Madhya Pradesh: ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆ… ಬದುಕುಳಿದ ಬಾಲಕಿ!
ಒಂದೇ ಕುಟುಂಬದ ನಾಲ್ವರು ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ 9 ವರ್ಷದ ಬಾಲಕಿ ಬದುಕುಳಿದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಭಿಂದ್: ಮಧ್ಯಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಒಂದೇ ಕುಟುಂಬದ ಎಲ್ಲಾ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ವರದಿಯಾಗಿದೆ. ಒಂದೇ ಕುಟುಂಬದ ನಾಲ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದೃಷ್ಟವಶಾತ್ ಚಿಕ್ಕ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಘಟನೆಯಲ್ಲಿ ಗಂಡ-ಹೆಂಡತಿ ಮತ್ತು ಅವರ 12 ವರ್ಷದ ಮಗ ಸಾವನ್ನಪ್ಪಿದ್ದು, 8 ವರ್ಷದ ಮಗಳು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಭಿಂದ್ನ ಗೊಹಾದ್ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೇಲ್ನೋಟಕ್ಕೆ ಇವರೆಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಕಂಡು ಬಂದಿದ್ದರೂ, ಕೊಲೆ ಶಂಕೆ ಹಿನ್ನೆಲೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಪ್ರಾಣಿಗಳಿಗೂ ಬಂತು ಲಸಿಕೆ: ನಿಮ್ಮ ಮನೆ ಜೀವಿಗಳನ್ನೂ ಕೊರೊನಾದಿಂದ ಕಾಪಾಡಿ
ಧರ್ಮೇಂದ್ರ ಗುರ್ಜರ್ ತಮ್ಮ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೇಣು ಹಾಕಿಕೊಂಡಿದ್ದಾರೆ. ಧರ್ಮೇಂದ್ರ, ಪತ್ನಿ ಹಾಗೂ ಮಗ ಸಾವನ್ನಪ್ಪಿದ್ದು, ಬಾಲಕಿ ಪ್ರಾಣಾಪಾಯಿಂದ ಪಾರಾಗಿದ್ದಾಳೆ. ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದು ಮಾತ್ರ ತಿಳಿದುಬಂದಿಲ್ಲ.
ಮೇಲ್ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ!
ಶನಿವಾರ ಬೆಳಗಿನ ಜಾವ ಎಷ್ಟು ಹೊತ್ತಾದರೂ ಧರ್ಮೇಂದ್ರರವರ ಕುಟುಂಬಸ್ಥರು ಮನೆಯ ಬಾಗಿಲು ತೆರೆದಿರಲಿಲ್ಲ. ಆದರೆ, ಒಳಗಡೆಯಿಂದ ಮಗು ಅಳುವ ಶಬ್ದ ಕೇಳಿ ಬರುತ್ತಿತ್ತು. ಈ ಬಗ್ಗೆ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಕುಟುಂಬ ಸದಸ್ಯರು ಮೇಲ್ಛಾವಣಿಗೆ ನೇಣು ಹಾಕಿಕೊಂಡಿರುವುದು ಕಂಡುಬಂದಿದೆ. ಹೆಣ್ಣುಮಗು ಉಸಿರಾಡುತ್ತಿರುವುದನ್ನು ಕಂಡ ಪೊಲೀಸ್ ಸಿಬ್ಬಂದಿ ಕೂಡಲೇ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಆಕೆಯ ಸ್ಥಿತಿ ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗ್ವಾಲಿಯರ್‌ನ ಆಸ್ಪತ್ರೆಗೆ ದಾಖಲಿಸಲಾಯಿತು.
ಇದನ್ನೂ ಓದಿ: ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್ ಟ್ವಿಸ್ಟ್: ಮಾಸ್ಟರ್‌ಮೈಂಡ್ ಹೆಸರು ಬೆಳಕಿಗೆ!
ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಂಡ ಆಗಮಿಸಿ, ಮಾಹಿತಿ ಕಲೆ ಹಾಕಿದೆ. ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ತನಿಖೆ ನಡೆಯುತ್ತಿದೆ ಎಂದು ಭಿಂದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶೈಲೇಂದ್ರ ಸಿಂಗ್ ಹೇಳಿದ್ದಾರೆ. ಪ್ರಕರಣದಲ್ಲಿ ಬಾಲಕಿ ಒಬ್ಬಳೇ ಸಾಕ್ಷಿಯಾಗಿರುವುದರಿಂದ ಆಕೆಯ ಹೇಳಿಕೆ ಮಹತ್ವ ಪಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.