ನವದೆಹಲಿ: ಕಂಡುಕೇಳರಿಯದ ‌COVID 19 ವೈರಸ್ ನಿಯಂತ್ರಣ ಮಾಡಬೇಕೆಂದು ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಬಾರಿಗೆ  ಲಾಕ್‌ಡೌನ್ (Lockdown)‌  ಜಾರಿಗೆ ತರಲಾಯಿತು. ಮಾರ್ಚ್ 24ರ ಮಧ್ಯ ರಾತ್ರಿಯಿಂದ ಆರಂಭವಾದ ಲಾಕ್‌ಡೌನ್ ಮೇ 31ರವರೆಗೂ ವಿಸ್ತರಿಸಲಾಗಿದೆ. ಈಗ  ಕರೋನವೈರಸ್ (Coronavirus)  COVID 19 ಪೀಡಿತರ ಸಂಖ್ಯೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಇನ್ನಷ್ಟು ದಿನ ಲಾಕ್‌ಡೌನ್ ವಿಸ್ತರಣೆ ಮಾಡುವ ಸಾಧ್ಯತೆಯೂ‌ ಇದೆ.


COMMERCIAL BREAK
SCROLL TO CONTINUE READING

ಈಗಾಗಲೇ ನಾಲ್ಕು ಬಾರಿ ಲಾಕ್‌ಡೌನ್ ಮಾಡಿರುವುದರಿಂದ ಇನ್ನು ಲಾಕ್‌ಡೌನ್ ಮುಂದುವರೆಸುವುದಿಲ್ಲ ಎಂದು ಹೇಳಲಾಗುತ್ತಿತ್ತು. ಹಂತ ಹಂತವಾಗಿ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ  ಕೋವಿಡ್ -19 (Covid-19) ವೈರಸ್ ಮೊದಲಿಗಿಂತಲೂ ವೇಗವಾಗಿ  ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ‌ಸರ್ಕಾರ ಮುಂದೇನು ಮಾಡಬೇಕೆಂಬ ಗಂಭೀರ ಚಿಂತನೆ ‌ನಡೆಸಿದೆ.


ವೈದ್ಯಕೀಯ ಕ್ಷೇತ್ರದ ತಜ್ಞರು ಕೆಂದ್ರ ಸರ್ಕಾರಕ್ಕೆ ಇನ್ನೂ 2 ವಾರ ಲಾಕ್‌ಡೌನ್ ವಿಸ್ತರಿಸುವುದೇ ಸೂಕ್ತ ಎಂಬ ಸಲಹೆ ನೀಡಿದ್ದಾರೆ.‌ ಇದಕ್ಕೆ ಪೂರಕವಾಗಿ COVID 19 ವೈರಸ್ ಈಗ ಪ್ರತಿದಿನ 6 ಸಾವಿರಕ್ಕೂ ಹೆಚ್ಚು ಮಂದಿಗೆ ತಗುಲುತ್ತಿದೆ. ಆದುದರಿಂದ ಜೂನ್ 15ರವರೆಗೂ ದಿಗ್ಬಂಧನ ವಿಧಿಸಬಹುದು ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ.


ಹಿಂದೆ COVID 19 ವೈರಸ್ ಕಡಿಮೆ ಪ್ರಮಾಣದಲ್ಲಿ ಇದ್ದಾಗ ಕೇವಲ 4ಗಂಟೆ ಕಾಲವಕಾಶಕೊಟ್ಟು ಲಾಕ್ಡೌನ್ ಜಾರಿ ಮಾಡಿ COVID 19 ವೈರಸ್ ಪೀಡಿತರ ಸಂಖ್ಯೆ ಹೆಚ್ಚಾದಾಗ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದ ಪ್ರಧಾನಿ ಮೋದಿ ಅವರ ಕ್ರಮ ತಪ್ಪಾಗಿತ್ತು ಎಂಬ ಟೀಕೆ ಈಗಾಗಲೇ ಕೇಳಿಬರುತ್ತಿರುವುದರಿಂದ ಈ ಹಂತದಲ್ಲಿ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಮತ್ತು‌ ಐದನೇ ಹಂತದ ಲಾಕ್ಡೌನ್ ಸ್ವರೂಪ ಹೇಗಿರಬೇಕೆಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.


ಈ‌ ಹಿನ್ನೆಲೆಯಲ್ಲಿ ಒಂದೆರಡು ದಿನದಲ್ಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವ ಸಾಧ್ಯತೆ ಇದೆ. ಇದಲ್ಲದೆ ನಾಲ್ಕನೇ ಹಂತದ ಲಾಕ್​ಡೌನ್ ಹೇಗೆ ಪರಿಣಾಮಕಾರಿಯಾಗಿ ಜಾರಿಯಲ್ಲಿದೆ ಎಂಬ ಬಗ್ಗೆ ಮತ್ತು ಸದ್ಯದ COVID 19 ವೈರಸ್ ಹರಡುವಿಕೆ ಯಾವ ಪ್ರಮಾಣದಲ್ಲಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಮುಖ್ಯಮಂತ್ರಿಗಳ ಅಭಿಪ್ರಾಯ ಮತ್ತು ರಾಜ್ಯ ಸರ್ಕಾರಗಳ ವರದಿ ಆಧರಿಸಿ ಐದನೇ ಹಂತದ ಲಾಕ್​ಡೌನ್​ನಲ್ಲಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ ಎಂದು ತಿಳಿದುಬಂದಿದೆ.


COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಭಾರತವು ಇತ್ತೀಚೆಗೆ ಜಾಗತಿಕವಾಗಿ 10ನೇ ಸ್ಥಾನಕ್ಕೆ ತಲುಪಿದೆ‌. ಮೊನ್ನೆ ಮೊನ್ನೆಯಷ್ಟೇ ಭಾರತದ ‌ಕೊರೋನಾ ಸೋಂಕು ಪೀಡಿತರ ಸಂಖ್ಯೆ ಒಂದೂಕಾಲು ಲಕ್ಷ ದಾಟಿತ್ತು. ಮತ್ತೀಗ ಒಂದೂವರೆ ಲಕ್ಷದ ಗಡಿಯ ಬಳಿಯೂ ಬಂದಿದೆ. ಆದುದರಿಂದ ಕೇಂದ್ರ ಅಷ್ಟು ಸುಲಭವಾಗಿ ಲಾಕ್‌ಡೌನ್ ಅನ್ನು ತೆರವುಗೊಳಿಸುವ ಸಾಧ್ಯತೆ ಇಲ್ಲ ಎಂದು ಕೂಡ ಹೇಳಲಾಗುತ್ತಿದೆ.