ಸಿದ್ದನೆಪ ಹೇಳದೆ ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

HD Kumarswamy : ನೈಸ್ ಯೋಜನೆಯ ಬಗ್ಗೆ ತನಿಖೆ ನಡೆಸಲು ನಾವೇನು ಕೈಕಟ್ಟಿ ಹಾಕಿದ್ದವೇ ಎಂದು ತಮ್ಮ ಟೀಕಿಸಿದ್ದ ಸಿಎಂ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಇಡೀ ಯೋಜನೆಯನ್ನು  ಸರಕಾರದ ವಶಕ್ಕೆ ಪಡೆಯುವಂತೆ ಆಗ್ರಹ ಮಾಡಿದಾರೆ.  

Written by - Prashobh Devanahalli | Edited by - Savita M B | Last Updated : Jul 23, 2023, 10:10 AM IST
  • ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಸಾಹೇಬರು ಕೇಳಿದ್ದಾರೆ
  • ನಾನು ಸಿಎಂ ಆಗಿದ್ದಾಗ ನನ್ನ ಜತೆಗಿದ್ದ ಅಡ್ವೋಕೇಟ್ ಜನರಲ್, ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು.
  • ಅಧಿಕಾರಿಗಳನ್ನು ಬೆದರಿಸಿಟ್ಟುಕೊಂಡಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು
ಸಿದ್ದನೆಪ ಹೇಳದೆ ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ಹೆಚ್.ಡಿ.ಕುಮಾರಸ್ವಾಮಿ ಆಗ್ರಹ title=

ಬೆಂಗಳೂರು: ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, 'ಸಿದ್ದನೆಪ' ಹೇಳದೆ ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆದು ಬದ್ಧತೆ ತೋರಿ ಎಂದು ಹೇಳಿದ್ದಾರೆ ಹಾಗೂ 'ನೈಸಿಗೆ ನ್ಯಾಯ ಕೊಡಿ' ಎಂದು ಹ್ಯಾಷ್ ಟ್ಯಾಗ್ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ.

ಮಾನ್ಯ ಸಿದ್ದರಾಮಯ್ಯರವರೇ; ನೀವು ಈಗ ಕರ್ನಾಟಕದ ಮುಖ್ಯಮಂತ್ರಿ. ನನಗೂ ಮುಖ್ಯಮಂತ್ರಿ, ಮಹಾದೇವಪ್ಪ ಅವರಿಗೂ ಮುಖ್ಯಮಂತ್ರಿ! ಕಾಕಾ ಪಾಟೀಲರಿಗೂ ಮುಖ್ಯಮಂತ್ರಿ!! ಇಂಥಾ ನಿಮ್ಮನ್ನು 'ಸುಳ್ಳುರಾಮಯ್ಶ' ಎಂದು ಕರೆಯುವುದು ನನಗೆ ಸುತಾರಾಂ ಇಷ್ಟವಿಲ್ಲ. ಏಕೆಂದರೆ, ನಿಮ್ಮ ಹೆಸರಿನಲ್ಲೇ 'ರಾಮ'ರಿದ್ದಾರೆ. ತಾವು 'ಸತ್ಯರಾಮಯ್ಯ'ನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ, ತಮ್ಮದೇ ಸರಕಾರದ ಕಾನೂನು ಸಚಿವರೇ ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ನೀವು ದಯಮಾಡಿ ಪುರುಸೊತ್ತು ಮಾಡಿಕೊಂಡು ಪಾರಾಯಣ ಮಾಡಿ ಎಂದು ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ.

ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಸಾಹೇಬರು ಕೇಳಿದ್ದಾರೆ. ಈ ಬಾಲಿಶ ಪ್ರಶ್ನೆಗೆ ಗೌರವದಿಂದಲೇ ಉತ್ತರಿಸುವೆ. ನಾನು ಸಿಎಂ ಆಗಿದ್ದಾಗ ನನ್ನ ಜತೆಗಿದ್ದ ಅಡ್ವೋಕೇಟ್ ಜನರಲ್, ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು. ಅದುವರೆಗೆ ಅಧಿಕಾರಿಗಳನ್ನು ಬೆದರಿಸಿಟ್ಟುಕೊಂಡಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಇದನ್ನೂ ಓದಿ-ಬಿಜೆಪಿ ನಾಯಕರು ಮನೆಯಲ್ಲಿ ಕಂಬಳಿ ಹೊದ್ದು ಮಲಗುವುದು ಒಳಿತು: ಕಾಂಗ್ರೆಸ್ ವ್ಯಂಗ್ಯ

ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿದ್ದ ಎಲ್ಲಾ ನಿಂದನಾ ಅರ್ಜಿಗಳನ್ನು 2019 ಜುಲೈನಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಅದಕ್ಕಾಗಿ ಅಂದಿನ ಅಡ್ವೋಕೇಟ್ ಜನರಲ್, ಮತ್ತವರ ಕಾನೂನು ತಂಡವನ್ನು ನಾನು ಅಭಿನಂದಿಸಲೇಬೇಕು. ಹಿಂದಿನ ಬಿಜೆಪಿ ಸರಕಾರವೂ ಈ ಲೂಟಿ ಕಂಪನಿಯ ರೆಕ್ಕೆಪುಕ್ಕ ಕತ್ತರಿಸಿ ಹಾಕಿತ್ತು. ಅಂದಿಗೇ (2018) ನೈಸಿನ ಕೊಚ್ಚೆಯಲ್ಲಿ ಹೊರಳಾಡಿ ಪೊಗದಸ್ತಾಗಿ ಮೇಯ್ದು ಬಲಿತಿದ್ದ ಪ್ರಾಣಿಗಳನ್ನು ಎದುರು ಹಾಕಿಕೊಂಡು ನಾನು ತೆಗೆದುಕೊಂಡ ರಿಸ್ಕ್ ಸಣ್ಣದೇನಲ್ಲ ಸಿದ್ದರಾಮಯ್ಯನವರೇ. ನನ್ನ ಮೇಲೆ ಬಂದ ಒತ್ತಡಗಳ ಬಗ್ಗೆ ನಿಮಗೂ ಮಾಹಿತಿ ಇರಬಹುದು. ಆಗ ನೀವು ಮತ್ತು ನಿಮ್ಮ ಟೀಮು ನನಗೆ ಕೊಟ್ಟ 'ನಿತ್ಯ ಕಿರುಕುಳ'ವನ್ನು ಮರೆಯಲಾದೀತೆ? ಎಂದು ಅವರು ಚಾಟಿ ಬೀಸಿದ್ದಾರೆ.

ನಿಮ್ಮ ಹಂಗಿನಲ್ಲಿದ್ದ ನನಗೆ, ನಿಮ್ಮದೇ ಪಕ್ಷದವರ ವಿರುದ್ಧ ತನಿಖೆ ನಡೆಸಿ, ನೈಸ್ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯುವ ದಮ್ಮು ತಾಕತ್ತು ಇರಲಿಲ್ಲ, ನಿಜ ಒಪ್ಪಿಕೊಳ್ಳುತ್ತೇನೆ. ಆದರೆ, ನಿಮ್ಮದು ಪೂರ್ಣ ಬಹುಮತದ ಬಲಿಷ್ಠ ಸರಕಾರ, ನುಡಿದಂತೆ ನಡೆಯುವ 'ಅಪರ ಹರಿಶ್ಚಂದ್ರ'ನ ಸರಕಾರ! ಹೌದಲ್ಲವೇ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ-ರಾಜ್ಯದಲ್ಲಿ ಶ್ಯಾಡೋ ಸಿಎಂ ಯತೀಂದ್ರರ ವರ್ಗಾವಣೆ ದಂಧೆ ಮಿತಿ ಮೀರುತ್ತಿದೆ: ಬಿಜೆಪಿ ಆಕ್ರೋಶ

ಹಾಗಿದ್ದರೆ ಏಕೆ ತಡ? ಸ್ವತಃ ನೀವೇ ನೇಮಿಸಿದ್ದ ಸದನ ಸಮಿತಿ (2014-2016) ವರದಿಯ ಮೇಲೆ ಖಡಕ್ ಕ್ರಮ ಜರುಗಿಸಿ. ವರದಿಯಲ್ಲಿ ನೈಸ್  ಅಕ್ರಮಗಳ ಭಾಗವತವೇ ತೆರೆದುಕೊಂಡಿದೆ. ಇಡೀ ಯೋಜನೆಯನ್ನು ಸರಕಾರದ ವಶಕ್ಕೆ ಪಡೆಯಲು ದಿಟ್ಟಹೆಜ್ಜೆ ಇಡಿ. 'ಸಿದ್ದನೆಪ' ಹೇಳಿ ಸಮಯವನ್ನು ಕೊಲ್ಲಬೇಡಿ? ಬಹುಮತ ಇದ್ದರೆ ಸಾಲದು, ಬದ್ಧತೆಯೂ ಇರಬೇಕು. ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಕುಟುಕಿದ್ದಾರೆ.

ನಾನು ರೈತರ ಸಾಲಮನ್ನಾ ಮಾಡಿದೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕೆ ನೀವು ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡಿದ್ದೂ ಅಷ್ಟೇ ಸತ್ಯ. ಭಾಗ್ಯಗಳಿಗೆ ನಯಾಪೈಸೆ ಕಡಿಮೆ ಆಗಬಾರದು ಎಂದು ನನಗೆ ಕೊಟ್ಟ ಚಿತ್ರಹಿಂಸೆ ಅಸತ್ಯವೇ? ಗಟ್ಟಿ ದನಿಯಲ್ಲಿ ಅಬ್ಬರಿಸಿ ಹೇಳಿದರೆ ಸುಳ್ಳು ಸತ್ಯವಾಗುವುದಿಲ್ಲ. ಸತ್ಯರಾಮಯ್ಯರಾಗಿ ಇತಿಹಾಸದಲ್ಲಿ ದಾಖಲಾಗಿ ಎಂದು ಹಾಲಿ ಮುಖ್ಯಮಂತ್ರಿಗಳನ್ನು ಮಾಜಿ ಮುಖ್ಯಮಂತ್ರಿಗಳು ಕಾಲೆಳೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News