ನವದೆಹಲಿ: ಇಡೀ ಜಗತ್ತನ್ನೇ ಕಾಡುತ್ತಿರುವ ಕರೋನಾವೈರಸ್ ಅನ್ನು ಮಟ್ಟ ಹಾಕಲು ದೇಶಾದ್ಯಂತ ಲಾಕ್​ಡೌನ್ ಅನ್ನು ಜಾರಿಗೆ ತರಲಾಗಿದ್ದರೂ ಭಾರತದಲ್ಲಿ ಕೋವಿಡ್ -19 (Covid-19) ಪ್ರಕರಣಗಳು ಹತೋಟಿಗೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈವರೆಗೂ 4 ಬಾರಿ ಲಾಕ್​ಡೌನ್ ಅನ್ನು ವಿಸ್ತರಿಸಲಾಗಿದ್ದು ಅದು ನಾಳೆಗೆ ಮುಕ್ತಾಯವಾಗಲಿದೆ. ಇನ್ನೂ ಎರಡು ವಾರಗಳು ಲಾಕ್​ಡೌನ್ ವಿಸ್ತರಣೆಯಾಗಲಿದೆ ಎಂಬ ಊಹಾಪೋಹಗಳ ಮಧ್ಯೆ 13 ನಗರಗಳಲ್ಲಿ ಮಾತ್ರ 5ನೇ ಹಂತದ ಲಾಕ್​ಡೌನ್ ಜಾರಿಯಲ್ಲಿರಲಿದೆ ಎಂದು ಹೇಳಲಾಗುತ್ತಿದೆ.


COMMERCIAL BREAK
SCROLL TO CONTINUE READING

ಹೌದು ಈ ಬಾರಿ ಲಾಕ್​ಡೌನ್ ನಗರ ಕೇಂದ್ರಿತವಾಗಿರುತ್ತದೆ ಎಂದು ಹೇಳಲಾಗುತ್ತಿದ್ದು ಜೂನ್ 1ರಿಂದ 15ರವರೆಗೂ ಇರಲಿರುವ 5 ನೇ ಹಂತದ ಲಾಕ್​ಡೌನ್ 13 ನಗರಗಳಲ್ಲಿ ಮಾತ್ರ ಇರಲಿದೆ. ಉಳಿದ ಕಡೆ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಮಾತ್ರ ಲಾಕ್​ಡೌನ್ ಇರಲಿದೆ. ಇದನ್ನು ಹೊರತುಪಡಿಸಿ ಉಳಿದ ವೇಳೆ ಭಾರೀ ವಿನಾಯಿತಿ ನೀಡಲಾಗುವುದು ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.


ಲಾಕ್​ಡೌನ್ ಗೆ ಒಳಪಡುವ 13 ನಗರಗಳು:
ಅತಿಹೆಚ್ಚು‌ ಕೊರೋನಾ ಇರುವ ನಗರಗಳನ್ನು ಮಾತ್ರ ಈ ಬಾರಿ ಲಾಕ್​ಡೌನ್ (Lockdown)   ಗೆ ಪರಿಗಣಿಸಿರುವ ಕೇಂದ್ರ ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಥಾಣೆ, ಪುಣೆ, ಹೈದರಾಬಾದ್, ಕೋಲ್ಕತಾ/ಹೌರಾ, ಇಂಧೂರ್, ಜೈಪುರ, ಜೋಧ್ಪುರ್, ಚೆಂಗಾಲಪಟ್ಟು ಮತ್ತು ತಿರುವಳ್ಳೂರು ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 


ಮೊದಲ ಸುತ್ತಿನಲ್ಲಿ 11ನಗರಗಳನ್ನು ಮಾತ್ರ ಪರಿಗಣಿಸಿದ್ದಾಗ ಬೆಂಗಳೂರಿನ ಹೆಸರನ್ನೂ ಪರಿಗಣಿಸಿದ್ದ ಕೇಂದ್ರ ಸರ್ಕಾರ ಅಚ್ಚರಿಯ ರೀತಿಯಲ್ಲಿ ಬೆಂಗಳೂರನ್ನು ಕೈಬಿಟ್ಟಿದೆ. 


ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ:
ನಾಲ್ಕನೇ ಹಂತದ   ಲಾಕ್​ಡೌನ್ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿರುವ ಕೇಂದ್ರ ಗೃಹ‌ ಸಚಿವ ಅಮಿತ್ ಶಾ (Amit Shah) ಅವರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡುವಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು ವಿವಿಧ ರಾಜ್ಯ ಸರ್ಕಾರಗಳ ಒತ್ತಡದ ಹಿನ್ನೆಲೆಯಲ್ಲಿ ಜೂನ್ 1ರಿಂದ ಷರತ್ತು ಬದ್ಧವಾಗಿ ಹೊಟೆಲ್, ರೆಸ್ಟೋರೆಂಟ್, ಮಾಲ್ ತೆರೆಯಲು ಅವಕಾಶ ನೀಡಲು ಸರ್ಕಾರ ಅನುಮತಿ ನೀಡುವ ಸಾಧ್ಯತೆಯಿದೆ.