ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ : ಇದು ಪ್ರೀತಿ-ಸಮಾನತೆಯ ಸಂಕೇತ
ಇಷ್ಟಲಿಂಗ ಮುದ್ರೆ ಹೊಂದಿದ ವಿವಾಹ ಮುದ್ರೆ ಧಾರಣೆ, ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ, ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಅರ್ಥ ಪೂರ್ಣ ಕಾರ್ಯಕ್ರಮದೊಂದಿಗೆ ವಿವಾಹ ನಡೆದಿದ್ದು ವಿಶೇಷ.
ಗದಗ: ತಾಳಿ ಮಾದರಿಯ ವಿವಾಹ ಮುದ್ರೆಯನ್ನ ಗಂಡು ಹೆಣ್ಣೆಂಬ ಬೇಧ ವಿಲ್ಲದೇ ವಧು-ವರರಿಬ್ಬರೂ ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟ ವಿಶಿಷ್ಟ ಮದುವೆ ಜಿಲ್ಲೆಯಲ್ಲಿ ನಡೆದಿದೆ.
ನಗರದ ನಿವಾಸಿ, ಬಸವ ಧರ್ಮ ಪ್ರತಿಪಾದಕ, ಚಿಂತಕ ಅಶೋಕ ಬರಗುಂಡಿ ಹಾಗೂ ಅನ್ನಪೂರ್ಣ ಅವರ ಪುತ್ರ ಆಕಾಶ್ ಅವರ ಮದುವೆಯನ್ನ ವನಜಾಕ್ಷಿ ಹಾಗೂ ದಯಾನಂದ ಗೌಡರವರ ಪುತ್ರಿ ಸುಷ್ಮಾ ಅವರೊಂದಿಗೆ ನಿಶ್ಚಯ ಮಾಡಲಾಗಿತ್ತು. ಬಸವ ಧರ್ಮದ ಅನುಸಾರವೇ ವಿವಾಹ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದರು. ಅದರಂತೆ ಜೂನ್ 12 ರಂದು ಮದುವೆಯನ್ನ ಮಾಡಲಾಗಿತ್ತು. ಸದ್ಯ ಮದುವೆ ವಿಡಿಯೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Shu Empire: ಚೀನಾದಲ್ಲಿ ಪತ್ತೆಯಾಯ್ತು 4 ಸಾವಿರ ವರ್ಷಗಳ ಹಳೆಯ ನಿಧಿ!
ಇಷ್ಟಲಿಂಗ ಮುದ್ರೆ ಹೊಂದಿದ ವಿವಾಹ ಮುದ್ರೆ ಧಾರಣೆ, ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ, ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಅರ್ಥ ಪೂರ್ಣ ಕಾರ್ಯಕ್ರಮದೊಂದಿಗೆ ವಿವಾಹ ನಡೆದಿದ್ದು ವಿಶೇಷ.
ವಧು, ವರರೆಂಬ ಬೇಧ ಮರೆತು ಇಬ್ಬರೂ ಪರಸ್ಪರ ವಿವಾಹ ಮುದ್ರೆ ವಿನಿಮಯ ಮಾಡಲಾಯ್ತು. ಮದುವೆ ಅಂದ್ರೆ ಅಲ್ಲಿ ಮಂತ್ರಘೋಷ, ವಾದ್ಯಮೇಳ ಸೇರಿದಂತೆ ಇನ್ನಿತರ ಸಂಪ್ರದಾಯದ ಮೂಲಕ ಸಪ್ತಪದಿ ತುಳಿಯುತ್ತಾರೆ. ಆದ್ರೆ ಆಕಾಶ, ಸುಷ್ಮಾ ಕಲ್ಯಾಣ ಮಹೋತ್ಸವ ಶರಣರ ಸಮ್ಮುಖದಲ್ಲಿ ಬಸವ ಧರ್ಮದ ಆಶಯದಂತೆ ನಡೆಯಿತು.
ಬುದ್ದ, ಬಸವ, ಅಂಬೇಡ್ಕರ್ ತತ್ವ ಚಿಂತಕರು, ಬಸವ ಧರ್ಮ ಪ್ರವರ್ತಕರು, ಲೇಖಕರು, ಲಿಂಗಾಯತ ವಿರಕ್ತ ಮಠಾಧೀಶರ ನೇತೃತ್ವದಲ್ಲಿ ನವ ದಂಪತಿಗಳಿಗೆ ಭಾರತ ಸಂವಿಧಾನ ಪೀಠಿಕೆ ಪಠಣ, ಬಸವಾದಿ ಶರಣರ ವಚನ ಘೋಷಗಳೊಂದಿಗೆ ಅಪ್ಪ ಬಸವಣ್ಣನವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಲ್ಯಾಣ ಮಹೋತ್ಸವಕ್ಕೆ ಮುನ್ನುಡಿ ಇಡಲಾಯಿತು.
ನವ ದಂಪತಿಗಳು ಲಿಂಗಾಯತ ಧರ್ಮದ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು, ಬಳಿಕ ಪರಸ್ಪರ ರುದ್ರಾಕ್ಷಿ ಕಂಕಣ ಕಟ್ಟಿಕೊಂಡರು. ವಿಭೂತಿಯನ್ನು ಧರಿಸಿಕೊಂಡು ಅವುಗಳಿಗೆ ಸಂಬಂಧಿಸಿದ ವಚನಗಳನ್ನು ಹೇಳುತ್ತ ಹಸೆಮಣಿ ಏರಿದರು, ದಾಂಪತ್ಯ ಬಂಧನದ ವಿಧಿ ವಿಧಾನಗಳನ್ನು ಶರಣ ತತ್ವದಲ್ಲಿ ಪಾಲಿಸಲು ನವ ಜೋಡಿಗೆ ಸಿಂಧನೂರಿನ ವೀರಭದ್ರಪ್ಪ ಕುರಕುಂದಿ ವಚನ ಪ್ರತಿಜ್ಞೆ ಭೋಧಿಸಿದರು.
ಇಲಕಲ್ಲದ ಗುರುಮಹಾಂತಪ್ಪಗಳು ಲಿಂಗಾಯತ ಧರ್ಮ ಪೀಠಿಕೆ ಹಾಗೂ ಪ್ರಮಾಣ ವಚನ ಬೋಧಿಸಿದರು. ಶರಣ ಸಾಹಿತಿ, ಪತ್ರಕರ್ತರಾದ ರಮಜಾನ್ ದರ್ಗಾ ಹಾಗೂ ಡಾ.ಜೆ.ಎಸ್.ಪಾಟೀಲ ಆಶಯ ನುಡಿಗಳನ್ನಾಡಿದರು. ಮಕ್ಕಳಿಗಾಗಿ ಭಾರತ ಸಂವಿಧಾನ ಎಂಬ ಪುಸ್ತಕದ ಬಿಡುಗಡೆಗೊಳಿಸಲಾಯಿತು. ವಚನ ಪ್ರತಿಜ್ಞೆ, ವಚನ ಬಂಧದೊಂದಿಗೆ ಲಿಂಗ ತಾರತಮ್ಯ ನಿವಾರಣೆ ಗಾಗಿ ವರ ಆಕಾಶ್ ಸುಷ್ಮಾ ಪರಸ್ಪರ ವಿವಾಹ ಮುದ್ರೆ ಬದಲಾಯಿಸಿಕೊಂಡರು. ಈ ಮೂಲಕ ಲಿಂಗ ಸಮಾನತೆ ಮೆರೆದರು.
ಮದುವೆಯ ಮಂಟಪದಲ್ಲಿ ಗದುಗಿನ ಸಿದ್ದಲಿಂಗ ಶ್ರೀ, ಕುವೆಂಪು, ಅಂಬೇಡ್ಕರ್, ಡಾ.ಬಸವನಾಳ, ಫಗು ಹಳಕಟ್ಟಿ, ವಿವೇಕಾನಂದ, ಹರ್ಡೇಕರ ಮಂಜಪ್ಪ, ಡಾ. ಎಂ. ಎಂ. ಕಲಬುರ್ಗಿ, ಅಥಣಿಯ ಮುರುಗೇಂದ್ರ ಶಿವಯೋಗಿಗಳು ಸೇರಿದಂತೆ ಹಲವು ಮಹನೀಯರ ಭಾವ ಚಿತ್ರ, ಆದರ್ಶದ ಶುಭಾಶಯ ನುಡಿಗಟ್ಟುಗಳ ಕಟೌಟ್ ಮಾಡಿ ಹಾಕಲಾಗಿತ್ತು.
ಗದಗಿನ ತೋಂಟದಾರ್ಯ ಮಠದ ಶ್ರೀಗಳು, ನಾಡಿನ ವಿವಿಧ ಬಸವ ಕೇಂದ್ರದ ಶ್ರೀಗಳು ಹಾಜರಿದ್ದು ವಿಶೇಷ ವಿವಾಹಕ್ಕೆ ಸಾಕ್ಷಿಕರಿಸಿದರು. ನವ ದಂಪತಿಗಳಿಗೆ ಅಕ್ಷತೆಯ ಬದಲಾಗಿ ಪುಷ್ಪ ವೃಷ್ಟಿ ಮಾಡಲಾಯಿತು. ನಂತ್ರ ದಾವಣಗೆರೆಯ ಬಸವ ಕಲಾ ಲೋಕದ ಬಳಗ ಹಾಗೂ ಚಿತ್ರದುರ್ಗದ ಶರಣೆ ಕೋಕಿಲಾ ತಾಯಿಯವರ ಮಧುರ ಕಂಠದಲ್ಲಿ ವಚನ ಗಾಯನ ಎಲ್ಲರ ಮನ ಸೂರೆಗೊಂಡಿತು. ನಾಡಿನ ಹಲವು ಮೂಲೆಗಳಿಂದ ಹರಿದುಬಂದ ನಾಲ್ಕು ಸಾವಿರಕ್ಕೂ ಅಧಿಕ ಶರಣ ಜೀವಿಗಳಿಗೆ ಹಲವು ವಿಶಿಷ್ಟವಾದ ಭಕ್ಷ್ಯ ಭೋಜನದ ಭಾರೀ ವ್ಯವಸ್ಥೆ ಮಾಡಿಸಲಾಗಿತ್ತು, ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಉಡುಗೊರೆ ಯಾಗಿ ಬಸವಾದಿ ಶರಣರ ವಚನಗಳ ಪುಸ್ತಕ,ಭಾರತದ ಸಂವಿಧಾನದ ಪುಸ್ತಕ ಕೊಡಲಾಯಿತು.
ಇದನ್ನೂ ಓದಿ: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಕೋಟಿ ಕೋಟಿ ಶುಲ್ಕ ಪಡೆಯುವ ಬಾಲಿವುಡ್ ಬೆಡಗಿಯರು!
ಈ ವೇಳೆ ಲಿಂಗಾಯತ ಧರ್ಮಗುರು ಬಸವಣ್ಣನವರ, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್, ನಾರಾಯಣ ಗುರು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಬಂದವರು ಸ್ಮರಿಸಿದರು. ಮದುವೆಗೆ ಬಂದವರು ಮಹಾನ್ ಪುರುಷರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಎಂದು ಹಾರೈಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.