ದೆಹಲಿಯ ಶಾಹೀನ್ಬಾಗ್ನಲ್ಲಿ ಭಾರಿ ಬೆಂಕಿ
ಆಗ್ನೇಯ ದೆಹಲಿಯ ಶಾಹೀನ್‌ಬಾಗ್ ಪ್ರದೇಶದ ಪೀಠೋಪಕರಣಗಳ ಅಂಗಡಿಯಲ್ಲಿ ಭಾನುವಾರ ರಾತ್ರಿ ತೀವ್ರ ಬೆಂಕಿ ಕಾಣಿಸಿಕೊಂಡಿದೆ.
ನವದೆಹಲಿ: ಆಗ್ನೇಯ ದೆಹಲಿಯ ಶಾಹೀನ್‌ಬಾಗ್ (Shaheen bagh) ಪ್ರದೇಶದ ಪೀಠೋಪಕರಣಗಳ ಅಂಗಡಿಯಲ್ಲಿ ಭಾನುವಾರ ರಾತ್ರಿ ತೀವ್ರ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ಅಂಗಡಿ ಸುಟ್ಟು ಕರಕಲಾಗಿದೆ. ಬೆಂಕಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಭಾನುವಾರ ರಾತ್ರಿ ನಡೆದಿರುವ ಈ ಘಟನೆಯನ್ನು ದೃಡೀಕರಿಸಿದ ದೆಹಲಿ ಅಗ್ನಿಶಾಮಕ ಸೇವೆಗಳ ನಿರ್ದೇಶಕ ಅತುಲ್ ಗರ್ಗ್, "ಬೆಂಕಿ ಸಂಭವಿಸಿದ ಸ್ಥಳದ ಸುತ್ತಲೂ ದೊಡ್ಡ ವಸತಿ ಪ್ರದೇಶವಿದೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಿದೆ" ಎಂದು ಹೇಳಿದರು.
ಶಾಹೀನ್ ಬಾಗ್: ಪ್ರತಿಭಟನೆಗೆ 4 ತಿಂಗಳ ಮಗು ಕರೆತರುತ್ತಿದ್ದ ತಾಯಿ, ಮುಂದೆ...?
ಆಗ್ನೇಯ ಜಿಲ್ಲಾ ಡಿಸಿಪಿ ಆರ್.ಪಿ.ಮೀನಾ ಮಾತನಾಡಿ, "ಬೆಂಕಿ ಪ್ರಾರಂಭವಾದ ಸ್ಥಳದಲ್ಲಿ, ದಿಲ್ಷಾದ್, ಸಬೀರ್ ಮತ್ತು ನೌಶಾದ್ ಎಂಬ ಮೂವರು ಸಹೋದರರು ಜಂಟಿಯಾಗಿ ಹಳೆಯ ಪೀಠೋಪಕರಣಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ಮಾಡುತ್ತಾರೆ. ಘಟನಾ ಸ್ಥಳದ ಸುಮಾರು 400-500 ಜನರು ಬೆಂಕಿಯನ್ನು ನಂದಿಸಲು ಪ್ರಾರಂಭಿಸಿದರು. ದೆಹಲಿ ಅಗ್ನಿಶಾಮಕ ವಾಹನಗಳು ಸಮಯಕ್ಕೆ ಸರಿಯಾಗಿ ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು" ಎಂದು ಮಾಹಿತಿ ನೀಡಿದರು.
ಈ ಅವಘಡದಲ್ಲಿ ಎಷ್ಟು ನಷ್ಟವಾಗಿದೆ ಎಂಬುದನ್ನು ಈಗಲೇ ಅಂದಾಜು ಮಾಡುವುದು ಕಷ್ಟವಾದರೂ, ಆರಂಭಿಕ ಅಂದಾಜಿನ ಪ್ರಕಾರ ಬೆಂಕಿಯಿಂದ ಸುಮಾರು 4 ಲಕ್ಷ ನಷ್ಟವಾಗಿರುವ ಸಾಧ್ಯತೆಯಿದೆ" ಎಂದು ಡಿಸಿಪಿ (ಆಗ್ನೇಯ) ಹೇಳಿದರು.
Input: IANS