ಬೆಂಗಳೂರು: ಚಂದನವನದಲ್ಲಿ ನಟ ಚಿರಂಜೀವಿ ಸರ್ಜಾ ಮತ್ತು ಬಹುಭಾಷಾ ನಟಿ ಮೇಘನಾ ರಾಜ್ ಮದುವೆ ಸಂಭ್ರಮ ಕಳೆಗಟ್ಟಿದೆ. ಮೇ 2ರಂದು ಚಿರು-ಮೇಘನಾ ಸಪ್ತಪದಿ ತುಳಿಯಲಿದ್ದಾರೆ. ಬಹಳ ವರ್ಷಗಳ ನಂತರ ಸರ್ಜಾ ಕುಟುಂಬದಲ್ಲಿ ನಡೆಯುತ್ತಿರುವ ಮೊದಲ ಶುಭ ಕಾರ್ಯ ಇದಾಗಿದೆ.
ಮೇಘನಾ ಹಾಗೂ ಚಿರು ಮದುವೆ ಸಾಂಪ್ರದಾಯಿಕವಾಗಿ ನಡೆಯಲಿದೆ. ಮೇಘನಾ ತಾಯಿ ಹಾಗೂ ಹಿರಿಯ ಕಲಾವಿದರಾದ ಪ್ರಮಿಳಾ ಜೋಷಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾದ್ದರಿಂದ ಮೊದಲಿಗೆ ಏಪ್ರಿಲ್ 29ರಂದು ರೋಮನ್ ಕ್ಯಾಥೊಲಿಕ್ ಪದ್ಧತಿಯಂತೆ ಚಿರು-ಮೇಘನಾ ವಿವಾಹ ನಡೆಯಲಿದ್ದು, ಮೇ 2ರಂದು ಹಿಂದೂ ಸಂಪ್ರದಾಯದಂತೆ ವಿವಾಹ ನಡೆಯಲಿದೆ. ಮೇ 2 ಬುಧವಾರ ಅರಮನೆ ಮೈದಾನದಲ್ಲಿ ಬೆಳಿಗ್ಗೆ 10:30 ರಿಂದ 11:00ರ ನಡುವಿನ ಶುಭಲಗ್ನದಲ್ಲಿ ಚಿರು-ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚಿರು-ಮೇಘನಾ ಇಬ್ಬರ ಕುಟುಂಬದವರೂ ಚಿತ್ರರಂಗಕ್ಕೆ ಸಂಬಂಧಪಟ್ಟವರಾಗಿದ್ದು, ಚಂದನವನದಲ್ಲಿ ಮದುವೆ ಸಂಭ್ರಮ ಮನೆಮಾಡಿದೆ.
ಏಪ್ರಿಲ್ 25ರಂದು ಚಪ್ಪರ ಶಾಸ್ತ್ರದ ನಂತರ ಅರಿಶಿನ ಶಾಸ್ತ್ರ ಹಾಗೂ ಬಳೆ ಶಾಸ್ತ್ರವನ್ನ ಮಾಡಲಾಯಿತು. ಈ ಎಲ್ಲಾ ಕಾರ್ಯಕ್ರಮಗಳು ಮೇಘನಾ ಮನೆಯಂಗಳದಲ್ಲಿ ನಡೆಯಿತು.