ಮಹಾರಾಷ್ಟ್ರದ ಮುಂಬೈಗೆ ಏಕದಿನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿರ್ಲೆ ಪ್ರದೇಶದಲ್ಲಿ 97 ವರ್ಷದ ಗಣೇಶ ಉತ್ಸವಕ್ಕೆ ಭೇಟಿ ನೀಡಿ ಗಣೇಶನ ದರ್ಶನ ಪಡೆದರು.
ಪ್ರಧಾನಿ ಮೋದಿ ಅವರು ಗಣೇಶನಿಗೆ ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಾರಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಉಪಸ್ಥಿತರಿದ್ದರು.
ಲೋಕಮಾನ್ಯ ತಿಲಕ್ ಸೇವಾ ಸಂಘ ಆಯೋಜಿಸಿಕೊಂಡು ಬರುತ್ತಿರುವ ಗಣಪತಿ ಉತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಭಾವಚಿತ್ರ ಮತ್ತು ಎಲ್‌ಎಸ್‌ಎಸ್ ಚಟುವಟಿಕೆಗಳ ಪುಸ್ತಕಗಳನ್ನು ಪ್ರಧಾನಿ ಮೋದಿಗೆ ಈ ಸಂದರ್ಭದಲ್ಲಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿ ಭಾಷೆಯಲ್ಲಿ ಕೈಬರಹದ ಟಿಪ್ಪಣಿಗಳನ್ನು ಬರೆದು, ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಸ್ವರಾಜ್ ಘೋಷಣೆಯನ್ನು ಪ್ರಸ್ತಾಪಿಸಿದರು.
ಕೈಬರಹದ ಟಿಪ್ಪಣಿಗಳಲ್ಲಿ, ಉತ್ತಮ ಆಡಳಿತವನ್ನು ನಡೆಸಲು ಸ್ವರಾಜ್ ಈಗ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಪಿಎಂ ಮೋದಿ ಬರೆದಿದ್ದಾರೆ.
ಬ್ರಿಟಿಷರ ವಿರುದ್ಧ ಜನರನ್ನು ಸಜ್ಜುಗೊಳಿಸಲು ಸಾರ್ವಜನಿಕವಾಗಿ ಗಣೇಶ ಹಬ್ಬದ ಆಚರಣೆಗೆ ಕಾರಣರಾದ ಲೋಕಮಾನ್ಯ ಬಾಲಗಂಗಾಧರ ತಿಲಕ್ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡಿ ನಮಿಸಿದರು.