದ ರಾಹುಲ್ ಗಾಂಧಿ ಸೇರಿದಂತೆ, ಇತರ ವಿಪಕ್ಷಗಳ ಮುಖಂಡರು ಮೋದಿಯವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಭಾರತದ ಪ್ರಜಾಪ್ರಭುತ್ವದ ಪರಿಸ್ಥಿತಿ ಏನಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮೋದಿಯವರ ಆಡಳಿತದ ಅವಧಿಯಲ್ಲಿ, ಕೇಂದ್ರ ಸರ್ಕಾರ ನಾಗರಿಕ ಸಮಾಜದ ಸಂಘಟನೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣಗಳನ್ನು ಹೇರಿದ್ದು, ಅವುಗಳ ಮೇಲಿನ ಹಣ ಹೂಡಿಕೆಯ ಮೇಲೆ ಬಲವಾದ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರೊಡನೆ, ರಿಪೋರ್ಟರ್ಸ್ ವಿದೌಟ್ ಬಾರ್ಡರ್‌ನಂತಹ ವಾಚ್ ಡಾಗ್ ಗುಂಪುಗಳು ಭಾರತದಲ್ಲಿ ಪತ್ರಕರ್ತರ ಮೇಲೆ ರಾಜಕೀಯ ಮತ್ತು ಆರ್ಥಿಕ ಒತ್ತಡಗಳು ಹೆಚ್ಚುತ್ತಿವೆ ಎಂದು ಅಭಿಪ್ರಾಯ ಪಟ್ಟಿವೆ. ಭಾರತದ ಮಾಧ್ಯಮ ಜಾಲ ಜಗತ್ತಿನಲ್ಲೇ ಅತ್ಯಂತ ವ್ಯಾಪಕ ಮಾಧ್ಯಮ ಜಾಲಗಳಲ್ಲೊಂದಾಗಿದೆ.

ಈ ವರ್ಷ, ರಾಹುಲ್ ಗಾಂಧಿ ಮತ್ತು ಇತರ ಸಂಸತ್ ಸದಸ್ಯರು ವರದಿಯೊಂದರ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ, ಅದಾನಿ ಗುಂಪಿನ ಕುರಿತು ಕಳವಳ ವ್ಯಕ್ತಪಡಿಸಿದರು. ಅದಾನಿ ಸಮೂಹ ಪ್ರಧಾನಿ ಮೋದಿಯವರ ರಾಜ್ಯವಾದ ಗುಜರಾತ್‌ನ ಉದ್ಯಮ ಸಮೂಹವಾಗಿದ್ದು, ರಾಜಕೀಯ ವಲಯಕ್ಕೂ ಆಪ್ತವಾಗಿದೆ. ಈ ಸಮೂಹಕ್ಕೆ ಸಂಬಂಧಿಸಿದ ವಿವಾದ ದೇಶದಲ್ಲಿ ಹೆಚ್ಚಿನ ಗಮನ ಸೆಳೆದಿದ್ದು, ಒಂದು ಸಣ್ಣ ಪ್ರಭಾವಿ ಉದ್ಯಮ ಕುಟುಂಬ ಹೇಗೆ ಭಾರತದ ಆರ್ಥಿಕತೆಯ ಮೇಲೆ ಪ್ರಭಾವ ಬೀರುತ್ತದೆ ಎಂಬ ಕಳವಳಗಳನ್ನು ಮೂಡಿಸಿದೆ.

ಬಿಜೆಪಿಯ ಟೀಕಾಕಾರರು ಬಿಜೆಪಿ ಆಡಳಿತದ ಅವಧಿಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ದ್ವೇಷ ಭಾಷಣಗಳು ಜಾಸ್ತಿಯಾಗಿವೆ ಎಂದು ಆರೋಪಿಸಿದ್ದು, ಬಿಜೆಪಿಯಲ್ಲಿ ಯಾವುದೇ ಮುಸ್ಲಿಂ ಸಂಸತ್ ಸದಸ್ಯರಾಗಲಿ, ಕೇಂದ್ರ ಸಚಿವರಾಗಲಿ ಇಲ್ಲ ಎಂದು ಆರೋಪಿಸಿದ್ದಾರೆ.

ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಭವಿಷ್ಯದ ಕುರಿತ ಪ್ರಶ್ನೆಗಳು ಮೂಡಿದಾಗ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪಾರ್ಸಿ ಸಮುದಾಯದ ಆರ್ಥಿಕ ಸಾಧನೆಗಳ ಕುರಿತು ಮಾತನಾಡಿದ್ದರು. ಭಾರತದ ಅತ್ಯಂತ ಸಣ್ಣ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯವಾದ ಪಾರ್ಸಿಗಳು ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಮೋದಿ ಅಭಿಪ್ರಾಯ ಪಡುತ್ತಾರೆ.

ಮೋದಿಯವರು ಜಗತ್ತಿನ ವಿವಿಧ ಭಾಗಗಳಲ್ಲಿ ನಿರಂತರವಾಗಿ ದಾಳಿಗೊಳಗಾದ ಪಾರ್ಸಿಗಳು ಭಾರತದಲ್ಲಿ ಸುರಕ್ಷಿತ ನೆಲೆ ಕಂಡುಕೊಂಡು, ಅಭಿವೃದ್ಧಿ ಸಾಧಿಸಿದ್ದಾರೆ ಎಂದಿದ್ದಾರೆ. ಇದು ಭಾರತದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಭೇದಭಾವ ಇಲ್ಲವೆನ್ನುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ. ಅವರು ಬಹುತೇಕ 20 ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯದ ಕುರಿತು ನೇರವಾಗಿ ಏನನ್ನೂ ಹೇಳಿಲ್ಲ.

ಇನ್ನು ವಿರೋಧಿಗಳ ಕುರಿತು ಮೋದಿ ಸರ್ಕಾರ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆಯೇ ಎಂಬ ಪ್ರಶ್ನೆಗೆ ಮೋದಿಯವರು ನಗುವಿನಿಂದಲೇ ಉತ್ತರಿಸಿದ್ದಾರೆ.

ಮೋದಿಯವರ ಪ್ರಕಾರ, ಭಾರತದಲ್ಲಿ ಒಂದಷ್ಟು ವ್ಯಕ್ತಿಗಳು ಮತ್ತು ಸಂಸ್ಥೆಗಳ ಜಾಲ ಕಾರ್ಯಾಚರಿಸುತ್ತಿದ್ದು, ಅವರು ಭಾರತದಲ್ಲಿರುವ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು, ಸರ್ಕಾರವನ್ನು ಅನಾವಶ್ಯಕವಾಗಿ ಟೀಕಿಸುತ್ತಿದ್ದಾರೆ ಎಂದು ಆರೋಪ ಹೊರಿಸಿದ್ದಾರೆ. ಅಂತಹ ವ್ಯಕ್ತಿಗಳು ಲೇಖನಗಳ ಮೂಲಕ, ಟಿವಿ ವಾಹಿನಿಗಳಲ್ಲಿ, ಸಾಮಾಜಿಕ ಜಾಲತಾಣಗಳ ವೇದಿಕೆಗಳಲ್ಲಿ, ವೀಡಿಯೋಗಳಲ್ಲಿ, ಟ್ವೀಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅವರಿಗೆ ಆ ರೀತಿ ನಡೆದುಕೊಳ್ಳಲು ಎಲ್ಲ ಹಕ್ಕುಗಳೂ ಇವೆ ಎಂದ ಮೋದಿಯವರು, ಅಂತಹ ಸುಳ್ಳು ಆರೋಪಗಳಿಗೆ ವಾಸ್ತವತೆಯ ಆಧಾರದಲ್ಲಿ ಉತ್ತರ ಕೊಡುವ ಹಕ್ಕು ಇತರರಿಗೂ ಇದೆ ಎನ್ನುತ್ತಾರೆ.

ಮೋದಿಯವರು ಹಿಂದಿನ ಕಾಲದಿಂದಲೂ ಭಾರತಕ್ಕೆ ಬಂದ ವಿದೇಶೀಯರು ನಮ್ಮ ಸಾಮರ್ಥ್ಯ ಮತ್ತು ಶಕ್ತಿಗಳನ್ನು ಗುರುತಿಸುತ್ತಾ ಬಂದಿದ್ದರು ಎಂದು ಭಾರತದ ಗತ ವೈಭವವನ್ನು ಸ್ಮರಿಸುತ್ತಾರೆ. ಒಂದು ವೇಳೆ ಈಗ ಕೇಂದ್ರ ಸರ್ಕಾರದ ಕಾರ್ಯವೈಖರಿಯ ಕುರಿತು ಅನುಮಾನ, ಅಸಮಾಧಾನಗಳನ್ನು ಹೊಂದಿರುವವರೂ ಭವಿಷ್ಯದಲ್ಲಿ ಅವರ ಊಹೆಗಳು ಸುಳ್ಳಾಗುವುದನ್ನು ಒಪ್ಪಿಕೊಳ್ಳುತ್ತಾರೆ ಎಂದು ಮೋದಿ ಆಶಾ ಭಾವ ಹೊಂದಿದ್ದಾರೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News