ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಅಂಗಡಿಯಿಂದ ಮಾಲ್‌ವರೆಗೆ ಎಲ್ಲದಕ್ಕೂ ಬೀಗ ಹಾಕಲಾಗಿದೆ. ಬಸ್ಸುಗಳು, ರೈಲುಗಳು ಮತ್ತು ವಿಮಾನಗಳನ್ನು ಸಹ ಬಂದ್ ಮಾಡಲಾಗಿದೆ. ರಸ್ತೆಗಳು ನಿರ್ಜನವಾಗಿವೆ. ಆದಾಗ್ಯೂ, ಅಗತ್ಯವಿರುವ ವಸ್ತುಗಳನ್ನು ಲಾಕ್‌ಡೌನ್‌ನಿಂದ ಮುಕ್ತವಾಗಿರಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಇ-ರಿಕ್ಷಾಗಳನ್ನು ನಂಬಿ ಜೀವನ ಸಾಗಿಸುತ್ತಿರುವವರ ಪರಿಸ್ಥಿತಿ ಹೇಳತೀರದಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರಿಗೆ 5-5 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಿದೆ.


COMMERCIAL BREAK
SCROLL TO CONTINUE READING

ಲಾಕ್‌ಡೌನ್‌(Lockdown)ನಿಂದಾಗಿ ಯಾವುದೇ ವ್ಯಕ್ತಿ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳಲು ಎಲ್ಲಾ ಆಯಾಮಗಳಲ್ಲೂ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ. ಪ್ರತಿದಿನ 10 ಲಕ್ಷ ಜನರಿಗೆ ಎರಡೂ ಬಾರಿ ಆಹಾರವನ್ನು ಒದಗಿಸುವ ವ್ಯವಸ್ಥೆಯನ್ನು ಸರ್ಕಾರ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ.


ದೆಹಲಿಯಲ್ಲಿ ನೋಂದಾಯಿತ ಇ-ರಿಕ್ಷಾ ಚಾಲಕರು, ಆಟೋ ರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಆರ್‌ಟಿವಿ ಮತ್ತು ಗ್ರಾಮೀಣ ಸೇವೆಗಳಂತಹ ಸಾರಿಗೆ ಸೇವೆಗಳೊಂದಿಗೆ ಸಂಪರ್ಕ ಹೊಂದಿರುವ ಜನರಿಗೆ  ಸಹಾಯ ಮಾಡಲು, 5-5 ಸಾವಿರ ರೂಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ.  ಜನರ ಬ್ಯಾಂಕ್ ಖಾತೆಗಳ ವಿವರ ಇಲ್ಲದ ಕಾರಣ ಈ ಪರಿಹಾರದ ಮೊತ್ತ ಅವರ ಬ್ಯಾಂಕ್ ಖಾತೆ ಸೇರಲು 8 ರಿಂದ 10 ದಿನಗಳು ಬೇಕಾಗುತ್ತದೆ ಎಂದು ಅವರು ಹೇಳಿದರು.


ಕೊರೋನಾ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ವಹಿಸಿರುವ ಕೇಜ್ರಿವಾಲ್ ಸರ್ಕಾರ:
ಕರೋನಾವೈರಸ್ (Coronavirus) ಸಂಪರ್ಕಕ್ಕೆ ಬಂದು 14 ದಿನಗಳ ಕ್ವಾರಂಟೈನ್‌ನಲ್ಲಿರುವವರ ನಿಗಾ ವಹಿಸಲು ಕ್ರಮ ಕೈಗೊಂಡಿರುವ ದೆಹಲಿಯ ಕೇಜ್ರಿವಾಲ್ ಸರ್ಕಾರ, 25429 ಜನರ ದೂರವಾಣಿ ಸಂಖ್ಯೆಯನ್ನು ದೆಹಲಿ ಸರ್ಕಾರ ಪೊಲೀಸರಿಗೆ ನೀಡಿದೆ. ಈ ಜನರು ತಮ್ಮ ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದಾರೋ? ಇಲ್ಲವೋ ಎಂಬುದನ್ನು ಈಗ ಪೊಲೀಸರು ಟ್ರೇಸ್ ಮಾಡುತ್ತಾರೆ.