ಭಾಷೆ ಕಿರಿಕ್: ವಿದ್ಯಾರ್ಥಿಗಳ ನಡುವೆ ಸಂಘರ್ಷ
ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆದಿದ್ದು, ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ತೆಲುಗು ವಿದ್ಯಾರ್ಥಿಗಳಿಂದ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿದೆ.
ಬೆಂಗಳೂರು: ಕನ್ನಡ-ತೆಲುಗು ಭಾಷೆ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ ಏರ್ಪಟ್ಟು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿಯ ಗೀತಂ ಯೂನಿವರ್ಸಿಟಿಯಲ್ಲಿ ನಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಭಾಷೆಗಾಗಿ ಕಿರಿಕ್:
ಗೀತಂ ಯೂನಿವರ್ಸಿಟಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೋಕಲ್ (ಕನ್ನಡ) ಹಾಗೂ ನಾನ್ ಲೋಕಲ್ (ತೆಲುಗು) ವಿಚಾರದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಕಳೆದ 2 ದಿನಗಳಿಂದ ತೆಲುಗು ಮತ್ತು ಕನ್ನಡಿಗ ವಿದ್ಯಾರ್ಥಿಗಳ ನಡುವೆ ಇದೇ ವಿಚಾರಕ್ಕೆ ಸಂಘರ್ಷ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ.
ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಬಿಡಲ್ಲ ಎಂಬ ಕಾರಣಕ್ಕಾಗಿ ಕಾಲೇಜಿನ ಎರಡೂ ಗುಂಪುಗಳ ನಡುವೆ ಜಗಳ ನಡೆಯುತ್ತಲೇ ಇತ್ತು. ಆಂಧ್ರಪ್ರದೇಶ ವಿದ್ಯಾರ್ಥಿಗಳು ಹಲ್ಲೆ ಮಾಡುತ್ತಿದ್ದರೂ ಕಾಲೇಜು ಸಿಬ್ಬಂದಿ ಅವರಿಗೇ ಸಹಾಯ ಮಾಡುತ್ತಾರೆ. ಗೀತಂ ಆಂಧ್ರ ಮೂಲದ ಯುನಿವರ್ಸಿಟಿಯಾಗಿದ್ದು, ಕಾಲೇಜು ಆಡಳಿತ ಮಂಡಳಿಯಿಂದ ಕನ್ನಡಿಗ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ- ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ: ಸಿದ್ದರಾಮಯ್ಯ
ಭಾಷಾ ಸಂಘರ್ಷದ ಹಿನ್ನೆಲೆ ಸೋಮವಾರ (ಏಪ್ರಿಲ್ 25) ಮಧ್ಯಾಹ್ನ ತೆಲುಗು ವಿದ್ಯಾರ್ಥಿಗಳ ಗುಂಪು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ತೆಲುಗು ವಿದ್ಯಾರ್ಥಿಗಳು ಮಾರಕಾಸ್ತ್ರಗಳನ್ನಿಡಿದು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಅಲ್ಲದೆ ನಿನ್ನೆ ನಡೆದ ಘಟನೆಯಲ್ಲಿ ಚಾಕು, ದೊಣ್ಣೆ ಮತ್ತು ಮಾರಕಾಸ್ತ್ರಗಳ ಬಳಕೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಹೊರಗಿನ ಪುಂಡರನ್ನು ಸಹ ಕರೆಸಲಾಗುತ್ತಿದೆ. ಹೊಡೆತ ತಾಳಲಾರದೆ ಕನ್ನಡ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಗೆ ಬಂದಿದ್ದಾರೆ. ಆದರೂ, ಅವರ ಬೆಂಬಿಡದ ಪುಂಡರು ಕನ್ನಡಿಗ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯರು ಹಲ್ಲೆಗೆ ಯತ್ನಿಸುತ್ತಿದ್ದವರನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ: ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ
ಘರ್ಷಣೆಯಲ್ಲಿ ಹಲ್ಲೆಗೋಳಗಾದ ವಿದ್ಯಾರ್ಥಿಗಳಿಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೀತಂ ಕಾಲೇಜಿನಲ್ಲಿ ಭಾಷೆ ಕಿರಿಕ್ ಇದೀಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.