ಇಂದು ರೈತರು- ಕೇಂದ್ರ ಸರ್ಕಾರದ 5ನೇ ಸಭೆ, ಇಂದಾದರೂ ಬಗೆಹರಿಯುತ್ತಾ ರೈತರ ಸಮಸ್ಯೆ?
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಭೆಗಳಲ್ಲಿ ಮಾತುಕತೆ ಯಶಸ್ವಿಯಾಗಿರಲಿಲ್ಲ.
ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ಈಗಾಗಲೇ 4 ಸುತ್ತಿನ ಮಾತುಕತೆ ಆಗಿದೆ. 4 ಸುತ್ತಿನ ಸಮಾಲೋಚನೆಗಳೂ ವಿಫಲವಾಗಿದ್ದು, ಇಂದು ಐದನೇ ಸುತ್ತಿನ ಸಭೆ ನಡೆಯಲಿದೆ. ಇಂದಾದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಲು ಒಪ್ಪುತ್ತಾ? ಸಮಸ್ಯೆ ಬಗೆಹರಿಯುತ್ತಾ? ದೆಹಲಿ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಅನಿರ್ದಿಷ್ಟಾವಧಿ ಧರಣಿ ಕೈಬಿಡುತ್ತಾರಾ? ಎಂಬುದನ್ನು ಕಾದುನೋಡಬೇಕಾಗಿದೆ.
4 ಸುತ್ತಿನ ಸಮಾಲೋಚನೆಗಳೂ ವಿಫಲವಾಗಿರುವುದರಿಂದ ದೆಹಲಿ ಗಡಿಯಲ್ಲಿ ರೈತರು (Farmers) ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರೆಸಿದ್ದಾರೆ. ಅವರ ಪ್ರತಿಭಟನೆ ಇಂದಿಗೆ 10ನೇ ದಿನಕ್ಕೆ ಕಾಲಿಟ್ಟಿದೆ. ಇದು ಕಡೆಯ ಅವಕಾಶ 5ನೇ ಸಭೆಯಲ್ಲಿ ಕೇಂದ್ರ ಸರ್ಕಾರ (Central Government) ನಮ್ಮ ಬೇಡಿಕೆಗಳಿಗೆ ಈಡೇರಿಸದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸಭೆಗಳಲ್ಲಿ ಮಾತುಕತೆ ಯಶಸ್ವಿಯಾಗಿರಲಿಲ್ಲ. ಇದರಿಂದ ರೈತರು ಇನ್ನಷ್ಟು ತೀವ್ರವಾಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂದು ಮತ್ತೊಂದು ಸುತ್ತಿನ ಸಭೆ ಕರೆದಿದೆ.
ರೈತರ ಪ್ರತಿಭಟನೆಗೆ ಸಾರಿಗೆ ಬೆಂಬಲ, ಡಿಸೆಂಬರ್ 8ರಿಂದ ನಿಲ್ಲಲಿದೆ ಈ ಸೇವೆ
ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು. ರೈತರಿಗೆ ಪೂರಕವಾಗಿಲ್ಲದ ವಿದ್ಯುತ್ ಕಾಯಿದೆಯನ್ನು ಹಿಂಪಡೆಯಬೇಕು ಎಂಬವು ರೈತರ ಹಕ್ಕೊತ್ತಾಯಗಳು.
ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸಲಾಗುವುದು. ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸುವುದು. ಕನಿಷ್ಠ ಬೆಂಬಲ ಬೆಲೆ (MSP) ತೆಗೆಯುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸಚಿವತ್ರಯರ ಪ್ರಸ್ತಾಪವನ್ನು ರೈತರು ಒಪ್ಪಿಕೊಳ್ಳಲಿಲ್ಲ. ರೈತರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಒಪ್ಪೊಕೊಂಡಿಲ್ಲ. ಇದರಿಂದ ಈವರೆಗೆ ನಡೆದ 4 ಸಭೆಗಳೂ ವಿಫಲವಾಗಿವೆ.
ಡಿಸೆಂಬರ್ 08 ಕ್ಕೆ ದೇಶವ್ಯಾಪಿ ಬಂದ್ ಕರೆ ನೀಡಿದ ರೈತರು
ಸದ್ಯ ಸಿಂಘು, ಬುರಾರಿ ಮತ್ತಿತರ ಕಡೆ ಗಡಿಯಲ್ಲಿರುವ ರೈತರು ಪ್ರತಿಭಟನೆ (Farmers Protest) ಮುಂದುವರೆಸಿದ್ದು, ಇಂದಿನ ಸಭೆಯೂ ವಿಫಲವಾದರೆ ದೆಹಲಿಗೆ ಬರುವ ಎಲ್ಲಾ ಗಡಿಗಳನ್ನೂ ಬಂದ್ ಮಾಡಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ ಡಿಸೆಂಬರ್ 8ರಂದು ಭಾರತ್ ಬಂದ್ (Bharat Bandh) ಗೆ ಕರೆಕೊಡಲಾಗಿದೆ. ಇದಲ್ಲದೆ ಮಹಾರಾಷ್ಟ್ರದಿಂದ ದೆಹಲಿಗೆ ರೈತರು ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿವೆ.