ಬಿಜೆಪಿಯವರು ಮಾಡುತ್ತಿರುವ ರಾಮಜಪ ಅಧಿಕ್ಕಾರಕ್ಕಾಗಿ ಮಾತ್ರ: HD Kumaraswamy

ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದರೆ, ನಾನಾಗಲಿ, ನನ್ನ ಕುಟುಂಬವಾಗಲಿ ಈಗ ದೇಶದಲ್ಲಿ ಕೆಲವರಿಂದ ನಡೆಯುತ್ತಿರುವ ಧಾರ್ಮಿಕ ಭ್ರಷ್ಟಾಚಾರದಂಥ ಕೃತ್ಯ ಮಾಡಿಲ್ಲ- ಎಚ್.ಡಿ. ಕುಮಾರಸ್ವಾಮಿ

Written by - Yashaswini V | Last Updated : Feb 17, 2021, 02:20 PM IST
  • ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಕುಮಾರಸ್ವಾಮಿ ಕಿಡಿ
  • ರಾಮನ ಹೆಸರಿನಲ್ಲಿ ಚಂದ ಸ್ವೀಕಾರ ಮಾಡುವುದನ್ನು ಧಾರ್ಮಿಕ ಭ್ರಷ್ಟಾಚಾರ ಎಂದ ಎಚ್ ಡಿಕೆ
  • ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ ಎಂದ ಮಾಜಿ ಮುಖ್ಯಮಂತ್ರಿ
ಬಿಜೆಪಿಯವರು ಮಾಡುತ್ತಿರುವ ರಾಮಜಪ ಅಧಿಕ್ಕಾರಕ್ಕಾಗಿ ಮಾತ್ರ: HD Kumaraswamy title=
HD Kumaraswamy tweet (File Image)

ಬೆಂಗಳೂರು: ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (Former Chief Minister HD Kumaraswamy) ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ (Tweet) ಮಾಡಿರುವ ಎಚ್.ಡಿ. ಕುಮಾರಸ್ವಾಮಿ (HD Kumaraswamy), 
"ಪ್ರಧಾನಿ ಸ್ಥಾನ ಕೊಟ್ಟಿದ್ದೂ ದೇವರೇ, ಆ ಸ್ಥಾನದಲ್ಲಿ ಮುಂದುವರಿಯುವ ಅಥವಾ ಸ್ಥಾನ ತೊರೆಯುವ ಅವಕಾಶಗಳಿದ್ದರೂ ಸ್ಥಾನ ತೊರೆಯಬೇಕೆಂಬ ನಿರ್ಣಯ ಕೊಟ್ಟಿದ್ದೂ ದೇವರೇ," ಇದು ಶೃಂಗೇರಿ ಜಗದ್ಗುರುಗಳ ಎದುರು ದೇವೇಗೌಡರು ಪ್ರಮಾಣಿಕವಾಗಿ, ಬಹಿರಂಗವಾಗಿ ಹೇಳಿದ್ದ ಮಾತು. ಇದು ನಮ್ಮ ದೈವ ಬದ್ಧತೆಗೆ ಸಾಕ್ಷಿ. ಇದು ನಮಗಿರುವ ದೈವ ಕೃಪೆಗೂ ಸಾಕ್ಷಿ!" ಎಂದಿದ್ದಾರೆ.

'"ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ  ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ 'ಅಧಿಕಾರ ರಾಮ ಜಪ' ಕಾಲು ಭಾಗಕ್ಕೂ ಸಾಲದು" ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ - Siddaramaiah: ಶ್ರೀ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಸಿದ್ದರಾಮಯ್ಯ ತಮ್ಮ ಸಿದ್ದೇಗೌಡ..!

"ಇಚ್ಛೆಗಳನ್ನಿಟ್ಟುಕೊಂಡು ದೇವರನ್ನು ಆರಾಧಿಸುವುದೇ ತಪ್ಪು. ಅಂಥದ್ದರಲ್ಲಿ ದೇವರನ್ನು ಅಧಿಕಾರಕ್ಕಾಗಿ, ರಾಜಕೀಯಕ್ಕಾಗಿ, ಹಣಕ್ಕಾಗಿ ಬಳಸಿಕೊಳ್ಳುವುದು ಧಾರ್ಮಿಕ ಭ್ರಷ್ಟಾಚಾರ.  ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿಕ್ಕಿದೆ. ಈಗ ಅರಚುವವರೆಲ್ಲರೂ ಅದಕ್ಕಾಗಿ ಕಾಯಲಿ. ಅದರ ಫಲವನ್ನೂ ಉಣ್ಣಲಿ" ಎಂದು ಹೇಳಿದ್ದಾರೆ.

"ದೇವರ ವಿಚಾರದಲ್ಲಿ ನಮಗಿರುವ ಬದ್ಧತೆಯನ್ನು ಪ್ರಶ್ನೆ ಮಾಡುವವರು, ನನ್ನನ್ನು ಹಾಗೂ ನನ್ನ ಕುಟುಂಬವನ್ನು ಟೀಕೆ ಮಾಡುವವರು, ಬಾಯಿಗೆ ಬಂದಂತೆ ಮಾತನಾಡುವವರು ಒಂದಲ್ಲ ಹತ್ತು ಬಾರಿ ಯೋಚನೆ ಮಾಡುವುದು ಒಳಿತು. ಯಾಕೆಂದರೆ, ನಾನಾಗಲಿ, ನನ್ನ ಕುಟುಂಬವಾಗಲಿ ಈಗ ದೇಶದಲ್ಲಿ ಕೆಲವರಿಂದ ನಡೆಯುತ್ತಿರುವ ಧಾರ್ಮಿಕ ಭ್ರಷ್ಟಾಚಾರದಂಥ ಕೃತ್ಯ ಮಾಡಿಲ್ಲ!" ಎಂದು ಅಭಿಪ್ರಾಯಪಟ್ಟಿದ್ದಾರೆ.

"ಒಬ್ಬರು ಹೇಳಿದ್ದಾರೆ... ಶ್ರೀರಾಮನ (Srirama) ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ" ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ - Corona Virus : ಬೆಂಗಳೂರಿಗೆ ಈಗ ಬ್ರೆಜಿಲ್, ದಕ್ಷಿಣ ಆಫ್ರಿಕಾ ಭಯ ಯಾಕೆ.?

"ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ" ಎಂದಿದ್ದಾರೆ.

"ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು (Sriramulu) ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ" ಎಂದು ತಿಳಿಸಿದ್ದಾರೆ.

"ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ" ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ - Siddaramaiah: 'ಅಯೋಧ್ಯೆಯ ಶ್ರೀರಾಮ ಮಂದಿರ ಕಟ್ಟೋದಕ್ಕೆ ದೇಣಿಗೆ ಕೊಡಲ್ಲ'

"ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ, ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ, ರಾಮಮಂದಿರ (Ram Mandir) ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News