ಕಾಂಗ್ರೆಸ್ ಎತ್ತಿನಗಾಡಿ ಪ್ರತಿಭಟನೆಗೆ ಸಿದ್ದು & ಡಿಕೆಶಿ ಕಲಹದ ಬಂಡಿ ಎಂದ ಬಿಜೆಪಿ..!
ಡಿಕೆಶಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವನ್ನೇ ನೀಡಿರಲಿಲ್ಲ, ಇದು ಸಿದ್ದು & ಡಿಕೆಶಿ ಕಲಹದ ಬಂಡಿ! ಅಂತಾ ಬಿಜೆಪಿ ಟ್ವೀಟ್.
ಬೆಂಗಳೂರು: ಎತ್ತಿನಗಾಡಿ ಪ್ರತಿಭಟನೆ(Bullock Cart Protest) ಮಾಡಲು ಹೊರಟಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ ಎತ್ತುಗಳು(ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್) ಪರಸ್ಪರ ವಿರುದ್ಧ ದಿಕ್ಕಿಗೆ ಎಳೆಯುತ್ತಿವೆ ಎಂದು ಕರ್ನಾಟಕ ಬಿಜೆಪಿ ಟೀಕಿಸಿದೆ. ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಕಾಂಗ್ರೆಸ್ ಸೋಮವಾರ ಎತ್ತಿನಗಾಡಿ ಪ್ರತಿಭಟನೆ ನಡೆಸಿದೆ. ಇದಕ್ಕೆ ಕಿಡಿಕಾರಿರುವ ಬಿಜೆಪಿ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಈ ಹೋರಾಟದಲ್ಲಿ ಪಾಲ್ಗೊಳ್ಳಿ ಎಂದು ಆಹ್ವಾನವನ್ನೇ ನೀಡಿರಲಿಲ್ಲ. ಇದು ಸಿದ್ದು & ಡಿಕೆಶಿ ಕಲಹದ ಬಂಡಿ!’ ಅಂತಾ ಟ್ವೀಟ್ ಮೂಲಕ ಕುಟುಕಿದೆ.
ಬಿಜೆಪಿ ಟ್ವೀಟ್ ಗೆ ತಿರುಗೇಟು ನೀಡಿರುವ ಕಾಂಗ್ರೆಸ್(Congress), ‘ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಜನವಿರೋಧಿ ಬಿಜೆಪಿಗೆ ಕಾಂಗ್ರೆಸ್‌ನ ಜನಪರ ಹೋರಾಟದಿಂದ ನಡುಕ ಶುರುವಾಗಿದೆ. ಅದನ್ನು ಮರೆಮಾಚಲು ಹಾಗೂ ಬೆಲೆ ಏರಿಕೆಯ ಬಗ್ಗೆ ಚರ್ಚಿಸಲು ಹೆದರಿ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಡ್ರೈವರ್ ಬದಲಿಸಿದರೂ ಬಿಜೆಪಿ ಸರ್ಕಾರ ಸ್ಟಾರ್ಟ್ ಆಗುತ್ತಿಲ್ಲ. ಏಕೆಂದರೆ ಅದು ಮೂಲತಃ ಡಕೋಟಾ ಇಂಜಿನ್ ಸರ್ಕಾರ!’ ಅಂತಾ ವ್ಯಂಗ್ಯವಾಡಿದೆ.
ಬಸವರಾಜ್ ಬೊಮ್ಮಾಯಿ ರಾಜ್ಯಕ್ಕೆ ‘ಅತಿಥಿ ಸಿಎಂ’ನಂತಾಗಿದ್ದಾರೆ: ಕಾಂಗ್ರೆಸ್ ಟೀಕೆ
‘ಬಿ.ಎಸ್.ಯಡಿಯೂರಪ್ಪ(BS Yediyurappa)ನವರನ್ನು ಅಧಿಕಾರದಿಂದ ಇಳಿಸಿದ್ದಾಯ್ತು, ಪಕ್ಷದಲ್ಲೂ ಮೂಲೆಗೆ ಕೂರಿಸಿದ್ದಾಯ್ತು, ಈಗ ಸದನದಲ್ಲೂ ಕೊನೆಯ ಸಾಲಿಗೆ ತಳ್ಳಲಾಗಿದೆ. ಬಿಜೆಪಿ ಪಕ್ಷ BSY ಅವರನ್ನು ಇಷ್ಟು ಬೇಗ ಈ ದುಸ್ಥಿತಿಗೆ ತರಬಾರದಿತ್ತು. ಅಸ್ತಿತ್ವಕ್ಕಾಗಿ ಪ್ರವಾಸ ಮಾತಾಡುತ್ತಿರುವ BSY ಅವರನ್ನು ಸಂಪೂರ್ಣ ಕಟ್ಟಿಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಂಡ ಹೊಂಚು ಹಾಕಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಎತ್ತಿನಗಾಡಿ ಪ್ರತಿಭಟನೆ
ಸೋಮವಾರದಿಂದ(ಸೆಪ್ಟೆಂಬರ್ 13) ವಿಧಾನ ಮಂಡಲ ಅಧಿವೇಶನ ಪ್ರಾರಂಭವಾಗಿದ್ದು, ಮೊದಲ ದಿನವೇ ಬಿಜೆಪಿ ಸರ್ಕಾರ(BJP Govt.)ದ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧಕ್ಕೆ ಎತ್ತಿನ ಗಾಡಿ ಚಲೋ ಪ್ರತಿಭಟನೆ ನಡೆಸಲಾಯಿತು.
ಇದನ್ನೂ ಓದಿ: ಬಿ.ಸಿ.ಪಾಟೀಲ್ ವಿರುದ್ಧ ಭ್ರಷ್ಟಾಚಾರ ಆರೋಪ: ತನಿಖೆಗೆ ಕಾಂಗ್ರೆಸ್ ಆಗ್ರಹ!
ಸಿದ್ದರಾಮಯ್ಯ(Siddaramaiah), ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನ ಹಲವು ಮುಖಂಡರು ಎತ್ತಿನ ಗಾಡಿಯಲ್ಲಿಯೇ ವಿಧಾನಸೌಧಕ್ಕೆ ತೆರಳಿದರು. ಬೆಲೆ ಏರಿಕೆ ನೀತಿಯಿಂದ ಭವಿಷ್ಯದಲ್ಲಿ ಎತ್ತಿನಗಾಡಿಯೇ ಗಟ್ಟಿ ಎಂಬ ಸಂದೇಶದೊಂದಿಗೆ ಸಿದ್ದರಾಮಯ್ಯ ಮತ್ತು ಡಿಕೆಶಿ(DK Shivakumar) ತಮ್ಮ ನಿವಾಸಗಳಿಂದ ವಿಧಾನಸೌಧಕ್ಕೆ ಎತ್ತಿನಗಾಡಿಯಲ್ಲಿಯೇ ಆಗಮಿಸಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಘೋಷಣೆ ಕೂಗುತ್ತಾ ವಿಧಾನಸೌಧದತ್ತ ಆಗಮಿಸಿದ ವೇಳೆ ಒಳಗಡೆ ಎತ್ತಿನಗಾಡಿ ಬಿಡಲು ಪೊಲೀಸರು ನಿರಾಕರಿಸಿದರು. ಈ ವೇಳೆ ಖಾಕಿಪಡೆ ಜೊತೆ ವಾಗ್ವಾದ ನಡೆಸಿದ ಸಿದ್ದರಾಮಯ್ಯನವರು, ವಿಧಾನಸೌಧದ ಒಳಗಡೆ ಎತ್ತಿನಗಾಡಿ ಬಿಡುವಂತೆ ಒತ್ತಾಯಿಸಿದರು. ಎತ್ತಿನ ಗಾಡಿಯಲ್ಲಿ ವಿಧಾನಸೌಧದ ಒಳಗಡೆ ಹೋಗಬಾರದು ಎಂದು ಏನಾದರೂ ಕಾನೂನು ಇದೆಯಾ ಅಂತಾ ಪ್ರಶ್ನಿಸಿದರು. ಕೊನೆಗೆ ಸಿದ್ದರಾಮಯ್ಯನವರ ಒತ್ತಾಯಕ್ಕೆ ಮಣಿದ ಪೊಲೀಸರು ಎತ್ತಿನಗಾಡಿ ಪ್ರವೇಶಕ್ಕೆ ಅವಕಾಶ ನೀಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.