ನವದೆಹಲಿ: ಬುಡಕಟ್ಟು ನಾಗರಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಮೇಘಾಲಯ ಸಚಿವ ಸಂಪುಟ ಶುಕ್ರವಾರ ರಾಜ್ಯಕ್ಕೆ ಪ್ರವೇಶಿಸಲು ಇನ್ಮುಂದೆ ಹೊರಗಿನವರು ಕಡ್ಡಾಯವಾಗಿ ನೋಂದಣಿ ಮಾಡುವ ಕಾಯಿದೆ ತಿದ್ದುಪಡಿಯನ್ನು ಅಂಗೀಕರಿಸಿದೆ.
ಈಗ ತಿದ್ದುಪಡಿ ಮಾಡಿದ 'ಮೇಘಾಲಯ ನಿವಾಸಿಗಳು, ಸುರಕ್ಷತೆ ಮತ್ತು ಭದ್ರತಾ ಕಾಯ್ದೆ, 2016 'ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸೊಂಗ್ ಹೇಳಿದ್ದಾರೆ.'ತಿದ್ದುಪಡಿ ಕಾಯ್ದೆ ಅಂಗೀಕರಿಸಲ್ಪಟ್ಟಿದೆ ಮತ್ತು ಅದು ತಕ್ಷಣದಿಂದ ಜಾರಿಗೆ ಬರಲಿದೆ. ರಾಜ್ಯ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ಇದನ್ನು ಕ್ರಮ ಬದ್ಧಗೊಳಿಸಲಾಗುವುದು" ಎಂದು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.ರಾಜಕೀಯ ಪಕ್ಷಗಳು ಮತ್ತು ಎನ್‌ಜಿಒಗಳು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
'ಮೇಘಾಲಯದ ನಿವಾಸಿಯಲ್ಲದ ಮತ್ತು ರಾಜ್ಯದಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಇರಲು ಉದ್ದೇಶಿಸಿರುವ ಯಾವುದೇ ವ್ಯಕ್ತಿ ಸರ್ಕಾರಕ್ಕೆ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಇದನ್ನು ಅವರ (ಹೊರಗಿನವರ) ಸ್ವಂತ ಹಿತಾಸಕ್ತಿಗಾಗಿ ಮತ್ತು ಸರ್ಕಾರದ ಮತ್ತು ಮೇಘಾಲಯದ ಜನರ ಹಿತಾಸಕ್ತಿಗಾಗಿ ಮಾಡಲಾಗುತ್ತದೆ. ಆ ಮೂಲಕ ಅವರು ಹೆಚ್ಚು ಸುರಕ್ಷಿತವಾಗಿರುತ್ತಾರೆ 'ಎಂದು ಅವರು ಹೇಳಿದ್ದಾರೆ. ಆದರೆ ಈ ಕಾಯ್ದೆಯಿಂದ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಂಡಳಿಗಳ ನೌಕರರನ್ನು ಮುಕ್ತಗೊಳಿಸಲಾಗಿದೆ ಎಂದರು.
ಯಾವುದೇ ವ್ಯಕ್ತಿ, ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ನೀಡಲು ಅಥವಾ ಸುಳ್ಳು ದಾಖಲೆಗಳನ್ನು ನೀಡಲು ವಿಫಲವಾದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಭಾಗಗಳ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಪ್ರೆಸ್ಟೋನ್ ಟೈನ್ಸೊಂಗ್ ಹೇಳಿದರು.