ಕಾಬೂಲ್‌​: ರಾಜಧಾನಿ ಕಾಬೂಲ್‌ ಸೇರಿದಂತೆ ಇಡೀ ಅಫ್ಘಾನಿಸ್ತಾನವನ್ನೇ ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿರುವ ತಾಲಿಬಾನ್ ಉಗ್ರರ ಕರಾಳ ಮುಖ ಒಂದೊಂದಾಗಿ ಬಯಲಾಗುತ್ತಿದೆ. ಶರಿಯಾ ಕಾನೂನು ಜಾರಿಗೊಳಿಸುತ್ತೇವೆಂದು ಈಗಾಗಲೇ ಘೋಷಿಸಿರುವ ತಾಲಿಬಾನ್ ಉಗ್ರರು ಇದೀಗ ಅಫ್ಘಾನ್ ಜಾನಪದ ಗಾಯಕ(Afghani folk singer)ನನ್ನು ಹತ್ಯೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನ(Afghanistan)ದ ಈಶಾನ್ಯ ಬಾಗ್ಲಾನ್ ಪ್ರಾಂತ್ಯದಲ್ಲಿ ಅಫ್ಘಾನ್ ಜಾನಪದ ಗಾಯಕ ಫವಾದ್ ಅಂದ್ರಾಬಿಯನ್ನು ತನ್ನ ಮನೆಯಿಂದ ಹೊರಗೆ ಎಳೆದು ತಾಲಿಬಾನ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಭಾನುವಾರ ತಿಳಿಸಿದ್ದಾರೆ. ಈ ಆಘಾತಕಾರಿ ಘಟನೆಯು ಇಸ್ಲಾಮಿಕ್ ಕಾನೂನಿನ ಪ್ರಕಾರ ಸಂಗೀತವನ್ನು ಪಾಪವೆಂದು ಪರಿಗಣಿಸುವ ತಾಲಿಬಾನ್ ದಮನಕಾರಿ ಆಡಳಿತದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿದೆ.


ತಾಲಿಬಾನ್(Taliban) ಭಯೋತ್ಪಾದಕರು ಕೆಲ ದಿನಗಳ ಹಿಂದಷ್ಟೇ ಜಾನಪದ ಗಾಯಕ ಫವಾದ್ ಅಂದ್ರಾಬಿ(Fawad Andrabi) ಮನೆಗೆ ಬಂದಿದ್ದರು. ಗಾಯಕನೊಂದಿಗೆ ಕುಳಿತುಕೊಂಡು ಚಹಾ ಕೂಡ ಸೇವಿಸಿದ್ದರು ಎಂದು ಅವರ ಪುತ್ರ ಜವಾದ್ ಅಂದ್ರಾಬಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಶುಕ್ರವಾರದ ಸನ್ನಿವೇಶಗಳು ಹೇಗೆ ಬದಲಾಯಿತು ಎಂಬುದು ಅವರಿಗೇ ಸ್ಪಷ್ಟವಾಗಿಲ್ಲ. ಪ್ರಕ್ಷುಬ್ಧ ವಾತಾವರಣವಿದ್ದ ಪರ್ವತ ಪ್ರಾಂತ್ಯದಲ್ಲಿ ತಾಲಿಬಾನ್ ಉಗ್ರರು ಗಾಯಕನನ್ನು ಗುಂಡಿಕ್ಕಿ ಕೊಂದಿದ್ದಾರೆ.   


ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ


‘ನಮ್ಮ ತಂದೆ ಮುಗ್ಧರಾಗಿದ್ದರು, ಗಾಯಕರಾಗಿದ್ದ ಅವರು ಕೇವಲ ಜನರನ್ನು ರಂಜಿಸುತ್ತಿದ್ದರು. ಆದರೆ ನಮ್ಮ ಮನೆಯ ಮುಂಭಾಗದ ಜಮೀನಿನಲ್ಲಿ ತಂದೆಯ ತಲೆಗೆ ತಾಲಿಬಾನ್ ಭಯೋತ್ಪಾದಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ’ ಎಂದು ಜವಾದ್ ಹೇಳಿದ್ದಾರೆ. ಮುಗ್ಧ ತಂದೆಯನ್ನು ಕೊಂದಿರುವುದರಿಂದ ನನಗೆ ನ್ಯಾಯ ಬೇಕು ಎಂದು ಜವಾದ್ ಆಗ್ರಹಿಸಿದ್ದಾರೆ. ಸ್ಥಳೀಯ ತಾಲಿಬಾನ್ ಕೌನ್ಸಿಲ್(Taliban Council) ಗುಂಡಿಕ್ಕಿ ಕೊಂದಿರುವವರನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದೆ. ಈ ಬಗ್ಗೆ ಮಾತನಾಡಿರುವ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್, ‘ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತದೆ, ಆದರೆ ಹತ್ಯೆಯ ಬಗ್ಗೆ ಯಾವುದೇ ವಿವರಗಳು ಲಭ್ಯವಿಲ್ಲ’ ಎಂದು ಹೇಳಿದ್ದಾರೆ.


ತಾಲಿಬಾನ್ ಉಗ್ರರ ಗುಂಡಿಗೆ ಬಲಿಯಾದ ಬಳಿಕ ಅಫ್ಘಾನ್ ಜಾನಪದ ಗಾಯಕ ಫವಾದ್ ಅಂದ್ರಾಬಿಯವರು ಹಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ವಿಡಿಯೋದಲ್ಲಿ ಫವಾದ್ ಅವರು ವೀಣೆ ಹಿಡಿದುಕೊಂಡು ತಮ್ಮ ಜನ್ಮಸ್ಥಳ, ತಮ್ಮೂರಿನ ಜನರು ಮತ್ತು ಅಫ್ಘಾನಿಸ್ತಾನದ ಬಗ್ಗೆ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಿದ್ದಾರೆ.


ಇದನ್ನೂ ಓದಿ: Afghanistan: ಸೇನಾ ವಿಭಾಗದಲ್ಲೂ ಭಯೋತ್ಪಾದಕರ ಎಂಟ್ರಿ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಲಗ್ಗೆ ಇಟ್ಟ ತಾಲಿಬಾನ್


ಕೆಲವೇ ದಿನಗಳ ಹಿಂದೆ ತಾಲಿಬಾನ್ ವಕ್ತಾರರು 1996-2001ರಲ್ಲಿ ತಮ್ಮ ಆಡಳಿತದಲ್ಲಿದ್ದಂತೆ ಅಫ್ಘಾನಿಸ್ತಾನದಲ್ಲಿ ಸಾರ್ವಜನಿಕವಾಗಿ ಸಂಗೀತವನ್ನು ಮತ್ತೊಮ್ಮೆ ನಿಷೇಧಿಸಲಾಗುವುದು ಎಂದು ಹೇಳಿದ್ದರು. ಕಾಬೂಲ್‌ನಿಂದ ಉತ್ತರಕ್ಕೆ ಸುಮಾರು 100 ಕಿಲೋಮೀಟರ್ ದೂರದಲ್ಲಿ ಈ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ