Manipur Violence: ಮಣಿಪುರ ಉಚ್ಚ ನ್ಯಾಯಾಲಯದ ಆದೇಶ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಯಾಗಬೇಕೆಂಬ ಮೈತಿ ಸಮುದಾಯದ ಕೂಗಿಗೆ ಉತ್ತೇಜನ ನೀಡಿದೆ. ಆದರೆ ಈ ಸಮಸ್ಯೆಯ ಮೂಲವೇನು? ಬುಧವಾರ, ಮೇ 3ರಂದು ಮಣಿಪುರದ ಆಲ್ ಟ್ರೈಬಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಮಣಿಪುರ್ (ಎಟಿಎಸ್‌ಯುಎಂ) ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆಯನ್ನು ಆಯೋಜಿಸಿತ್ತು. ಆದರೆ ಈ ಮೆರವಣಿಗೆಯು ಹಲವು ಪ್ರದೇಶಗಳಲ್ಲಿ ಹಿಂಸಾರೂಪ ಪಡೆದುಕೊಂಡಿತು. ಸೇನಾಪಡೆಗಳು ಮತ್ತು ಅಸ್ಸಾಂ ರೈಫಲ್ ಪಡೆಗಳು ಹೊಡೆದಾಟ ನಡೆದ ಪ್ರದೇಶಗಳಲ್ಲಿ ಧ್ವಜ ಹಿಡಿದು ಮೆರವಣಿಗೆ ನಡೆಸಿದವು.


COMMERCIAL BREAK
SCROLL TO CONTINUE READING

ಮೈತಿ ಸಮುದಾಯ ದೀರ್ಘಕಾಲದಿಂದ ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಬೇಡಿಕೆ ಸಲ್ಲಿಸಿತ್ತು. ಅದಕ್ಕಾಗಿ ಈ ಮೆರವಣಿಗೆಯನ್ನೂ ಆಯೋಜಿಸಲಾಯಿತು. ಕಳೆದ ತಿಂಗಳು ಮಣಿಪುರ ಉಚ್ಚ ನ್ಯಾಯಾಲಯ ತನ್ನ ಆದೇಶದಲ್ಲಿ ಮೈತಿ ಸಮುದಾಯವನ್ನು ಎಸ್‌ಟಿಗೆ ಸೇರಿಸುವಂತೆ ಸೂಚಿಸಿತ್ತು.


ಆದರೆ ಉಚ್ಚ ನ್ಯಾಯಾಲಯದ ಒಬ್ಬರೇ ನ್ಯಾಯಾಧೀಶರು ನೀಡಿದ ಈ ಆದೇಶವನ್ನು ರಾಜ್ಯದ ಬುಡಕಟ್ಟು ಜನಾಂಗಗಳು ಬಲವಾಗಿ ವಿರೋಧಿಸಿದವು. ಎಪ್ರಿಲ್ 14ರಂದು ಉಚ್ಚ ನ್ಯಾಯಾಲಯ ಮೈತಿ ಸಮುದಾಯದ ಕೋರಿಕೆಯ ಕುರಿತು ಆಲೋಚಿಸುವಂತೆ ಸರ್ಕಾರಕ್ಕೆ ನೀಡಿದ ಆದೇಶದ ಬಳಿಕ, ಕಣಿವೆಯಲ್ಲಿರುವ ಮೈತಿ ಸಮುದಾಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿರುವ ಇತರ ಬುಡಕಟ್ಟು ಜನಾಂಗಗಳ ನಡುವಿನ ಹಳೆಯ ಅಸಮಾಧಾನಗಳಿಗೆ ಮರುಜೀವ ನೀಡಿದಂತಾಯಿತು.


ಮಣಿಪುರದಲ್ಲಿರುವ ಪ್ರಮುಖ ಸಮುದಾಯಗಳು ಯಾವುವು?
ಮಣಿಪುರದ ಅತಿದೊಡ್ಡ ಸಮುದಾಯವೆಂದರೆ ಅದು ಮೈತಿಗಳದ್ದು. ಮಣಿಪುರದಲ್ಲಿ ಒಟ್ಟು 34 ಗುರುತಿಸಲಾದ ಸಮುದಾಯಗಳಿದ್ದು, ಅವುಗಳನ್ನು ಕುಕಿ ಸಮುದಾಯ ಮತ್ತು ನಾಗಾ ಸಮುದಾಯಗಳ ಗುಂಪುಗಳಿಗೆ ಸೇರಿಸಲಾಗಿದೆ.


ಇದನ್ನೂ ಓದಿ- ನನ್ನ ರಾಜ್ಯ ಮಣಿಪುರ ಉರಿಯುತ್ತಿದೆ, ದಯವಿಟ್ಟು ಸಹಾಯ ಮಾಡಿ: ಪ್ರಧಾನಿ ಮೋದಿ, ಶಾಗೆ ಮೇರಿ ಕೋಮ್ ಮನವಿ


ಮಣಿಪುರದ ಅಂದಾಜು 10% ಭೂ ಪ್ರದೇಶ ಕೇಂದ್ರೀಯ ಕಣಿವೆಯಲ್ಲಿದೆ. ಮಣಿಪುರದ 64.6% ಜನಬಾಹುಳ್ಯ ಹೊಂದಿರುವ ಮೈತಿ ಮತ್ತು ಮೈತಿ ಪಾಂಗಲ್ ಸಮುದಾಯದ ಬಹುತೇಕ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಇನ್ನು ಗುರುತಿಸಲಾದ ಇತರ ಬುಡಕಟ್ಟುಗಳು ಮಣಿಪುರದ ಜನಸಂಖ್ಯೆಯ 35.4% ಇದ್ದು, ಅವರು ಈ ಕಣಿವೆಯ ಸುತ್ತಲಿನ ಗುಡ್ಡಗಳಲ್ಲಿ ವಾಸಿಸುತ್ತಿದ್ದಾರೆ. ಈ ಗುಡ್ಡಗಳು ಮಣಿಪುರದ 90% ಭೂಪ್ರದೇಶದಲ್ಲಿ ವ್ಯಾಪಿಸಿವೆ.


ಮೈತಿ ಸಮುದಾಯ ಯಾಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಕೇಳುತ್ತಿದೆ?
2012ರಲ್ಲಿ ಸ್ಥಾಪನೆಯಾದ ಶೆಡ್ಯೂಲ್ಡ್ ಟ್ರೈಬ್ಸ್ ಡಿಮಾಂಡ್ ಕಮಿಟಿ ಆಫ್ ಮಣಿಪುರ (ಎಸ್‌ಟಿಡಿಸಿಎಂ) ಈ ಬೇಡಿಕೆಗೆ ಬೆಂಬಲ ನೀಡುತ್ತಾ ಬಂದಿದೆ.


ಮೈತಿ ಟ್ರೈಬ್ ಯೂನಿಯನ್ ಸಂಘಟನೆ ಇತ್ತೀಚೆಗೆ ಮಣಿಪುರ ಉಚ್ಚ ನ್ಯಾಯಾಲಯದ ಬಳಿ ಮಣಿಪುರ ಸರ್ಕಾರಕ್ಕೆ ಕೇಂದ್ರ ಬುಡಕಟ್ಟು ಸಚಿವಾಲಯಕ್ಕೆ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡ ಎಂದು ಘೋಷಿಸುವಂತೆ ಮನವಿ ಮಾಡಲು ಆದೇಶಿಸುವಂತೆ ಆಗ್ರಹಿಸಿತು.


ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ಮನವಿಯಲ್ಲಿ ಅರ್ಜಿದಾರರು ಮಣಿಪುರ ಸಾಮ್ರಾಜ್ಯ ಭಾರತದೊಳಗೆ ವಿಲೀನವಾಗುವ ಮುನ್ನ, 1949ರಲ್ಲೇ ಮೈತಿ ಸಮುದಾಯವನ್ನು ಬುಡಕಟ್ಟು ಸಮುದಾಯ ಎಂದು ಪರಿಗಣಿಸಲಾಗಿತ್ತು ಎಂದಿದ್ದಾರೆ. ಆದರೆ, ಭಾರತದೊಡನೆ ಮಣಿಪುರ ವಿಲೀನವಾದ ಬಳಿಕ ಸಮುದಾಯಕ್ಕೆ ಈ ಸ್ಥಾನಮಾನ ಸಿಗಲಿಲ್ಲ. ನ್ಯಾಯಾಲಯದಲ್ಲಿ ಅರ್ಜಿದಾರರು ಮೈತಿ ಸಮುದಾಯವನ್ನು ಕಾಪಾಡಿಕೊಳ್ಳಲು, ಪೂರ್ವಜರ ನೆಲವನ್ನು ರಕ್ಷಿಸಲು, ಸಂಪ್ರದಾಯ, ಸಂಸ್ಕೃತಿ, ಮತ್ತು ಭಾಷೆಯನ್ನು ಕಾಪಾಡಿಕೊಳ್ಳಲು ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.


ಎಸ್‌ಟಿಡಿಸಿಎಂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮಾಡಿದ ಪ್ರತ್ಯೇಕ ಮನವಿಗಳಲ್ಲಿ "ಇಂದಿನ ತನಕವೂ ಸಮುದಾಯಕ್ಕೆ ಯಾವುದೇ ಸಾಂವಿಧಾನಿಕ ಭದ್ರತೆಗಳಿಲ್ಲದೆ, ಬಲಿಪಶುವನ್ನಾಗಿ ಮಾಡಲಾಗಿದೆ. ಮೈತಿಗಳು ತಾವು ಜೀವಿಸುತ್ತಿದ್ದ ಪ್ರದೇಶದಲ್ಲೇ ಇಂದು ಕಡಿಮೆ ಪ್ರಾಮುಖ್ಯತೆ ಹೊಂದಿದ್ದಾರೆ. 2011ರ ಜನಗಣತಿಯ ಮಾಹಿತಿಗಳ ಪ್ರಕಾರ, 1951ರಲ್ಲಿ ಮಣಿಪುರದ 59% ಇದ್ದ ಮೈತಿಗಳ ಸಂಖ್ಯೆ ಇಂದು 44%ಕ್ಕೆ ಇಳಿದಿದೆ.


ಇದನ್ನೂ ಓದಿ- ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿದ ಭಾರತ: ಇದನ್ನು ಸಂಭ್ರಮಿಸಬೇಕೋ ಅಥವಾ ಚಿಂತಿಸಬೇಕೋ?


ಮಣಿಪುರ ನ್ಯಾಯಾಲಯ ಏನು ಹೇಳುತ್ತದೆ?
ಉಚ್ಚ ನ್ಯಾಯಾಲಯ "ಅರ್ಜಿದಾರರು ಮತ್ತು ಇತರ ಸಂಘಟನೆಗಳು ದೀರ್ಘಕಾಲದಿಂದ ಮೈತಿ ಸಮುದಾಯವನ್ನು ಮಣಿಪುರದ ಪರಿಶಿಷ್ಟ ಗುಂಪಿಗೆ ಸೇರಿಸಬೇಕೆಂದು ಆಗ್ರಹಿಸುತ್ತಾ ಬಂದಿವೆ" ಎಂದಿದೆ. ನ್ಯಾಯಾಲಯ ಸರ್ಕಾರಕ್ಕೆ ಆದೇಶ ನೀಡಿದ ನಾಲ್ಕು ವಾರಗಳೊಳಗೆ ತನ್ನ ಶಿಫಾರಸು ಸಲ್ಲಿಸುವಂತೆ ಸೂಚಿಸಿದೆ.


ಬುಡಕಟ್ಟು ಗುಂಪುಗಳು ಯಾಕೆ ಇದನ್ನು ವಿರೋಧಿಸುತ್ತಿವೆ?
ದೀರ್ಘಕಾಲದಿಂದಲೂ ಮಣಿಪುರದ ಬುಡಕಟ್ಟು ಸಮುದಾಯಗಳು ಮೈತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವುದನ್ನು ವಿರೋಧಿಸುತ್ತಾ ಬಂದಿವೆ. ಇದಕ್ಕೆ ಅವುಗಳು ನೀಡಿರುವ ಒಂದು ಕಾರಣವೆಂದರೆ, ಮೈತಿ ಸಮುದಾಯ ಅಪಾರ ಜನಸಂಖ್ಯೆಯನ್ನು ಹೊಂದಿದ್ದು, ಹೆಚ್ಚಿನ ಅಧಿಕಾರವನ್ನು ಹೊಂದಿದೆ. ಮಣಿಪುರದ 60 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳು (ಮೈತಿ ವಿಧಾನಸಭಾ ಸದಸ್ಯರು) ಕಣಿವೆಯಲ್ಲೇ ಇವೆ.


ಮಣಿಪುರದ ಕುಕಿ ಸಮುದಾಯದ ಸರ್ವೋಚ್ಚ ಸಂಘಟನೆ ಕುಕಿ ಇನ್ಪಿ ಮುಖ್ಯಸ್ಥರಾದ ಜಂಘಾವೋಲುನ್ ಹಾವೊಕಿಪ್ ಅವರು "ಮಣಿಪುರದ ಎಸ್‌ಟಿ ಸಮುದಾಯಗಳು ಮೊದಲಿನಿಂದಲೂ ಮೈತಿ ಸಮಯದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸುತ್ತಾ ಬಂದಿವೆ. ಅವುಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುವ, ಮತ್ತು ಸಂವಿಧಾನ ನೀಡಿರುವ ಅನುಕೂಲತೆಗಳು ಮೈತಿಯಂತಹ ಪ್ರಬಲ ಸಮುದಾಯಕ್ಕೆ ಮಾತ್ರ ಲಭ್ಯವಾಗುವ ಭೀತಿಯಿದೆ" ಎಂದಿದ್ದಾರೆ.


ಈ ವಿರೋಧಕ್ಕೆ ನೀಡಲಾಗಿರುವ ಇತರ ಕಾರಣಗಳೆಂದರೆ, ಮೈತಿಗಳ ಭಾಷೆಯಾದ ಮಣಿಪುರಿ ಈಗಾಗಲೇ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಿದೆ. ಮೈತಿ ಸಮುದಾಯ ಹಿಂದೂಗಳಾಗಿದ್ದು, ಹೆಚ್ಚಿನ ಜಾತಿಗಳಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಹಾಗೂ ಇತರ ಹಿಂದುಳಿದ ವರ್ಗ (ಒಬಿಸಿ) ಕ್ಕೆ ಸೇರಿದ್ದು, ಆ ಅನುಕೂಲತೆಗಳೂ ಲಭ್ಯವಿವೆ.


ಇದನ್ನೂ ಓದಿ- ನಾವೇಕೆ ಕಡ್ಡಾಯವಾಗಿ ಮತದಾನ ಮಾಡಬೇಕು?


"ಮೈತಿ ಸಮುದಾಯಕ್ಕೆ ತಮ್ಮ ಸಂಸ್ಕೃತಿ ಮತ್ತು ಗುರುತನ್ನು ಸಂರಕ್ಷಿಸಲು ಎಸ್‌ಟಿ ಸ್ಥಾನಮಾನದ ಅಗತ್ಯವಿಲ್ಲ. ಮೈತಿ ಸಮುದಾಯ ಪ್ರಬಲ ಸಮುದಾಯವಾಗಿದ್ದು, ಸರ್ಕಾರ ಮತ್ತು ವ್ಯವಸ್ಥೆಗಳನ್ನು ನಿಯಂತ್ರಿಸುತ್ತದೆ. ಅವರ ಸಂಸ್ಕೃತಿ, ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಸರ್ಕಾರ ರಕ್ಷಿಸುತ್ತಾ ಬಂದಿದೆ" ಎಂದು ಜೆಎನ್‌ಯುನ ಸೆಂಟರ್ ಫಾರ್ ಸ್ಟಡಿ ಆಫ್ ಲಾ ಆ್ಯಂಡ್ ಗವರ್ನೆನ್ಸ್‌ನಲ್ಲಿ ಉಪನ್ಯಾಸಕರಾಗಿರುವ ಜಂಘಾವೋಲುನ್ ಹಾವೊಕಿಪ್ ಅವರು ತನ್ನ ಪ್ರಬಂಧ "ದ ಪಾಲಿಟಿಕ್ಸ್ ಆಫ್ ಶೆಡ್ಯೂಲ್ಡ್ ಟ್ರೈಬ್ ಸ್ಟೇಟಸ್ ಇನ್ ಮಣಿಪುರ್" ನಲ್ಲಿ ಹೇಳಿದ್ದಾರೆ. ಆದ್ದರಿಂದ ಮೈತಿಗಳ ಸಂಸ್ಕೃತಿ ಮತ್ತು ಗುರುತು ಅಪಾಯದಲ್ಲಿಲ್ಲ ಎಂದಿದ್ದಾರೆ.


ಮಣಿಪುರದ ಗುಡ್ಡಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಈಗ ಮೈತಿಗಳು ಎಸ್‌ಟಿ ಸ್ಥಾನಮಾನ ಕೇಳುತ್ತಿರುವುದು ಕುಕಿ ಮತ್ತು ನಾಗಾ ಸಮುದಾಯಗಳು ಪ್ರಬಲ ರಾಜಕೀಯ ಬೆಳವಣಿಗೆ ಕಾಣದಂತೆ ತಡೆಯಲು ಎಂದೇ ಭಾವಿಸಿದ್ದಾರೆ. ಇದು ಒಂದು ರೀತಿ ಕಣಿವೆಯಲ್ಲಿರುವ ಮೈತಿಗಳು ರಾಜ್ಯದ ಗುಡ್ಡ ಪ್ರದೇಶಕ್ಕೂ ವಿಸ್ತರಿಸುವ ಪ್ರಯತ್ನ ಎಂದು ಪ್ರೊಫೆಸರ್ ಹಾವೋಕಿಪ್ ಅವರು ಅಭಿಪ್ರಾಯ ಪಟ್ಟಿದ್ದಾರೆ.


ಮಣಿಪುರದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆಲ್ಲ ಇದೊಂದೇ ಕಾರಣವೇ?
ಹಲವು ಕಾರಣಗಳಿಗಾಗಿ ಮಣಿಪುರದ ಗುಡ್ಡಗಾಡಿನ ಸಮುದಾಯಗಳಲ್ಲಿ ಅಸಮಾಧಾನ ಕುದಿಯೊಡೆದಿದೆ.


ಎಪ್ರಿಲ್ ತಿಂಗಳ ಅಂತ್ಯದಲ್ಲಿ ಮಣಿಪುರದ ಚೂರಚಂದಪುರದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಉದ್ಘಾಟಿಸಬೇಕಿದ್ದ ಜಿಮ್ ಒಂದಕ್ಕೆ ತೆರಳಿದ ಉದ್ರಿಕ್ತ ಗುಂಪು ದಾಳಿ ನಡೆಸಿತು. ಆಗಸ್ಟ್ 2022ರ ಬಳಿಕ, ರಾಜ್ಯ ಸರ್ಕಾರ ಒಂದು ಸೂಚನೆ ನೀಡಿ, ಚಂದ್ರಾಪುರ - ಖೌಪುಮ್ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ 38 ಗ್ರಾಮಗಳಲ್ಲಿರುವ (ಚೂರಚಂದ್ರಾಪುರ ಮತ್ತು ನಾನಿ ಜಿಲ್ಲೆಗಳು) ಜನರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸಿದೆ.


ಇದರ ಬಳಿಕ, ಸರ್ಕಾರ ಅವರ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸಿತು. ಅದರ ಪರಿಣಾಮವಾಗಿ ಗಲಭೆಗಳು ಆರಂಭಗೊಂಡವು.


ಕುಕಿ ಸಮುದಾಯ ಈ ಸಮೀಕ್ಷೆ ಮತ್ತು ಸ್ಥಳಾಂತರ ಪ್ರಕ್ರಿಯೆಗಳು ಸಂವಿಧಾನದ 371ನೇ ವಿಧಿಯ ಉಲ್ಲಂಘನೆಯಾಗಿದೆ. ಈ ವಿಧಿ ಬುಡಕಟ್ಟು ಜನಾಂಗದವರಿಗೆ ಮಣಿಪುರದ ಗುಡ್ಡ ಪ್ರದೇಶಗಳಲ್ಲಿ ಸ್ವಲ್ಪ ಮಟ್ಟಿಗೆ ಸ್ವಾಯತ್ತತೆ ನೀಡುತ್ತದೆ. ವರದಿಗಳ ಪ್ರಕಾರ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು "ಈ ನಿವಾಸಿಗಳು ಸಂರಕ್ಷಿತ ಅರಣ್ಯಗಳಲ್ಲಿ ಅತಿಕ್ರಮಣ ನಡೆಸಿ, ಮಾದಕ ವಸ್ತುಗಳನ್ನು ಬೆಳೆದು, ಮಾದಕ ಉದ್ಯಮ ನಡೆಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.


ಮಣಿಪುರದಲ್ಲಿ 355ನೇ ವಿಧಿಯನ್ನು ಹೇರಿದ ಕೇಂದ್ರ ಸರ್ಕಾರ:
ಮಣಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಗಳ ಬಳಿಕ, ಕೇಂದ್ರ ಸರ್ಕಾರ ಮಣಿಪುರದಲ್ಲಿ 355ನೇ ವಿಧಿಯನ್ನು ಹೇರಿದೆ. ಈ ವಿಧಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ, ಬಾಹ್ಯ ಅತಿಕ್ರಮಣ ಹಾಗೂ ಆಂತರಿಕ ಸಮಸ್ಯೆಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರಕ್ಕೆ ವಹಿಸುತ್ತದೆ.


ಭಾರತೀಯ ಸಂವಿಧಾನದ 355ನೇ ವಿಧಿ ಸಂವಿಧಾನದ ತುರ್ತು ಪರಿಸ್ಥಿತಿಯ ಅಂಗವಾಗಿದ್ದು, ಇದು 352ನೇ ವಿಧಿಯಿಂದ 360ರ ತನಕ ತುರ್ತು ಪರಿಸ್ಥಿತಿಯ ಕುರಿತು ನಿರ್ದೇಶಿಸುತ್ತದೆ. ಈ ವಿಧಿ ಯಾವುದೇ ರಾಜ್ಯದಲ್ಲಿ ಆಂತರಿಕ ಪ್ರಕ್ಷುಬ್ಧತೆ ಮತ್ತು ಬಾಹ್ಯ ಆಕ್ರಮಣವನ್ನು ತಡೆಯುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.