PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹೂ’ಕುಂಡ’ಲಿ ರಹಸ್ಯ!

ಅಕ್ರಮದ ಕೇಂದ್ರ ಬಿಂದು ಆಗಿದ್ದ ಜ್ಞಾನ ಜ್ಯೋತಿ ಶಾಲೆಯಲ್ಲಿನ ಅಕ್ರಮದ ತನಿಖೆ ನಡೆಸುವ ವೇಳೆ ಸಿಐಡಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ.

Written by - CHAITAN MAVUR | Edited by - Puttaraj K Alur | Last Updated : May 3, 2022, 07:10 PM IST
  • ಜ್ಞಾನ ಜ್ಯೋತಿ ಶಾಲೆಯಲ್ಲಿನ ಅಕ್ರಮದ ತನಿಖೆ ವೇಳೆ ಸಿಐಡಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿ ಲಭ್ಯ
  • ಕಲಬುರಗಿಯ ಇನ್ನೊಂದು ಕಾಲೇಜಿನ ಅಕ್ರಮವನ್ನು ಬಾಯ್ಬಿಟ್ಟ ಕಿಂಗ್‌ಪಿನ್ ಆರ್‌.ಡಿ.ಪಾಟೀಲ್‌
  • MS ಇರಾನಿ ಕಾಲೇಜ್‌ನಲ್ಲಿ ನಡೆದ ಅಕ್ರಮದ ಬಗ್ಗೆ ಇಂಚಿಂಚೂ ಮಾಹಿತಿ ತಿಳಿಸಿದ ರುದ್ರೇಗೌಡ ಪಾಟೀಲ್
PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹೂ’ಕುಂಡ’ಲಿ ರಹಸ್ಯ!  title=
ಪಿಎಸ್ಐ ನೇಮಕಾತಿ ಅಕ್ರಮದ ಸ್ಫೋಟಕ ಮಾಹಿತಿ

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ಇಷ್ಟು ದಿನ ಜ್ಞಾನಜ್ಯೋತಿ ಶಾಲೆಯ ಸುತ್ತಲೂ ಗಿರಕಿ ಹೊಡೆಯುತ್ತಿದ್ದ ಸಿಐಡಿ ಅಧಿಕಾರಿಗಳು ಮತ್ತೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಅಕ್ರಮದ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಆತನ ಹೇಳಿಕೆ ಆಧರಿಸಿ ಹೊರಟಿದ್ದ ಸಿಐಡಿ ಅಧಿಕಾರಿಗಳು ‘ಹೂಕುಂಡಲಿ’ ರಹಸ್ಯವನ್ನು ಭೇದಿಸಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.

ಅಕ್ರಮದ ಕೇಂದ್ರ ಬಿಂದು ಆಗಿದ್ದ ಜ್ಞಾನ ಜ್ಯೋತಿ ಶಾಲೆಯಲ್ಲಿನ ಅಕ್ರಮದ ತನಿಖೆ ನಡೆಸುವ ವೇಳೆ ಸಿಐಡಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಕಲಬುರಗಿಯ ಇನ್ನೊಂದು ಕಾಲೇಜಿನ ಅಕ್ರಮವನ್ನು ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಬಾಯ್ಬಿಟ್ಟಿದ್ದಾನೆ. ನಗರದ MS ಇರಾನಿ ಕಾಲೇಜ್‌ನಲ್ಲಿ ನಡೆದ ಅಕ್ರಮದ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಕಿಂಗ್‌ಪಿನ್‌ ಆರ್‍ಡಿ ಪಾಟೀಲ್ ತನ್ನ ಅಡಿಟರ್ ಮೂಲಕ ಪರಿಚಯವಾದ ಕಲಬುರಗಿಯ ರಾಜಾಪುರ ಬಡಾವಣೆಯ ನಿವಾಸಿ ಪ್ರಭು ಅನ್ನೋ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ ಎಂ.ಎಸ್.ಇರಾನಿ ಕಾಲೇಜ್‌ನಲ್ಲಿ ಪರೀಕ್ಷೆ ಬರೆಸಿರುವುದಾಗಿ ಸತ್ಯ ಕಕ್ಕಿದ್ದಾನೆ. ಇನ್ನು ಈ ಬಗ್ಗೆ ಸಿಐಡಿ ಡಿವೈಎಸ್ಪಿ ಪ್ರಕಾಶ್ ರಾಠೋಡ್ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸೀಕ್ರೆಟ್‌ ಆಪರೇಷನ್‌ ನಡೆಸಿದ್ರಾ ಬಿಜೆಪಿ ಚಾಣಾಕ್ಯ?

ಪ್ರಕಾಶ್ ರಾಠೋಡ್ ದೂರಿನನ್ವಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ಪೊಲೀಸರು ಆರ್‌ಡಿ ಪಾಟೀಲ್‌ನ ಅಡಿಟರ್ ಚಂದ್ರಕಾಂತ್ ಕುಲಕರ್ಣಿ, ಅಭ್ಯರ್ಥಿ ಪ್ರಭು ಮತ್ತು ಪ್ರಭು ತಂದೆ ಶರಣಪ್ಪ ಮೂವರನ್ನು ಬಂಧಿಸಿದ್ದಾರೆ. ಇನ್ನೂ ಅಕ್ರಮದಲ್ಲಿ ಬಂಧಿತನಾಗಿರುವ ಅಭ್ಯರ್ಥಿ ಪ್ರಭು ಪರೀಕ್ಷೆ ಬರೆದ ಕಾಲೇಜಿಗೆ ಕರೆದೊಯ್ದು ವೇಳೆ ತಾನು ಮಾಡಿದ್ದ ಕೃತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಪರೀಕ್ಷೆಯ ಮುನ್ನಾ ದಿನವೇ ಪರೀಕ್ಷಾ ಕೇಂದ್ರದ ಒಳಗಿರುವ ಹೂವಿನ ಕುಂಡದಲ್ಲಿ ಬ್ಲೂಟೂತ್ ಬಚ್ಚಿಟ್ಟು, ಪರೀಕ್ಷೆ ದಿನ ಬೆಳಗ್ಗೆ ಬೇಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಕುಂಡದಲ್ಲಿರುವ ಬ್ಲೂಟೂತ್ ತೆಗೆದುಕೊಂಡು ಬಾತ್‌ರೂಮ್‌ಗೆ ಹೋಗಿ ಒಳ ಉಡುಪಿನಲ್ಲಿ ಬ್ಲೂಟೂತ್ ಇಟ್ಟುಕೊಂಡಿದ್ದನಂತೆ.

ತದನಂತರ ಪರೀಕ್ಷಾ ಕೇಂದ್ರದ ಒಳಗೆ ಹೋಗಿ ಬ್ಲೂಟೂತ್ ಆನ್ ಮಾಡಿಕೊಂಡು ಅಕ್ರಮವಾಗಿ ಪರೀಕ್ಷೆ ಬರೆದಿರೋದಾಗಿ ಅಕ್ರಮದ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾನೆ. ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಮಗನನ್ನು ಪಿಎಸ್‌ಐ ಮಾಡೋಕೆ ಪ್ರಭು ತಂದೆ ಶರಣಪ್ಪ 50 ಲಕ್ಷ ರೂ. ನೀಡಿರೋ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಪ್ರಭು ಡಿಗ್ರಿ ಮುಗಿಸಿದ ಬಳಿಕ ಆತನಿಗೊಂದು ಸರ್ಕಾರಿ ನೌಕರಿ ಮಾಡಿಸುವಂತೆ ಆರ್‌ಡಿ ಪಾಟೀಲ್‌ನ ಅಡಿಟರ್ ಚಂದ್ರಕಾಂತ್ ಕುಲಕರ್ಣಿಗೆ ಪ್ರಭು ತಂದೆ ಶರಣಪ್ಪ ಮನವಿ ಮಾಡಿದ್ದನಂತೆ. ಇದಾದ ಬಳಿಕ ಅಡಿಟರ್‌ ಚಂದ್ರಕಾಂತ್‌ ತನ್ನ ಅಕ್ರಮದ ಗುರು, ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ನನ್ನು ಪರಿಚಯ ಮಾಡಿಸಿಕೊಟ್ಟಿದ್ದಾನೆ. ಇದೇ ವೇಳೆ 50 ಲಕ್ಷ ರೂ.ಗೆ ಪಿಎಸ್‌ಐ ಹುದ್ದೆಯ ಡೀಲ್‌ ಆಗಿ, ಅಡ್ವಾನ್ಸ್‌ ಕೊಟ್ಟು ಬಂದಿದ್ದ ಇದೇ ಪ್ರಭು ತಂದೆ ಶರಣಪ್ಪ.

ಇದನ್ನೂ ಓದಿ: ಬಿಜೆಪಿ ಸೇರಿದ ಬಸವರಾಜ ಹೊರಟ್ಟಿ: ವಿರೋಧದ ನಡುವೆಯೂ ಎಂಎಲ್‌ಸಿ ಟಿಕೆಟ್‌ ಕನ್ಫರ್ಮ್‌

ಅದರಂತೆ ಮಗ ಪಿಎಸ್ಐ ಆಗ್ತಾನೆ ಅಂತಾ ಕನಸು ಕಂಡಿದ್ದ ಪ್ರಭು ತಂದೆ ಶರಣಪ್ಪ ಇರೋ ಮನೆ ಸೈಟ್ ಮಾರಾಟ ಮಾಡಿ ಆರ್‌ಡಿ ಪಾಟೀಲ್‌ಗೆ ಲಕ್ಷ ಲಕ್ಷ ಹಣ ನೀಡಿದ್ದಾನಂತೆ. ಆದರೆ, ದುರಂತ ನೋಡಿ ಕೊಟ್ಟ ಹಣವು ಹೋಯ್ತು, ಮಗನಿಗೆ ಪಿಎಸ್‌ಐ ನೌಕರಿಯೂ ಸಿಗದೇ ಇಬ್ಬರೂ ಜೈಲುಪಾಲಾಗಿದ್ದಾರೆ. ಸದ್ಯ ಸಿಐಡಿ ಅಕ್ರಮ ನೇಮಕಾತಿಯಲ್ಲಿ ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ. ಇದಷ್ಟೇ ಅಲ್ಲದೇ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಆರಂಭದಿಂದಲೂ ಪೊಲೀಸ್ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ ಓರ್ವ ಡಿವೈಎಸ್‌ಪಿಯ ಮೊಬೈಲ್ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸ್ತಿದ್ದಾರೆ.

PSI ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರ ಬೀಳುತ್ತಿವೆ. ತನಿಖೆ ವೇಳೆ ಎಮ್‌ಎಸ್‌ಐ ಇರಾನಿ ಕಾಲೇಜ್‌ನಲ್ಲಿ ಪರೀಕ್ಷೆ ಬರೆದವರಲ್ಲಿ 8 ಜನ ಅಭ್ಯರ್ಥಿಗಳು ಪಾಸ್ ಆಗಿದ್ದಾರೆ. ಅದರಲ್ಲಿ ಅಕ್ರಮವಾಗಿ ಬರೆದ ಓರ್ವ ಅಭ್ಯರ್ಥಿ ಈಗಾಗಲೇ ಅರೆಸ್ಟ್ ಆಗಿದ್ದಾನೆ. ಒಟ್ನಲ್ಲಿ ಅಕ್ರಮದ ಹಿಂದಿರುವ ಒಬ್ಬರ ಹಿಂದೊಬ್ಬರಂತೆ ಆರೋಪಿಗಳನ್ನು ಸಿಐಡಿ ಹೆಡೆಮುರಿಕಟ್ಟುತ್ತಿದ್ದು, ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News