ಬೆಂಗಳೂರು: ಇತ್ತೀಚೆಗೆ ಕೊಡಗು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರೀ ಭೂಕುಸಿತ ಉಂಟಾದ ಕಾರಣದಿಂದಾಗಿ ತಾತ್ಕಾಲಿಕವಾಗಿ ನಿಷೇಧವಾಗಿದ್ದ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಅಕ್ಟೋಬರ್ 10 ರೊಳಗೆ ಮರು ಆರಂಭಗೊಳ್ಳುವ ಸಾಧ್ಯತೆಯಿದೆ.
ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಸಕಲೇಶಪುರದಿಂದ ಸುಬ್ರಹ್ಮಣ್ಯ ನಡುವಿನ ಶಿರಾಡಿ ಘಾಟಿ ರೈಲು ಮಾರ್ಗದಲ್ಲಿ ಸಂಪೂರ್ಣ ಹಾನಿಗೊಂಡಿತ್ತು. ಇದೀಗ ಈ ರೈಲು ಮಾರ್ಗ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು ಅಕ್ಟೋಬರ್ 10ರೊಳಗೆ ಬೆಂಗಳೂರು- ಮಂಗಳೂರು ಪ್ಯಾಸೆಂಜರ್ ರೈಲು ಸೇವೆ ಪುನರಾರಂಭಗೊಳ್ಳುವ ಸಾಧ್ಯತೆಗಳಿವೆ.
ಸತತ ಮಳೆಯಿಂದಾಗಿ ಮಂಗಳೂರು - ಬೆಂಗಳೂರು ರೈಲು ಮಾರ್ಗಕ್ಕೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಳೆಯಿಂದಾಗಿ 55 ಕಿ.ಮೀ. ವಿಸ್ತಾರದ ಘಾಟ್ ನಲ್ಲಿ 65 ಕಡೆ ಭೂಕುಸಿತವಾಗಿತ್ತು. ಹಲವೆಡೆ ರೈಲ್ವೆ ಹಳಿ ಹಾಗೂ ಸೇತುವೆಗಳು ಹಾನಿಗೊಳಗಾಗಿದ್ದವು. ಇದೀಗ ಈ ರೈಲ್ವೆ ಮಾರ್ಗ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗವು ಸೋಮವಾರ ಘಾಟ್ ವಿಭಾಗದಲ್ಲಿ ಪರೀಕ್ಷಾರ್ಥವಾಗಿ ಒಂದು ಸರಕು ರೈಲನ್ನು ಸಂಚಾರಕ್ಕೆ ಒಳಪಡಿಸಿದ್ದು, ಸದ್ಯದಲ್ಲೇ ರೈಲು ಸಂಚಾರ ಆರಂಭವಾಗಲಿದೆ.