Agni Prime P: ಜೂನ್ 7ರಂದು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ) ಅಗ್ನಿ ಪ್ರೈಮ್ ಎಂಬ ಹೊಸ ತಲೆಮಾರಿನ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಒಡಿಶಾದ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಯಶಸ್ವಿಯಾಗಿ ಉಡಾವಣೆಗೊಳಿಸಿತು ಎಂದು ರಕ್ಷಣಾ ಇಲಾಖೆ ವರದಿ ಮಾಡಿದೆ.
ಕ್ಷಿಪಣಿಯ ಮೂರು ಯಶಸ್ವಿ ಪ್ರಯೋಗಗಳ ನಂತರ, ಸೇನಾ ಸೇರ್ಪಡೆಗೆ ಮೊದಲು ಇದೇ ಮೊದಲ ಬಾರಿಗೆ ರಾತ್ರಿ ಉಡಾವಣೆಯನ್ನು ಕೈಗೊಳ್ಳಲಾಯಿತು ಎಂದು ಸಚಿವಾಲಯ ತಿಳಿಸಿದೆ. ರೇಡಾರ್, ಟೆಲಿಮೆಟ್ರಿ ಹಾಗೂ ಇಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಗಳನ್ನು ವಿವಿಧ ಜಾಗಗಳಲ್ಲಿ ಅಳವಡಿಸಿ, ಎರಡು ಕಡಿಮೆ ವ್ಯಾಪ್ತಿಯ ಹಡಗುಗಳನ್ನೂ ಸ್ಥಾಪಿಸಿ, ರಾಕೆಟ್ನ ಸಂಪೂರ್ಣ ಹಾದಿಯನ್ನು ಗುರುತಿಸಲಾಯಿತು.
ಈ ಯಶಸ್ವಿ ಹಾರಾಟದ ಪರಿಣಾಮವಾಗಿ, ಅಗ್ನಿ ಪ್ರೈಮ್ ಭಾರತೀಯ ಸೇನಾಪಡೆಗಳಿಗೆ ಸೇರ್ಪಡೆಯಾಗಲು ಹಾದಿ ಸುಗಮವಾದಂತಾಗಿದೆ. ಈ ಪ್ರಯೋಗವನ್ನು ಡಿಆರ್ಡಿಓ ಮತ್ತು ಸ್ಟ್ರಾಟಜಿಕ್ ಫೋರ್ಸಸ್ ಕಮಾಂಡಿನ ಹಿರಿಯ ಅಧಿಕಾರಿಗಳು ವೀಕ್ಷಿಸಿದರು ಎಂದು ಹೇಳಿಕೆ ತಿಳಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಗ್ನಿ ಪಿ ಎಂದೂ ಕರೆಯಲ್ಪಡುವ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿದೆ. ಇದೊಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಅಗ್ನಿ-1 ಹಾಗೂ ಅಗ್ನಿ-2 ಕ್ಷಿಪಣಿಗಳ ಬದಲಿಗೆ ಬಳಕೆಯಾಗಲಿದೆ.
ಇದನ್ನೂ ಓದಿ- ಭಾರತೀಯ ರೈಲ್ವೇ: ದುರಸ್ತಿಗಾಗಿ ಎದುರು ನೋಡುತ್ತಿರುವ ಬೃಹತ್ ವ್ಯವಸ್ಥೆ
ಅಗ್ನಿ ಪ್ರೈಮ್ ಎರಡು ಹಂತಗಳ, ಕವಚದೊಳಗಿಡುವ, ಘನ ಇಂಧನ ರಾಕೆಟ್ ಆಗಿದ್ದು, ಸಂಚರಣ ಮತ್ತು ಮಾರ್ಗದರ್ಶನ ವ್ಯವಸ್ಥೆಗಳನ್ನು ಹೊಂದಿದೆ.
ಎರಡು ಹಂತಗಳ, ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿರುವ ಅಗ್ನಿ ಪ್ರೈಮ್ ಅಗ್ನಿ ವರ್ಗದ ಕ್ಷಿಪಣಿಗಳ ಅಭಿವೃದ್ಧಿ ಹೊಂದಿರುವ ಆವೃತ್ತಿಯಾಗಿದ್ದು, ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಕ್ಷಿಪಣಿ 2,000 ಕಿಲೋಮೀಟರ್ಗಳ ಉತ್ತಮ ವ್ಯಾಪ್ತಿಯನ್ನು ಹೊಂದಿದೆ.
ಗಮನಾರ್ಹ ವಿಚಾರವೆಂದರೆ, ಅಗ್ನಿ ಪ್ರೈಮ್ ಕ್ಷಿಪಣಿ ಅಗ್ನಿ-3ರ ಅರ್ಧದಷ್ಟು ಮಾತ್ರವೇ ಭಾರ ಹೊಂದಿದ್ದು, ಆಧುನಿಕ ಸಂಚರಣೆ ಮತ್ತು ಸಂಚಾಲನಾ (ಪ್ರೊಪಲ್ಷನ್) ವ್ಯವಸ್ಥೆಗಳನ್ನು ಒಳಗೊಂಡಿದೆ. ಇದನ್ನು ಒಂದು ಸಂಗ್ರಾಹಕದಲ್ಲಿ ಇಡಲು ಸಾಧ್ಯವಿರುವುದರಿಂದ, ಇದನ್ನು ರೈಲಿನಿಂದ, ರಸ್ತೆಯಿಂದಲೂ ಉಡಾವಣೆಗೊಳಿಸಬಹುದು. ಇದನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡಬಹುದು ಮತ್ತು ಕಾರ್ಯಾಚರಣೆಯ ಅಗತ್ಯತೆಗೆ ಸಂಬಂಧಿಸಿದಂತೆ ಬೇರೆ ಬೇರೆ ಕಡೆಗಳಿಗೆ ಒಯ್ಯಬಹುದು.
ಈ ಕ್ಷಿಪಣಿಗೆ ಅತ್ಯುತ್ತಮ ಗುಣಮಟ್ಟದ ಸಂಯುಕ್ತಗಳಿಂದ ನಿರ್ಮಿಸಿರುವ ಉಪಕರಣಗಳು, ಪ್ರೊಪಲ್ಷನ್ ವ್ಯವಸ್ಥೆಗಳು ಹಾಗೂ ಗೈಡೆನ್ಸ್ ವ್ಯವಸ್ಥೆಗಳು ಮತ್ತು ಆಧುನಿಕ ನ್ಯಾವಿಗೇಶನ್ ವ್ಯವಸ್ಥೆಗಳನ್ನೊಳಗೊಂಡ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇದು ಅಗ್ನಿ ಬ್ಯಾಲಿಸ್ಟಿಕ್ ಕ್ಷಿಪಣಿ ಸರಣಿಯ ಆರನೇ ಕ್ಷಿಪಣಿಯಾಗಿದೆ.
ಅಗ್ನಿ ಪಿ ಕ್ಷಿಪಣಿಯ ಕೆಲವು ವಿಶೇಷ ಅಂಶಗಳು:
ಮನ್ಯೂವರೇಬಲ್ ರಿ-ಎಂಟ್ರಿ ವೆಹಿಕಲ್ (MaRV): ಅಗ್ನಿ ಪ್ರೈಮ್ ಕ್ಷಿಪಣಿಯಲ್ಲಿ ಎಂಎಆರ್ವಿ ಒಂದನ್ನು ಅಳವಡಿಸಲಾಗಿದ್ದು, ಇದು ಶತ್ರುಗಳ ರಕ್ಷಣೆಯನ್ನು ತಪ್ಪಿಸಿ ಮುನ್ನುಗ್ಗಲು ಸಂಕೀರ್ಣ ಹಾದಿಯನ್ನು ಆಯ್ಕೆ ಮಾಡುತ್ತದೆ. ಇದರಿಂದಾಗಿ ಶತ್ರುಗಳ ವಾಯು ರಕ್ಷಣೆಗೆ ಈ ಕ್ಷಿಪಣಿಯನ್ನು ಹೊಡೆದುರುಳಿಸುವುದು ಕಷ್ಟಕರವಾಗುವಂತೆ ಮಾಡುತ್ತದೆ.
ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರಿಎಂಟ್ರಿ ವೆಹಿಕಲ್ (MIRV): ಅಗ್ನಿ ಪ್ರೈಮ್ನಲ್ಲಿ ಎಂಐಆರ್ವಿ ಅಳವಡಿಸಲಾಗಿದ್ದು, ಇದು ಹಲವು ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಪ್ರತಿಯೊಂದು ಸಿಡಿತಲೆಯನ್ನೂ ಬೇರೆ ಬೇರೆ ಗುರಿಯ ಮೇಲೆ ಪ್ರಯೋಗಿಸಬಹುದಾಗಿದೆ. ಇದು ಭಾರತಕ್ಕೆ ಒಂದೇ ಕ್ಷಿಪಣಿಯ ಮೂಲಕ ಹಲವು ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಒದಗಿಸುತ್ತದೆ.
ಇದನ್ನೂ ಓದಿ- ಭಾರತವನ್ನು ನಾಶ ಮಾಡುವ ಮೊದಲೇ ಭ್ರಷ್ಟಾಚಾರ ಕೊನೆಗೊಳಿಸೋಣ!
ಸಂಗ್ರಾಹಕದಿಂದ (ಕ್ಯಾನಿಸ್ಟರ್) ಉಡಾವಣಾ ವ್ಯವಸ್ಥೆ: ಅಗ್ನಿ ಪ್ರೈಮ್ ಪಿ ಕ್ಷಿಪಣಿಯನ್ನು ಸಂಗ್ರಾಹಕದಿಂದ ಉಡಾಯಿಸಬಹುದಾಗಿದೆ. ಇದು ಕ್ಷಿಪಣಿಗೆ ರಕ್ಷಣೆಯನ್ನು ಒದಗಿಸುವುದರ ಜೊತೆಗೆ, ಇದನ್ನು ಸಾಗಿಸಲು ಮತ್ತು ಉಡಾವಣೆಗೊಳಿಸಲು ಸುಲಭವಾಗುವಂತೆ ಮಾಡುತ್ತದೆ.
ಘನ ಇಂಧನ: ಅಗ್ನಿ ಪ್ರೈಮ್ ಪಿ ಒಂದು ಘನ ಇಂಧನ ಕ್ಷಿಪಣಿಯಾಗಿದ್ದು, ದ್ರವ ಇಂಧನ ಕ್ಷಿಪಣಿಗಳಿಗೆ ಹೋಲಿಸಿದರೆ ಉಡಾವಣೆಗೊಳಿಸಲು ಸುಲಭವಾಗಿದೆ ಮತ್ತು ಹೆಚ್ಚಿನ ವ್ಯಾಪ್ತಿ ಹೊಂದಿದೆ.
ಆಧುನಿಕ ಸಂಚರಣ ಮತ್ತು ಮಾರ್ಗದರ್ಶನ ವ್ಯವಸ್ಥೆ: ಅಗ್ನಿ ಪ್ರೈಮ್ ಪಿ ಕ್ಷಿಪಣಿಯಲ್ಲಿ ಆಧುನಿಕ ನ್ಯಾವಿಗೇಶನ್ ಹಾಗೂ ಗೈಡೆನ್ಸ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇವು ಕ್ಷಿಪಣಿಯನ್ನು ಹೆಚ್ಚು ನಿಖರ ಮತ್ತು ತಡೆಯಲು ಕಷ್ಟವಾಗುವಂತೆ ಮಾಡುತ್ತವೆ.
ಅಗ್ನಿ ಪ್ರೈಮ್ ಪಿ ಹಿಂದಿನ ತಲೆಮಾರುಗಳ ಅಗ್ನಿ ಕ್ಷಿಪಣಿಗಳಿಂದ ಸಾಕಷ್ಟು ಮೇಲ್ದರ್ಜೆಯದಾಗಿದೆ. ಇದು ಹೆಚ್ಚು ನಿಖರತೆ, ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಇದರ ವಿರುದ್ಧ ರಕ್ಷಣೆ ಒದಗಿಸುವುದು ಕಷ್ಟಕರವಾಗಿದೆ. ಈ ಕ್ಷಿಪಣಿ ಭಾರತದ ಕಾರ್ಯತಂತ್ರ ಸಾಮರ್ಥ್ಯಕ್ಕೆ ಹೆಚ್ಚಿನ ಉತ್ತೇಜನ ನೀಡಲಿದೆ. ಇದು ಸಾಂಪ್ರದಾಯಿಕ ಯುದ್ಧದಲ್ಲಿ ಬೆಲೆಬಾಳುವ ಆಯುಧವಾಗಿದ್ದು, ಶತ್ರುಗಳ ನೆಲೆಯೊಳಗೆ ದಾಳಿ ನಡೆಸಲು ಸಮರ್ಥವಾಗಿದೆ.
ಅಗ್ನಿ ಪ್ರೈಮ್ ಪಿ ಭಾರತೀಯ ರಕ್ಷಣಾ ಉದ್ಯಮಕ್ಕೆ ಮಹತ್ವದ ಸಾಧನೆಯಾಗಿದೆ. ಇದು ಭಾರತ ಆಧುನಿಕ ಆಯುಧಗಳನ್ನು ದೇಶೀಯವಾಗಿ ನಿರ್ಮಿಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕ್ಷಿಪಣಿ ಭಾರತಕ್ಕೆ ನೆರೆಹೊರೆಯ ರಾಷ್ಟ್ರಗಳ ಆಕ್ರಮಣಶೀಲತೆಯನ್ನು ಎದುರಿಸಲು ಸಹಾಯ ಮಾಡಲಿದೆ. ಅದರೊಡನೆ, ಜಾಗತಿಕ ಸುರಕ್ಷತಾ ಕ್ಷೇತ್ರದಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವಾಗಿಸಲಿದೆ.
ಅಗ್ನಿ ಕ್ಷಿಪಣಿ ಸರಣಿ ಐದು ವಿವಿಧ ವ್ಯಾಪ್ತಿಗಳನ್ನು ಹೊಂದಿದೆ:
- ಅಗ್ನಿ 1 ಕ್ಷಿಪಣಿ ಒಂದು ಮಧ್ಯಮ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, 700-800 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ.
- ಅಗ್ನಿ 2 ಕ್ಷಿಪಣಿ 2,000 ಕಿಲೋಮೀಟರ್ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.
- ಅಗ್ನಿ 3 ಒಂದು ಇಂಟರ್ ಮೀಡಿಯಂ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದರ ವ್ಯಾಪ್ತಿ 2,500 ಕಿಲೋಮೀಟರ್ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.
- ಅಗ್ನಿ 4 ಕ್ಷಿಪಣಿ 3,500 ಕಿಲೋಮೀಟರ್ಗೂ ಹೆಚ್ಚು ದೂರ ಚಲಿಸಬಲ್ಲದಾಗಿದ್ದು, ಇದನ್ನು ರೋಡ್ ಮೊಬೈಲ್ ಲಾಂಚರ್ ಮೂಲಕವೂ ಉಡಾಯಿಸಬಹುದು.
- ಅಗ್ನಿ 5 ಕ್ಷಿಪಣಿ ಅತ್ಯಧಿಕ ವ್ಯಾಪ್ತಿ ಹೊಂದಿರುವ ಕ್ಷಿಪಣಿಯಾಗಿದೆ. ಇದೊಂದು ಇಂಟರ್ ಕಾಂಟಿನೆಂಟಲ್ (ಖಂಡಾಂತರ) ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು (ಐಸಿಬಿಎಂ) 5,000 ಕಿಲೋಮೀಟರ್ಗೂ ಹೆಚ್ಚಿನ ವ್ಯಾಪ್ತಿ ಹೊಂದಿದೆ.
- ಅಗ್ನಿ 6 ಕ್ಷಿಪಣಿ ಅಗ್ನಿ ಸರಣಿಯ ಅತಿದೀರ್ಘವಾದ, ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ (ಐಸಿಬಿಎಂ) ಆಗಿದ್ದು, 11,000-12,000 ಕಿಲೋಮೀಟರ್ ವ್ಯಾಪ್ತಿ ಹೊಂದಿರಲಿದೆ. ಅಗ್ನಿ 6 ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ