ಬೆಳಗಾವಿ: ರಾಜ್ಯ ಸರ್ಕಾರ ಯಾವ ಉದ್ದೇಶದಿಂದ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆಯೋ ಗೊತ್ತಿಲ್ಲ. ಆದರೆ ವೈಯಕ್ತಿಕವಾಗಿ ನಾನು ಟಿಪ್ಪು ಜಯಂತಿ ಬೆಂಬಲಿಸುವುದಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ನಿಂದ ನಮ್ಮ ಕುಟುಂಬಕ್ಕೆ ಈ ಹಿಂದೆ ಬಹಳ ತೊಂದರೆಯಾಗಿದೆ. ಹಾಗಾಗಿ ವೈಯಕ್ತಿಕವಾಗಿ ನಾನು ಟಿಪ್ಪು ಜಯಂತಿ ಬೆಂಬಲಿಸುವುದಿಲ್ಲ. ಆದರೆ ಸರ್ಕಾರದ ಆಚರಣೆ ಸರಕಾರದ ನಿರ್ಧಾರಕ್ಕೆ ಬಿಟ್ಟಿದ್ದು. ಅದನ್ನು ನಾನು ಪ್ರಶ್ನಿಸುವುದಿಲ್ಲ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಟಿಪ್ಪು ಜಯಂತಿ ಪರ ವಿರೋಧದ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಹಲವೆಡೆ ಗಲಭೆಗಳು ನಡೆದಿವೆ. ಹಾಗಾಗಿ ಇದರ ಬಗ್ಗೆ ಹೆಚ್ಚು ಹೇಳಲು ಇಷ್ಟವಿಲ್ಲ ಎಂದು ಹೇಳಿದರು.
ಏತನ್ಮಧ್ಯೆ ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಮೋದಾದೇವಿ ಒಡೆಯರ್, ಜನಕಲ್ಯಾಣಕ್ಕೆ ರಾಜಕೀಯ ಅನಿವಾರ್ಯವಲ್ಲ, ರಾಜಕಾರಣದಿಂದ ದೂರ ಇದ್ದು ಜನಸೇವೆ ಮಾಡಬಹುದು. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.