ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಡಿ.14ರಂದು ನೀಡಲಾಗಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಮಾಜಿ ಕೇಂದ್ರ ಸಚಿವರಾದ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ. ಕೇಂದ್ರ ಸರ್ಕಾರ ರಫೇಲ್ ಡೀಲ್ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದೆ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.
ಫ್ರಾನ್ಸ್ ನಿಂದ ಭಾರತ ಪಡೆಯಲಿರುವ 36 ರಫೇಲ್ ಜೆಟ್ ಖರೀದಿ ವ್ಯವಹಾರದಲ್ಲಿ ಅಕ್ರಮ ನಡೆದಿದೆ. ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರಿ ಅಕ್ರಮವಾಗಿದ್ದು ನ್ಯಾಯಾಲಯ ಉಸ್ತುವಾರಿಯಲ್ಲಿ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಎಲ್ಲಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ಡಿ.14 ರಂದು ವಜಾ ಮಾಡಿತ್ತು.
ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠದಿಂದ ಈ ತೀರ್ಪನ್ನು ನೀಡಲಾಗಿತ್ತು. ಫ್ರೆಂಚ್ ಡಸಾಲ್ಟ್ ಏವಿಯೇಶನ್ ಕಂಪನಿಯಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ತೃಪ್ತಿಕರವಾಗಿದೆ. ಏರ್ಕ್ರಾಫ್ಟ್ ಖರೀದಿ ವಿಚಾರದಲ್ಲಿ ನ್ಯಾಯಾಲಯ ಮೇಲ್ಮನವಿ ಪ್ರಾಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಕೋರ್ಟ್ ಹೇಳಿತ್ತು.
ರಫೇಲ್ ಡೀಲ್ ಬಗ್ಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಮುಖಾಂಶಗಳು:
- ಏರ್ಕ್ರಾಫ್ಟ್ ಖರೀದಿ ವಿಚಾರದಲ್ಲಿ ನ್ಯಾಯಾಲಯ ಮೇಲ್ಮನವಿ ಪ್ರಾಧಿಕಾರದ ಸ್ಥಾನದಲ್ಲಿ ಕುಳಿತುಕೊಳ್ಳುವುದು ಸರಿಯಾದ ಕ್ರಮವಲ್ಲ.
- ಬೆಲೆ ನಿರ್ಧಾರ ಮಾರಾಟಗಾರರಿಗೆ ಬಿಟ್ಟ ವಿಚಾರವೇ ಹೊರತು ಸರ್ಕಾರದ ತೀರ್ಮಾನವಾಗಿರುವುದಿಲ್ಲ.
- ಎಲ್ಲಾ ರಕ್ಷಣಾ ಒಪ್ಪಂದಗಳ ವಿಮರ್ಶೆ ಅಸಾಧ್ಯ.
- ಒಪ್ಪಂದ ಸಂಬಂಧ ಯಾವುದೇ ತನಿಖೆ ಅಗತ್ಯವಿಲ್ಲ.
- ವಿಮಾನ ಖರೀದಿ ಪ್ರಕ್ರಿಯೆಯು ನಮಗೆ ತೃಪ್ತಿಯನ್ನು ತಂದಿದೆ.
- ವಾಣಿಜ್ಯ ವ್ಯವಹಾರದಲ್ಲಿ ಪಕ್ಷಪಾತ ಮಾಡಿರುವ ಯಾವುದೇ ಅಂಶ ಕಾಣಿಸುತ್ತಿಲ್ಲ.
- 126 ಯುದ್ಧ ವಿಮಾನಗಳಿಗೆ, ಈಗಿನ 36 ವಿಮಾನಗಳ ಖರೀದಿ ಬೆಲೆಯನ್ನು ಹೋಲಿಕೆ ಮಾಡುವುದು ಕೋರ್ಟ್ನ ಕೆಲಸವಲ್ಲ ಎಂದು ನ್ಯಾಯಾಲಯ ತಿಳಿಸಿತ್ತು.