ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಅನೇಕ ದೊಡ್ಡ ಕ್ರಮಗಳನ್ನು ಕೈಗೊಂಡಿದೆ.
ನವದೆಹಲಿ: ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಅನೇಕ ದೊಡ್ಡ ಕ್ರಮಗಳನ್ನು ಕೈಗೊಂಡಿದೆ. ಸಂಸತ್ತು ಅಂಗೀಕರಿಸಿದ ಲೇಬರ್ ಕೋಡ್ ಮಸೂದೆ ಇಸಿಐಸಿ ಮತ್ತು ಇಪಿಎಫ್ಒ ಯೋಜನೆಗಳ ಅಡಿಯಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಹೊಸ ವ್ಯವಸ್ಥೆಯಡಿಯಲ್ಲಿ, ಇದಕ್ಕೂ ಮೊದಲು ಈ ಯೋಜನೆಗಳ ವ್ಯಾಪ್ತಿಯಲ್ಲಿರದ ಕಾರ್ಮಿಕರನ್ನೂ ಕೂಡ ಇನ್ಮುಂದೆ ಈ ಯೋಜನೆಯ ಅಡಿ ತಂದು ಅವರಿಗೆ ಸಾಮಾಜಿಕ ಸುರಕ್ಷತೆಯನ್ನು ಕಲ್ಪಿಸಲಾಗುತ್ತಿದೆ. ಹಾಗಾದರೆ ಹೊಸ ಮಸೂದೆಯಲ್ಲಿ ಯಾವ ಯಾವ ಹೊಸ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬುದನ್ನು ತಿಳಿಯೋಣ.
ನೌಕರರ ರಾಜ್ಯ ವಿಮಾ ನಿಗಮ ಸೌಲಭ್ಯಗಳು ಇದೀಗ ಎಲ್ಲಾ 740 ಜಿಲ್ಲೆಗಳಲ್ಲಿ ಲಭ್ಯವಿರಲಿದೆ. ಇದು ಕಾರ್ಮಿಕರಿಗೆ ಹೆಚ್ಚಿನ ಪರಿಹಾರ ನೀಡಲಿದೆ. ಅಪಾಯಕಾರಿ ವಲಯದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಇಎಸ್ಐಸಿ ಯೋಜನೆಗೆ ಸೇರಿಸಲಾಗಿದೆ. ಕೇವಲ ಒಬ್ಬನೇ ಕಾರ್ಮಿಕ ಕೆಲಸ ಮಾಡುತ್ತಿದ್ದರೂ ಕೂಡ ಅವರನ್ನು ಈ ಯೋಜನೆಗೆ ಜೋಡಿಸಲಾಗಿದೆ. ಅಸಂಘಟಿತ ವಲಯ ಮತ್ತು ಗಿಗ್ ಕಾರ್ಮಿಕರನ್ನು ಸಹ ಇಸಿಐಸಿಗೆ ಜೋಡಿಸಲಾಗಿದೆ. ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು 10 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳ ಕಾರ್ಮಿಕರಿಗೂ ಕೂಡ ಇಸಿಐಸಿ ಸೌಕರ್ಯ ನೀಡಲಾಗುವುದು.
20 ಕಾರ್ಮಿಕರನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ ವ್ಯಾಪ್ತಿ ಅನ್ವಯವಾಗಲಿದೆ. 20 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಇಪಿಎಫ್ಒಗೆ ಸೇರ್ಪಡೆಗೊಳ್ಳುವ ಅವಕಾಶವನ್ನೂ ಹೊಂದಿರುತ್ತದೆ. ಸ್ವಯಂ ಉದ್ಯೋಗಿಗಳಿಗೆ ಅಥವಾ ಇನ್ನಾವುದೇ ವರ್ಗದ ಕಾರ್ಮಿಕರಿಗಾಗಿ ಇಪಿಎಫ್ಒ ಯೋಜನೆ ರೂಪಿಸಲಾಗುವುದು. ಈ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಮಾಜಿಕ ಭದ್ರತಾ ನಿಧಿಯನ್ನು ರಚಿಸಲಾಗುವುದು. ಗಿಗ್ ಕಾರ್ಮಿಕರು ಮತ್ತು ಪ್ಲಾಟ್ ಫಾರ್ಮ್ ಗಳ ಮೇಲೆ ಕೆಲಸ ಮಾಡುವ ನೌಕರರನ್ನು ಸಾಮಾಜಿಕ ಭದ್ರತಾ ಯೋಜನೆಯ ವ್ಯಾಪ್ತಿಗೆ ತರಲಾಗುವುದು.
ಪ್ರತಿ ಕಂಪನಿಯಲ್ಲಿ, ತಾತ್ಕಾಲಿಕವಾಗಿ ಮಾಡುವ ಕೆಲವು ಕೆಲಸ ಕಾರ್ಯಗಳಿವೆ. ಕಂಪೆನಿಗಳು ಅಂತಹ ಕೆಲಸಕ್ಕಾಗಿ ಉದ್ಯೋಗಿಗಳಿಗೆ ಗುತ್ತಿಗೆ ಆಧಾರದ ಮೇಲೆ ಆಧಾರದ ಮೇಲೆ ಸಂಬಳ ಪಾವತಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕೆಲಸಕ್ಕಾಗಿ ಹಣ ಪಾವತಿ ಆಧಾರದ ಮೇಲೆ ನೇಮಕಗೊಂಡ ನೌಕರರನ್ನು ಗಿಗ್ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಆದರೆ ಗಿಗ್ ಉದ್ಯೋಗಿಗಳು ಕೆಲವು ದಿನಗಳವರೆಗೆ ಕಂಪನಿಗೆ ಕೆಲಸ ಮಾಡುವುದು ಅನಿವಾರ್ಯವಲ್ಲ, ಅವರು ಕಂಪನಿಯೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿರಬಹುದು.
ಭಾರತದಲ್ಲಿ ಆನ್ಲೈನ್ ವಹಿವಾಟು ಹೆಚ್ಚಾದ ಬಳಿಕ ಗಿಗ್ ಕಾರ್ಮಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಒಂದು ಅಂದಾಜಿನ ಅನುಸಾರ ಭಾರತದಲ್ಲಿ ಸುಮಾರು 12 ಕೋಟಿ ಗಿಗ್ ಕಾರ್ಮಿಕರು ಕಾರ್ಯನಿರ್ವಹಿಸುತ್ತಾರೆ. ಭಾರತದಲ್ಲಿ ಬಹುತೇಕ ಗಿಗ್ ಕಾರ್ಮಿಕರು ಆನ್ಲೈನ್ ಫುಡ್ ಪ್ಲಾಟ್ಫಾರ್ಮ್, ಇ-ಕಾಮರ್ಸ್ ಕಂಪನಿ ಹಾಗೂ ಸರಕುಗಳ ಡಿಲೆವರಿಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಹೆಚ್ಚಿನ ಸಂಖ್ಯೆಯ ಗಿಗ್ ಕಾರ್ಮಿಕರು ಡ್ರೈವರ್ ಕೂಡ ಆಗಿದ್ದಾರೆ.
ಸ್ವತಂತ್ರವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು, ಆನ್ಲೈನ್ ಪ್ಲಾಟ್ಫಾರ್ಮ್ ಗಳಿಗಾಗಿ ಕೆಲಸ ಮಾಡುವ ಕಾರ್ಮಿಕರು, ಗುತ್ತಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಕರೆ ಮೇರೆಗೆ ಲಭ್ಯವಿರುವ ಕಾರ್ಮಿಕರು ತಾತ್ಕಾಲಿಕ ಕಾರ್ಮಿಕರಾಗಿದ್ದಾರೆ.