ಚಂದ್ರಯಾನ 3ರೊಡನೆ ಭವಿಷ್ಯದೆಡೆಗೆ ಉಡ್ಡಯನ: ವಿಕ್ರಮ್ ಮತ್ತು ಪ್ರಗ್ಯಾನ್‌ರ ಪರಿಚಯ

ಸೋಮನಾಥ್ ಅವರು ಈ ತಿಂಗಳ ಆರಂಭದಲ್ಲಿ ಇಸ್ರೋ ತನ್ನ ಮೂರನೇ ಚಂದ್ರ ಅನ್ವೇಷಣಾ ಯೋಜನೆಯನ್ನು ಜುಲೈ ಮಧ್ಯಭಾಗದಲ್ಲಿ ಎಲ್‌ವಿಎಂ3 (ಈ ಮೊದಲು ಜಿಎಸ್ಎಲ್‌ವಿ ಎಂಕೆ 3 ಎಂದು ಕರೆಯಲಾಗುತ್ತಿತ್ತು) ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲಿದೆ ಎಂದಿದ್ದರು.

Written by - Girish Linganna | Edited by - Yashaswini V | Last Updated : Jun 27, 2023, 02:10 PM IST
  • ಚಂದ್ರಯಾನ-3ರ ಸ್ಪೇಸ್‌ಕ್ರಾಫ್ಟ್‌ಗೆ ಭಾರತದ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ನೆನಪಿಗಾಗಿ 'ವಿಕ್ರಮ್' ಎಂದು ಹೆಸರಿಡಲಾಗಿದೆ
  • ರೋವರ್‌ಗೆ 'ಪ್ರಗ್ಯಾನ್' ಎಂದು ಹೆಸರಿಡಲಾಗಿದೆ.
  • ಪ್ರಗ್ಯಾನ್ ಎನ್ನುವುದು ಬುದ್ಧಿವಂತಿಕೆಗೆ ಸಂಸ್ಕೃತದ ಪದವಾಗಿದೆ.
ಚಂದ್ರಯಾನ 3ರೊಡನೆ ಭವಿಷ್ಯದೆಡೆಗೆ ಉಡ್ಡಯನ: ವಿಕ್ರಮ್ ಮತ್ತು ಪ್ರಗ್ಯಾನ್‌ರ ಪರಿಚಯ title=
Chandrayaan 3

Chandrayaan 3: ಭಾರತದ ಮೂರನೆಯ ಚಂದ್ರ ಅನ್ವೇಷಣಾ ಯೋಜನೆಯಾದ ಚಂದ್ರಯಾನ-3 ಜುಲೈ ತಿಂಗಳ ಮಧ್ಯಭಾಗದಲ್ಲಿ ಉಡಾವಣೆಗೊಳ್ಳಲಿದೆ. ಈ ಯೋಜನೆಯಲ್ಲೂ ಲ್ಯಾಂಡರ್ ಮತ್ತು ರೋವರ್‌ಗಳಿಗೆ 2019ರ ಚಂದ್ರಯಾನ-2 ಯೋಜನೆಯ ಲ್ಯಾಂಡರ್ ಮತ್ತು ರೋವರ್‌ಗಳಿಗಿದ್ದ ಹೆಸರನ್ನೇ ಇಡಲಾಗುತ್ತದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷರಾದ ಎಸ್ ಸೋಮನಾಥ್ ಅವರು ಚಂದ್ರಯಾನ-2 ಯೋಜನೆಯ ಲ್ಯಾಂಡರ್ ಮತ್ತು ರೋವರ್‌ಗಳು ಚಂದ್ರಯಾನ-3 ಯೋಜನೆಯ ಲ್ಯಾಂಡರ್ - ರೋವರ್‌ಗಳಲ್ಲೂ ತಮ್ಮ ಹೆಸರು ಉಳಿಸಿಕೊಳ್ಳಲಿವೆ ಎಂದಿದ್ದಾರೆ. ಅಂದರೆ, ಚಂದ್ರಯಾನ-3ರ ಸ್ಪೇಸ್‌ಕ್ರಾಫ್ಟ್‌ಗೆ ಭಾರತದ ಬಾಹ್ಯಾಕಾಶ ಯೋಜನೆಗಳ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ನೆನಪಿಗಾಗಿ 'ವಿಕ್ರಮ್' ಎಂದು ಹೆಸರಿಡಲಾಗಿದ್ದು, ರೋವರ್‌ಗೆ 'ಪ್ರಗ್ಯಾನ್' ಎಂದು ಹೆಸರಿಡಲಾಗಿದೆ. ಪ್ರಗ್ಯಾನ್ ಎನ್ನುವುದು ಬುದ್ಧಿವಂತಿಕೆಗೆ ಸಂಸ್ಕೃತದ ಪದವಾಗಿದೆ.

ಚಂದ್ರಯಾನ-2ರ ಉಡಾವಣೆಯಲ್ಲಿ, ವಿಕ್ರಮ್ ಚಂದ್ರನ ಮೇಲ್ಮೈಯಲ್ಲಿ ವೇಗವಾಗಿ ಪತನ ಹೊಂದಿದ ಕಾರಣದಿಂದ ಇಸ್ರೋ ಲ್ಯಾಂಡರ್ - ರೋವರ್ ಹಾಗೂ ಪೇಲೋಡ್ ಜೊತೆಗಿನ ಸಂಪರ್ಕ ಕಳೆದುಕೊಂಡಿತು. ಆ ಪ್ರಯತ್ನದಲ್ಲಿ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿ ನೆರವೇರಿರಲಿಲ್ಲ.

ಸೋಮನಾಥ್ ಅವರು ಈ ತಿಂಗಳ ಆರಂಭದಲ್ಲಿ ಇಸ್ರೋ ತನ್ನ ಮೂರನೇ ಚಂದ್ರ ಅನ್ವೇಷಣಾ ಯೋಜನೆಯನ್ನು ಜುಲೈ ಮಧ್ಯಭಾಗದಲ್ಲಿ ಎಲ್‌ವಿಎಂ3 (ಈ ಮೊದಲು ಜಿಎಸ್ಎಲ್‌ವಿ ಎಂಕೆ 3 ಎಂದು ಕರೆಯಲಾಗುತ್ತಿತ್ತು) ರಾಕೆಟ್ ಮೂಲಕ ಶ್ರೀಹರಿಕೋಟಾದಿಂದ ಉಡಾವಣೆಗೊಳಿಸಲಿದೆ ಎಂದಿದ್ದರು.

ಇದನ್ನೂ ಓದಿ- ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ? ಈ ಎರಡು ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವುದು ಉತ್ತಮ

ಈ ಯೋಜನೆಯಲ್ಲಿ ಒಂದು ಪ್ರೊಪಲ್ಷನ್ ಮಾಡ್ಯುಲ್ ಲ್ಯಾಂಡರ್ - ರೋವರ್ ಜೋಡಿಯನ್ನು ಚಂದ್ರನ ಮೇಲ್ಮೈಯಿಂದ ನೂರು ಕಿಲೋಮೀಟರ್ ಎತ್ತರದಲ್ಲಿರುವ ಕಕ್ಷೆಗೆ ಜೋಡಿಸಲಿದೆ. ಇಸ್ರೋ ತನ್ನ ಮಾಹಿತಿಯಲ್ಲಿ, ಒಂದು ಬಾರಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಗೆ ಇಳಿದ ಬಳಿಕ, ಅದು 'ಪ್ರಗ್ಯಾನ್' ಅನ್ನು ಹೊರಬಿಡಲಿದೆ. ಪ್ರಗ್ಯಾನ್ ಚಂದ್ರನ ಮೇಲ್ಮೈಯಲ್ಲಿ ಚಲಿಸುತ್ತಾ, ಚಂದ್ರನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆ ನಡೆಸಲಿದೆ.

ವೈಜ್ಞಾನಿಕ ಪ್ರಯೋಗಗಳು:
ಲ್ಯಾಂಡರ್, ರೋವರ್, ಹಾಗೂ ಪ್ರೊಪಲ್ಷನ್ ಮಾಡ್ಯುಲ್‌ಗಳನ್ನು ಒಳಗೊಂಡ ಪೇಲೋಡ್‌ಗಳು ವಿಜ್ಞಾನಿಗಳಿಗೆ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹದ ಗುಣಲಕ್ಷಣಗಳ ಕುರಿತು ಇನ್ನಷ್ಟು ಮಾಹಿತಿ ಪಡೆಯಲು ನೆರವಾಗುತ್ತವೆ.

1,752 ಕೆಜಿ ತೂಕ ಹೊಂದಿರುವ ಲ್ಯಾಂಡರ್ ನಾಲ್ಕು ಪೇಲೋಡ್‌ಗಳನ್ನು ಹೊಂದಿದೆ. ಅವೆಂದರೆ ರೇಡಿಯೋ ಅನಾಟಮಿ ಆಫ್ ಮೂನ್ ಬೌಂಡ್ ಹೈಪರ್ ಸೆನ್ಸಿಟಿವ್ ಅಯನಾಸ್ಫಿಯರ್ ಆ್ಯಂಡ್ ಅಟ್ಮಾಸ್ಫಿಯರ್ (ಆರ್‌ಎಎಂಬಿಎಚ್ಎ), ಚಂದ್ರಾಸ್ ಸರ್ಫೇಸ್ ಥರ್ಮೋ ಫಿಸಿಕಲ್ ಎಕ್ಸ್‌ಪರಿಮೆಂಟ್ (ಸಿಎಚ್ಎಎಸ್‌ಟಿಇ), ಇನ್ಸ್ಟ್ರುಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ (ಐಎಲ್ಎಸ್ಎ) ಹಾಗೂ ಲೇಸರ್ ರೆಟ್ರೋಫ್ಲೆಕ್ಟರ್ ಅರೇ (ಎಲ್ಆರ್‌ಎ).

ಸಿಎಚ್ಎಎಸ್‌ಟಿಇ ಚಂದ್ರನ ದಕ್ಷಿಣ ಧ್ರುವದ ಬಳಿಯ ಮೇಲ್ಮೈನ ಉಷ್ಣ ವಾಹಕತೆ ಹಾಗೂ ಮೇಲ್ಮೈ ಅಂಶಗಳ ಉಷ್ಣತೆಗಳನ್ನು ಅಳೆಯಲಿದೆ. ಐಎಲ್ಎಸ್ಎ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಪ್ರದೇಶದ ಕಂಪನವನ್ನು ಅಳೆಯುವುದರ ಜೊತೆಗೆ, ಚಂದ್ರನ ಹೊರಪದರದ ವಿನ್ಯಾಸವನ್ನು ವಿವರಿಸಲಿದೆ. ಎಲ್‌ಪಿ ಪ್ಲಾಸ್ಮಾ ಸಾಂದ್ರತೆಯನ್ನು ಅಳೆದರೆ, ನಾಸಾದ ಸಹಯೋಗಿ ಪ್ರಯೋಗವಾದ ಎಲ್ಆರ್‌ಎ ಎಂಬ ಸ್ಪೇಸ್‌ಕ್ರಾಫ್ಟ್ ಚಂದ್ರನ ರಚನೆಗಳನ್ನು ತಿಳಿಯಲು ನೆರವಾಗಲಿದೆ. ಚಂದ್ರಯಾನ-3ರ ಆರ್‌ಎಂಬಿಎಚ್ಎ ಪ್ರಯೋಗ ಚಂದ್ರನ ಪ್ಲಾಸ್ಮಾ ಸಾಂದ್ರತೆಯನ್ನು ಲೆಕ್ಕಾಚಾರ ಹಾಕಿ, ಅದರ ಏರಿಳಿತಗಳನ್ನು ತಿಳಿಯಲು ನೆರವಾಗುತ್ತದೆ.

ಇದನ್ನೂ ಓದಿ- ಟೈಟಾನಿಕ್ ಅವಶೇಷಗಳೆಡೆಗೆ ಪ್ರಯಾಣ: ದುರ್ಘಟನೆಯ ಅನಾವರಣ

ಕೇವಲ 26 ಕೆಜಿ ತೂಕದ, ಆರು ಚಕ್ರಗಳನ್ನು ಹೊಂದಿರುವ ರೋವರ್ ಎರಡು ಪೇಲೋಡ್‌ಗಳನ್ನು ಹೊಂದಿರಲಿದೆ. ಅವೆಂದರೆ, ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್ಎಸ್) ಹಾಗೂ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (ಎಲ್ಐಬಿಎಸ್).

ಎಪಿಎಕ್ಸ್ಎಸ್ ಚಂದ್ರನ ಮಣ್ಣಿನ ಮತ್ತು ಕಲ್ಲುಗಳ ಧಾತುರೂಪದ ಸಂಯೋಜನೆಗಳನ್ನು ತಿಳಿಯಲು ನೆರವಾಗಲಿದೆ. ಮೆಗ್ನೀಸಿಯಂ, ಅಲ್ಯುಮಿನಿಯಮ್, ಸಿಲಿಕಾನ್, ಪೊಟ್ಯಾಸಿಯಮ್‌, ಕ್ಯಾಲ್ಸಿಯಂ, ಟೈಟಾನಿಯಂ ಹಾಗೂ ಕಬ್ಬಿಣಗಳಿವೆಯೇ ಎಂದು ಪರಿಶೀಲಿಸಲಾಗುತ್ತದೆ.

ಚಂದ್ರನ ಮೇಲ್ಮೈಯ ರಾಸಾಯನಿಕ ಮತ್ತು ಖನಿಜ ಸಂಯೋಜನೆಗಳನ್ನು ತಿಳಿಯಲು ಎಲ್ಐಬಿಎಸ್ ಗುಣಾತ್ಮಕ ಮತ್ತು ಪರಿಮಾಣಾತ್ಮಕ (ಕ್ವಾಲಿಟೇಟಿವ್ ಮತ್ತು ಕ್ವಾಂಟಿಟೇಟಿವ್) ವಿಶ್ಲೇಷಣೆ ನಡೆಸಲಿದೆ.

ಪ್ರೊಪಲ್ಷನ್ ಮಾಡ್ಯುಲ್ 2,148 ಕೆಜಿ ತೂಕವಿದ್ದು, ಸ್ಪೆಕ್ಟ್ರೋ-ಪಾಲಿಮೆಟ್ರಿ ಆಫ್ ಹ್ಯಾಬಿಟೇಬಲ್ ಪ್ಲಾನೆಟ್ ಅರ್ತ್ (ಶೇಪ್) ಪೇಲೋಡ್ ಹೊಂದಿದೆ. ಈ ಶೇಪ್ ಚಂದ್ರನ ಕಕ್ಷೆಯಿಂದ ಭೂಮಿಯ ಸ್ಪೆಕ್ಟ್ರಲ್ ಮತ್ತು ಧ್ರುವೀಯ ಅಳತೆಗಳನ್ನು ಪಡೆಯಲು ನೆರವಾಗುತ್ತದೆ. ಅಂದರೆ, ಶೇಪ್ ಭೂಮಿಯ ಸ್ಪೆಕ್ಟ್ರೋ - ಪೋಲಾರಿಮೆಟ್ರಿಕ್ ಮಾಹಿತಿಗಳನ್ನು ವಿಶ್ಲೇಷಿಸುತ್ತದೆ.

ಶೇಪ್ ಗಳಿಸಿದ ಮಾಹಿತಿಗಳನ್ನು ಬಹಿರ್ ಗ್ರಹಗಳ (ಎಕ್ಸೋಪ್ಲಾನೆಟ್) ಕುರಿತು ಸಂಶೋಧನೆ ನಡೆಸಲು ಮತ್ತು ಭಾರತದಿಂದ ಸೌರ ಮಂಡಲದಾಚೆಗಿನ ಬಹಿರ್ ಗ್ರಹಗಳ ವಾಸ ಯೋಗ್ಯತೆಯನ್ನು ಕುರಿತು ವಿಶ್ಲೇಷಣೆ ನಡೆಸಲು ಬಳಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News