ನವದೆಹಲಿ: ಲಾಕ್​ಡೌನ್ ನಂಥ ಪರಿಣಾಮಕಾರಿ ಕ್ರಮ ಕೈಗೊಂಡ ಬಳಿಕವೂ, ಪರೀಕ್ಷೆಗಳನ್ನು ತೀವ್ರಗೊಳಿಸುತ್ತಿರುವ ನಡುವೆಯೂ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 29,435ಕ್ಕೆ ಏರಿಕೆಯಾಗಿದೆ.  ಅಲ್ಲದೆ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 934ಕ್ಕೆ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳ ಪ್ರಕಾರ ದೇಶದಲ್ಲಿ ಮೊದಲ ಬಾರಿಗೆ ಜನವರಿ 30ರಂದು ಕೇರಳದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ನಂತರ ಅದು ನಿಧಾನಕ್ಕೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ ಸಾಗಿತ್ತು. ಮಾರ್ಚ್ 19ರ ಹೊತ್ತಿಗೆ ಅಂದರೆ ಮೊದಲ ಹಂತದ ಲಾಕ್​ಡೌನ್ (Lockdown)  ಘೋಷಣೆ ಮಾಡುವ ಮುನ್ನ, ಇಡೀ ದೇಶದಲ್ಲಿ ಇದ್ದ ಕೊರೋನಾ ಪೀಡಿತರ ಸಂಖ್ಯೆ ಕೇವಲ 166 ಆಗಿತ್ತು. ಈಗ ಕೇವಲ ಇಪ್ಪತ್ತು ದಿನಗಳಲ್ಲಿ ಆ ಸಂಖ್ಯೆ  29,435ಕ್ಕೆ ಏರಿಕೆಯಾಗಿದೆ.


ಅಲ್ಲದೆ ಜಗತ್ತಿನಾದ್ಯಂತ ಕೊರೋನಾ ಸೋಂಕು ಪೀಡಿತರ ಸಂಖ್ಯೆ 30 ಲಕ್ಷ ದಾಟಿದ್ದು 30,64,147ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ ಸತ್ತವರ ಸಂಖ್ಯೆ 2 ಲಕ್ಷ ದಾಟಿದ್ದು,  ಸದ್ಯ 2,11,534 ಮಂದಿ ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗಿದ್ದಾರೆ. ಪ್ರಪಂಚಾದ್ಯಂತ ಕೊರೋನಾದಿಂದ ಗುಣಮುಖರಾದವರು 9,22,276 ಜನ ಮಾತ್ರ. ಈ ಪೈಕಿ ಅತಿಹೆಚ್ಚು ಕೊರೋನಾ ಪೀಡಿತರಾಗಿರುವುದು ಅಮೆರಿಕಾದಲ್ಲಿ.‌ ಅಮೆರಿಕಾ ಕೊರೋನಾವೈರಸ್ (Coronavirus) ಪೀಡಿತರ ಸಂಖ್ಯೆ 10,10,356ಕ್ಕೆ ಏರಿಕೆಯಾಗಿದೆ. ಅಮೇರಿಕಾದಲ್ಲಿ ಕೊರೋನಾದಿಂದ ಸತ್ತವರ ಸಂಖ್ಯೆ 56,797ಕ್ಕೆ ಏರಿಕೆಯಾಗಿದೆ.


ಕೊರೋನಾ ಕೋವಿಡ್-19 (Covid-19) ನಿಯಂತ್ರಿಸಲು ಮೊದಲಿಗೆ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಆದರೂ ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಮೇ 3ರವರೆಗೆ ಎರಡನೇ ಹಂತದ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಈ ನಡುವೆ ದೇಶದ ಆರ್ಥಿಕತೆ ಮತ್ತು ಉತ್ಪಾದನೆಗೆ ಧಕ್ಕೆ ಆಗಬಾರದೆಂದು ಮತ್ತು ದೇಶದ ಜನ ಜೀವನ ಅಸ್ತವ್ಯಸ್ತ ಆಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 20ರಿಂದ ಲಾಕ್​ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ಒಟ್ಟು ಈವರೆಗೆ 4 ಬಾರಿ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಲಾಗಿದೆ‌.


ಈಗ ಮೇ 3ರ ಬಳಿಕ‌ ಲಾಕ್​ಡೌನ್ ಅನ್ನು ತೆರವುಗೊಳೊಸಬೇಕೋ ಅಥವಾ ಮುಂದುವರೆಸಬೇಕೋ ಎಂಬ ಗೊಂದಲ ಕೇಂದ್ರ ಸರ್ಕಾರವನ್ನು ಕಾಡುತ್ತಿದೆ. ಲಾಕ್​ಡೌನ್  ತೆರೆವುಗೊಳಿಸಿದರೆ ಕೊರೋನಾ ಸೋಂಕು ಹರಡುವಿಕೆ ತೀವ್ರಗೊಳ್ಳಬಹುದು, ಲಾಕ್​ಡೌನ್  ಮುಂದುವರೆಸಿದರೆ  ದೇಶದ ಆರ್ಥಿಕತೆ ಕುಸಿಯಲಿವೆ ಎಂಬ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಗೊಂದಲಕ್ಕೆ ಸಿಲುಕಿದೆ.


ನಿನ್ನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಬಹುತೇಕ ಮುಖ್ಯಮಂತ್ರಿಗಳು ಕೊರೋನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್ ವಿಸ್ತರಿಸಿ ಎಂಬ ಸಲಹೆ ನೀಡಿದ್ದಾರೆ. ಆದುದರಿಂದ  ಮೇ 3ರ ಬಳಿಕವೂ ಲಾಕ್​ಡೌನ್ ಮುಂದುವರೆಸುವ ಸಾಧ್ಯತೆ ಇದೆ. ಇನ್ನೂ 2 ವಾರ ಲಾಕ್ಡೌನ್ ವಿಸ್ತರಿಸುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.