ಬೆಂಗಳೂರು: ಲಾಕ್‌ಡೌನ್  ಪರಿಣಾಮವಾಗಿ ಕರ್ನಾಟಕ ಸರ್ಕಾರದ ಸಾರಿಗೆ ಕ್ಷೇತ್ರಕ್ಕೆ ತೀವ್ರ ನಷ್ಟವಾಗುತ್ತಿರುವದರಿಂದ ಮುಂದಿನ ಆರು ತಿಂಗಳುಗಳ ಕಾಲ ಸಾರಿಗೆ ಸಂಸ್ಥೆಯ ಕೆ.ಎಸ್.ಆರ್. ಟಿ. ಸಿ (KSRTC)  ಬಸ್ಸುಗಳಿಗೆ ಟೋಲ್ ಗಳಲ್ಲಿ ವಿನಾಯಿತಿ ನೀಡಬೇಕೆಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ (Laxman Savadi) ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಮಾಡಿದರು.
 
ನಿತಿನ್ ಗಡ್ಕರಿ (Nitin Gadkari) ಅವರೊಂದಿಗಿನ ವಿಡಿಯೋ ಸಂವಾದದಲ್ಲಿ ಮಾತನಾಡಿದ ಸವದಿ, ಲಾಕ್ ಡೌನ್ ನಿಂದಾಗಿ ಕರ್ನಾಟಕದ ಸಾರಿಗೆ ವಲಯದ ಮೇಲೆ ಯಾವ ರೀತಿ ದುಷ್ಪರಿಣಾಮ ಉಂಟಾಗಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.  


COMMERCIAL BREAK
SCROLL TO CONTINUE READING

ತಿಂಗಳಿಗಿಂತಲೂ ಹೆಚ್ಚುಕಾಲ ಲಾಕ್‌ಡೌನ್ (Lockdown) ಜಾರಿಯಲ್ಲಿರುವ ಪರಿಣಾಮ ಸರಕಾರಿ ಸಾರಿಗೆಗಳಾದ ಬಿ.ಎಂ.ಟಿ.ಸಿ (BMTC), ಕೆ.ಎಸ್.ಆರ್. ಟಿ. ಸಿ ವಾಯುವ್ಯ ಸಾರಿಗೆ,  ಈಶಾನ್ಯ ಸಾರಿಗೆ,  ಸಂಸ್ಥೆಗಳ ಆದಾಯ ಸಂಪೂರ್ಣ ನಿಂತಿರುವುದರಿಂದ ಸಿಬ್ಬಂದಿಗಳ ವೇತನ ನೀಡುವುದಕ್ಕೂ ಹರಸಾಹಸ ಪಡುವಂತಾಗಿದೆ.  ಆದ್ದರಿಂದ ಕೇಂದ್ರ ಸರ್ಕಾರವು ಈ ಸಂಸ್ಥೆಗಳ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. 


ಈ ಮಾರಕ ಪರಿಣಾಮ ಕೇವಲ ಸರಕಾರಿ ಸಾರಿಗೆ ಮಾತ್ರವಲ್ಲ ಖಾಸಗಿ ಸಾರಿಗೆ ವಲಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಖಾಸಗಿ ಚಾಲಕರು ಮತ್ತು ಅವರ ಪರಿಚಾಕರುಗಳಿಗೆ (ಕ್ಲೀನರುಗಳಿಗೆ) ಇನ್ಶೂರೆನ್ಸ್ ಯೋಜನೆಯನ್ನು ಪ್ರಾರಂಭಿಸುವುದು ಅಗತ್ಯ. ಜೊತೆಗೆ ಸಾರಿಗೆ ಸಂಸ್ಥೆಗಳಿಗೆ ಉಪಯೋಗಿಸಲಾಗುವ ಡೀಸೆಲ್ ಮೇಲಿನ ಕೇಂದ್ರ ಸರ್ಕಾರದ ತೆರಿಗೆ ಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕೆಂದು ಗಡ್ಕರಿಯವರನ್ನು ಒತ್ತಾಯಿಸಿದರು.


ಕರ್ನಾಟಕದಲ್ಲಿ  ಕರೋನಾವೈರಸ್ (Coronavirus) ತಡೆಗಟ್ಟುವಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಸವದಿ ಅವರು,  ಮೊಬೈಲ್ ಕ್ಲಿನಿಕ್ ಗಳನ್ನು ಪ್ರಾರಂಭಿಸುವುದಕ್ಕೆ ಅಗತ್ಯವಾದ ವೆಚ್ಚವನ್ನು ಕೇಂದ್ರ ಸರ್ಕಾರವು ಭರಿಸಬೇಕೆಂದು  ವಿನಂತಿಸಿಕೊಂಡರು. ಈ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸುವುದಾಗಿ ಶ್ರೀ ಗಡ್ಕರಿ ಅವರು ಭರವಸೆ ನೀಡಿದರು. 


ಕರ್ನಾಟಕದಲ್ಲಿ ಲೋಕೋಪಯೋಗಿ ಇಲಾಖೆಯು ಕೈಗೊಳ್ಳುತ್ತಿರುವ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಕಾಮಗಾರಿಗಳ ಬಗ್ಗೆ ಲೋಕೋಪಯೋಗಿ ಸಚಿವರು ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿವರಿಸಿ, ಕೊರೋನಾ ಕೋವಿಡ್-19 (Covid-19)  ನಿಯಂತ್ರಿಸುವಲ್ಲಿ ಕೇಂದ್ರದ ಎಲ್ಲ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದರು. 

ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತ,  ಸಾರಿಗೆ ಇಲಾಖೆಯ ಆಯುಕ್ತರಾದ ಶಿವಕುಮಾರ್,  ಕೆ.ಎಸ್. ಆರ್. ಟಿ. ಸಿ‌.  ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ, ಬಿ.ಎಂ.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕಿ, ಸಿ. ಶಿಕಾ,  ಲೋಕೋಪಯೋಗಿ ಇಲಾಖೆಯ  ಬಿ. ಗುರುಪ್ರಸಾದ್ ಮುಂತಾದ ಅಧಿಕಾರಿಗಳು ಭಾಗವಹಿಸಿದ್ದರು.