ಮುಂಬೈನಲ್ಲಿ ಬಹುಮಹಡಿ ಕಟ್ಟಡದ ಭಾಗ ಕುಸಿತ; ಬಾಲಕಿ ಸಾವು

ಮುಂಬೈನ ಖಾರ್‌ನಲ್ಲಿ ಮಂಗಳವಾರ ಕಟ್ಟಡದ ಮೆಟ್ಟಿಲಿನ ಭಾಗ ಕುಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿದ್ದಾಳೆ.

Updated: Sep 24, 2019 , 07:28 PM IST
ಮುಂಬೈನಲ್ಲಿ ಬಹುಮಹಡಿ ಕಟ್ಟಡದ ಭಾಗ ಕುಸಿತ; ಬಾಲಕಿ ಸಾವು

ಮುಂಬೈ: ಮುಂಬೈನ ಖಾರ್‌ನಲ್ಲಿ ಮಂಗಳವಾರ ಕಟ್ಟಡದ ಮೆಟ್ಟಿಲಿನ ಭಾಗ ಕುಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. 

ಖಾರ್ ವೆಸ್ಟ್ ನ 17ನೇ ರಸ್ತೆಯಲ್ಲಿರುವ ಐದು ಅಂತಸ್ತಿನ ಪೂಜಾ ಕಟ್ಟಡದ ಮೆಟ್ಟಿಲು ಭಾಗ ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕುಸಿದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ದಳ, ಪೊಲೀಸ್, ಆಂಬ್ಯುಲೆನ್ಸ್ ಸೇವೆಯ ತಂಡಗಳು ಸ್ಥಳಕ್ಕೆ ಧಾವಿಸಿ ಆ ಬಾಲಕಿಯನ್ನು ರಕ್ಷಿಸಿ ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

ಮೃತ ಬಾಲಕಿಯನ್ನು 10 ವರ್ಷದ ಮಹಿ ಮೋತ್ವಾನಿ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಸಂಭವಿಸಿದ ಈ ದುರ್ಘಟನೆಯಲ್ಲಿ ಇಬ್ಬರು ಕಾವಲುಗಾರರು ಹಾಗೂ ಓರ್ವ ಬಾಲಕಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೀಗ ಆಕೆ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಝೀ ನ್ಯೂಸ್ ಜೊತೆ ಮಾತನಾಡಿದ ಮೃತ ಬಾಲಕಿಯ ಸಂಬಂಧಿಕರು, ಕಟ್ಟಡ ಶಿಥಿಲಾವಸ್ಥೆ ತಲುಪಿದ ಕಾರಣ ಎರಡು ವಾರಗಳ ಹಿಂದಷ್ಟೇ ಎಲ್ಲಾ ನಿವಾಸಿಗಳು ಖಾಲಿ ಮಾಡಿದ್ದರು. ನಂತರ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಟ್ಟಡದ ಮೆಟ್ಟಿಲಿನ ಭಾಗ ಕುಸಿದು ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.