ಮುಂಬೈ: ಕರೋನವೈರಸ್ ಕೋವಿಡ್-19 (Covid-19)  ಸಾಂಕ್ರಾಮಿಕ ರೋಗದಿಂದಾಗಿ ಸ್ವ ರಾಜ್ಯಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರಿಗೆ ರೈಲ್ವೆ ಶುಲ್ಕ ವಿಧಿಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತಂತೆ ತಡರಾತ್ರಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕಾರ್ಮಿಕರು ಅತ್ಯಂತ ಬಡ ಕುಟುಂಬದಿಂದ ಬಂದವರು ಎಂಬುದನ್ನು ಕೇಂದ್ರ ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು.  ಕರೋನಾವೈರಸ್ (Coronavirus) ಹಿನ್ನೆಲೆಯಲ್ಲಿ ಕೆಲಸ ಕಾರ್ಯವಿಲ್ಲದೇ ಆರ್ಥಿಕವಾಗಿ ಹೆಚ್ಚು ಪ್ರಭಾವಿತರಾದ ವರ್ಗ ಅದು. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ರೈಲ್ವೆ ಅವರಿಗೆ ಟಿಕೆಟ್ ಶುಲ್ಕ ವಿಧಿಸಬಾರದು ಎಂದು ಮನವಿ ಮಾಡಿದ್ದಾರೆ.


ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಪಂಜಾಬ್, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಿಂದ ಸಾವಿರಾರು ವಲಸೆ ಕಾರ್ಮಿಕರು ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ.


ಕಳೆದ ಕೆಲವು ದಿನಗಳಿಂದ ನಾಸಿಕ್ ಮತ್ತು ಭಿವಾಂಡಿಯಿಂದ ಚಲಿಸುವ ವಿಶೇಷ ರೈಲುಗಳಲ್ಲಿ  ಮಹಾರಾಷ್ಟ್ರ ಸರ್ಕಾರ ನೂರಾರು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗೆ ಕಳುಹಿಸುತ್ತಿದೆ. ಆದರೆ ನಗರದಲ್ಲಿ ಹಲವಾರು ಧಾರಕ ವಲಯ ಇರುವುದರಿಂದ ಮುಂಬೈಯಿಂದ ಯಾವುದೇ ವಿಶೇಷ ರೈಲು ಹೊರಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


ಮಹಾರಾಷ್ಟ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಕಳೆದ 40 ದಿನಗಳಿಂದ ಸುಮಾರು ಐದು ಲಕ್ಷ ಕಾರ್ಮಿಕರಿಗೆ ರಾಜ್ಯದಾದ್ಯಂತ ವಿವಿಧ ಆಶ್ರಯ ಮನೆಗಳಲ್ಲಿ ಆಶ್ರಯ ನೀಡಲಾಗಿದ್ದು ಈ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸುವವರೆಗೆ ರಾಜ್ಯ ಸರ್ಕಾರ ಅವರ ಬಗ್ಗೆ ಕಾಳಜಿ ವಹಿಸಲಿದೆ.


ಏತನ್ಮಧ್ಯೆ ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲು ಕೇಂದ್ರದಿಂದ ಪುಣೆ, ಮುಂಬೈ ಅಥವಾ ಥಾಣೆಗಳಿಂದ ವಿಶೇಷ ರೈಲುಗಳನ್ನು ಪ್ರಾರಂಭಿಸಿದರೆ ಆಶ್ರಯ ಮನೆಗಳಲ್ಲಿ ವಲಸೆ ಕಾರ್ಮಿಕರ ಪಟ್ಟಿಯನ್ನು ನವೀಕರಿಸಿ ಮತ್ತು ಸಿದ್ಧರಾಗಿರಲು ಸಿಎಂ ಠಾಕ್ರೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.


ಭಾರತದಲ್ಲಿ ಕರೋನವೈರಸ್ ಹರಡುವುದನ್ನು ತಡೆಯಲು ಮಾರ್ಚ್ 25ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಲಾಕ್‌ಡೌನ್ (Lockdown) ಘೋಷಿಸಿದಾಗಿನಿಂದ ದೇಶಾದ್ಯಂತ ಹಲವಾರು ವಲಸಿಗರು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಹಲವರು ತಮ್ಮ ಗ್ರಾಮಗಳಿಗೆ ತಲುಪಲು ಹರಸಾಹಸ ಪಡುತ್ತಿದ್ದಾರೆ.