ಬೆಂಗಳೂರು: ಪರಭಾಷಾ ಚಿತ್ರಗಳ ಹಾವಳಿ ವಿರುದ್ಧ ಹಿರಿಯ ನಟ ಜಗ್ಗೇಶ್ ಮತ್ತೆ ಗುಡುಗಿದ್ದಾರೆ. ಬೆಂಗಳೂರು ಸೇರಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ಕನ್ನಡ ಭಾಷೆಯ ಚಿತ್ರಗಳಿಗಿಂತಲೂ ಪರಭಾಷೆಯ ಚಿತ್ರಗಳಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಕನ್ನಡ ಚಿತ್ರಗಳಿಗೆ ಕಡಿಮೆ ಸ್ಕ್ರೀನ್ ನೀಡುವ ಥಿಯೇಟರ್ ಮಾಲೀಕರು ಪರಭಾಷೆಯ ಚಿತ್ರಗಳಿಗೆ ಹೆಚ್ಚು ಸ್ಕ್ರೀನ್ ನೀಡುತ್ತಿದ್ದಾರೆ. ಇದೇ ವಿಚಾರವಾಗಿ ನಟ ಜಗ್ಗೇಶ್ ಇದೀಗ ಆಕ್ರೋಶ ಹೊರಹಾಕಿದ್ದಾರೆ.  


COMMERCIAL BREAK
SCROLL TO CONTINUE READING

ತೋತಾಪುರಿ ಚಿತ್ರದ ಸಕ್ಸಸ್ ಮೀಟ್‍ನಲ್ಲಿ ಮಾತನಾಡಿರುವ ನಟ ಜಗ್ಗೇಶ್, ‘ನಮ್ಮ ಚಿತ್ರ ತೋತಾಪುರಿ ಚಿತ್ರ ಗಜಗಾಂರ್ಭೀಯದಿಂದ ಸಾಗುತ್ತಿದೆ. ವಾಮಮಾರ್ಗದಲ್ಲಿ ನನಗೆ ನೂರು ಆಟ ಗೊತ್ತಿದೆ. ಆದರೆ ಆ ಮಾರ್ಗದಲ್ಲಿ ನಡೆಯೋಕೆ ನನಗೆ ಇಷ್ಟ ಇಲ್ಲ. ನಮ್ಮ ಚಿತ್ರ 1 ವಾರ ಹೌಸ್‍ಫುಲ್ ಓಡೋ ಥರ ಮಾಡೋದು ಗೊತ್ತು. ನನಗೆ ಆ ಸಾಮರ್ಥ್ಯ ಇದೆ. ಆದರೆ ಆ ರೀತಿ ನಾನು ಮಾಡುವುದಿಲ್ಲ’ ಅಂತಾ ಹೇಳಿದ್ದಾರೆ.


ಇತ್ತೀಚೆಗೆ ನಮ್ಮ ನಡುವೆ ನಕಲಿ ವಿಮರ್ಶೆ ಕೊಡುವವರು ಹುಟ್ಟಿಕೊಂಡಿದ್ದಾರೆ. ದುಡ್ಡು ಕೊಟ್ರೆ ಚಿತ್ರ ಸೂಪರ್, ಬೊಂಬಾಟ್ ಅಂತಾ ಬರೀತಾರೆ. ನಾವು ದುಡ್ಡು ಕೊಟ್ಟು ನಮ್ಮ ಸಿನಿಮಾ ಬಗ್ಗೆ ವಿಮರ್ಶೆ ಮಾಡಿಸಲು ಹೋಗುವುದಿಲ್ಲ. ಜನ ಹರಸಿ, ಹಾರೈಸಿದ್ದಾರೆ ಅಷ್ಡೇ ಸಾಕು ನಮಗೆ. ಜನರು ಹಣ ಕೊಟ್ಟು ಥಿಯೇಟರ್‍ಗೆ ಬಂದು ಸಿನಿಮಾ ನೋಡಿ ಖುಷಿಪಟ್ಟರೆ ಅದುವೇ ನಮ್ಮ ಸಕ್ಸಸ್’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಚೋಳರ ಕಾಲದಲ್ಲಿ ʼಹಿಂದೂ ಧರ್ಮʼ ಎಂಬುದೇ ಇರಲಿಲ್ಲ : ಕಮಲ್‌ಹಾಸನ್‌


ಸ್ವಾಮೀಜಿ ಪಾತ್ರದ ವಿವಾದದ ಬಗ್ಗೆ ಜಗ್ಗೇಶ್ ಹೇಳಿದ್ದೇನು?


ತೋತಾಪುರಿ ಸಿನಿಮಾದಲ್ಲಿ ಮಠದ ಸ್ವಾಮೀಜಿ ಪಾತ್ರದ ವಿವಾದದ ಬಗ್ಗೆ ಮಾತನಾಡಿದ ನವರಸನಾಯಕ ಜಗ್ಗೇಶ್, ‘ರಾಯರೇ ನನ್ನ ಉಸಿರು, ನನ್ನ ಹತ್ತಿರ ಇರುವುದೆಲ್ಲವನ್ನೂ ಕಿತ್ಕೊಂಡು ಬಿಡಲಿ, ನಾನು ಯೋಚನೆ ಮಾಡಲ್ಲ. ರಾಯರ ಪ್ರೀತಿ ಕಳೆದುಕೊಂಡ ದಿನ ನನಗೆ ಸಾವು ಬರುತ್ತದೆ. ನನ್ನ ಮಠ ನನ್ನ ಜಾತಿ ನೋಡಲಿಲ್ಲ. ನನ್ನಂತವನಿಗೆ ಬೃಂದಾವನದಲ್ಲಿ ಕೂರಿಸುತ್ತಾರೆ. ಬೃಂದಾವನದ ಪರಿಕ್ರಮ ಮಾಡದೇ ಬರೋದಿಲ್ಲ. ರಾಯರ ಚರಿತ್ರೆಯನ್ನು ಓದಬೇಕು. ಸುಮ್ಮನೇ ಗುರುವಾರ ಮಠಕ್ಕೆ ಹೋಗುವುದಲ್ಲ. ರಾಯರ ಮೂಲ ಸಿದ್ದಾಂತವೇ ಮನುಕುಲ ಉದ್ದಾರ ಮಾಡೋದು. ರಾಯರು ಧರ್ಮವನ್ನೇ ನೋಡಿಲ್ಲ’ ಅಂತಾ ಹೇಳಿದರು.  


ಕಲಾವಿದರ ಬಗ್ಗೆ ನವರಸನಾಯಕ ಬೇಸರ


ಕನ್ನಡ ಚಿತ್ರರಂಗದ ಒಗ್ಗಟ್ಟಿನ ಬಗ್ಗೆ ನವರಸನಾಯಕ ಜಗ್ಗೇಶ್ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಮ್ಮೆ ಕನ್ನಡ ಕಲಾವಿದರ ವಿರುದ್ಧ ಗರಂ ಆಗಿರುವ ಜಗ್ಗೇಶ್, ‘ನಮ್ಮ ಕನ್ನಡ ಸಿನಿಮಾ ಮಂದಿಗೆ ನಾಚಿಕೆ ಆಗಬೇಕು’ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಯಾವುದೋ ತಮಿಳು ಚಿತ್ರ ಭರ್ಜರಿಯಾಗಿ ಕಲೆಕ್ಷನ್ ಮಾಡುತ್ತಿದೆ. ರಜನಿಕಾಂತ್‍ರಂತಹ ಹಿರಿಯ ನಟರು ಸಖತ್ ಆಗಿ ಪ್ರಮೋಷನ್ ಮಾಡಿಕೊಟ್ಟಿದ್ದಾರೆ. ಆದರೆ ನಮ್ಮವರು ಯಾರು, ಯಾವ ಸಿನಿಮಾ ಬಗ್ಗೆಯೂ ಮಾತನಾಡಲ್ಲ. ಯಾರು, ಯಾರ ಬಗ್ಗೆನೂ ಮಾತನಾಡಬಾರದು ಅಂತಾ ನಮ್ಮವರು ಬೇಲಿ ಹಾಕ್ಕೊಂಡಿದ್ದಾರೆ. ಈ ರೀತಿಯ ವ್ಯಕ್ತಿತ್ವದಿಂದ ನನಗೆ ಒಂದು ರೀತಿಯ ಅನಾಥ ಭಾವ ಕಾಡುತ್ತಿದೆ’ ಎಂದು ಹೇಳಿದರು.  


ಇದನ್ನೂ ಓದಿ: ಹಿರಿಯ ನಟ ಅರುಣ್ ಬಾಲಿ ನಿಧನ, ಬಾಲಿವುಡ್ ಗಣ್ಯರ ಕಂಬನಿ


‘ನಾನು 150 ಸಿನಿಮಾ ಮಾಡಿದ್ದೇನೆ. ಬೇರೆಯವರು ಸಹ ಮಾಡಲಿ. ಕನ್ನಡ ಚಿತ್ರರಂಗ ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಪರಸ್ಪರ ಪ್ರೀತಿಸಬೇಕು ಮತ್ತು ಪರಸ್ಪರ ಸಿನಿಮಾ ಪ್ರಚಾರ ಮಾಡಬೇಕು. ಆಗ ಮಾತ್ರ ಸಿನಿಮಾ ದೊಡ್ಡ ಮಟ್ಟಕ್ಕೆ ತಲುಪಲು ಸಾಧ್ಯವಾಗುವುದು. ಕಾಲಿವುಡ್‍ನಲ್ಲಿ ಸಣ್ಣ ಕಲಾವಿದರಿಂದ ಹಿಡಿದು ದೊಡ್ಡ ಕಲಾವಿದರವರೆಗೂ ಒಂದಾಗುತ್ತಾರೆ. ಪರಸ್ಪರ ಸಿನಿಮಾಗಳನ್ನು ಪ್ರೋತ್ಸಾಹಿಸ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ’ವೆಂದು ಇದೇ ವೇಳೆ ಜಗ್ಗೇಶ್ ಬೇಸರ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.