ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗದ ಸಮಸ್ಯೆಯಿಂದಾಗಿ ರಾಜ್ಯದಲ್ಲಿ ಲಾಕ್‌ಡೌನ್ ಹಿನ್ನೆಲೆ ಸಂಕಷ್ಟದಲ್ಲಿರುವ ವಿದ್ಯುತ್ ಮಗ್ಗ ಕಾರ್ಮಿಕರಿಗೆ ರಾಜ್ಯ ಸರ್ಕಾರವು 2020-21ನೇ ಸಾಲಿನಲ್ಲಿ ಒಂದು ಬಾರಿಯ ಆರ್ಥಿಕ ಪರಿಹಾರ ಸಲುವಾಗಿ ರೂ.2,000/-ಗಳ ನೆರವನ್ನು ನೀಡಲು ನೇಕಾರ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ವಿದ್ಯುತ್ ಮಗ್ಗ ಘಟಕದ ಮಾಲೀಕರು ರೂ.20/-ರ ಬಾಂಡ್ ಪೇಪರ್‌ನಲ್ಲಿ ಕಾರ್ಮಿಕರ ವಿವರಗಳೊಂದಿಗೆ ಮುಚ್ಚಳಿಕೆ ಪತ್ರವನ್ನು ನೀಡಬೇಕು. ಅದರೊಂದಿಗೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕೂಲಿ ಕಾರ್ಮಿಕರು ಸ್ವಯಂ ಧೃಡೀಕರಿಸಿದ ಆಧಾರ್ ಕಾರ್ಡ್ ಪ್ರತಿಗಳು, ಆಧಾರ್ ಮಾಹಿತಿಯನ್ನು ಡಿ.ಬಿ.ಟಿ ಗಾಗಿ ಬಳಕೆ ಮಾಡಲು ಕಾರ್ಮಿಕರ ಒಪ್ಪಿಗೆ ಪತ್ರಗಳು, ವಿದ್ಯುತ್ ಮಗ್ಗ ಘಟಕದ ಮುಂದೆ ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಗಳ ಗುಂಪಿನ ಫೋಟೋ, ಘಟಕದ ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್. ನಂಬರ್‌ನ ವಿದ್ಯುತ್ ಬಿಲ್, ಘಟಕವು ಬಾಡಿಗೆ ಅಥವಾ ಲೀಸ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲಾತಿಯನ್ನು ಒದಗಿಸಬೇಕು,
ಘಟಕದ ಉದ್ಯೋಗ್ ಆಧಾರ್/ಪಿ.ಎಂ.ಟಿ/ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ, ಘಟಕದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ(ಲಭ್ಯವಿದ್ದಲ್ಲಿ)ಯನ್ನು ಸಲ್ಲಿಸಬೇಕು.ಈ ಯೋಜನೆಯು ವಿದ್ಯುತ್ ರಿಯಾಯಿತಿ ಪಡೆಯುವ ವಿದ್ಯುತ್ ಮಗ್ಗ ಘಟಕದ ಕಾರ್ಮಿಕರಿಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯ ಸರ್ಕಾರದಿಂದ ತಲಾ ರೂ.2,000/-ದಂತೆ ನೇರವಾಗಿ ಬ್ಯಾಂಕಿನ ಖಾತೆಗೆ ವರ್ಗಾವಣೆ (ಆಃಖಿ) ಮಾಡಲು ರಾಜ್ಯ ಸರ್ಕಾರದ ಸೇವಾ ಸಿಂಧು ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ವಿದ್ಯುತ್ ಮಗ್ಗ ನೇಕಾರ ಕಾರ್ಮಿಕರು ಇದುವರೆಗೂ ಅರ್ಜಿ ಸಲ್ಲಿಸಿರುವುದಿಲ್ಲ. ಈಗಾಗಲೇ 4 ಬಾರಿ ದಿನ ಪತ್ರಿಕೆಗಳ ಮೂಲಕ ಪ್ರಚಾರ ಮಾಡಲಾಗಿದೆ. ಅಲ್ಲದೆ ಸಭೆ ಮಾಡುವುದರ ಮೂಲಕ ಪ್ರಚಾರ ಮಾಡಲಾಗಿದೆ. ಆದರೂ ಕೂಡ ಇನ್ನೂ ಹಲವಾರು ವಿದ್ಯುತ್ ಮಗ್ಗ ಕಾರ್ಮಿಕರು ಅರ್ಜಿ ಸಲ್ಲಿಸಿರುವುದಿಲ್ಲ. ಕಾರಣ ಇದನ್ನು ಕೊನೆಯ ಅವಕಾಶ ಎಂದು ಭಾವಿಸಿ ಅಕ್ಟೋಬರ್.22 ರೊಳಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಕೋರಲಾಗಿದೆ.