ತುಮಕೂರು: ಕೊರೊನಾವೈರಸ್ (Coronavirus) ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಬಾಧಕವಾಗದಂತೆ ನಿಗಾವಹಿಸಲು ಕೃಷಿ ಚಟುವಟಿಕೆಗೆ ಪೂರಕವಾದ ಪರಿಕರಗಳು ಮತ್ತು ಬೋರ್‌ವೆಲ್, ಟ್ರ್ಯಾಕ್ಟರ್ ರಿಪೇರಿಗೆ ಅವಕಾಶ ಮಾಡಿ ಕೊಡಿ ಎಂದು ಕೃಷಿ ಸಚಿವ  ಬಿ.ಸಿ.‌ ಪಾಟೀಲ್ (BC Patil)  ಅಧಿಕಾರಿಗಳಿಗೆ ಸೂಚಿಸಿದರು.


COMMERCIAL BREAK
SCROLL TO CONTINUE READING

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಬೇಕಾದ ಬಿತ್ತನೆ ಬೀಜಗಳು, ಗೊಬ್ಬರ ಮತ್ತು ಇನ್ನಿತರ ಅವಶ್ಯಕ ಪರಿಕರಗಳ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ರೈತರು ನಿಶ್ಚಿಂತೆಯಿಂದ ಕೃಷಿ ಕಾಯಕ ಮುಂದುವರಿಸಲು ಮನವಿ ಮಾಡಿದರು.


ಇದುವರೆಗೂ ತಾವು ತುಮಕೂರು ಸೇರಿದಂತೆ 26 ಜಿಲ್ಲೆಗಳ ಕೃಷಿ ಪರಿಸ್ಥಿಗಳ ಬಗ್ಗೆ ಅಧ್ಯಯನ ಮಾಡಿದ್ದೇನೆ. ಸರಣಿ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. 19 ಜಿಲ್ಲೆಗಳ ಕೃಷಿ ಸ್ಥಿತಿಗತಿ - ಪರಿಹಾರ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದೇನೆ. ಇನ್ನೂ 4 ಜಿಲ್ಲೆಗಳ ಪರಿಶೀಲನೆ ನಂತರ ಮತ್ತೊಮ್ಮೆ ಸಮಗ್ರ ವರದಿ ಸಲ್ಲಿಸುತ್ತೇನೆ ಎಂದು ವಿವರಿಸಿದರು.


ಹಣ್ಣು - ತರಕಾರಿಗಳನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಪ್ರತಿ ತಾಲ್ಲೂಕಿಗೆ ಒಂದರಂತೆ ಶೀತಲ ಶೇಖರಣ ಬೃಹತ್ ಘಟಕಗಳನ್ನು ನಿರ್ಮಾಣ ಮಾಡಬೇಕಾಗಿದೆ. ಎಪಿಎಂಸಿಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ರಾಜ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗುಣಮಟ್ಟದ ಅನಾನಸ್ - ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತಾರೆ. ಸಮರ್ಪಕ ಪ್ರಮಾಣದಲ್ಲಿ ಮಾರಾಟವಾಗದ ಕಾರಣ ಅವುಗಳು ಕೊಳೆತು ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷಿಕರ ಪರಿಶ್ರಮ ವ್ಯರ್ಥವಾಗದಂತೆ ಮೌಲ್ಯವರ್ಧನಾ ಘಟಕಗಳ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಇದರಿಂದ ಹಣ್ಣುಗಳ ಜ್ಯೂಸ್ ಮಾಡಿ ಹೆಚ್ಚು ಅವಧಿ ಬಾಳಿಕೆ ಬರುವ ಪ್ಯಾಕೇಟುಗಳ ಮೂಲಕ ಮಾರಾಟ ಮಾಡುವುದು ಸೂಕ್ತ ಎಂದರು.


ರೈತರಿಗೆ (Farmers) ಉತ್ತಮ ಗುಣಮಟ್ಟದ ಬಿತ್ತನೆಬೀಜ, ಗೊಬ್ಬರಗಳು, ಕೀಟನಾಶಕಗಳು ಇನ್ನಿತರ ಪರಿಕರಗಳನ್ನು ಪೂರೈಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಎಲ್ಲಿಯಾದರೂ ಇವುಗಳ ಕಳಪೆ ಮಾರಾಟ ಕಂಡು ಬಂದು ರೈತರಿಗೆ ತೊಂದರೆಯಾದರೆ ಆಯಾ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರು, ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಅವರ ಮೇಲೆ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.


ಕೃಷಿ ಇಲಾಖೆಯ ಜಾಗೃತ ದಳವನ್ನು ಕಟ್ಟೆಚ್ಚರದ ಸ್ಥಿತಿಯಲ್ಲಿಡಲಾಗಿದೆ. ಈಗಾಗಲೇ ರಾಜ್ಯದ ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿ ಕಳಪೆ ಬಿತ್ತನೆಬೀಜ, ಇನ್ನಿತರ ಪರಿಕರಗಳನ್ನು ಜಪ್ತಿ ಮಾಡಲಾಗಿದೆ. ಸಂಬಂಧಿಸಿದ ಅಂಗಡಿಗಳ ಲೈಸನ್ಸ್ ಗಳನ್ನು ಅಮಾನತ್ತಿನಲ್ಲಿಡಲಾಗಿದೆ. ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ವಿವರಿಸಿದರು. 


ಲಾಕ್‌ಡೌನ್ (Lockdown) ಹಿನ್ನೆಲೆಯಲ್ಲಿ ಹಣ್ಣು-ತರಕಾರಿಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡುವುದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಟೊಮಟೊ ಬೆಲೆ ಕುಸಿತ ಕಂಡಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ರೈತರಿಗೆ ನೆರವಾಗಬೇಕು ಎಂದು ರೈತರೊಬ್ಬರು ಸಚಿವರಿಗೆ ಮನವಿ ಮಾಡಿದರು. 


ಕೃಷಿ ಇಲಾಖೆ ಜಂಟಿ ನಿದೇರ್ಶಕ ರಾಜ ಸುಲೋಚನ ಮಾತನಾಡಿ, ಮುಂಗಾರು ಪೂರ್ವ ಬಿತ್ತನೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ರೈತರಿಗೆ ಯಾವುದೇ ಸಮಯದಲ್ಲಿಯೂ ಕೂಡ ತೊಂದರೆಯಾಗದಂತೆ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಲು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಹಾಗೂ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜಗಳನ್ನು ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ರೈತರಿಗೆ ಕರಪತ್ರ ಮೂಲಕ ಮಾಹಿತಿ ನೀಡಲಾಗುತ್ತಿದೆ. ಕೋವಿಡ್-19 (Covid-19) ಹಿನ್ನಲೆಯಲ್ಲಿ ಬಿತ್ತನೆ ಬೀಜ ಹಂಚುವ ಕೇಂದ್ರಗಳಲ್ಲಿ ಸ್ಯಾನಿಟೈಜರ್ ವ್ಯವಸ್ಥೆ ಮಾಡಿದ್ದು, ಅಗತ್ಯವಿದ್ದವರಿಗೆ ಮಾಸ್ಕ್‌ಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.


ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರ ರಘು ಮಾತನಾಡಿ  ಮೇ ತಿಂಗಳಿಂದ ಮಾವಿನ ಬೆಳೆ ಕೊಯ್ಲಿಗೆ ಬರುತ್ತದೆ. ಆದ್ದರಿಂದ ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಜಿಲ್ಲೆಯಲ್ಲಿ 50 ಟ್ರೇಡರ‍್ಸ್‌ಗಳೊಂದಿಗೆ ಚರ್ಚಿಸಿದ್ದು, ಮಾವು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ರೈತರು ಬೆಳೆದಿರುವ ತರಕಾರಿಗಳನ್ನು ಖರೀದಿ ಮಾಡುತ್ತಿದ್ದೇವೆ. ಅಲ್ಲದೇ ನಗರದ ಪ್ರದೇಶಗಳಲ್ಲಿ ಪ್ರತಿ ವಾರ್ಡಿನಲ್ಲಿ 4 ಹಾಪ್‌ಕಾಮ್ಸ್‌ಗಳನ್ನು ತೆರೆಯಲಾಗಿದೆ. ತೋಟಗಾರಿಕಾ ಇಲಾಖೆ ವತಿಯಿಂದ 2 ಕಂಟ್ರೋಲ್ ರೂಂಗಳನ್ನು ಆರಂಭಿಸಿ, ರೈತ ಬೆಳೆದಿರುವ ಬೆಳೆಗಳ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದರು.


ರೈತರು (Farmers) ಬೆಳೆದಿರುವ ಬೆಳೆಗಳನ್ನು ಮಧ್ಯವರ್ತಿಗಳು ಕಡಿಮೆ ಬೆಲೆ ಕೊಂಡು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಕೇರಳ ಮಾದರಿಯಲ್ಲಿ ರೈತರಿಂದ ನೇರವಾಗಿ ಬೆಳೆಯನ್ನು ಕೊಂಡು, ಅವುಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು. ಇದರಿಂದ ರೈತರಿಗೂ ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು.


ರೈತರಿಗೆ ಪಾಸ್ ಬದಲು ಆಧಾರ್‌ಕಾರ್ಡ್ ಮತ್ತು ಪಾಣಿ ತೊರಿಸಿ ಸಂಚರಿಸಲು ಅನುಮತಿ ಮಾಡಿಕೊಡಿ, ಹಸಿರು ಪಾಸ್ ಕೆಲವೇ ರೈತರಿಗೆ ಮಾತ್ರ ದೊರೆತಿದೆ ಎಂದು ರೈತರೊಬ್ಬರು ಸಚಿವರಿಗೆ ಮನವಿ ಮಾಡಿದರು.


ಸಭೆಯಲ್ಲಿ ಸಚಿವ ಮಾಧುಸ್ವಾಮಿ, ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯರುಗಳಾದ  ತಿಪ್ಪೇಸ್ವಾಮಿ, ಚೌಡರಡ್ಡಿ ತೂಪ್ಪಲ್ಲಿ, ಬೆಮೆಲ್ ಕಾಂತರಾಜ್, ಶಾಸಕರಾದ  ವೀರಭದ್ರಯ್ಯ, ಸತ್ಯನಾರಾಯಣ, ಜ್ಯೋತಿ ಗಣೇಶ್, ಜಯರಾಮ್, ಜಿಲ್ಲಾ ಪಂಚಾಯಿತಿ ಸಿಇಓ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೇರಿದಂತೆ ಕೃಷಿ ಮತ್ತು ತೋಟಗಾರಿಕಾ ಮತ್ತು ಕೃಷಿ ಇಲಾಖೆಯ  ಅಧಿಕಾರಿಗಳು ಹಾಜರಿದ್ದರು.