Karnataka Gram Panchayat Election Results 2020: ಗದಗ ಜಿಲ್ಲೆಯಲ್ಲಿ ಕಾಮ್ರೆಡ್ ಗಳ ಮಿಂಚು
ಗದಗ ಜಿಲ್ಲೆಯಲ್ಲಿ ಬೆಳವಣಿಕಿ ಎಂದರೆ ಅದು ಕಾಮ್ರೇಡ್ ಗಳ ಊರು ಎನ್ನುವಷ್ಟರ ಮಟ್ಟಿಗೆ ಈ ಗ್ರಾಮ ಜನಜನಿತವಾಗಿದೆ.ಕಳೆದ ಎರಡು ದಶಕಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯವಾದ ರಾಜಕಾರಣವನ್ನು ಕಟ್ಟಲು ಈ ಗ್ರಾಮದ ಸಂಗಾತಿಗಳು ಬಿಸಿಯೂಟ ನೌಕರರು, ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ನೌಕರರು,ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಹೀಗೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ಆ ಮೂಲಕ ಕಳೆದ 20 ವರ್ಷಗಳ ಅವಧಿಯಲ್ಲಿ ಗ್ರಾಮದ ಮಟ್ಟದಲ್ಲಿ ನಿರ್ಣಾಯಕ ರಾಜಕೀಯ ಶಕ್ತಿಯಾಗಿದ್ದಾರೆ.ಈ ಕಾರಣಕ್ಕಾಗಿ ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮುತ್ತಿದ್ದಾರೆ.ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆ (Gram Panchayat Election) ಯಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Gram Panchayat Election: ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಸಾಧನೆ ಗಮನಾರ್ಹ- ಕುಮಾರಸ್ವಾಮಿ
ಕಳೆದ ಎರಡು ದಶಕಗಳ ಅವಧಿಯಲ್ಲಿ ಮೊದಲ ಬಾರಿಗೆ 2005-10 ರಲ್ಲಿ ಎರಡು ಸೀಟುಗಳನ್ನು ಗೆಲ್ಲುವ ಮೂಲಕ ಸಿಪಿಎಂ ಬೆಂಬಲಿತ ಸದಸ್ಯರು ಪಂಚಾಯತ್ ಮೆಟ್ಟಿಲನ್ನು ಏರಿದ್ದರು. ಇದಾದ ನಂತರ 2010-15 ರ ಅವಧಿಯಲ್ಲಿ 13 ಸ್ಥಾನಗಳಲ್ಲಿ 7 ಸ್ಥಾನಗಳನ್ನು ಗೆಲ್ಲುವ ಮೂಲಕ ಬೆಳವಣಿಕಿ ಗ್ರಾಮ ಪಂಚಾಯತಿಯ ಅಧಿಕಾರದ ಗದ್ದುಗೆ ಹಿಡಿದಿದ್ದರು, ಆ ಮೂಲಕ ಗದಗ ಜಿಲ್ಲೆಯಲ್ಲಿಯೇ ಅಧಿಕಾರದ ಗದ್ದುಗೆ ಏರಿದ ಸಿಪಿಎಂನ ಏಕೈಕ ಗ್ರಾಮ ಪಂಚಾಯತ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿತ್ತು.
ಇದನ್ನೂ ಓದಿ: ರಾಜ್ಯದ ಗಮನ ಸೆಳೆದ ಗ್ರಾಮ ಪಂಚಾಯತಿ ಚುನಾವಣಾ ಪ್ರಣಾಳಿಕೆ
ಬೆಳವಣಿಕಿ ಗ್ರಾಮ ಪಂಚಾಯತಿಯಲ್ಲಿ ಈ ಹಿಂದಿನ ಸಿಪಿಎಂ ಬೆಂಬಲಿತ ಸದಸ್ಯರ ಸಂಖ್ಯೆ
ವರ್ಷ ಸದಸ್ಯರ ಸಂಖ್ಯೆ
2005-10 02
2010-15 07
2015-20 04
2020 - 04
ಇನ್ನೊಂದು ವಿಶೇಷವೆಂದರೆ ಗ್ರಾಮ ಪಂಚಾಯತಿ ನೌಕರರ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ ಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಿಪಿಎಂನ ಜಿಲ್ಲಾ ಮುಖಂಡರೂ ಆಗಿರುವ ಬಸವರಾಜ ಮಂತೂರು ಅವರು ಸತತ ನಾಲ್ಕನೇ ಬಾರಿಗೆ (2005, 2010,2015, 2020 ) ಗ್ರಾಮ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಕೀರ್ತಿಗೆ ಪಾತ್ರರಾಗಿದ್ದಾರೆ. ಸುವರ್ಣ ಸೆಗಣಿ ಎನ್ನುವ ಮಹಿಳಾ ಅಭ್ಯರ್ಥಿ ಕೂಡ ಸತತ (2010,2015,2020) ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.ಆ ಮೂಲಕ ಗದಗ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಡಪಕ್ಷ ಬೆಂಬಲಿತ ಅಭ್ಯರ್ಥಿಗಳು ಇಂತಹ ಸಾಧನೆ ಮಾಡಿದ್ದಾರೆ.ಉಳಿದ ಇಬ್ಬರು ಸದಸ್ಯರಾದ ರೇಣುಕಾ ಕರ್ಕಿಕಟ್ಟಿ, ಹಾಗೂ ಕಳಕವ್ವ ಮಾದರ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಗ್ರಾ. ಪಂ. ಚುನಾವಣೆ: ಅಭ್ಯರ್ಥಿಗಳಿಂದ ಚುನಾವಣೆ ಪ್ರಚಾರಕ್ಕೆ 'ಹೈಟೆಕ್ ಟಚ್'..!
'ನಾವು ಹಿಂದೆ ಅಧಿಕಾರಕ್ಕೆ ಬಂದ ಅಲ್ಪಾವಧಿಯಲ್ಲಿಯೇ 8 ಎಕರೆ ಜಮೀನನ್ನು ಖರೀದಿಸಿ ಗ್ರಾಮದ 150 ಜನರಿಗೆ ನಿವೇಶನವನ್ನು ಹಂಚಿದ್ದು, ಬರಗಾಲದ ಸಂದರ್ಭದಲ್ಲಿ ರೈತ ಕೃಷಿ ಕೂಲಿ ಕಾರ್ಮಿಕರ ಗುಳೆ ಹೋಗುವುದನ್ನು ತಪ್ಪಿಸಲು ಇಡೀ ಗದಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ನಡೆಸಲು ಪಂಚಾಯತಿಯಿಂದ ನೆರವು ನೀಡಿದ್ದು ಇವೆಲ್ಲವೂ ಕೂಡ ನಮ್ಮ ಈ ಹಿಂದಿನ ಕಾರ್ಯಗಳು ಎನ್ನುತ್ತಾರೆ ಸತತ ನಾಲ್ಕನೇ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿರುವ ಬಸವರಾಜ ಮಂತೂರು.
ಬೆಳವಣಿಕಿ ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂಶ -2020
ಸಿಪಿಎಂ ಬೆಂಬಲಿತ ಸದಸ್ಯರು-04
ಕಾಂಗ್ರೆಸ್ ಬೆಂಬಲಿತ ಸದಸ್ಯರು-04
ಬಿಜೆಪಿ ಬೆಂಬಲಿತ ಸದಸ್ಯರು-04
ಇತರೆ-01
ಒಟ್ಟು-13
ಈ ಬಾರಿ ಪಂಚಾಯತಿಯ ಅಧಿಕಾರದ ಗದ್ದುಗೆ ಏರಿದಲ್ಲಿ ಮಾಡುವ ಕಾರ್ಯಗಳ ಬಗ್ಗೆ ಕೇಳಿದಾಗ 'ಈ ಬಾರಿ ಸಂಖ್ಯಾಬಲ ಸಮನಾಗಿದ್ದ ಕಾರಣ ಅಧಿಕಾರ ಹಿಡಿಯುವುದು ಕಷ್ಟಕರ, ಆದರೆ ನಮ್ಮ ಚುನಾವಣಾ ಪ್ರಣಾಳಿಕೆಯಾದ 'ನಮ್ಮ ಗ್ರಾಮಕ್ಕೆ ನಮ್ಮ ವಚನ'ದಲ್ಲಿ ನೀಡಿರುವ ಕಾರ್ಯಗಳ ಈಡೆರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ, ಒಂದು ವೇಳೆ ಪ್ರತಿಪಕ್ಷದ ಸ್ಥಾನದಲ್ಲಿದ್ದರೂ ಕೂಡ ಅವುಗಳ ಈಡೇರಿಕೆಗಾಗಿ ನಾವು ಒತ್ತಡ ಹೇರುತ್ತೇವೆ" ಎನ್ನುತ್ತಾರೆ.
-ಮಂಜುನಾಥ ನರಗುಂದ