ನವದೆಹಲಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ತೀವ್ರ ವಾಗ್ದಾಳಿ ನಡೆಸಿದ್ದು, ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು 'ಮಮತಾ ದೀದಿ' ಅಲ್ಲ, ಈಗ ಅವರು 'ಮಮತಾ ದಾದಾಗಿರಿ' ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐಗೆ ಹೇಳಿಕೆ ನೀಡಿರುವ ಮನೋಜ್ ತಿವಾರಿ, ಮಮತಾ ಬ್ಯಾನರ್ಜಿಗೆ ಪಶ್ಚಿಮ ಬಂಗಾಳದ ಜನತೆಯ ಮೇಲೆ ನಂಬಿಕೆಯಿಲ್ಲ. ಚುನಾವಣೆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ಮಾಡಿಸಿದರು. ಅಲ್ಲದೆ, ಜನರಿಗೆ ಮತ ಹಾಕಲು ಅವಕಾಶ ನೀಡಲಿಲ್ಲ. ಅವರು ಇನ್ನೆಂದೂ 'ಮಮತಾ ದೀದಿ' ಆಗಿರಲು ಸಾಧ್ಯವೇ ಇಲ್ಲ. ಅವರೀಗ 'ಮಮತಾ ದಾದಾಗಿರಿ' ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿಗೆ 20ಕ್ಕೂ ಅಧಿಕ ಸ್ಥಾನಗಳ ಗೆಲುವು
ಪಶ್ಚಿಮ ಬಂಗಾಳದ ಸಂಸ್ಕೃತಿಯನ್ನೇ ಮಮತಾ ಬ್ಯಾನರ್ಜಿ ನಾಶ ಮಾಡಿದ್ದಾರೆ ಎಂದು ಆರೋಪಿಸಿದ ನಟ, ರಾಜಕಾರಣಿ ಮನೋಜ್ ತಿವಾರಿ, ರಾಜ್ಯದಲ್ಲಿ ಬಿಜೆಪಿ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ 17 ಸ್ಥಾನಗಳನ್ನು ಗಳಿಸಲಿದೆ ಎಂದಿವೆ. ಆದರೆ ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಮಮತಾ ಬ್ಯಾನರ್ಜಿ ಅವರ ಸರ್ಕಾರ ದಿನಗಳನ್ನು ಎಣಿಸುತ್ತಿದೆ. ಮಮತಾಗೆ ಜನರ ಮೇಲೆಯೇ ನಂಬಿಕೆಯಿಲ್ಲ ಎಂದ ಮೇಲೆ, ಚುನಾವಣೋತ್ತರ ಸಮೀಕ್ಷೆಗಳನ್ನು ಹೇಗೆ ನಂಬುತ್ತಾರೆ" ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ, ನರೇಂದ್ರ ಮೋದಿ ಮತ್ತೆ ಪ್ರಧಾನಿ
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಲೋಕಸಭೆಯ 543 ಸ್ಥಾನಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ, ವಿರೋಧ ಪಕ್ಷಗಳು ಈ ಸಮೀಕ್ಷೆಗಳನ್ನು ತಳ್ಳಿಹಾಕಿವೆ ಎಂದ ಮನೋಜ್ ತಿವಾರಿ ಅವರು, ದೆಹಲಿಯಲ್ಲಿಯೂ ಸಹ ಬಿಜೆಪಿ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಲೋಕಸಭಾ ಚುನಾವಣೆ 2019ರ ಎಲ್ಲಾ ಹಂತಗಳ ಮತದಾನ ಭಾನುವಾರ ಪೂರ್ಣಗೊಂಡಿದ್ದು, ಕೇಂದ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ, ಯಾವ ಪಕ್ಷಕ್ಕೆ ಬಹುಮತ ದೊರೆಯಲಿದೆ ಎಂಬುದು ಮೇ 23ರಂದು ಪ್ರಕಟವಾಗುವ ಚುನಾವಣೆ ಫಲಿತಾಂಶದವರೆಗೆ ಕಾದುನೋಡಬೇಕಿದೆ.