ಕೋಮುಸೌರ್ಹಾದತೆಯ ಹರಿಕಾರನಿಗೆ ಸಿಎಂ ಅಂತಿಮ ನಮನ

ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನೆನಹಿನಲ್ಲಿ ಕೋಮುಸೌಹಾರ್ದತೆ ಪ್ರಶಸ್ತಿ ನೀಡುವ ಚಿಂತನೆ ಇದೆ- ಸಿಎಂ ಕುಮಾರಸ್ವಾಮಿ

Last Updated : Oct 22, 2018, 08:15 AM IST
ಕೋಮುಸೌರ್ಹಾದತೆಯ ಹರಿಕಾರನಿಗೆ ಸಿಎಂ ಅಂತಿಮ ನಮನ title=

ಗದಗ: ತ್ರಿವಿಧ ದಾಸೋಹಿ, ಕೋಮು ಸೌಹಾರ್ದತೆಯ ಬೆಳವಣಿಗೆಯ ಹರಿಕಾರರಾಗಿದ್ದ ಗದುಗಿನ ತೋಂಟದಾರ್ಯಮಠದ ಡಾ. ಸಿದ್ದಲಿಂಗ ಸ್ವಾಮೀಜಿ ಅಗಲಿಕೆ ವೈಯಕ್ತಿಕವಾಗಿ ಸಹಜವಾಗಿ ದೊಡ್ಡಮಟ್ಟದಲ್ಲಿ ತಮಗೆ ಮತ್ತು ಇಡೀ ನಾಡಿಗೆ ಅಘಾತವಾಗಿದೆ. ಯಾರೇ ಇರಲಿ ಅವರಿಗೆ ತಿಳುವಳಿಕೆ, ಮಾರ್ಗದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದ ಅವರ ಜೀವನ ಎಲ್ಲರಿಗೂ ಮಾದರಿ ಎಂದು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರದ್ದಾಂಜಲಿ ಅರ್ಪಿಸಿದರು.

ಗದಗದಲ್ಲಿ ಭಾನುವಾರ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಇದರ 19ನೇ ಪೀಠಾಧಿಪತಿಯಾಗಿದ್ದ ಡಾ. ತೋಂಟದ ಸಿದ್ದಲಿಂಗ ಸ್ವಾಮಿಗಳ ಪಾರ್ಥೀವ ಶರೀರಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೊಂದಿಗೆ ಪುಷ್ಪ ಗೌರವ ಅರ್ಪಿಸಿ, ಮಠದ 20ನೇ ಪೀಠಾಧಿಪತಿಯಾಗಿ ನೇಮಕಗೊಂಡ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ದೇಶ್ವರ ಸ್ವಾಮಿಜಿಯವರನ್ನು ಗೌರವಿಸಿ  ಆಶೀರ್ವಾದ ಪಡೆದು ಅವರು ಮಾತನಾಡಿದರು. 

ತೋಂಟದಾರ್ಯಮಠದ ಈಗಿನ ಉತ್ತರಾಧಿಕಾರಿಯಾಗಿರುವ ನಾಗನೂರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಮಠದ  ಕ್ಷೇತ್ರದಿಂದಲೇ ತಾವು ಗ್ರಾಮವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ ಸಂದರ್ಭದಲ್ಲಿ ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿ ಈ ಕಾರ್ಯ ಜನತೆಯ ಹತ್ತಿರಕ್ಕೆ ಹೋಗಿ ಬಡಜನರ ನೋವಿಗೆ ಧ್ವನಿಯಾಗುವ, ಪರಿಹಾರ ನೀಡುವ ಉತ್ತಮ ಪ್ರಯತ್ನವಾಗಿದೆ ಇದರಿಂದ ತಮಗೆ ಖುಷಿಯಾಗಿದೆ ಎಂದು ತಮ್ಮನ್ನು ಹುರಿದುಂಬಿಸಿದ್ದನ್ನು ಮುಖ್ಯಮಂತ್ರಿಗಳು ನೆನಪಿಸಿಕೊಂಡರು. 

ಕನ್ನಡ ನಾಡಿನ ಬೆಳವಣಿಗೆಯಲ್ಲಿ  ಹಾಗೂ ಶಿಕ್ಷಣ, ಸಾಮಾಜಿಕ ಸೇರಿದಂತೆ ಹಲವಾರು ಕ್ಷೇತ್ರಗಳ ಡಾ.ಸಿದ್ದಲಿಂಗ ಸ್ವಾಮೀಜಿ ನೀಡಿರುವ ಕೊಡುಗೆಗಳು ಬಹುಕಾಲ ನೆನಪಿಡುವಂತಹ ಕಾರ್ಯಗಳಾಗಿವೆ ಎಂದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತದನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ತೋಂಟದಾರ್ಯ ಸಿದ್ದಲಿಂಗ ಸ್ವಾಮೀಜಿ ನೆನಹಿನಲ್ಲಿ ಕೋಮುಸೌಹಾರ್ದತೆ ಪ್ರಶಸ್ತಿ ನೀಡುವ ಚಿಂತನೆ ಇರುವುದಾಗಿ ನುಡಿದರು.

ಸುತ್ತೂರು, ಆದಿಚುಂಚನಗಿರಿ, ಸೇರಿದಂತೆ ವಿವಿಧ ಮಠಗಳ ಶ್ರೀಗಳವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಗದಗ ಜಿ.ಪಂ. ಪ್ರಭಾರ ಅಧ್ಯಕ್ಷೆ ಶ್ರೀಮತಿ ರೂಪಾ ಅಂಗಡಿ, ಸಂಸದ ಶಿವಕುಮಾರ ಉದಾಸಿ, ಶಾಸಕರುಗಳಾದ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ಬಸವರಾಜ ಬೊಮ್ಮಾಯಿ, ಪ್ರಸಾದ ಅಬ್ಬಯ್ಯ, ಸಿ.ಎಸ್.ಶಿವಳ್ಳಿ, ಜನಪ್ರತಿನಿಧಿಗಳು, ಮಾಜಿ ಶಾಸಕರುಗಳು, ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಸಂತೋಷ ಬಾಬು, ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಹಿರಿಯ ಪೋಲಿಸ್ ಅಧಿಕಾರಿಗಳು, ಗಣ್ಯರು, ಅಪಾರ ಸಂಖ್ಯೆಯಲ್ಲಿ ಶ್ರೀಮಠದ ಭಕ್ತಾಧಿಗಳು ಡಾ. ತೋಂಟದ ಸಿದ್ದಲಿಂಗ ಸ್ವಾಮೀಜಿ ಪಾರ್ಥೀವ ಶರೀರಕ್ಕೆ ಗೌರವ ಅರ್ಪಿಸಿದರು.

Trending News