ಡಿಕೆಶಿಗೆ 14 ದಿನಗಳ ನ್ಯಾಯಾಂಗ ಬಂಧನ, ನಾಳೆ ಮಧ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ  14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಮುಂದೂಡಿದೆ.

Written by - Divyashree K | Last Updated : Sep 17, 2019, 11:18 PM IST
ಡಿಕೆಶಿಗೆ 14 ದಿನಗಳ ನ್ಯಾಯಾಂಗ ಬಂಧನ, ನಾಳೆ ಮಧ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿ ವಿಚಾರಣೆ title=

ವರದಿ: ರಾಕೇಶ್ ಕುಮಾರ್ ಸಿಂಗ್

ನವದೆಹಲಿ: ಜಾರಿ ನಿರ್ದೇಶನಾಲಯದ ವಶದಲ್ಲಿರುವ ಕರ್ನಾಟಕ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ  14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೆ, ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ ಮಧ್ಯಾಹ್ನ 3 ಗಂಟೆಗೆ ಕೋರ್ಟ್ ಮುಂದೂಡಿದೆ.

ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಶದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಡಿ ಪರವಾಗಿ ವಕೀಲ ಕೆ.ಎಂ.ನಟರಾಜ್ ವಾದ ಮಂಡಿಸಿದರೆ, ಡಿಕೆಶಿ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು, ಡಿಕೆಶಿ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಆದೇಶ ಹೊರಡಿಸಿದರು. ಇನ್ನು, ನ್ಯಾಯಾಲಯದ ಕಲಾಪದ ಸಮಯ ಮುಗಿದ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು. 

ನ್ಯಾಯಾಲಯದಲ್ಲಿ ನಡೆದದ್ದೇನು?

ಇಡಿ ಪರವಾಗಿ ಕೆ.ಎಂ.ನಟರಾಜನ್ ವಾದ ಮಂಡನೆ
ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದ ಕೆ.ಎಂ.ನಟರಾಜ್ ಅವರು, ಡಿಕೆ ಶಿವಕುಮಾರ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಅವರನ್ನು ಸರಿಯಾಗಿ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಹಾಗೂ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಬೇಕು. ನ್ಯಾಯಾಂಗ ಬಂಧನದ ಸಂದರ್ಭದಲ್ಲಿ ಇಡಿ ವಿಚಾರಣೆಗೆ ಅವಕಾಶ ಮಾಡಿಕೊಡಬೇಕು. ಅವರ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಎಂದು ಹೇಳಿದರು.

ಡಿಕೆಶಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಕುಲ್ ರೋಹ್ಟಗಿ ಹೇಳಿದ್ದೇನು?
ಡಿಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂಬ ಇಡಿ ಪರ ವಕೀಲರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಭಿಷೇಕ್ ಮನು ಸಿಂಘ್ವಿ ಅವರು, ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ನಿರಂತರವಾಗಿ ಹದಗೆಡುತ್ತಿದೆ. ಈಗಾಗಲೇ ಅವರನ್ನು ಮೂರು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಎದೆ ನೋವಿನ ಸಮಸ್ಯೆ ಸಹ ಹೆಚ್ಚಾಗಿದೆ. ಕಳೆದ ಬಾರಿ ಸಹ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಡಿ ವಶಕ್ಕೆ ನೀಡಬಾರದು ಎಂದು ಮನವಿ ಮಾಡಲಾಗಿತ್ತು. ಆದರೂ ಇಡಿ ವಶಕ್ಕೆ ಒಪ್ಪಿಸಲಾಯಿತು. ಇದೀಗ ಇಡಿ ವಶದ 15 ದಿನಗಳ ಅವಧಿ ಪೂರ್ಣಗೊಂಡಿದ್ದರೂ ಸಹ ವಿಚಾರಣೆ ಪೂರ್ಣಗೊಂಡಿಲ್ಲ ಎಂದು ಹೇಳುತ್ತಿದ್ದಾರೆ. ಡಿಕೆಶಿ ಅವರ ಹೆಸರು ಹಾಳು ಕೆಡಿಸುವುದೇ ಇಡಿ ಉದ್ದೇಶ. ಇದ್ಯಾವುದಕ್ಕೂ ನ್ಯಾಯಾಲಯ ಆಸ್ಪದ ಕೊಡದೆ ಡಿಕೆಶಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದರು. 

ಡಿಕೆಶಿ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಸಹ ವಾದ ಮಂಡನೆ
ಇದೇ ವೇಳೆ, ನ್ಯಾಯಾಲಯಕ್ಕೆ ಆಗಮಿಸಿದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಸಹ ಡಿ.ಕೆ. ಶಿವಕುಮಾರ್ ಪರ ವಾದ ಮಂಡಿಸುತ್ತಾ, ಡಿ.ಕೆ.ಶಿವಕುಮಾರ್ ಏಳು ಬಾರಿ ಶಾಸಕರಾಗಿದ್ದಾರೆ. ತಮ್ಮ ಜೀವನದುದ್ದಕ್ಕೂ ಸಾರ್ವಜನಿಕ ಸೇವೆ ಮಾಡಿದ್ದಾರೆ. ಅವರೊಬ್ಬ ಪಬ್ಲಿಕ್ ಫಿಗರ್. ಅವರ ಮನೆಯಲ್ಲಿ 41 ಲಕ್ಷ ರೂ. ಮಾತ್ರ ಜಪ್ತಿ ಮಾಡಲಾಗಿದೆ. ಅಲ್ಲದೆ, ಅವರು ಎಲ್ಲದಕ್ಕೂ ತೆರಿಗೆ ಪಾವತಿಸಿದ್ದಾರೆ. ಅಲ್ಲದೆ, ಡಿಕೆಶಿ ವಿರುದ್ಧ ಪಿಎಂಎಎಲ್ ಕೇಸ್ ಯಾಕೆ ಹಾಕಿದ್ದಾರೆಂದು ತಿಳಿಯುತ್ತಿಲ್ಲ. ಇದು ಕೇಂದ್ರ ಸರ್ಕಾರ ರದ್ದು ಮಾಡಿರುವ ಕಾಯ್ದೆ. ಆದರೂ ಇದನ್ನು ಸಿಂಧು ಮಾಡಲು ಪ್ರಯತ್ನಿಸಲಾಗುತ್ತಿದೆ. ಡಿಕೆಶಿ ಅವರ ಆರೋಗ್ಯ ಸಹ ಸರಿಯಿಲ್ಲ. ಹಾಗಾಗಿ ಅವರಿಗೆ ಜಾಮೀನು ನೀಡಿ. ಅವಾ ಟ್ರ್ಯಾಕ್ ರೆಕಾರ್ಡ್ ತುಂಬಾ ಚೆನ್ನಾಗಿದೆ. ಡಿಕೆಶಿ ಅವರನ್ನು ಜೈಲಿಗೆ ಕಳುಹಿಸಲೆಂದೇ ಈ ಸೆಕ್ಷನ್ 120 ಸೇರಿಸಿದ್ದಾರೆ. ಆದರೆ, ಇದಕ್ಕೆ ಯಾವುದೇ ಆಧಾರಗಳಿಲ್ಲ. ನಾವು ನಮ್ಮ ಕಕ್ಷಿದಾರರ ಪಾಸ್ಪೋರ್ಟ್ ಸಲ್ಲಿಸಲು ಸಿದ್ದರಿದ್ದೇವೆ. ಅವರನ್ನು ಅನಾರೋಗ್ಯದ ಆಧಾರದ ಮೇಲೆ ಜಾಮೀನು ನೀಡಿ ಬಿಡುಗಡೆ ಮಾಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ನ್ಯಾಯಾಂಗ ಬಂಧನಕ್ಕೆ ನೀಡಿ ಎಂದು ಇಡಿ ಪರ ಕೆ.ಎಂ.ನಟರಾಜನ್ ವಾದ ಮಂಡನೆ
ಮುಕುಲ್ ರೋಹ್ಟಗಿ ಅವರ ಜಾಮೀನು ಮನವಿಗೆ ವಿರೋಧ ವ್ಯಕ್ತಪಡಿಸಿದ ನಟರಾಜನ್ ಅವರು, ನಮ್ಮ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ನಾವು ಶಿವಕುಮಾರ್ ಅವರನ್ನು ಸಾಕ್ಷ್ಯಾಧಾರಗಳೊಂದಿಗೆ ವಿಚಾರಣೆ ನಡೆಸಬೇಕಿದೆ. ಅವರು 41 ಲಕ್ಷದ ವಿಚಾರ ಹೇಳುತ್ತಿದ್ದಾರೆ. ಆದರೆ, ಡಿಕೆಶಿ ಅವರು 8.5 ಕೋಟಿ ರೂ.ಗಳ ಪರೋಕ್ಷ ನಿಯಂತ್ರಣ ಹೊಂದಿದ್ದಾರೆ. ಇದು ಕ್ರಿಮಿನಲ್ ಪಿತೂರಿ ಎಂಬುದು ಸ್ಪಷ್ಟವಾಗಿದೆ. ತನಿಖೆ ಸಂದರ್ಭದಲ್ಲಿ ನಾವು 9 ಜನರನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ತೆಗೆದುಕೊಂಡಿದ್ದೇವೆ. ಈ ವೇಳೆ 143 ಕೋಟಿ ರೂ. ಹಣ ವರ್ಗಾವಣೆ ಕಂಡುಬಂದಿದೆ.  20 ವಿವಿಧ ಬ್ಯಾಂಕುಗಳಲ್ಲಿ 317 ಖಾತೆಗಳನ್ನು ರಚಿಸುವ ಮೂಲಕ ಮನಿ ಲಾಂಡರಿಂಗ್ ಮಾಡಲಾಗಿದೆ. ನಾವು ಅವರ ಚಾರ್ಟರ್ಡ್ ಅಕೌಂಟೆಂಟ್ ಹೇಳಿಕೆಯನ್ನು ಸಹ ತೆಗೆದುಕೊಂಡಿದ್ದೇವೆ. ಕೇವಲ 23 ವರ್ಷ ವಯಸ್ಸಿನ ಅವರ ಮಗಳ ಹೆಸರಿನಲ್ಲಿ 108 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ ಎಂದರೆ ನಂಬಲು ಸಾಧ್ಯವೇ? ಡಿ.ಕೆ.ಶಿವಕುಮಾರ್ ಅವರು ಹಲವು ಮಾರ್ಗಗಳ ಮೂಲಕ 800 ಕೋಟಿ ರೂ. ಮನಿ ಲಾಂಡರಿಂಗ್ ಮಾಡಿದ್ದಾರೆ. ಹಾಗಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ವಾದ ಮಂಡಿಸಿದರು. 

Trending News