ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿದ ಭಾರತ: ಇದನ್ನು ಸಂಭ್ರಮಿಸಬೇಕೋ ಅಥವಾ ಚಿಂತಿಸಬೇಕೋ?

India Becomes World's Most Populous Country: ಈ ಅಪಾರ ಪ್ರಮಾಣದ ಜನಸಂಖ್ಯೆಯ ಲಾಭ ಪಡೆಯಬೇಕಾದರೆ, ಭಾರತ ದುಡಿಯುವ ವಯಸ್ಸಿನ ಯುವಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ, ಭಾರತದಲ್ಲಿ ಉದ್ಯೋಗ ಮಾಡುವ ವಯಸ್ಸಿನ ಯುವಕರಲ್ಲಿ 40% ಮಾತ್ರವೇ ಉದ್ಯೋಗದಲ್ಲಿದ್ದಾರೆ ಅಥವಾ ಕೆಲಸ ಮಾಡುವ ಹಂಬಲ ಹೊಂದಿದ್ದಾರೆ.

Written by - Girish Linganna | Edited by - Yashaswini V | Last Updated : May 4, 2023, 02:24 PM IST
  • ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಿನ ಇಳಿಕೆ ಕಂಡಿದೆ.
  • ಭಾರತದ ಹೆಚ್ಚಿನ ಭಾಗ ದಕ್ಷಿಣ ಭಾರತದಂತೆ ಇರಲಾಗಿಲ್ಲ ಎನ್ನುವುದಕ್ಕೆ ಪ್ರೊಫೆಸರ್ ಡೈಸನ್ ಬೇಸರ ವ್ಯಕ್ತಪಡಿಸುತ್ತಾರೆ.
  • "ಎಲ್ಲಾ ರೀತಿಯಲ್ಲಿ ಸಮಾನತೆ ಇದ್ದರೂ, ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಅಪಾರವಾದ ಜನಸಂಖ್ಯಾ ಹೆಚ್ಚಳ ಅಭಿವೃದ್ಧಿ ಮತ್ತು ಜೀವನ ಮಟ್ಟವನ್ನು ಕುಂಠಿತಗೊಳಿಸಿದೆ" ಎಂದು ಅವರು ಭಾವಿಸುತ್ತಾರೆ.
ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಟ್ರವೆನಿಸಿದ ಭಾರತ: ಇದನ್ನು ಸಂಭ್ರಮಿಸಬೇಕೋ ಅಥವಾ ಚಿಂತಿಸಬೇಕೋ? title=

World's Most Populous Country: ವಿಶ್ವಸಂಸ್ಥೆಯ ವರದಿಯ ಪ್ರಕಾರ, ಭಾರತದ ಜನಸಂಖ್ಯೆ ಈಗ 1,425,775,850 ಆಗಿದ್ದು, ಈ ಜನಸಂಖ್ಯೆ ಚೀನಾದ ಜನಸಂಖ್ಯೆಗಿಂತ ಹೆಚ್ಚಿನದಾಗಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಭಾರತದ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಆದರೆ ಅದು ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಮುಂದೂಡಲ್ಪಟ್ಟದ್ದರಿಂದ ಸಾರ್ವಜನಿಕ ವಲಯದಲ್ಲಿ ಭಾರತದ ಜನಸಂಖ್ಯೆಯ ಕುರಿತ ಮಾಹಿತಿಗಳು ಲಭ್ಯವಿಲ್ಲ. ಚೀನಾದ ಏಳನೇ ಜನಗಣತಿಯನ್ನು 2020ರಲ್ಲಿ ನಡೆಸಲಾಗಿತ್ತು.

ವಿಶ್ವಸಂಸ್ಥೆ ದಾಖಲೆಗಳಲ್ಲಿ, ಸಮೀಕ್ಷೆಗಳಲ್ಲಿ ಮತ್ತು ಆಡಳಿತ ಮಾಹಿತಿಗಳು ಮತ್ತು ಸರ್ಕಾರಿ ಯೋಜನೆಗಳ ಆಧಾರದಲ್ಲಿ ಭಾರತ ಮತ್ತು ಚೀನಾದ ಜನಸಂಖ್ಯೆ ಎಷ್ಟಿದೆ ಎಂದು ಅಂದಾಜು ಮಾಡಿದೆ. ಈ ಮಾಹಿತಿಗಳನ್ನು ಹುಟ್ಟು, ಸಾವು, ಮತ್ತು ವಲಸೆಗಳ ಆಧಾರದಲ್ಲಿ ಪಡೆಯಲಾಗುತ್ತದೆ.

ಭಾರತ ಮತ್ತು ಚೀನಾ ಎರಡೂ ದೇಶಗಳು 1.4 ಬಿಲಿಯನ್‌ಗೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು, ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಜಗತ್ತಿನ ಮೂರನೇ ಒಂದಕ್ಕೂ ಹೆಚ್ಚು ಪಾಲು ಜನಸಂಖ್ಯೆಗೆ ನೆಲೆಯಾಗಿವೆ.

ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಜನಸಂಖ್ಯಾ ಸಮಸ್ಯೆ!
ಮುಂದಿನ ವರ್ಷದಿಂದ ಚೀನಾದ ಜನಸಂಖ್ಯೆ ಇಳಿಮುಖವಾಗುವ ಸಾಧ್ಯತೆಗಳಿವೆ. ಜನನದ ದರದಲ್ಲಿ ಅಪಾರ ಪ್ರಮಾಣದಲ್ಲಿ ಇಳಿಕೆ ಕಂಡಿರುವ ಚೀನಾದಲ್ಲಿ ಕಳೆದ ವರ್ಷ 10.6 ಮಿಲಿಯನ್ ಮಕ್ಕಳು ಜನಿಸಿದ್ದು, ಅದು ವಾರ್ಷಿಕ ಸಾವಿನ ಸಂಖ್ಯೆಗಿಂತ ಸ್ವಲ್ಪವಷ್ಟೇ ಹೆಚ್ಚಾಗಿದೆ. ವಿಶ್ವಸಂಸ್ಥೆಯ ಪ್ರಕಾರ, ಚೀನಾದ ಜನಸಂಖ್ಯೆ ಇನ್ನೂ ಇಳಿಮುಖವಾಗುತ್ತಾ ಸಾಗಲಿದ್ದು, ಈ ಶತಮಾನದ ಅಂತ್ಯದ ವೇಳೆಗೆ ಒಂದು ಬಿಲಿಯನ್‌ಗೂ ಹೆಚ್ಚು ಕುಸಿತ ಕಾಣಲಿದೆ.

ಕಳೆದ ಕೆಲವು ದಶಕಗಳಿಗೆ ಹೋಲಿಸಿ ನೋಡಿದರೆ, ಫಲವತ್ತತೆಯ ಪ್ರಮಾಣ ಭಾರತದಲ್ಲೂ ಸಾಕಷ್ಟು ಇಳಿಕೆ ಕಂಡಿದೆ. 1950ರ ದಶಕದಲ್ಲಿ ಪ್ರತಿ ಮಹಿಳೆ ಸರಾಸರಿ 5.7 ಮಕ್ಕಳಿಗೆ ಜನ್ಮ ನೀಡುತ್ತಿದ್ದರೆ, ಆ ಸರಾಸರಿ ಇಂದು ತಲಾ ಎರಡಕ್ಕೆ ಬಂದಿದೆ. ಆದರೆ ಈ ಕುಸಿತ ಸಾಕಷ್ಟು ನಿಧಾನವಾಗಿ ನಡೆದಿರುವುದರಿಂದ, ಇನ್ನೂ ಕೆಲ ದಶಕಗಳ ಕಾಲ ಭಾರತದ ಜನಸಂಖ್ಯೆ ಬೆಳೆಯುತ್ತಲೇ ಇರುತ್ತದೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2064ರ ವೇಳೆಗೆ ಭಾರತದ ಜನಸಂಖ್ಯೆ ಅತ್ಯುನ್ನತ ಮಟ್ಟಕ್ಕೆ ತಲುಪಿ, ಬಳಿಕ ನಿಧಾನವಾಗಿ ಇಳಿಮುಖವಾಗಲಿದೆ.

ಚೀನಾವನ್ನು ಹಿಂದಿಕ್ಕಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ - ಏನಿದರ ಅರ್ಥ?
ಚೀನಾದ ಜನಸಂಖ್ಯೆ ಭಾರತದ ಜನಸಂಖ್ಯೆಗಿಂತಲೂ ಕ್ಷಿಪ್ರವಾಗಿ ಇಳಿಕೆ ಕಂಡಿದೆ. ಚೀನಾದ ಜನಸಂಖ್ಯಾ ಪ್ರಗತಿಯ ಪ್ರಮಾಣ 1973ರಲ್ಲಿ 2% ಇದ್ದುದು 1983ರಲ್ಲಿ 1.1%ಗೆ ಇಳಿಕೆ ಕಂಡಿತು. ಇದು 1973ರ ಜನಸಂಖ್ಯಾ ದರದ ಬಹುತೇಕ ಅರ್ಧದಷ್ಟಿತ್ತು. ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಇದಕ್ಕೆ ಬಹುಮುಖ್ಯ ಕಾರಣಗಳೆಂದರೆ ಚೀನಾದಲ್ಲಿನ ಮಾನವ ಹಕ್ಕುಗಳ ದಮನ. ಅದಕ್ಕೆ ಪೂರಕವಾಗಿ ಒಂದೇ ಮಗುವಿನ ಕಾನೂನು, ತಡವಾದ ಮದುವೆ, ಮಗುವಿನಿಂದ ಮಗುವಿಗೆ ಹೆಚ್ಚಿನ ಅಂತರಗಳೂ ಕಾರಣಗಳಾಗಿವೆ.

ಅದರೊಡನೆ ಸಾರ್ವಜನಿಕ ಆರೋಗ್ಯ ವಲಯದಲ್ಲಿನ ಹೂಡಿಕೆ, ಹೆಣ್ಣುಮಕ್ಕಳಿಗೆ ಹೆಚ್ಚಿನ ಶಿಕ್ಷಣ, ಹೆಣ್ಣುಮಕ್ಕಳು ಉದ್ಯೋಗದಲ್ಲಿ ಹೆಚ್ಚಿನ ಜನನ ದರದ ಕುಸಿತಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯ ಪಡೆದ ಆರು ದಶಕಗಳ ಅವಧಿಯಲ್ಲಿ ಭಾರತದ ಜನಸಂಖ್ಯೆ ಮೂರು ಪಟ್ಟಿಗೂ ಹೆಚ್ಚು ಬೆಳೆದಿದೆ. 1951ರಲ್ಲಿ 361 ಮಿಲಿಯನ್ ಇದ್ದ ಜನಸಂಖ್ಯೆ 2011ರಲ್ಲಿ 1.2 ಬಿಲಿಯನ್‌ಗೆ ತಲುಪಿದೆ.

ಇಪ್ಪತ್ತನೇ ಶತಮಾನದ ದ್ವಿತೀಯಾರ್ಧದಲ್ಲಿ, ಭಾರತದ ಜನಸಂಖ್ಯೆಯಲ್ಲಿ ಕ್ಷಿಪ್ರ ಏರಿಕೆ ಕಂಡುಬಂದು, ಪ್ರತಿ ವರ್ಷವೂ ಬಹುತೇಕ 2% ಹೆಚ್ಚಳ ದಾಖಲಾಯಿತು. ಕಾಲ ಸರಿದಂತೆ ಭಾರತದಲ್ಲಿ ಸಾವಿನ ದರವೂ ಕಡಿಮೆಯಾಗತೊಡಗಿತು. ಸರಾಸರಿ ಆಯುಷ್ಯವೂ ಹೆಚ್ಚಾಯಿತು, ಆದಾಯವೂ ಹೆಚ್ಚಳ ಕಂಡಿತು. ಹೆಚ್ಚಿನ ಜನರು, ಅದರಲ್ಲೂ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಶುದ್ಧ ಕುಡಿಯುವ ನೀರು, ಆಧುನಿಕ ಚರಂಡಿ ವ್ಯವಸ್ಥೆಗಳು ಲಭಿಸಿದವು. ಆದರೂ, ಜನನ ದರ ಹೆಚ್ಚುತ್ತಲೇ ಹೋಯಿತು ಎನ್ನುತ್ತಾರೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯ ಟಿಮ್ ಡೈಸನ್.

1952ರಲ್ಲಿ ಭಾರತ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಭಾರತ 1976ರಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಜಾರಿಗೆ ತಂದಿತು. ಆ ಸಮಯಕ್ಕೆ ಚೀನಾ ಜನನ ದರವನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸುತ್ತಿತ್ತು.

1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕ ಸ್ವಾತಂತ್ರ್ಯಗಳು ದಮನವಾಗಿದ್ದ ವೇಳೆಯಲ್ಲಿ ಬಲವಂತದ ಜನನ ನಿಯಂತ್ರಣ ಕ್ರಮಗಳು ಕುಟುಂಬ ಯೋಜನೆಗಳ ವಿರುದ್ಧ ಜನಾಭಿಪ್ರಾಯ ಮೂಡಿಸಿದ್ದವು. "ಒಂದು ವೇಳೆ ತುರ್ತು ಪರಿಸ್ಥಿತಿ ಜಾರಿಗೆ ಬರದಿದ್ದರೆ, ಅಥವಾ ರಾಜಕಾರಣಿಗಳು ಹೆಚ್ಚು ಸಕ್ರಿಯವಾಗಿ ಕಾರ್ಯಾಚರಿಸಿದ್ದರೆ ಭಾರತದ ಜನಸಂಖ್ಯಾ ದರದ ಇಳಿಕೆ ಸಾಕಷ್ಟು ಹೆಚ್ಚಾಗಿರುತ್ತಿತ್ತು. ತುರ್ತುಪರಿಸ್ಥಿತಿಯ ಬಳಿಕ ಎಲ್ಲ ಆಡಳಿತಗಾರರೂ ಕುಟುಂಬ ಯೋಜನೆಗಳ ಕುರಿತು ಹೆಚ್ಚು ಜಾಗರೂಕತೆಯಿಂದ ಮುನ್ನಡೆಯುವಂತಾಯಿತು" ಎನ್ನುತ್ತಾರೆ ಪ್ರೊಫೆಸರ್ ಡೈಸನ್.

ಪೂರ್ವ ಏಷ್ಯಾದ ರಾಷ್ಟ್ರಗಳಾದ ದಕ್ಷಿಣ ಕೊರಿಯಾ, ಮಲೇಷ್ಯಾ, ತೈವಾನ್ ಹಾಗೂ ಥೈಲ್ಯಾಂಡ್ ಗಳು ಭಾರತಕ್ಕಿಂತ ಎಷ್ಟೋ ನಂತರ ಕುಟುಂಬ ಯೋಜನೆಗಳನ್ನು ಜಾರಿಗೆ ತಂದವು. ಆದರೆ ಅವುಗಳು ಭಾರತಕ್ಕಿಂತಲೂ ಬೇಗ ಕಡಿಮೆ ಜನನ ದರ, ಶಿಶು ಮತ್ತು ತಾಯಿಯ ಮರಣ ದರ, ಹೆಚ್ಚಿನ ಆದಾಯ, ಹಾಗೂ ಮಾನವ ಅಭಿವೃದ್ಧಿಗಳನ್ನು ದಾಖಲಿಸಿದವು.

ಜನಸಂಖ್ಯಾ ಹೆಚ್ಚಳದ ಕುರಿತು ಭಾರತಕ್ಕಿಲ್ಲ ಕಳವಳ!
ಭಾರತ 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಬಳಿಕ, ಭಾರತದ ಜನಸಂಖ್ಯೆ ಒಂದು ಬಿಲಿಯನ್‌ಗೂ ಮೀರಿ ಹೆಚ್ಚಾಗಿದೆ. ಭಾರತದ ಜನಸಂಖ್ಯೆ ಇನ್ನೂ ಮುಂದಿನ 40 ವರ್ಷಗಳ ಕಾಲ ಹೆಚ್ಚಾಗುವ ನಿರೀಕ್ಷೆಗಳಿವೆ.

ಆದರೆ ಭಾರತದಲ್ಲಿ ಜನಸಂಖ್ಯಾ ಏರಿಕೆಯ ದರ ದಶಕಗಳಿಂದ ಇಳಿಮುಖವಾಗುತ್ತಾ ಸಾಗಿದೆ. ಹಾಗೆಂದು ಜನಸಂಖ್ಯಾ ಇಳಿಕೆಯ ಎಚ್ಚರಿಕೆ ಭಾರತದಲ್ಲಿ ಇನ್ನೂ ತಲೆದೋರಿಲ್ಲ.

ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಭಾರತ ಚೀನಾಗಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವುದು ದೊಡ್ಡ ಮಟ್ಟದಲ್ಲಿ ಚಿಂತಿಸುವ ವಿಚಾರವಲ್ಲ.

ಈಗ ಭಾರತೀಯ ಮಹಿಳೆಯರಿಗೆ ಹೆಚ್ಚಿನ ಆದಾಯ, ಉತ್ತಮ ವೈದ್ಯಕೀಯ ಸೇವೆ ಹಾಗೂ ಉನ್ನತ ಶಿಕ್ಷಣ ಲಭ್ಯವಿರುವುದರಿಂದ, ಭಾರತೀಯ ಮಹಿಳೆಯರು ಮಕ್ಕಳನ್ನು ಹೊಂದುವುದು ಕಡಿಮೆಯಾಗಿದೆ. ಈ ಕಾರಣದಿಂದ ಜನಸಂಖ್ಯಾ ಏರಿಕೆಯ ರೇಖೆ ಇಳಿಮುಖವಾಗಿದೆ.

ಭಾರತದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಮಹಿಳೆಯರ ಸರಾಸರಿ ಮಕ್ಕಳ ಸಂಖ್ಯೆ ಎರಡಕ್ಕಿಂತಲೂ ಕಡಿಮೆಯಾಗಿದೆ.
 
ಭಾರತದ ಜನಗಣತಿ ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ  (ಎನ್ಎಫ್ಎಚ್ಎಸ್) ಗಳ ಆಧಾರದಲ್ಲಿ ಭಾರತದಲ್ಲಿ ಎಲ್ಲ ಧರ್ಮಗಳ ಫಲವತ್ತತೆಯ ಪ್ರಮಾಣ ಇಳಿಕೆ ಕಂಡಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ ದಾಖಲಿಸಿದೆ.

1951ರ ಬಳಿಕ ಜನರ ಧರ್ಮಗಳಲ್ಲಿ ಸ್ವಲ್ಪ ಪ್ರಮಾಣದ ಬದಲಾವಣೆಗಳಷ್ಟೇ ಕಂಡುಬಂದಿವೆ.

ಭಾರತದಲ್ಲಿ ಎಲ್ಲ ಧರ್ಮಗಳಲ್ಲೂ ಮಕ್ಕಳ ಜನನದ ಪ್ರಮಾಣ ಕಡಿಮೆಯಾಗುತ್ತಾ ಬಂದಿವೆ ಎಂದು ಅಧಿಕೃತ ಅಂಕಿ ಸಂಖ್ಯೆಗಳು ಸೂಚಿಸುತ್ತವೆ.

ಹೆಚ್ಚಿನ ಜನಸಂಖ್ಯೆ ಹೊಂದಿರುವ ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಿನ ಇಳಿಕೆ ಕಂಡಿದೆ. ಭಾರತದ ಹೆಚ್ಚಿನ ಭಾಗ ದಕ್ಷಿಣ ಭಾರತದಂತೆ ಇರಲಾಗಿಲ್ಲ ಎನ್ನುವುದಕ್ಕೆ ಪ್ರೊಫೆಸರ್ ಡೈಸನ್ ಬೇಸರ ವ್ಯಕ್ತಪಡಿಸುತ್ತಾರೆ. "ಎಲ್ಲಾ ರೀತಿಯಲ್ಲಿ ಸಮಾನತೆ ಇದ್ದರೂ, ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ಅಪಾರವಾದ ಜನಸಂಖ್ಯಾ ಹೆಚ್ಚಳ ಅಭಿವೃದ್ಧಿ ಮತ್ತು ಜೀವನ ಮಟ್ಟವನ್ನು ಕುಂಠಿತಗೊಳಿಸಿದೆ" ಎಂದು ಅವರು ಭಾವಿಸುತ್ತಾರೆ.

ಆದರೆ, ಚೀನಾವನ್ನು ಹಿಂದಿಕ್ಕಿದ್ದು ಒಂದು ಮಹತ್ವದ ವಿಚಾರವಾಗಿದೆ. ಉದಾಹರಣೆಗೆ, ಜನಸಂಖ್ಯೆಯಲ್ಲಿ ನಂಬರ್ ವನ್ ಆಗಿರುವುದು, ಸದ್ಯ ಚೀನಾ ಸೇರಿದಂತೆ ಐದು ಸದಸ್ಯ ರಾಷ್ಟ್ರಗಳಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಬೇಕೆಂಬ ಭಾರತದ ಬೇಡಿಕೆಗೆ ಬೆಂಬಲ ನೀಡಬಹುದು.

ಭಾರತ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ ಆರಂಭಿಕ ರಾಷ್ಟ್ರಗಳಲ್ಲಿ ಒಂದಾಗಿದ್ದು, ಭಾರತ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಪಡೆಯಲು ಅರ್ಹ ಎಂದು ವಿಶ್ವಸಂಸ್ಥೆಯೂ ಅಭಿಪ್ರಾಯ ಪಟ್ಟಿದೆ. "ಅತಿಹೆಚ್ಚು ಸಂಖ್ಯೆಯ ಜನರನ್ನು ಹೊಂದಿರುವ ಭಾರತಕ್ಕೆ ಸ್ಥಾನ ಕೇಳುವ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ" ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ ಮುಖ್ಯಸ್ಥರಾಗಿರುವ ಜಾನ್ ವಿಲ್‌ಮೋತ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂಬೈಯಲ್ಲಿ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸೈನ್ಸಸ್ ಸಂಸ್ಥೆ ನಡೆಸುತ್ತಿರುವ ಕೆ ಎಸ್ ಜೇಮ್ಸ್ ಅವರ ಪ್ರಕಾರ, ಭಾರತದ ಜನಸಂಖ್ಯೆ ಹೇಗೆ ಬದಲಾಗುತ್ತಿದೆ ಎನ್ನುವುದೂ ಮುಖ್ಯ ವಿಚಾರವಾಗಿದೆ.
 
ಪ್ರೊಫೆಸರ್ ಜೇಮ್ಸ್ ಅವರು ಹೆಚ್ಚು ಬಡಜನರಿರುವ, ವಿದ್ಯಾಭ್ಯಾಸದ ಕೊರತೆ ಇರುವ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕುಟುಂಬ ಯೋಜನೆಯನ್ನು ಅಳವಡಿಸುವ ಮೂಲಕ ಆರೋಗ್ಯಕರ ಜನಸಂಖ್ಯಾ ಬದಲಾವಣೆ ಜಾರಿಗೆ ತಂದಿರುವುದು ಶ್ಲಾಘನೀಯ ಎನ್ನುತ್ತಾರೆ. "ಜನಸಂಖ್ಯಾ ನಿಯಂತ್ರಣ ಜಾರಿಗೆ ತಂದ ಇತರ ರಾಷ್ಟ್ರಗಳಲ್ಲಿ ಆಗ ಹೆಚ್ಚಿನ ಜನರು ವಿದ್ಯಾಭ್ಯಾಸ ಹೊಂದಿದ್ದರು ಹಾಗೂ ಅವರ ಜೀವನಮಟ್ಟ ಉತ್ತಮವಾಗಿತ್ತು" ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಇನ್ನೊಂದು ಸಂತಸದ ವಿಚಾರವೆಂದರೆ, ಜಗತ್ತಿನಲ್ಲಿರುವ 25 ವರ್ಷದೊಳಗಿನ ಐವರಲ್ಲಿ ಒಬ್ಬರು ಭಾರತೀಯರಾಗಿದ್ದಾರೆ. ಭಾರತದ ಜನಸಂಖ್ಯೆಯ 47% 25 ವರ್ಷದ ಕೆಳಗಿನವರಾಗಿದ್ದಾರೆ. ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಜನ 1990ರ ದಶಕದ ಆರ್ಥಿಕ ಉದಾರೀಕರಣದ ನಂತರ ಜನಿಸಿದವರಾಗಿದ್ದಾರೆ. ಆದರೂ, ಭಾರತದ ಮುಂದೆ ಒಂದಷ್ಟು ಅಡೆತಡೆಗಳೂ ಇವೆ. 

ಈ ಅಪಾರ ಪ್ರಮಾಣದ ಜನಸಂಖ್ಯೆಯ ಲಾಭ ಪಡೆಯಬೇಕಾದರೆ, ಭಾರತ ದುಡಿಯುವ ವಯಸ್ಸಿನ ಯುವಜನತೆಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಪ್ರಕಾರ, ಭಾರತದಲ್ಲಿ ಉದ್ಯೋಗ ಮಾಡುವ ವಯಸ್ಸಿನ ಯುವಕರಲ್ಲಿ 40% ಮಾತ್ರವೇ ಉದ್ಯೋಗದಲ್ಲಿದ್ದಾರೆ ಅಥವಾ ಕೆಲಸ ಮಾಡುವ ಹಂಬಲ ಹೊಂದಿದ್ದಾರೆ.

ಮಹಿಳೆಯರು ಹೆರಿಗೆ ಮತ್ತು ಮಕ್ಕಳ ಜವಾಬ್ದಾರಿ ನೋಡಿಕೊಳ್ಳುವ ಅವಧಿಯಲ್ಲಿ ಕೆಲಸ ಮಾಡುವುದು ಕಷ್ಟಕರವಾಗಿರುವುದರಿಂದ, ಹೆಚ್ಚಿನ ಮಹಿಳೆಯರಿಗೆ ಉದ್ಯೋಗದ ಅವಶ್ಯಕತೆ ಇರುತ್ತದೆ. ಸಿಎಂಐಇ ಪ್ರಕಾರ, ಅಕ್ಟೋಬರ್ ತಿಂಗಳ ವೇಳೆಗೆ ಸಕ್ರಿಯ ಉದ್ಯೋಗಿಗಳಲ್ಲಿ ಕೇವಲ 10% ಉದ್ಯೋಗ ವಯಸ್ಕ ಮಹಿಳೆಯರು ಮಾತ್ರವೇ ಕೆಲಸ ಮಾಡುತ್ತಿದ್ದಾರೆ. ಚೀನಾದಲ್ಲಿ ಈ ಸಂಖ್ಯೆ 69% ಆಗಿತ್ತು.

ಭಾರತದಲ್ಲಿರುವ ಇನ್ನೊಂದು ಸಮಸ್ಯೆಯೆಂದರೆ ವಲಸೆ. ಭಾರತದಲ್ಲಿ 200 ಮಿಲಿಯನ್ ಜನರು ದೇಶದಲ್ಲೇ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳಿದ್ದಾರೆ. ಅವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಇವರಲ್ಲಿ ಹೆಚ್ಚಿನವರು ಉದ್ಯೋಗ ಹುಡುಕುತ್ತಾ, ಹಳ್ಳಿಗಳಿಂದ ಪಟ್ಟಣಕ್ಕೆ ಬಂದವರಾಗಿದ್ದಾರೆ.

"ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳ ಅಲಭ್ಯತೆ ಹಾಗೂ ಕಡಿಮೆ ಆದಾಯದ ಪರಿಣಾಮವಾಗಿ ಭಾರತದಲ್ಲಿ ನಗರಗಳಿಗೆ ವಲಸೆ ಇನ್ನು ಹೆಚ್ಚಾಗಬಹುದು. ಈ ರೀತಿ ವಲಸೆ ಬಂದವರಿಗೆ ಒಳ್ಳೆಯ ಜೀವನಮಟ್ಟ ಒದಗಿಸಲು ಸಾಧ್ಯವೇ? ಇಲ್ಲವೆಂದಾದರೆ ಭಾರತದಲ್ಲಿ ಕೊಳಗೇರಿಗಳು ಮತ್ತು ಖಾಯಿಲೆಗಳು ಇನ್ನಷ್ಟು ಹೆಚ್ಚಾಗಬಹುದು" ಎನ್ನುತ್ತಾರೆ ಕೇರಳದ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೈಗ್ರೇಶನ್ ಆ್ಯಂಡ್ ಡೆವಲಪ್‌ಮೆಂಟ್ ಸಂಸ್ಥೆಯ ವಲಸೆ ತಜ್ಞರಾದ ಎಸ್ ಇರುಡಯರಾಜನ್.

ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಭಾರತ ಬಾಲ್ಯ ವಿವಾಹಕ್ಕೆ ಕೊನೆ ಹಾಡುವ ಅಗತ್ಯವಿದೆ. ಅದರೊಡನೆ ಸಣ್ಣ ವಯಸ್ಸಿನಲ್ಲಿ ಮದುವೆಯಾಗುವುದನ್ನು ಕಡಿಮೆಗೊಳಿಸಬೇಕಿದೆ. ಭಾರತದ ಹುಟ್ಟು ಸಾವುಗಳನ್ನು ಕರಾರುವಾಕ್ಕಾಗಿ ದಾಖಲಿಸುವ ಅಗತ್ಯವಿದೆ. ಅದರೊಡನೆ, ಜನಿಸುವ ಮಕ್ಕಳಲ್ಲಿ ಗಂಡು ಹೆಣ್ಣಿನ ಅನುಪಾತದಲ್ಲಿ, ಗಂಡು ಮಕ್ಕಳೇ ಹೆಚ್ಚಾಗಿರುವುದು ಕಳವಳದ ವಿಚಾರವಾಗಿದೆ.

ರಾಜಕಾರಣಿಗಳು ಜನಸಂಖ್ಯಾ ನಿಯಂತ್ರಣದ ಕುರಿತು ಮಾತನಾಡುವಾಗ ಅದು ದೇಶದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರೆಡೆಗೆ ಗುರಿಯಾಗಿರುವಂತೆ ತೋರುತ್ತದೆ. ಆದರೆ, ಪ್ಯೂ ರಿಸರ್ಚ್ ಸೆಂಟರ್ ಸಂಶೋಧನೆಯ ಪ್ರಕಾರ, ಭಾರತದ ಬೇರೆ ಬೇರೆ ಸಮುದಾಯಗಳ ನಡುವಿನ ಮಕ್ಕಳ ಜನನ ಪ್ರಮಾಣದಲ್ಲಿನ ವ್ಯತ್ಯಾಸ ಅಂದುಕೊಂಡದ್ದಕ್ಕಿಂತಲೂ ಕಡಿಮೆಯಿದೆ.

ಹಿರಿಯ ನಾಗರಿಕರೆಡೆಗೆ ಹೆಚ್ಚಿನ ಗಮನ ಬೇಕಿದೆ:
ಜನಸಂಖ್ಯಾಶಾಸ್ತ್ರಜ್ಞರ ಪ್ರಕಾರ, ಭಾರತದ ವಯಸ್ಸಾಗುತ್ತಿರುವ ಜನಸಂಖ್ಯೆಗೆ ಹೆಚ್ಚಿನ ಗಮನ ಸಿಗುತ್ತಿಲ್ಲ. 1947ರಲ್ಲಿ ಭಾರತೀಯರ ಸರಾಸರಿ ವಯಸ್ಸು 21 ಆಗಿತ್ತು. ಕೇವಲ 5% ಜನರು ಮಾತ್ರವೇ 60 ವರ್ಷ ಮೇಲ್ಪಟ್ಟವರಾಗಿದ್ದರು. ಈಗ ಭಾರತದ ಸರಾಸರಿ ವಯಸ್ಸು 28 ಆಗಿದ್ದು, 10%ಕ್ಕೂ ಹೆಚ್ಚು ಜನರು 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಉದಾಹರಣೆಗೆ, 2001 - 2011ರ ನಡುವೆ ಭಾರತದ ರಾಜ್ಯಗಳ ಪೈಕಿ ಕೇರಳದಲ್ಲಿ ಅತ್ಯಂತ ಕಡಿಮೆ ಜನಸಂಖ್ಯಾ ಏರಿಕೆಯ ದರ (4.9%) ಇತ್ತು. ಕೇರಳದಲ್ಲಿ ಜನಿಸುವ ಮಗು 75 ವರ್ಷಗಳ ಜೀವಿತಾವಧಿಯನ್ನು ನಿರೀಕ್ಷಿಸಬಹುದು. ಇದಕ್ಕೆ ಹೋಲಿಸಿದರೆ, ಭಾರತದ ಸರಾಸರಿ ಜೀವಿತಾವಧಿ 69 ವರ್ಷಗಳಾಗಿವೆ. ಸಣ್ಣ ಕುಟುಂಬಗಳು ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಒದಗಿಸುತ್ತವೆ. ಅದರ ಪರಿಣಾಮವಾಗಿ, ಯುವಕರು ವೇಗವಾಗಿ ಭಾರತದಿಂದ ಹೊರಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹುಡುಕಿ, ತಂದೆ ತಾಯಿಯರನ್ನು ಇಲ್ಲೇ ಬಿಟ್ಟು ಹೊರಟು ಬಿಡುತ್ತಾರೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ, 2023 ಮತ್ತು 2050ರ ನಡುವೆ ಚೀನಾದಲ್ಲಿರುವ 65 ಹಾಗೂ ಅದಕ್ಕೆ ಮೇಲ್ಪಟ್ಟ ನಾಗರಿಕರ ಸಂಖ್ಯೆ ಈಗಿನ ಸಂಖ್ಯೆಗಿಂತ ದ್ವಿಗುಣಗೊಳ್ಳಲಿದ್ದು, ಅದು ಭಾರತದ ಹಿರಿಯ ನಾಗರಿಕರ ಎರಡು ಪಟ್ಟು ಆಗಿರಲಿದೆ. ಇದು ಚೀನಾದ ಆರೋಗ್ಯ ಯೋಜನೆಗಳ ಮೇಲೆ ಹೆಚ್ಚಿ‌ನ ಒತ್ತಡ ಹೇರಲಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯ ಪಡುತ್ತದೆ.

ಹೋಲ್ ನಂಬರ್ಸ್ ಆ್ಯಂಡ್ ಹಾಫ್ ಟ್ರುತ್ಸ್: 
ವಾಟ್ ಡೇಟಾ ಕ್ಯಾನ್ ಆ್ಯಂಡ್ ಕಾಂಟ್ ಟೆಲ್ ಅಸ್ ಅಬೌಟ್ ಮಾಡರ್ನ್ ಇಂಡಿಯಾ ಕೃತಿಯ ಲೇಖಕಿ ರುಕ್ಮಿಣಿ ಎಸ್ ಅವರ ಪ್ರಕಾರ, ದುಡಿಯುವ ಜನಸಂಖ್ಯೆಗೆ ವಯಸ್ಸಾಗುತ್ತಾ, ಅವರು ಹಿರಿಯ ನಾಗರಿಕರಾದಂತೆ, ಅವರಿಗೆ ಸಹಾಯ ಒದಗಿಸುವುದು ಸರ್ಕಾರಕ್ಕೆ ದೊಡ್ಡ ಹೊರೆಯೇ ಆಗಲಿದೆ.

"ಅದಕ್ಕಾಗಿ ಕುಟುಂಬದ ಚಿತ್ರಣಗಳು ಬದಲಾಗಬೇಕು. ಅದರಲ್ಲೂ ಹಿರಿಯ ನಾಗರಿಕರು ಒಂಟಿಯಾಗಿ ಜೀವಿಸುವುದು ಹೆಚ್ಚಿನ ಕಳವಳ ಮೂಡಿಸುತ್ತದೆ" ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News