ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೋವಿಡ್ -19 (Covid-19) ವ್ಯಾಪಕವಾಗಿ ಹಡುತ್ತಿರುವುದರಿಂದ ರಜಾದಿನವಾದ ಭಾನುವಾರ ಲಾಕ್‌ಡೌನ್ (Lockdown)  ಘೋಷಣೆ ಮಾಡಲಾಗಿದೆ. ಸಂಡೇ ಲಾಕ್‌ಡೌನ್ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಬಂದ್ ಆಗಿವೆ.


COMMERCIAL BREAK
SCROLL TO CONTINUE READING

ನಗರದ ಪ್ರಮುಖ ರಸ್ತೆಗಳ ಸಂಚಾರವನ್ನು ಸ್ಥಗಿತಗೊಳಿಸಿರುವ ಸಂಚಾರಿ ಪೊಲೀಸರು ಎಲ್ಲೆಡೆ ಬ್ಯಾರಿಕೇಡ್ ಹಾಕಿರುವ ದೃಶ್ಯ ಕಂಡುಬರುತ್ತಿದೆ. ಜೊತೆಗೆ ಅನಗತ್ಯವಾಗಿ ಸಂಚರಿಸುವವರನ್ನು ನಿಯಂತ್ರಿಸಲು ನಗರೆದೆಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. 


ಕರೋನಾ ಹಾವಳಿ: ಈ ರಾಜ್ಯಗಳಲ್ಲಿ ವಾರಾಂತ್ಯದಲ್ಲಿ ಲಾಕ್‌ಡೌನ್; ನಾಗ್ಪುರದಲ್ಲಿ ಜನತಾ ಕರ್ಫ್ಯೂ


ನಗರದ ಎಲ್ಲಾ ಬಡಾವಣೆಗಳಲ್ಲಿ ಪೊಲೀಸರ ಚೀತಾ ಮತ್ತು ಹೊಯ್ಸಳ ವಾಹನಗಳು ಗಸ್ತು ತಿರುಗುತ್ತಿವೆ. 
ರಜಾ ದಿನಗಳಲ್ಲಿ ಜನ ಹೆಚ್ಚು ಓಡಾಡುತ್ತಾರೆ. ಅದರಲ್ಲೂ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮಾರ್ಕೆಟ್, ಮಾಲ್ ಮತ್ತಿತರ ಜನ ಸೇರುವ ಕಡೆ ಸಂಧಿಸುತ್ತಾರೆ. ಇದರಿಂದ COVID -19 ಸೋಂಕು ಇನ್ನಷ್ಟು ತ್ವರಿತವಾಗಿ ಹರಡುತ್ತದೆ ಎಂಬ ಕಾರಣಕ್ಕೆ ಭಾನುವಾರದ ಲಾಕ್ಡೌನ್ ಮಾಡಲಾಗಿದೆ. ಈ ಲಾಕ್ಡೌನ್ ಹಿನ್ನೆಲೆಯಲ್ಲಿ ನಗರದ ಕೆ.ಆರ್. ಮಾರ್ಕೆಟ್, ಆನಂದರಾವ್ ಸರ್ಕಲ್, ಯಶವಂತಪುರ ಸೇರಿದಂತೆ ನಗರದ ಹಲವು ಪ್ಲೈಓವರ್ ಗಳು ಕೂಡ ಬಂದ್ ಆಗಿವೆ.


ಇದಲ್ಲದೆ ಬೆಂಗಳೂರಿನಿಂದ ಹೊರ ಊರಿಗೆ ಹೋಗುವ ಮತ್ತು ಹೊರಗಡೆಯಿಂದ ಬೆಂಗಳೂರಿಗೆ ಬರುವ ವಾಹನಗಳನ್ನು ‌ನಿರ್ಬಂಧಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಬೆಂಗಳೂರು ನಗರ ಸಾರಿಗೆ ಸಂಸ್ಥೆ (BMTC), ಸಾರ್ವಜನಿಕ ಕ್ಯಾಬ್ ಮತ್ತು‌ ಆಟೋ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.


ಉದ್ಯಾನನಗರಿ ಎಂಬ ಖ್ಯಾತಿಯ ಬೆಂಗಳೂರಿನಲ್ಲಿ ಈ ಭಾನುವಾರ ಎಲ್ಲಾ ಉದ್ಯಾನವನಗಳಿಗೂ‌ ಬೀಗ ಹಾಕಲಾಗಿದೆ. ಭಾನುವಾರದಂದು ಹೆಚ್ಚಿನ‌ ಜನ ಉದ್ಯಾನವನಗಳಿಗೆ ಬರುತ್ತಾರೆ. ಅಲ್ಲಿ ಒಂದೆಡೆ ಸೇರುತ್ತಾರೆ ಎಂಬ ಕಾರಣಕ್ಕೆ ಉದ್ಯಾನವನಗಳನ್ನು ಮುಚ್ಚಲಾಗಿದೆ. ಆದರೆ ಉದ್ಯಾನವನಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಜನ‌ ಪಕ್ಕದ ರಸ್ತೆಗಳಲ್ಲಿ ವಾಕಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ.


ಭಾನುವಾರದ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಸೂಚಿಸಲಾಗಿದೆ.  ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು, ಮೆಡಿಕಲ್ ಸ್ಟೋರ್ ಗಳು, ದಿನಸಿ ಅಂಗಡಿಗಳು, ಹಾಲು ಮತ್ತು ತರಕಾರಿ ಮಾರಾಟದ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ.


ನಿನ್ನೆ ಇಡೀ ರಾಜ್ಯಾದ್ಯಂತ 5,072 COVID -19 ಪ್ರಕರಣಗಳು ಪತ್ತೆಯಾಗಿವೆ. 72 ಜನ COVID -19ಗೆ‌ ಬಲಿಯಾಗಿದ್ದಾರೆ. ಈ ಪೈಕಿ ಬೆಂಗಳೂರು ಒಂದರಲ್ಲೇ 2,036 ಪ್ರಕರಣಗಳು ವರದಿಯಾಗಿವೆ ಮತ್ತು 30 ಸಾವುಗಳು ಸಂಭವಿಸಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.