ನವದೆಹಲಿ: ಶಹೀನ್ ಬಾಗ್‌ನಲ್ಲಿ ಪ್ರತಿದಿನ ತನ್ನ ತಾಯಿಯೊಂದಿಗೆ ಪ್ರದರ್ಶನಕ್ಕೆ ಹೋಗುತ್ತಿದ್ದ 4 ತಿಂಗಳ ಮಗು ಮೊಹಮ್ಮದ್ ಜಹಾನ್ ತೀವ್ರ ಶೀತದಿಂದ ಸಾವನ್ನಪ್ಪಿರುವ ಧಾರುಣ ಘಟನೆ ಸಂಭವಿಸಿದೆ. ರಾತ್ರಿಯಿಡೀ ತೀವ್ರ ಶೀತದಲ್ಲಿ ತಾಯಿಯೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಮೊಹಮ್ಮದ್ ಜಹಾನ್ ಎಂಬ ಮಗು ತೀವ್ರ ಶೀತ ಮತ್ತು ಉಸಿರಾಟದ ತೊಂದರೆಗಳಿಂದ ಕೊನೆಯುಸಿರೆಳೆದಿದೆ. ವಿಶೇಷವೆಂದರೆ ಈ ಘಟನೆಯ ಬಳಿಕವೂ ಮಗುವಿನ ತಾಯಿ ಇನ್ನೂ ಪ್ರತಿಭಟನೆಯಲ್ಲಿ ಹಾಜರಾಗುತ್ತಿದ್ದಾರೆ. ಈ ಪ್ರತಿಭಟನೆ "ನನ್ನ ಮಕ್ಕಳ ಭವಿಷ್ಯಕ್ಕಾಗಿ" ಎಂದು ಅವರು ಹೇಳುತ್ತಾರೆ.
ಮೊಹಮ್ಮದ್ ಜಹಾನ್ ಅವರ ತಾಯಿ ನಾಜಿಯಾ ಪ್ರತಿದಿನ ಶಾಹೀನ್ ಬಾಗ್ ಪ್ರದರ್ಶನಕ್ಕೆ ಹೋಗುತ್ತಿದ್ದರು. ಆ ಮಗು ಪ್ರತಿಭಟನೆ ಸಮಯದಲ್ಲೂ ಎಲ್ಲರ ಗಮನ ಸೆಳೆದಿತ್ತು. ಪ್ರತಿಭಟನಾಕಾರರೂ ಕೂಡ ಆ ಮಗುವನ್ನು ಎತ್ತಿ ಆಡಿಸುತ್ತಿದ್ದರು, ಆತನ ಕೆನ್ನೆಯ ಮೇಲೆ ತ್ರಿವರ್ಣ ಧ್ವಜವನ್ನು ಬರೆಯುತ್ತಿದ್ದರು ಎನ್ನಲಾಗಿದೆ.
ಮಗುವಿನ ಪೋಷಕರಾದ ಮೊಹಮ್ಮದ್ ಆರಿಫ್ ಮತ್ತು ನಾಜಿಯಾ ಅವರು ಬಾಟ್ಲಾ ಹೌಸ್ ಪ್ರದೇಶದಲ್ಲಿ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಇನ್ನಿಬ್ಬರು ಮಕ್ಕಳಿದ್ದಾರೆ - 5 ವರ್ಷದ ಮಗಳು ಮತ್ತು ಒಂದು ವರ್ಷದ ಮಗ. ಈ ದಂಪತಿಗಳು ಮೂಲತಃ ಉತ್ತರಪ್ರದೇಶದ ಬರೇಲಿಯವರು. ಆರಿಫ್ ಕಸೂತಿ ಕೆಲಸಗಾರ ಮತ್ತು ಇ-ರಿಕ್ಷಾ ಸಹ ನಡೆಸುತ್ತಿದ್ದಾರೆ. ಕಸೂತಿ ಕೆಲಸದಲ್ಲಿ ಅವರ ಹೆಂಡತಿ ಸಹಾಯ ಮಾಡುತ್ತಾರೆ.
ಮೊಹಮ್ಮದ್ ಜಹಾನ್ ಅವರ ತಂದೆ ಮೊಹಮ್ಮದ್ ಆರಿಫ್ ಮಾತನಾಡಿ, "ಬ್ಯಾಟರಿ ರಿಕ್ಷಾ ಓಡುಸುತ್ತಾ ನನ್ನ ಕಸೂತಿ ಕೆಲಸಗಳನ್ನು ಹೊರತುಪಡಿಸಿ ಕಳೆದ ತಿಂಗಳಲ್ಲಿ ನಾನು ಸಾಕಷ್ಟು ಸಂಪಾದಿಸಲು ಸಾಧ್ಯವಾಗಲಿಲ್ಲ. ಈಗ ನಮ್ಮ ಮಗುವಿನ ನಿಧನದ ಕಾರಣದಿಂದ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮೃತ ಶಿಶುವಿನ ಫೋಟೋ ಒಂದನ್ನು ತೋರಿಸಿದರು. ಆ ಫೋಟೋದಲ್ಲಿ ಮಗು ಉಣ್ಣೆಯ ಟೋಪಿ ಧರಿಸಿದ್ದು ಅದರ ಮೇಲೆ 'ಐ ಲವ್ ಇಂಡಿಯಾ' ಎಂದು ಬರೆದಿರುವುದನ್ನು ಅವರು ತೋರಿಸಿದರು."
ಮಗುವಿನ ತಾಯಿ ನಾಜಿಯಾ ಮಾತನಾಡಿ "ಜನವರಿ 30ರ ರಾತ್ರಿ ನಾನು ಶಾಹೀನ್ ಬಾಗ್‌ನಿಂದ ಸುಮಾರು 1 ಗಂಟೆಗೆ ಮರಳಿದ್ದೇನೆ. ಬಳಿಕ ಜಹಾನ್ ನಿದ್ರೆಗೆ ಜಾರಿದ, ತಾನೂ ಕೂಡ ಮಕ್ಕಳೆಲ್ಲ ಮಲಗಿದ ಮೇಲೆ ನಿದ್ರೆಗೆ ಜಾರಿದೆ. ಬೆಳಗೆದ್ದು ನೋಡುವ ಹೊತ್ತಿಗೆ ಮಗು ಏನೂ ಪ್ರತಿಕ್ರಿಯಿಸುತ್ತಿರಲಿಲ್ಲ. ತಕ್ಷಣವೇ ನಾನು ನನ್ನ ಪತಿ ಇಬ್ಬರೂ ಮಗುವನ್ನು ಅಲ್ಸಿಫಾ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ಮಗು ಸತ್ತಿರುವುದಾಗಿ ಘೋಷಿಸಿದರು."
ಕಳೆದ ಡಿಸೆಂಬರ್ 18 ರಿಂದ ಜಹಾನ್ ಅವರೊಂದಿಗೆ ಶಾಹೀನ್ ಬಾಗ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ನಾಜಿಯಾ, ತನ್ನ ಮಗು ಶೀತದಿಂದ ಮೃತಪಟ್ಟಿದೆ ಎಂದು ಹೇಳಿದರು. ಆದರೆ, ಆಸ್ಪತ್ರೆಯಿಂದ ನೀಡಲ್ಪಟ್ಟ ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಯಾವುದೇ ನಿರ್ದಿಷ್ಟ ಕಾರಣವನ್ನು ಉಲ್ಲೇಖಿಸಿಲ್ಲ.